ಚಿಂತನೆ : ಅಸೂಯೆ’ ಯನ್ನು ತೊರೆದಾಗಲೇ ‘ ಪಶುಪತಿಯ ಪಥ’ ತೆರೆದುಕೊಳ್ಳುತ್ತದೆ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠಕ್ಕೆ ಶಿವಾನುಗ್ರಹವನ್ನರಸಿ ಬರುವ ಕೆಲವು ಜನ ಸಾಧಕ ಭಕ್ತರುಗಳು ಆಗಾಗ ಕೇಳುತ್ತಿರುವ ಒಂದು ಪ್ರಶ್ನೆ; ‘ ನಾವು ಬಹಳ ವರ್ಷಗಳಿಂದ ಶಿವನ ಸೇವೆ- ಪೂಜೆಗಳನ್ನು ಮಾಡುತ್ತಿದ್ದೇವೆ.ಆದರೂ ಶಿವಾನುಗ್ರಹವಾಗಿಲ್ಲವಲ್ಲ,ಯಾಕೆ?’ ನಾನು ಅವರನ್ನು ಮರು ಪ್ರಶ್ನಿಸುವುದು ‘ ನೀವು ನಿಮ್ಮ ತಂದೆ- ತಾಯಿ,ಹೆಂಡತಿ- ಮಕ್ಕಳು ಸೇರಿದಂತೆ ಕುಟುಬಸ್ಥರನ್ನು ಪ್ರೀತಿಸುತ್ತೀರಾ?’. ‘ ಇಲ್ಲ,ಮೋಕ್ಷಪಥಕ್ಕೆ ಅದು ಅಡ್ಡಿ ಎನ್ನುವ ಭಾವನೆ ನಮಗಿದೆ’ ಎಂದು ಉತ್ತರಿಸುವ ಅವರಿಗೆ ನನ್ನ ಮುಂದಿನ ಪ್ರಶ್ನೆ ‘ ನಿಮ್ಮ ನೆರೆ ಹೊರೆಯವರನ್ನು ಪ್ರೀತಿಸುತ್ತೀರಾ? ಅವರ ಕಷ್ಟ – ಸುಖಗಳಿಗೆ ಸ್ಪಂದಿಸುತ್ತೀರಾ?’ ಈ ಪ್ರಶ್ನೆಗೂ ‘ಇಲ್ಲ’ ಎನ್ನುವ ಉತ್ತರ ಬರುತ್ತದೆ ಅವರಿಂದ.ನನ್ನ ಮೂರನೆಯ ಮತ್ತು ಕೊನೆಯ ಪ್ರಶ್ನೆ ಅಂಥಹ ಸಾಧಕರಿಗೆ ‘ ನಿಮ್ಮಂತೆಯೇ ಸಾಧನಾ ನಿರತರಾಗಿರುವವರನ್ನು ನೀವು ಬೆಂಬಲಿಸಿದ್ದೀರಾ? ಅಥವಾ ಯಾರಾದರೂ ಸಮಾಜೋಪಯೋಗಿ ಕೆಲಸ – ಕಾರ್ಯಗಳನ್ನು ಮಾಡುತ್ತಿರುವವರಿಗೆ ಪ್ರೋತ್ಸಾಹಿಸಿದ್ದೀರಾ?’. ಇದಕ್ಕೂ ‘ ಇಲ್ಲ’ ಎನ್ನುವ ಉತ್ತರವೇ ಬರುತ್ತದೆ ಶಿವಪಥದಿ ನಡೆಯುತ್ತಿದ್ದೇವೆ ಎನ್ನುವ ಸಾಧಕರುಗಳಿಂದ.

‘ ‘ಶಿವತತ್ತ್ವವನ್ನರಿಯದೆ,ಶಿವಮಯ ಬಾಳನ್ನು ಬಾಳದೆ ಶಿವ ಸಾಕ್ಷಾತ್ಕಾರ ಸಾಧ್ಯವಿಲ್ಲ.ಅಸೂಯೆಯನ್ನು ತೊರೆಯದೆ ಪಶುಪತಿಯ ಅನುಗ್ರಹವನ್ನು ಪಡೆಯಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸುತ್ತೇನೆ ನಾನು ಅಂತಹ ಸಾಧಕ ಶಿವಭಕ್ತರಿಗೆ.ಇದು ಕೆಲವೇ ಜನರಿಗೆ ನಾನು ಉಪದೇಶಿಸಿದ ಮಾತು ಆದರೂ ಶಿವಪಥದಿ ನಡೆಯುವ,ಆಧ್ಯಾತ್ಮಿಕ ಪಥದಿ ನಡೆದು ಮಹತ್ವದ ಸಾಧನೆ ಮಾಡಬಯಸುವ ಎಲ್ಲರಿಗೂ ಅನ್ವಯಿಸುವ ಮಾತು.ಅಸೂಯೆಯನ್ನಿಟ್ಟುಕೊಂಡು ನಾವು ಪಶುಪತಿಯನ್ನು ಕಾಣಲಾಗದು.ದ್ವೇಷವನ್ನು ಒಡಲಲ್ಲಿಟ್ಟುಕೊಂಡು ಪರಮಕರುಣಾಕರನಾದ ಪರಶಿವನ ದರ್ಶನ ಪಡೆಯಲಾಗದು.ಪ್ರೀತಿಸಲು ಅರಿಯದೆ ವಾತ್ಸಲ್ಯಮೂರ್ತಿಯಾದ ಪರಶಿವನನ್ನು ಪಡೆಯಲಾರೆವು.ಶಿವನನ್ನು ಕಾಣಬೇಕು ಎನ್ನುವವರು ಮೊದಲು ಜನರನ್ನು,ಜಗತ್ತನ್ನು‌ ಪ್ರೀತಿಸಲು ಕಲಿಯಬೇಕು.ಶಿವಾನುಗ್ರಹವನ್ನು ಬಯಸುವವರು ತಮ್ಮೆದೆಯ ದ್ವೇಷಾಸೂಯೆಗಳನ್ನು ಪ್ರೇಮವನ್ನಾಗಿ ಮಾರ್ಪಡಿಸಿಕೊಂಡು ಜನರಿಗೆ ಪ್ರೇಮಸುಧೆಯನ್ನು ಉಣಬಡಿಸಲು ಕಲಿಯಬೇಕು.ಜಗತ್ತನ್ನು,ಜನರನ್ನು ಪ್ರೀತಿಸುತ್ತ ನಾವು ಪ್ರೇಮಮೂರ್ತಿಯೂ ಮಹೋದಾರಿಯೂ ಆದ ಪರಶಿವನನ್ನು ತಲುಪಬಹುದು.ಪ್ರಪಂಚವನ್ನು‌ ಪ್ರೀತಿಸದೆ ಪರಮಾತ್ಮನನ್ನು ಪ್ರೀತಿಸಿದರೆ ಅದು ಯೋಗವಲ್ಲ,ಸಾಧನೆಯಲ್ಲ.ಜನರನ್ನು ಪ್ರೀತಿಸದೆ ಜಗದೀಶ್ವರ ಶಿವನ ಪ್ರೀತಿಯನ್ನುಣ್ಣಲು ಸಾಧ್ಯವಿಲ್ಲ.

ಪ್ರೀತಿಸುವ ಕ್ರಿಯೆ ಕುಟುಂಬದಿಂದಲೇ ಮೊದಲಾಗಬೇಕು.ಕುಟುಂಬದಲ್ಲಿ ತಂದೆ- ತಾಯಿ,ಅಣ್ಣ ತಮ್ಮ,ಅಕ್ಕ ತಂಗಿಯರನ್ನು ಪ್ರೀತಿ- ವಾತ್ಸಲ್ಯಭಾವದಿಂದ ಕಾಣಬೇಕು.ಹೆಂಡತಿ ಮಕ್ಕಳಲ್ಲಿ ಪ್ರೇಮ ಇರಬೇಕು.ನೆರೆಹೊರೆಯವರನ್ನು ಹಚ್ಚಿಕೊಳ್ಳಬೇಕು,ಅವರ ಸುಖದುಃಖಗಳಿಗೆ ಸ್ಪಂದಿಸಬೇಕು.ಆದರೆ ಬಹುತೇಕ ಜನ ಸಾಧಕರುಗಳಿಗೆ ‘ ಆಧ್ಯಾತ್ಮಿಕ ಸಾಧನೆಗೆ ಸಂಸಾರ ಅಡ್ಡಿ’ ಎನ್ನುವ ಅಪಕ್ವ ಭಾವನೆ ಕಾಡುತ್ತಿದೆ.ಈ ಅಪಕ್ವಭಾವನೆಯೇ ಅವರು ಸಾಧನಾಪಥದಲ್ಲಿ ವಿಫಲರಾಗಲು ಕಾರಣ.ನಾನು ಸಹ ಆಧ್ಯಾತ್ಮಿಕ ಸಾಧನೆಯ ನನ್ನ ಪ್ರಾರಂಭದ ದಿನಗಳಲ್ಲಿ ‘ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಂಸಾರ ಅಡ್ಡಿ,ಬಂಧನ’ ಎಂದು ತಿಳಿದಿದ್ದೆ.ಎಂಟ್ಹತ್ತು ಘಂಟೆಗಳ ಯೋಗಸಾಧನೆ ಮಾಡುತ್ತ‌ ಉಗ್ರ ವೈರಾಗ್ಯಮೂರ್ತಿಯಾಗಿದ್ದೆನಾದರೂ ಶಿವಾನುಗ್ರಹಪಡೆಯಲು ಸಾಧ್ಯವಾಗಿರಲಿಲ್ಲ ಆಗ ನನಗೆ.ನಾನು ಪೂರ್ಣನಾದದ್ದು,ಪರಶಿವನ ಅನುಗ್ರಹವನ್ನು ಪಡೆದದ್ದು ಮದುವೆಯಾಗಿ ಸಂಸಾರಸ್ಥನಾದ ಬಳಿಕವೆ ! ಆಧ್ಯಾತ್ಮಿಕ ತಪ್ಪು ತಿಳಿವಳಿಕೆಯ ಕಾರಣದಿಂದ ತಡವಾಗಿ ಮದುವೆಯಾಗಿ,ತಡವಾಗಿ ಮಕ್ಕಳನ್ನು ಪಡೆದ ನನಗೆ ನಂತರ ಅರ್ಥವಾಯಿತು ‘ ಸಂಸಾರವು ಶಿವ ಸಾಕ್ಷಾತ್ಕಾರಕ್ಕೆ ಸರಳ ಸೂತ್ರ’ ಎನ್ನುವ ಪರಮಸತ್ಯ ! ಸಂಸಾರಿಯಾಗದೆ ಶಿವನನ್ನು ಕಾಣುತ್ತೇವೆ ಎಂದು ಕೆಲವರು ಹೇಳಬಹುದು,ಅದು ಸುಳ್ಳು ಎಂದು ನನಗೆ ಚೆನ್ನಾಗಿ ಗೊತ್ತಿದೆ.ಸಂನ್ಯಾಸಿಗಳಿಗೆ ಶಿವನು ಬೇಗನೆ ಒಲಿಯುತ್ತಾನೆ,ಸಂನ್ಯಾಸಿಗಳಿಗೆ‌ಮೋಕ್ಷ ಸಿಗುತ್ತದೆ ಎನ್ನುವುದು ಕೂಡ ಅರ್ಥಹೀನ,ಅಪ್ಪಟ ಸುಳ್ಳು ಎಂದು ನನಗೆ ಗೊತ್ತಾಗಿದೆ.ಸಾವಿರಕ್ಕೆ ಒಬ್ಬ ಸಂನ್ಯಾಸಿ ಮಾತ್ರ ಶಿವಾನುಗ್ರಹವನ್ನು ಪಡೆಯಬಲ್ಲ.ಉಳಿದ ಸಂನ್ಯಾಸಿಗಳೆಲ್ಲ ಸಂಸಾರಿಗಳಂತೆಯೇ ಅನುಭವಿಸಬೇಕಾದದ್ದನ್ನೆಲ್ಲ ( ಸ್ವರ್ಗ- ನರಕಗಳನ್ನು) ಅನುಭವಿಸಿ ಮತ್ತೆ ಮತ್ತೆ ಹುಟ್ಟಿ ಸಾಯಬೇಕಾದವರೆ! ಯಾಕೆಂದರೆ ಮನುಷ್ಯರು ಹುಟ್ಟಿಸಿದ ಶಾಸ್ತ್ರ- ಪದ್ಧತಿ,ಆಶ್ರಮಗಳಿಗೆ ಪರಮಾತ್ಮನ ವಿಶ್ವನಿಯಮಗಳಲ್ಲಿ ಅರ್ಥವಿಲ್ಲ.ಒಬ್ಬನು ಸಂಸಾರಿಯೋ ಸಂನ್ಯಾಸಿಯೊ ಎನ್ನುವುದನ್ನು ಪರಶಿವನು ಪರಿಗಣಿಸುವುದಿಲ್ಲ ಬದಲಿಗೆ ಪರಿಶುದ್ಧಾತ್ಮನೋ ಅಲ್ಲವೋ ಎಂಬುದನ್ನು ಪರೀಕ್ಷಿಸುತ್ತಾನೆ ಪರಮೇಶ್ವರ ಶಿವನು.ನೀವು ಬಣ್ಣಬಣ್ಣದ ಬಟ್ಟೆಯನ್ನು ಉಟ್ಟಿದ್ದರೋ ಅಥವಾ ಕಾಷಾಯ ಇಲ್ಲವೆ ಕಾವಿ ಬಟ್ಟೆಯನ್ನು ಉಟ್ಟಿದ್ದೀರೋ ಎನ್ನುವುದು ಪರಶಿವನ ಪರಿಗಣನೆಗೆ ಬರುವುದೇ ಇಲ್ಲ! ನೀವು ಶಿವನಲ್ಲಿ ನಿಜನಿಷ್ಠೆಯನ್ನು ಇಟ್ಟಿದ್ದೀರೋ ಇಲ್ಲವೊ ಎಂಬುದನ್ನಷ್ಟೇ ಗಮನಿಸುತ್ತಾನೆ ಪರಬ್ರಹ್ಮನಾದ ಶಿವನು.ಸಂನ್ಯಾಸಾಶ್ರಮ ಶ್ರೇಷ್ಠ, ಗೃಹಸ್ಥಾಶ್ರಮ ಕನಿಷ್ಠ ಎನ್ನುವ ಮಾತುಗಳು ಅರ್ಥವಿಲ್ಲದ ವ್ಯರ್ಥ ಬಡಬಡಿಕೆಗಳು.ಕಾವಿಯನ್ನುಟ್ಟವರೆಲ್ಲ ಕೈಲಾಸ ಸೇರುತ್ತಾರೆ ಎನ್ನುವುದು ಮೂರ್ಖರಿಗೆ ಮಾತ್ರ ಒಪ್ಪಿಗೆಯಾಗುವ ಮಾತು.ವೈರಾಗ್ಯ ಎನ್ನುವುದು ಉಡುವ ಬಟ್ಟೆಯಿಂದ ಬರುವುದಿಲ್ಲ,ಅವಗುಣಗಳನ್ನು ಸುಟ್ಟುರುಹುವ ಗಟ್ಟಿತನದಿಂದ ಬರುತ್ತದೆ. ಇಂದ್ರಿಯಗಳ ವಿಜಯವೇ ನಿಜವಾದ ವೈರಾಗ್ಯ.ಇಂದ್ರಿಯಗಳನ್ನು ಜಯಿಸದವನು ಸಂನ್ಯಾಸಿಯಾಗಿದ್ದರೂ ವ್ಯರ್ಥ.ಇಂದ್ರಿಯಗಳನ್ನು ಜಯಿಸಿದವನು ಸಂಸಾರಿಯಾಗಿದ್ದರೂ ಅವನು ನಿತ್ಯಮುಕ್ತ.

ಕಾಮಾಂಕಾಕ್ಷೆ ಮನುಷ್ಯನ ಸಹಜ ಗುಣ.ಕಾಮವನ್ನು ಗೆಲ್ಲಬಹುದಲ್ಲದೆ ಕೊಲ್ಲಲಾಗದು.ಕಾಮವನ್ನು ಕೊಲ್ಲಲು ಹೋಗಿ ಕೆಟ್ಟುಹೋಗುವದಕ್ಕಿಂತ ಕಾಮವನ್ನು ಅನುಭವಿಸಿ ಗೆಲ್ಲುವುದು ಶ್ರೇಷ್ಠ.ಸಂಸಾರವು ಇದಕ್ಕೆ ಶ್ರೇಷ್ಠ ಮಾಧ್ಯಮವಾಗಿದ್ದು ಮದುವೆ ಮಾಡಿಕೊಂಡು ಹೆಂಡತಿಯೊಂದಿಗೆ ಕಾಮಸುಖವನ್ನನುಭವಿಸುತ್ತ ಮಕ್ಕಳನ್ನು ಪಡೆದು ಸಂಸಾರಸುಖವನ್ನನುಭವಿಸಿ ಮುಕ್ತನಾಗಬಹುದು.ಬಸವಣ್ಣನವರು ‘ ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು.ಮುಂದೆ ಬಂದು ಕಾಡುವವು ಪಂಚಮಹಾಪತಕಗಳು’ ಎಂದು ಹಾಡಿರುವುದನ್ನು ಗಮನಿಸಬೇಕು.ಇಂದ್ರಿಯ ನಿಗ್ರಹ ಎನ್ನುವುದು ವ್ಯರ್ಥ ಕಸರತ್ತು,ಆತ್ಮವಂಚನೆ.ಕಾಮಾದಿ ಇಂದ್ರಿಯಗಳನ್ನು ಗೆಲ್ಲಬಲ್ಲವರು ಬೆರಳೆಣಿಕೆಯ ಜನರಷ್ಟೆ,ಮಿಕ್ಕುಳಿದ ಜನರಿಂದ ಅದು ಸಾಧ್ಯವಿಲ್ಲ.ಬಸವಣ್ಣನವರ ಅನುಭವ ಮಂಟಪದಲ್ಲಿ ಅಲ್ಲಮಪ್ರಭು,ಅಕ್ಕಮಹಾದೇವಿ,ಚೆನ್ನಬಸವಣ್ಣ,ಸಿದ್ಧರಾಮರಂತಹ ಕೆಲವೇ ಜನ ಶಿವಯೋಗಸಾಧಕರುಗಳು ಮಾತ್ರ ಸಂನ್ಯಾಸಿಗಳಾಗಿದ್ದರು,ವಿರಕ್ತರುಗಳಾಗಿದ್ದವರು.ಉಳಿದವರೆಲ್ಲ ಸಂಸಾರಿಗಳೆ.ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಮದುವೆ ಮಾಡಿಕೊಂಡಿದ್ದರು.ಇಬ್ಬರು ಹೆಂಡತಿಯರ ತುಂಬ ಸಂಸಾರದೊಳಿದ್ದ ಬಸವಣ್ಣನವರಿಗೆ ಕೈಲಾಸ ದೂರದಲ್ಲೇನಿರಲಿಲ್ಲ,ಅವರ ಕರಸ್ಥಳದಲ್ಲೇ ಇತ್ತು.ಕೈಲಾಸದ ಪರಶಿವನನ್ನು ಬಸವಣ್ಣನವರು ಇಷ್ಟಲಿಂಗ ರೂಪದಲ್ಲಿ ಎಲ್ಲರ ಕೈಗಳಿಗೆ ಇತ್ತರು,ಮನೆ ಮನೆಗಳನ್ನು ಕೈಲಾಸವನ್ನಾಗಿಸಿದರು.ಜಗತ್ತಿನ ಧಾರ್ಮಿಕೇತಿಹಾಸದಲ್ಲಿ ಯಾವ ಸಂನ್ಯಾಸಿ,ವಿರಕ್ತರುಗಳು ಸಾಧಿಸದ ಮಹೋನ್ನತ ಕಾರ್ಯವನ್ನು ಒಬ್ಬರಲ್ಲ,ಇಬ್ಬರು ಹೆಂಡತಿಯರನ್ನು ಹೊಂದಿದ್ದ ಬಸವಣ್ಣನವರು ಸಾಧಿಸಿದರು.’ಬಸವಮಾರ್ಗ’ ಎಂದರೆ ಲೋಕಸಮಸ್ತರನ್ನು ಕೈಲಾಸಕ್ಕೆ ಕರೆದೊಯ್ಯುವ ಸಂಸಾರ ಮಾರ್ಗವೆ !ಇದನ್ನರಿಯದ ಅಣ್ಣಗಳು ಏನು ಏನನ್ನೋ ಬಡಬಡಿಸಿ,ದೊಡ್ಡವರಾದೆವು ಎಂದು ಬಡಿವಾರ ನಟಿಸುತ್ತಾರೆ.

ಕುಟುಂಬದಲ್ಲಿ ಹೆತ್ತವರನ್ನು ಗೌರವಿಸಬೇಕು,ಅವರನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳಬೇಕು.ಮನೆಯಲ್ಲಿ ಒಡಹುಟ್ಟಿದವರ ಬಗ್ಗೆ ಪ್ರೀತಿ,ಪ್ರೇಮ ತೋರಿಸಬೇಕು.ಅವರ ಏಳ್ಗೆಯನ್ನು ಬಯಸಿ,ಅವರಿಗಾಗಿ ದುಡಿಯಬೇಕು.ಹೆಂಡತಿ ಮಕ್ಕಳ ಬದುಕು ಭವಿಷ್ಯದ ಬಗ್ಗೆ ಕನಸು ಕಲ್ಪನೆಗಳನ್ನು ಹೊಂದಿರಬೇಕು.ನಮ್ಮ ನೆರೆಹೊರೆಯವರು ನಮ್ಮಂತೆಯೇ ಮನುಷ್ಯರಾದ್ದರಿಂದ ಅವರ ಕಷ್ಟಸುಖಗಳಿಗೆ ಸ್ಪಂದಿಸುವುದು ನಮ್ಮ ಆದ್ಯಕರ್ತವ್ಯ ಎಂದು ತಿಳಿಯಬೇಕು.ಕುಟುಂಬ,ನೆರೆಹೊರೆಯವರು,ಓಣಿ ಸಮಾಜವನ್ನು ಪ್ರೀತಿಸುತ್ತ ನಾಡು- ದೇಶಗಳನ್ನೇ ಪ್ರೀತಿಸಿ ಪರಮಾತ್ಮನನ್ನು ಗೆಲ್ಲಬಹುದು.ಶಿವನನ್ನು ಪಡೆಯಬೇಕು ಎನ್ನುವವರಿಗೆ ಸಂಸಾರವೇ ಸರಿಯಾದ ಮಾರ್ಗ.ಈ ಕಾರಣದಿಂದಲೇ ನಮ್ಮ ಮಹಾಶೈವ ಧರ್ಮವು ಸಂನ್ಯಾಸವನ್ನು ತಿರಸ್ಕರಿಸಿ,ಸಂಸಾರವನ್ನು ಪುರಸ್ಕರಿಸಿದೆ.ಮಹಾಶೈವ ಧರ್ಮದಲ್ಲಿ ಸಂನ್ಯಾಸಕ್ಕೆ ಅರ್ಥವಿಲ್ಲ,ಸಂನ್ಯಾಸಿಗಳಿಗೆ ಮಹತ್ವವಿಲ್ಲ! ನಮ್ಮ ‘ ಮಹಾಶೈವ ಧರ್ಮಪೀಠ’ ವು ಸಂಸಾರಿಗಳಾದವರನ್ನೇ ಪೀಠಾಧಿಪತಿಗಳನ್ನಾಗಿ ಹೊಂದಿರುವ ‘ಶಿವಸಂಸಾರಪೀಠ’ ವು.ಸ್ವಯಂ ಶಿವನು ಸಂಸಾರಿಯೆ.ಶಿವನಿಗೂ ಒಬ್ಬರಲ್ಲ,ಇಬ್ಬರು ಮಡದಿಯರು.ಗೌರಿ- ಗಂಗೆಯರಿಬ್ಬರನ್ನು ಪತ್ನಿಯರನ್ನಾಗಿ ಹೊಂದಿರುವ ಶಿವನು ಗಣಪತಿ- ಷಣ್ಮುಖರೆಂಬ ಪುತ್ರರನ್ನುಳ್ಳ ‘ ಮಹಾಸಂಸಾರಿ’ ಮಹಾದೇವನ ‘ ಸಂಸಾರತತ್ತ್ವ’ ವು ಮನುಷ್ಯರಿಗೆ ಆದರ್ಶವಾಗಬೇಕು.

ಸಮಾಜ ಜೀವನದಲ್ಲಿ ಕೆಲವರು‌ ಮಹತ್ವಾಕಾಂಕ್ಷಿಗಳಾಗಿರುವುದುಂಟು.ಇತರರಿಗೆ ಸಾಧ್ಯವಾಗದ ಮಹಾನ್ ಕಾರ್ಯಗಳನ್ನು ಸಾಧಿಸಬಯಸುತ್ತಾರೆ ಇಂತಹ ಮಹತ್ವಾಕಾಂಕ್ಷಿಗಳು.ಸಮಾಜ ಸುಧಾರಣೆಯಾಗಿರಬಹುದು ಇಲ್ಲವೆ ಆಧ್ಯಾತ್ಮಿಕ ಸಾಧನೆಯಾಗಿರಬಹುದು ಅಥವಾ ಕಲೆ,ಸಾಹಿತ್ಯ,ಸಂಗೀತ,ಅಭಿನಯ,ರಾಜಕೀಯಗಳಂತಹ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಬಯಸಿರಬಹುದು.ಇಂಥವರನ್ನು ಕಂಡು,ಪ್ರೋತ್ಸಾಹಿಸಬೇಕು.ಮಹತ್ವಾಕಾಂಕ್ಷಿಗಳಿಗೆ ಹಣ ನೀಡುವುದು ಆಗದೆ ಇದ್ದರೂ ನಾಲ್ಕು ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನು ತಟ್ಟಬಹುದಲ್ಲ.ಇದೇ ಕಷ್ಟದ ಕೆಲಸ ನಮ್ಮಲ್ಲಿ ಬಹುಪಾಲು ಜನರಿಗೆ.ಇನ್ನೊಬ್ಬರ ಏಳ್ಗೆಯನ್ನು ಸಹಿಸಲಾಗದು.ಯಾರಾದರೂ ಮುಂದೆ ಬರುತ್ತಾರೆ ಎಂದರೆ ಹೊಟ್ಟೆ ಉರಿಸಿಕೊಳ್ಳುತ್ತಾರೆ ಮತ್ಸರದೇಹಿಗಳು.ತಾನು ಮಾತ್ರ ಉದ್ಧಾರವಾಗಬೇಕು,ತಮ್ಮವರು ಮಾತ್ರ ನೆಟ್ಟಗಿರಬೇಕು ಎನ್ನುವ ಅಲ್ಪಬುದ್ಧಿಯ ಮತ್ಸರದೇಹಿಗಳಿಂದಲೇ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರುವುದು.ಇನ್ನೊಬ್ಬರ ಹಿರಿಮೆಯಲ್ಲಿ ಕರುಬುವ ಗುಣವೇಕೆ ? ಯಾಕೆಂದರೆ ತಮ್ಮಿಂದ ಮಾಡಲಾಗದು,ಇತರರು ಮಾಡಿ ದೊಡ್ಡವರಾದರೆ ಹೇಗೆ? ತಾವು ದುರ್ಬಲರು,ಇತರರ ಪೌರುಷವನ್ನು ಒಪ್ಪರು.ಹೊಟ್ಟೆಯ ಕಿಚ್ಚು ಕೆಟ್ಟಕೆಲಸಗಳ ಮೂಲ.ಹೊಟ್ಟೆಯಲ್ಲಿ ಕಿಚ್ಚು ಇರಬೇಕು ತಿಂದ ಅನ್ನ ಆಹಾರವನ್ನು ಜೀರ್ಣಿಸಿಕೊಳ್ಳಲು ಮಾತ್ರ ‘ ಜಠರಾಗ್ನಿ’ಯಾಗಿ.ಹೊಟ್ಟೆಯಲ್ಲಿ ಕಿಚ್ಚು ಇರಬಾರದು ಮತ್ತೊಬ್ಬರ ಬಾಳಿಗೆ ಬೆಂಕಿ ಹಚ್ಚುವ ಕೆಟ್ಟಕೆಲಸಗಳಿಗೆ ಪ್ರೇರಣೆಯಾಗಿ.

ಶಿವನು ಪರಮ ಕರುಣಾಮೂರ್ತಿಯು.ಕಾರುಣ್ಯಕ್ಕೆ ಮತ್ತೊಂದು ಹೆಸರೇ ಶಿವನು.ಕಾರುಣ್ಯದ ಅರ್ಥವೇ ಶಿವನು.ಕಾರುಣ್ಯಸಿಂಧುವಾದ ಶಿವನನ್ನು ಲೋಕವನ್ನು ಪ್ರೀತಿಸುವ ಲೋಕಬಂಧುವಾಗುವ ಮೂಲಕ ಪಡೆಯಬಹುದು.ಅಸೂಯೆಯನ್ನು ಸುಟ್ಟುರುಹಬೇಕು.ಅಸೂಯಾಗುಣವನ್ನು ಸುಟ್ಟು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು.ಪ್ರೇಮಭಾವವು ವಿಕಾಸವಾದಷ್ಟು ಅಮೃತತ್ತ್ವವು ಬೆಳೆಯುತ್ತದೆ.ದ್ವೇಷವು ಪ್ರೀತಿಯಾಗಿ ಮಾರ್ಪಡಬೇಕು,ಅಸೂಯೆಯ ವಿಷಗುಣವಾಗಿ ಅಮೃತವಾಗಿ ಪರಿವರ್ತನೆಯಾಗಬೇಕು; ಅವಗುಣಗಳೆಲ್ಲ ಸದ್ಗುಣವಾಗಿ ಪಲ್ಲಟಗೊಳ್ಳಬೇಕು.ಈ ಪರಿವರ್ತನೆ,ಪಲ್ಲಟವು ಪರಶಿವನನ್ನು ಕರೆತರಬಲ್ಲದು ನಿಮ್ಮೆಡೆಗೆ.ಶಿವಸಾಕ್ಷಾತ್ಕಾರ ಪಡೆಯಬೇಕು ಎನ್ನುವವರು ಅವಗುಣಗಳನ್ನೆಲ್ಲ ಸುಟ್ಟುಬೂದಿ ಮಾಡಿ ಶಿವಗುಣಿಗಳಾಗಬೇಕು.ಪ್ರೀತಿ,ತ್ಯಾಗ,ಮತ್ಸರರಾಹಿತ್ಯ ಮಮಕಾರ,ಸರ್ವರ ಒಳಿತನ್ನಾಪೇಕ್ಷಿಸುವ ಶ್ರೇಯೋಬುದ್ಧಿ,ಸರ್ವಭೂತಹಿತಚಿಂತನೆಯಂತಹ ಉದಾತ್ತ ಗುಣಗಳನ್ನು ಅಳವಡಿಸಿಕೊಂಡರೆ ಕಷ್ಟವೇನಲ್ಲ ಶಿವಸಾಕ್ಷಾತ್ಕಾರ,ಶಿವಾನುಗ್ರಹವನ್ನು ಪಡೆಯುವುದು.

About The Author