ಕಲ್ಯಾಣ ಕಾವ್ಯ:ಶ್ರೀ ಸಿದ್ಧೇಶ್ವರ ಸ್ವಾಮಿಗಳು:ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ

ಶ್ರೀ ಸಿದ್ಧೇಶ್ವರ ಸ್ವಾಮಿಗಳು

ಮುಕ್ಕಣ್ಣ ಕರಿಗಾರ
  ಲೋಕದೊಳೊಂದಚ್ಚರಿಯ ಸಿದ್ಧ ವ್ಯಕ್ತಿತ್ವ
 ಜಡಜೀವರುಗಳ ನಡುವೆಯೆ
ಅರಳಿದ ಅಪರೂಪದ ಜಂಗಮಚೇತನ
ಮೃಡಮಹಾದೇವನ ಇರವಿಗೆ
ಪರಮಸಾಕ್ಷಿ ಇವರು
ಶ್ರೀಸಿದ್ಧೇಶ್ವರ ಸ್ವಾಮಿಗಳು.
ಬುದ್ಧ ಬಸವರನ್ನು ಕಾಣದ ನಮಗೆ
ಬುದ್ಧ ಬಸವರನ್ನು ಕಲ್ಪಿಸಿಕೊಳ್ಳಲು
ಸಾಧ್ಯವಾಗುವುದು ಸಿದ್ಧೇಶ್ವರಸ್ವಾಮಿಗಳ
ಧವಳಶುಭ್ರ ವ್ಯಕ್ತಿತ್ವವನ್ನು ಕಂಡಾದ ಬಳಿಕ.
  ಬಂದು,ಹೋಗಿರಬಹುದೆಷ್ಟೋ ಜನ
 ಸಿದ್ಧರು,ಅವತಾರಿಗಳು
ಅಪರೂಪ ಸಿದ್ಧೇಶ್ವರ ಸ್ವಾಮಿಗಳಂಥವರು
ಬರುವುದು ಈ ಧರೆಗೆ
ನಾಡಪುಣ್ಯವು,ಭುವನದ ಭಾಗ್ಯವು
ಮೇಳೈಸಿ ಪರಶಿವನ ಚಿತ್ಕಲಾ ಪ್ರಭೆಯು
ಪುರುಷಾಕಾರ ತಳೆದು
ಧರೆಗಿಳಿದ ಪರಮಬೆಡಗು.
ತುಂಬಿ ಹರಿವ ಹೊನಲಂಥ ವ್ಯಕ್ತಿತ್ವ
ನುಡಿ ಜೇನುತುಂಬಿದ ಕೊಡ
ನಡೆ ಸ್ಪರ್ಶಮಣಿಯಂತೆ
ಬಳಿಬಂದ ತುಕ್ಕುಹಿಡಿದ ಕಬ್ಬಿಣವೂ
ಹೊನ್ನಾಗುವ ಪರಮಾತ್ಮಸಿರಿಯ
ಸಿದ್ಧಚೇತನರು.
  ಉತ್ತರದ ವಾರಣಾಸಿಯಲ್ಲಿ ಹರಿವ
ದೇವಗಂಗೆಯು ದೇಹಗಳ ಶುದ್ಧಿಗೊಳಿಸಿದರೆ
ದಕ್ಷಿಣದ ಕರುನಾಡ ಸಂತ ಸಿದ್ಧೇಶ್ವರ ಸ್ವಾಮಿಗಳು
ಮುಕ್ತಿಭಾವಗಂಗೆಯಾಗಿ ಭವಜೀವರುಗಳಲ್ಲಿ
ಅನುಭಾವದ ರಸಬುಗ್ಗೆಯ ಚಿಮ್ಮಿಸಿ
ಲೋಕದ ಕೊಳೆಯ ತೊಳೆಯುತ್ತಿಹ
ಸಕಲತೀರ್ಥಸ್ವರೂಪರು.
ಸಿದ್ಧೇಶ್ವರ ಸ್ವಾಮಿಗಳವರ ಸನ್ನಿಧಿಯಲ್ಲಿ
ಘಂಟೆಯೊಂದು ಕಳೆಯೆ
ಸಕಲ ಕ್ಷೇತ್ರಗಳಲ್ಲಿ ವರ್ಷವೊಂದು ಮಿಂದುದಕ್ಕೆ ಸಮ.
ಪರಮಾತ್ಮನ ಪಥವ ಲೋಕಸಮಸ್ತರಿಗೆ
ತೆರೆದಿಟ್ಟ ಪರಮಾನುಭವಿ
ಆಧ್ಯಾತ್ಮದ ಗಹನಾತಿಗಹನ ರಹಸ್ಯಗಳ
ಸುಲಿದಬಾಳೆಹಣ್ಣನ್ನಾಗಿಸಿ ಜನರಿಗಿತ್ತು
ಲೋಕಸಮಸ್ತರನ್ನುದ್ಧರಿಸುತ್ತಿಹ
ಅಪರೂಪದ ಸಿದ್ಧರಿವರು.
ಇವರ ಒಂದು ಮಾತು ಸಹಸ್ರ ತತ್ತ್ವಜ್ಞಾನಕೃತಿಗಳಿಗೆ ಸಮ
ಮಾತುಮಂತ್ರವಾದ ಮಹಾಂತ ವ್ಯಕ್ತಿತ್ವದ
ಸಿದ್ಧೇಶ್ವರ ಸ್ವಾಮಿಗಳವರ ಮಾತು ಕೇಳುವುದೇ
 ಮಹಾಭಾಗ್ಯ,ಕೈಲಾಸಕ್ಕೆ ರಾಜಮಾರ್ಗ.
ಶಿವಸಿದ್ಧರಿರವರು
ಪರಶಿವಪ್ರಭೆಯಾಗಿ ಬೆಳಗುತ್ತಿಹರು.
ಸಿದ್ಧೇಶ್ವರ ಸ್ವಾಮಿಗಳಿದ್ದ ಎಡೆಯಲ್ಲಿಯೇ
ಇಹುದು ಕೈಲಾಸದ ದಾರಿ,ಮುಕ್ತಿಪಥ.
ಮುಕ್ತರಾಗಲು ಹುಡುಕಲೇಕೆ ಅಲ್ಲಿ ಇಲ್ಲಿ
ಬನ್ನಿ ಇಲ್ಲಿಯೇ ಯುಗಾವತಾರಿ ಸಿದ್ಧೇಶ್ವರ ಸ್ವಾಮಿಗಳ ಬಳಿ
ಪರಮಾತ್ಮನ ಸಾನ್ನಿಧ್ಯ ಸುಖವನ್ನನುಭವಿಸಿ.

About The Author