ಮೂರನೇ ಕಣ್ಣು : ನ್ಯಾಯಾಲಯಗಳು ಎತ್ತಿ ಹಿಡಿಯಬೇಕಾದದ್ದು ಸಂವಿಧಾನವನ್ನು,ಮನುಸ್ಮೃತಿಯನ್ನಲ್ಲ : ಮುಕ್ಕಣ್ಣ ಕರಿಗಾರ

ಗುಜರಾತಿನ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ತಮ್ಮ ತೀರ್ಪಿನಲ್ಲಿ ವಿಚಿತ್ರವಾದ ಉಲ್ಲೇಖ ಮಾಡಿದ್ದಾರೆ,ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತೀರ್ಪು ನೀಡಿದ್ದಾರೆ.17 ವರ್ಷದ ಬಾಲೆಯೊಬ್ಬಳು ಗರ್ಭಪಾತವನ್ನು ಕೋರಿ ಹೈಕೋರ್ಟಿನ ಮೊರೆಹೋಗಿದ್ದಳು.ಪ್ರಕರಣವನ್ನು ಆಲಿಸಿದ ನ್ಯಾಯಾಧೀಶರಾದ ಸಮೀರ ದವೆ ಅವರು ಪ್ರಕರಣವನ್ನು ಒಂದು ವಾರ ಮುಂದೂಡಿದ್ದಲ್ಲದೆ ‘ ಮನುಸ್ಮೃತಿ’ ಯನ್ನು ಉಲ್ಲೇಖಿಸಿ 24 ವಾರಗಳ ಭ್ರೂಣವನ್ನು ತೆಗೆಯಲು ಅನುಮತಿ ನಿರಾಕರಿಸಿದ್ದಾರೆ.ಅಪ್ರಾಪ್ತೆಯ ಭ್ರೂಣ ತೆಗೆಯಿಸಿಕೊಳ್ಳುವ ಹಕ್ಕನ್ನು ನಿರಾಕರಿಸುತ್ತ ನ್ಯಾಯಾಧೀಶ ಸಮೀರ ದವೆ ಅವರು ಬಾಲಕಿಯರು ‘ 14 ರಿಂದ 16 ವರ್ಷದ ಒಳಗಾಗಿ ಮದುವೆಯಾಗಬೇಕು ಮತ್ತು 17 ವರ್ಷ ತಲುಪುವದರೊಳಗಾಗಿ ಕನಿಷ್ಟ ಒಂದು ಮಗುವನ್ನಾದರೂ ಹೆರಬೇಕು’ ಎಂದು ಅಪ್ಪಣೆಕೊಟ್ಟಿದ್ದಲ್ಲದೆ ‘ ಬೇಕಿದ್ದರೆ ಮನುಸ್ಮೃತಿಯನ್ನು ತೆರೆದುನೋಡಿ.ಇದಕ್ಕೆ ಆಧಾರವಿದೆ’ ಎಂದಿದ್ದಾರೆ! ಅತ್ಯಾಚಾರ ಸಂತ್ರಸ್ತೆಯಾದ ಆ ಬಾಲಕಿಯ ಬದುಕು ಬವಣೆಗಿಂತ ಗುಜರಾತ ಹೈಕೋರ್ಟಿನ ನ್ಯಾಯಾಧೀಶರಿಗೆ ಮನುಸ್ಮೃತಿಯನ್ನು ಎತ್ತಿಹಿಡಿಯುವುದೇ ಮುಖ್ಯವೆನ್ನಿಸಿದೆ.ಇಂತಹದೆ ಪ್ರಕರಣಗಳಲ್ಲಿ ಕೆಲವು ರಾಜ್ಯಗಳ ಹೈಕೋರ್ಟ್ಗಳು ಹಾಗೂ ಸುಪ್ರೀಂಕೋರ್ಟ್ ಭ್ರೂಣಹತ್ಯೆಯನ್ನು ಅನುಮತಿಸಿವೆ ಎನ್ನುವುದನ್ನು ಗಮನಿಸಬೇಕಿದ್ದ ನ್ಯಾಯಾಧೀಶರು ಮನುಸ್ಮೃತಿಯ ಮೌಲ್ಯಗಳನ್ನು ಪ್ರತಿಷ್ಠಾಪಿಸಹೊರಟಿದ್ದಾರೆ.ದೆಹಲಿ ಹೈಕೋರ್ಟ್ ಕಳೆದ ವರ್ಷ ಇಂತಹದೆ ಪ್ರಕರಣದಲ್ಲಿ 33 ವಾರಗಳ ಭ್ರೂಣ ಹತ್ಯೆಗೆ ಅನುಮತಿ ನೀಡಿತ್ತು.ಆ ತೀರ್ಪಿನಲ್ಲಿ ದೆಹಲಿ ಹೈಕೋರ್ಟ್ ‘ ತಾಯಿಯ ಆಯ್ಕೆಯೇ ಅಂತಿಮ’ ಎಂದು ನಿರ್ಣಯಿಸಿತ್ತು.ಸುಪ್ರೀಂಕೋರ್ಟ್ ಕೂಡ ಮಹಿಳೆಯ ಸುರಕ್ಷಿತೆಯ ಕಾರಣದಿಂದ ಭ್ರೂಣ ಹತ್ಯೆಯನ್ನು ಅನುಮತಿಸಿದೆ.ಲೈಂಗಿಕ ದೌರ್ಜನ್ಯ ಸಂತ್ರಸ್ತೆಯಾದ ಬಾಲಕಿಗೆ ಭ್ರೂಣ ತೆಗೆಯಿಸಿಕೊಳ್ಳುವ ಕಾನೂನಾತ್ಮಕ ಅವಕಾಶವಿದೆ.ಹಾಗಿದ್ದೂ ನ್ಯಾಯಾಧೀಶರಾದ ಸಮೀರ ದವೆ ಭ್ರೂಣ ತೆಗೆಯಿಸಲು ನಿರಾಕರಿಸಿದ್ದಾರೆ ಮನುಸ್ಮೃತಿಯಲ್ಲಿ ಅವಕಾಶ ಇಲ್ಲದೆ ಇರುವ ಕಾರಣದಿಂದ!

ಸಂವಿಧಾನವನ್ನು ಎತ್ತಿಹಿಡಿಯಬೇಕಾದ ನ್ಯಾಯಾಧೀಶರೇ ಸಂವಿಧಾನವನ್ನು ಧಿಕ್ಕರಿಸಿ ತೀರ್ಪು ನೀಡಿದರೆ ಹೇಗೆ? ಭಾರತದ ರಾಜ್ಯಾಡಳಿತ ಮತ್ತು ನ್ಯಾಯ ನಿರ್ಣಯವು ಸಂವಿಧಾನದ ವಿಧಿ ನಿಯಮಗಳಿಗನುಗುಣವಾಗಿ ನಡೆಯುತ್ತಿದೆಯೇ ಹೊರತು ಮನುಸ್ಮೃತಿಯ ಸಂದೇಶದಂತಲ್ಲ.ಸಂವಿಧಾನದ ಅನುಚ್ಛೇದಕ್ಕನುಗುಣವಾಗಿ ‘ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ ಮತ್ತು ಸಂವಿಧಾನದಲ್ಲಿ ನಿಷ್ಠೆಯುಳ್ಳವನಾಗಿರುತ್ತೇನೆ’ ಎಂದು ಪ್ರಮಾಣವಚನವನ್ನು ಸ್ವೀಕರಿಸಿಯೇ ಹೈಕೋರ್ಟಿನ ನ್ಯಾಯಾಧೀಶರ ವೃತ್ತಿಯನ್ನು ಪ್ರಾರಂಭಿಸುವ ನ್ಯಾಯಾಧೀಶರೊಬ್ಬರಿಂದ ಸಂವಿಧಾನದ ಆಶಯಗಳಿಗೆ ವಿರುದ್ಧವಾದ,ನೆಲದ ಕಾನೂನನ್ನು ಧಿಕ್ಕರಿಸಿದ ಇಂತಹದ್ದೊಂದು ತೀರ್ಪು ಹೊರಬಂದಿದ್ದು ವಿಪರ್ಯಾಸ.

ಭಾರತದ ಪ್ರಜಾಸಮಸ್ತರ ಕಲ್ಯಾಣವನ್ನು ಸಾಧಿಸುವ ದೇಶದ ಸಾರ್ವಭೌಮ ಕಾನೂನು ಆಗಿರುವ ಸಂವಿಧಾನವನ್ನು ಬದಿಗೊತ್ತಿ ಮನುಸ್ಮೃತಿಯನ್ನು ಪ್ರತಿಷ್ಠಾಪಿಸಬಯಸಿದ ಗುಜರಾತ ಹೈಕೋರ್ಟಿನ ತೀರ್ಪು ಆಘಾತಕಾರಿಯಷ್ಟೇ ಅಲ್ಲ,ಅಪಾಯಕಾರಿಯೂ ಹೌದು.ನಮ್ಮ ಪ್ರಬುದ್ಧ ಸಂವಿಧಾನವನ್ನು ವಿಶ್ವದ ಮುಂದುವರೆದ ರಾಷ್ಟ್ರಗಳು ಸಹ ಕೊಂಡಾಡುತ್ತಿರುವ ಸಂದರ್ಭದಲ್ಲಿ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ಮನುಷ್ಯತ್ವ ವಿರೋಧಿಯಾದ ಮನುಸ್ಮೃತಿಯನ್ನು ಉಲ್ಲೇಖಿಸಿ ನ್ಯಾಯ ನಿರಾಕರಿಸುತ್ತಾರೆ ಎನ್ನುವುದು ಪ್ರಬುದ್ಧ ಸಂವಿಧಾನವನ್ನುಳ್ಳ ಪ್ರಜಾಪ್ರಭುತ್ವಭಾರತಕ್ಕೊಂದು ಕಪ್ಪುಚುಕ್ಕೆ,ಕಳಂಕ.ಸಮೀರ ದವೆಯವರು ಸಂವಿಧಾನಕ್ಕೆ ನಿಷ್ಠರಾಗಿರುವ ಬದಲು ಮನುಸ್ಮೃತಿಗೆ ನಿಷ್ಠರಾಗಿದ್ದಾರೆ; ಅಸಹಾಯಕರಿಗೆ ಸಂವಿಧಾನ ಬದ್ಧ ನ್ಯಾಯ ನೀಡಬೇಕಾದವರು ನಾಗರಿಕ ಸಮಾಜವು ಒಪ್ಪದ,ಅನಾಗರಿಕ ನೀತಿ ನಿಬಂಧನೆಗಳ ಕ್ರೌರ್ಯದ ಸಂಕೋಲೆಯಂತಿರುವ ಮನುಸ್ಮೃತಿಯನ್ನು ಎತ್ತಿಹಿಡಿದಿದ್ದಾರೆ.ಪ್ರಗತಿಹೊಂದುತ್ತಿರುವ ಭಾರತಕ್ಕೆ ಸನಾತನತೆಯ ಹೆಸರಿನ ಪ್ರತಿಗಾಮಿಶಕ್ತಿಗಳು ಅಪಾಯಕಾರಿ ಎನ್ನುವುದನ್ನು ಈ ತೀರ್ಪು ದೃಢಪಡಿಸಿದೆ.ನಮ್ಮ ಸಂವಿಧಾನವು ಮೂಲಭೂತ ಹಕ್ಕುಗಳ ರಕ್ಷಕನಷ್ಟೇ ಅಲ್ಲ ವೈಯಕ್ತಿಕ ಸ್ವಾತಂತ್ರ್ಯ,ಘನತೆಯಿಂದ ಜೀವಿಸುವ ಹಕ್ಕನ್ನು ಸಹ ನೀಡಿದೆ.ಅಸಮಾನತೆ,ಅನ್ಯಾಯ ಮತ್ತು ಅವಕಾಶಗಳ ನಿರಾಕರಣೆಯನ್ನು ನಿರ್ಬಂಧಿಸುವ ಸಂವಿಧಾನವು ದೇಶದ ಪ್ರಜೆಗಳೆಲ್ಲರೂ ಗೌರವಯುತ ಬದುಕನ್ನು ಸಾಗಿಸುವ ನಾಗರಿಕ ಹಕ್ಕುಗಳಿಗೆ ಮಾನ್ಯತೆ ನೀಡಿದೆ.ನ್ಯಾಯಾಲಯಗಳು ತೀರ್ಪು ನೀಡುವಾಗ ಸಂವಿಧಾನದ ಅನುಚ್ಛೇದಗಳು ಮತ್ತು ಸಂವಿಧಾನದಡಿಯಲ್ಲಿ ರಚಿಸಲ್ಪಟ್ಟ ಕಾನೂನು ನಿಯಮಗಳನ್ನು ಉಲ್ಲೇಖಿಸಿ ತೀರ್ಪು ನೀಡಬೇಕೇ ಹೊರತು ಮನುಸ್ಮೃತಿಯಂತ ಅನಾಗರಿಕ ಸಂಹಿತೆಯನ್ನು ಉಲ್ಲೇಖಿಸಿ ಅಲ್ಲ.ಸುಪ್ರೀಂಕೋರ್ಟ್ ಗುಜರಾತ ಹೈಕೋರ್ಟಿನ ಈ ತೀರ್ಪನ್ನು ಗಂಭೀರವಾಗಿ ಪರಿಗಣಿಸಬೇಕು.ಇಲ್ಲದಿದ್ದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಇಂತಹ ತೀರ್ಪುಗಳು ಮತ್ತೆಮತ್ತೆ ಹೊರಬರುವ ಸಾಧ್ಯತೆಗಳಿವೆ.ಭಾರತದ ಸಂವಿಧಾನವು ಪ್ರತಿಗಾಮಿಶಕ್ತಿಗಳ ಕೈಯಲ್ಲಿ ಸಿಕ್ಕು ನಲುಗುವ ಅಸ್ತ್ರವಾಗಬಾರದು ಬದಲಿಗೆ ದುರ್ಬಲರು,ನ್ಯಾಯವಂಚಿತರ ಉನ್ನತಿಯ, ಉದ್ಧಾರದ ಶಕ್ತ್ಯಾಯುಧವಾಗಬೇಕು.

About The Author