ಬಡವರ ಹೊಟ್ಟೆ ತುಂಬಿಸಿದ ಪುಣ್ಯಾತ್ಮರು ಸಿದ್ರಾಮಯ್ಯ– ಕರಿಯಮ್ಮ ನಾಯಕ

ರಾಯಚೂರು : ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರು ಬಡವರ ಹೊಟ್ಟೆ ತುಂಬಿಸಿದ ಪುಣ್ಯಾತ್ಮರು.ಹಸಿವಿನ ಸಂಕಟವನ್ನು ಅರಿತು ಹಸಿದವರು ಬಳಲಬಾರದು ಎಂದು ‘ ಅನ್ನಭಾಗ್ಯ ಯೋಜನೆ’ ಯ ಮೂಲಕ ಲಕ್ಷಾಂತರ ಬಡವರ ಹೊಟ್ಟೆಯ ಸಂಕಟವನ್ನು ಪರಿಹರಿಸಿದವರು.ಸಿದ್ರಾಮಯ್ಯನವರಂತಹ ಮಹಾನ್ ರಾಜಕಾರಣಿಯ ಬಗ್ಗೆ ಮಾತನಾಡಲು ಪದಗಳೇ ಸಾಲವು’ ಎಂದು ದೇವದುರ್ಗದ ಶಾಸಕಿ ಶ್ರೀಮತಿ ಕರಿಯಮ್ಮ ಜಿ ನಾಯಕ್ ಅವರು ಮುಖ್ಯಮಂತ್ರಿ ಸಿದ್ರಾಮಯ್ಯನವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಅವರಿಂದು ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ರಚಿಸಿರುವ ‘ ಸಿದ್ರಾಮಯ್ಯನವರ ಸಮರ್ಥನೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
    ಕರಿಯಮ್ಮ ನಾಯಕ ಅವರು ಮಾತು ಮುಂದುವರೆಸುತ್ತ’ಮುಕ್ಕಣ್ಣ ಕರಿಗಾರ ಅವರು ಮಹಾಶೈವ ಧರ್ಮಪೀಠದ ಮೂಲಕ ದೇವದುರ್ಗದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ.ವೈದ್ಯರ ಬಳಿ ಹೋಗಲು ಹಣವಿಲ್ಲದ ಬಡವರು,ಸಮಸ್ಯೆ ಸಂಕಟಗಳಲ್ಲಿ ಸಿಲುಕಿದ ಸಾಮಾನ್ಯ ಜನರು ಪ್ರತಿ ರವಿವಾರ ಮಹಾಶೈವ ಧರ್ಮಪೀಠಕ್ಕೆ ಬಂದು ಸಂಕಟಮುಕ್ತರಾಗುತ್ತಿರುವುದನ್ನು ಗಮನಿಸಿದರೆ ಮುಕ್ಕಣ್ಣ ಕರಿಗಾರ ಅವರ ಲೋಕೋದ್ಧಾರದ ಸಂಕಲ್ಪಕ್ಕೆ ಶಿವದುರ್ಗಾ ಮತ್ತು ಕಾಳಿ ಮಾತೆಯರು ಒಲಿದು,ಅನುಗ್ರಹಿಸಿದ್ದು ಅನುಭವಕ್ಕೆ ಬರುತ್ತದೆ.ನಾನು ಶಾಸಕಿಯಾಗಿ ಗೆದ್ದು ಬರುವುದನ್ನು‌ ಒಂದು ವರ್ಷದ ಹಿಂದೆಯೇ ಹೇಳಿದ್ದ ಮುಕ್ಕಣ್ಣ ಕರಿಗಾರ ಅವರು ‘ ನೀವು ಅತ್ಯಧಿಕ ಮತಗಳಿಂದ ಗೆದ್ದು ಬರುತ್ತೀರಿ,ಆದರೆ ನಿಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬರುವುದಿಲ್ಲ,ಸಿದ್ರಾಮಯ್ಯನವರೇ ಮುಖ್ಯಮಂತ್ರಿ ಆಗುತ್ತಾರೆ’ ಅಂತ ಹೇಳಿದ ಭವಿಷ್ಯವಾಣಿ ನಿಜವಾಗಿದೆ.ನಾನು ಗೆದ್ದು ಶಾಸಕಿಯಾಗುವುದು ಮತ್ತು ಸಿದ್ರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಅಂತ ಒಂದು ವರ್ಷದ ಹಿಂದೆಯೇ ನಿಶ್ಚಿತವಾಗಿ ನುಡಿದಿದ್ದ ಮುಕ್ಕಣ್ಣ ಕರಿಗಾರ ಅವರ ಮಾತುಗಳು ಸತ್ಯವಾಗಿದ್ದು ನೋಡಿದರೆ ಕೈಲಾಸಕ್ಷೇತ್ರವು ನಿಜವೂ ಕೈಲಾಸಕ್ಷೇತ್ರವೇ ಎನ್ನಿಸುತ್ತದೆ’ ಎಂದು ಅಭಿಪ್ರಾಯಿಸಿದರು’.
      ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರು ಮತ್ತು ಕಥೆಗಾರ ಬಸವರಾಜ ಭೋಗಾವತಿ ಅವರು ‘ ಸಿದ್ರಾಮಯ್ಯನವರ ಸಮರ್ಥನೆ ‘ ಕೃತಿಯನ್ನು ಕೆಲವೇ ದಿನಗಳಲ್ಲಿ ರಚಿಸಿದರೂ ಮುಕ್ಕಣ್ಣ ಕರಿಗಾರು ಅವರು ಸಿದ್ರಾಮಯ್ಯನವರ ಮೇರುವ್ಯಕ್ತಿತ್ವವನ್ನು ಎದ್ದುಕಾಣುವಂತೆ ಚಿತ್ರಿಸಿದ್ದಾರೆ.ಆರು ಲೇಖನಗಳನ್ನುಳ್ಳ ಈ ಪುಸ್ತಕವು ಸಿದ್ರಾಮಯ್ಯನವರ ಬಗೆಗೆ ಬಂದಿರುವ ಎಲ್ಲ ಪುಸ್ತಕಗಳಿಂತ ಭಿನ್ನವಾಗಿದೆ ಮತ್ತು ಸಿದ್ರಾಮಯ್ಯನವರ ಒಳಗಣ ಸಮಷ್ಟಿಕಲ್ಯಾಣದ ನಾಯಕನನ್ನು ಹೊರಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ.ಕೃತಿಯ ಆರು ಲೇಖನಗಳು ಸಿದ್ರಾಮಯ್ಯನವರ ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ಬದ್ಧತೆಯನ್ನು ಎತ್ತಿತೋರಿಸುವ ಮೂಲಕ ಹೊಸನೋಟಗಳನ್ನು ನೀಡುತ್ತವೆ.ವರುಣಾಕ್ಷೇತ್ರದಲ್ಲಿ ಸಿದ್ರಾಮಯ್ಯನವರು ಗೆಲ್ಲಬೇಕು ಮತ್ತು ಸಿದ್ರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎನ್ನುವುದನ್ನು ಬಲವಾಗಿ ವಾದಿಸಿ,ಪ್ರತಿಪಾದಿಸಿದ ಮುಕ್ಕಣ್ಣ ಕರಿಗಾರರ ‘ಸಿದ್ರಾಮಯ್ಯನವರ ಸಮರ್ಥನೆ’ ಕೃತಿಯನ್ನು ಸಿದ್ರಾಮಯ್ಯನವರ ಅಭಿಮಾನಿಗಳೆಲ್ಲರೂ ಓದಲೇಬೇಕು.ಅಲ್ಲದೆ ಸಿದ್ರಾಮಯ್ಯನವರ ಬಗ್ಗೆ ಅಸೂಯೆ,ಅಸಹನೆಗಳುಳ್ಳವರು ಸಹ ಈ ಕೃತಿಯನ್ನು ಓದಲೇಬೇಕು’ ಎಂದು ಹೇಳಿದರು.
      ಮಹಾಶೈವ ಪೀಠಾಧ್ಯಕ್ಷರು ಮತ್ತು ಕೃತಿಯ ಲೇಖಕರೂ ಆಗಿರುವ ಮುಕ್ಕಣ್ಣ ಕರಿಗಾರ ಅವರು ಅಧ್ಯಕ್ಷೀಯ ಮಾತುಗಳನ್ನಾಡುತ್ತ ‘ ಸಿದ್ರಾಮಯ್ಯನವರ ಮೇಲಿನ ಅಭಿಮಾನ ಮಾತ್ರದಿಂದ ಈ ಪುಸ್ತಕವನ್ನು ಬರೆದಿಲ್ಲ; ಸಿದ್ರಾಮಯ್ಯನವರ ನಿಜ ವ್ಯಕ್ತಿತ್ವವನ್ನು ನಾಡಜನತೆಗೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಇದನ್ನು ಬರೆದಿದ್ದೇನೆ.ಇದು ಸಿದ್ರಾಮಯ್ಯನವರ ಜೀವನ ಚರಿತ್ರೆಯೂ ಅಲ್ಲ ಆದರೆ ಸಿದ್ರಾಮಯ್ಯನವರ ಸಂವಿಧಾನ ಬದ್ಧ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಯಸುವವರಿಗೆಲ್ಲ ಉಪಯುಕ್ತ ಕೃತಿ.ಮನುಸ್ಮೃತಿ ಪೋಷಕವರ್ಗದವರ ಕೈ ಮೇಲಾಗಬಾರದು,ಸಂವಿಧಾನವೇ ಇಲ್ಲಿ ಗೆಲ್ಲಬೇಕು,ಸಂವಿಧಾನದ ಆಶಯಗಳಂತೆ ದೇಶದ ಜನಜೀವನವು ರೂಪುಗೊಳ್ಳಬೇಕು ಎಂದು ಆಶಿಸುವ ನಾನು ಪ್ರಸ್ತುತ ರಾಜಕಾರಣಿಗಳಲ್ಲಿ ಸಿದ್ರಾಮಯ್ಯನವರೊಬ್ಬರೇ ಸಂವಿಧಾನದ ಆಶಯವನ್ನು ಈಡೇರಿಸುವ,ಸಂವಿಧಾನಕ್ಕೆ ಬದ್ಧರಿರುವ ರಾಜಕಾರಣಿ ಎಂದು ಅವರನ್ನು ಬೆಂಬಲಿಸಿ ಬರೆದಿದ್ದೇನೆ.ಲೋಕಕಲ್ಯಾಣದ,ಜಾತ್ಯಾತೀತ ಮಠವಾಗಿರುವ ನಮ್ಮ ಮಹಾಶೈವ ಧರ್ಮಪೀಠವು ‘ ಸಂವಿಧಾನವೇ ಭಾರತದ ರಾಷ್ಟ್ರೀಯ ಗ್ರಂಥ’ ಎನ್ನುವದನ್ನು ಪ್ರತಿಪಾದಿಸುತ್ತಿರುವ ಮಠವಾಗಿರುವುದರಿಂದ ಆ ಮಠದ ಮುಖ್ಯಸ್ಥನಾಗಿ ಸಂವಿಧಾನವನ್ನು ಎತ್ತಿಹಿಡಿಯುತ್ತಿರುವ,ಸಂವಿಧಾನದ ಆಶಯಗಳನ್ನೇ ಬಾಳದರ್ಶನವಾಗಿ ಸ್ವೀಕರಿಸಿ,ಸಂವಿಧಾನದ ಬಾಳನ್ನೇ ಬಾಳುತ್ತಿದ್ದಾರೆ ಎನ್ನುವ ಕಾರಣದಿಂದ ಸಿದ್ರಾಮಯ್ಯನವರನ್ನು ಸಮರ್ಥಿಸಿದ್ದೇನೆ,ಬೆಂಬಲಿಸಿದ್ದೇನೆ ಅವರಿಗಾಗಿ ಜಗನ್ಮಾತಾಪಿತರುಗಳಾದ ಶಿವ ದುರ್ಗಾದೇವಿಯರಲ್ಲಿ ಪ್ರಾರ್ಥಿಸಿದ್ದೇನೆ’ ಎಂದರು.
    ಶಿಕ್ಷಕ ಷಣ್ಮುಖ ಹೂಗಾರ ಮಹಾಶೈವ ಧರ್ಮಪೀಠವು ರಾಜ್ಯದ  ಸಾಹಿತ್ಯಕ ಸಾಂಸ್ಕೃತಿಕ ಮಠವಾಗಿ ಪ್ರಸಿದ್ಧವಾಗಿರುವುದರ ಜೊತೆಗೆ ಜನಸಾಮಾನ್ಯ ಭಕ್ತರಿಗಾಗಿ ಶಿವನ ಲೋಕಕಲ್ಯಾಣಗುಣವನ್ನು ‘ ಶಿವೋಶಮನ ಕಾರ್ಯ’ ಎನ್ನುವ ಅನನ್ಯ,ಅನ್ಯತ್ರದುರ್ಲಭ ಆಧ್ಯಾತ್ಮಿಕ ಪರಿಹಾರ ಕಾರ್ಯದಿಂದ ಹೆಸರಾದ ಬಗೆಯನ್ನು ವಿವರಿಸಿದರು.ಮತ್ತೋರ್ವಶಿಕ್ಷಕ ಬಸವಲಿಂಗ ಕರಿಗಾರ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ ಕಾರ್ಯಕ್ರಮ ಆಯೋಜಿಸಿದ್ದರು.
     ಮಹಾಶೈವ ಧರ್ಮಪೀಠದ ವತಿಯಿಂದ ಹಾಗೂ ಮಹಾಶೈವ ಧರ್ಮಪೀಠದ ಭಕ್ತರುಗಳಿಂದ ದೇವದುರ್ಗದ ನೂತನ ಶಾಸಕರಾದ ಶ್ರೀಮತಿ ಕರಿಯಮ್ಮ ನಾಯಕ್ ಅವರನ್ನು ಸನ್ಮಾನಿಸಲಾಯಿತು.ಶ್ರೀಮತಿ ಕರಿಯಮ್ಮ ನಾಯಕರು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಸನ್ಮಾನಿಸಿ,ಅವರ ಆಶೀರ್ವಾದ ಕೋರಿದರು.
       ಸುಲ್ತಾನಪುರದ ಗಂಗಾಧರ ಶಾಂತಾಶ್ರಮದ ಅಧ್ಯಕ್ಷರಾದ ಶರಣಪ್ಪಗೌಡ ಅವರು ಅನುಭಾವಿಗಳಾಗಿ ಹಾಗೂ ಗಬ್ಬೂರಿನ ಜೆ.ಡಿ.ಎಸ್ ಯುವಮುಖಂಡ ಖಾಜಯ್ಯಗೌಡ ಅಬ್ಕಾರಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.ದೇವದುರ್ಗ ತಾಲೂಕಾ ಜೆ.ಡಿ.ಎಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಣುಕಾ,ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಏಜಾಕ್ ಮೇಸ್ತ್ರಿ,ಪುರಸಭೆ ಸದಸ್ಯೆ  ಶ್ರೀಮತಿ ತಬಸ್ಸುಮ್ ಶಾಲಂ ಉದ್ದಾರ್ ಮತ್ತು ಜೆಡಿಎಸ್ ಮುಖಂಡರುಗಳಾದ ಮರಿಯಪ್ಪ ಗೆಜ್ಜೆಬಾವಿ,ಸೋಮಣ್ಣ ಯಾದವ,ಮಧುಗೌಡ ರಾಮದುರ್ಗ ಮತ್ತು ತಮ್ಮಣ್ಣ ವಕೀಲರು ವೇದಿಕೆಯಲ್ಲಿದ್ದರು.ಮಹಾಶೈವ ಧರ್ಮಪೀಠದ ಭಕ್ತರು ಮತ್ತು ಗಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author