ಮೂರನೇ ಕಣ್ಣು : ಸಮಷ್ಟಿ ಕಲ್ಯಾಣ’ದ ಕನಸಿನ ನಾಯಕರು ಸಿದ್ರಾಮಯ್ಯ : ಮುಕ್ಕಣ್ಣ ಕರಿಗಾರ

ಸಿದ್ರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ.ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಸಿದ್ರಾಮಯ್ಯನವರು ಕರ್ನಾಟಕದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು ಮಾತ್ರವಲ್ಲ ಭಾರತದ ಧೀಮಂತ ರಾಜಕಾರಣಿಗಳಲ್ಲೊಬ್ಬರು.ಆದರೆ ಅವರನ್ನು ಕೇವಲ ‘ ಅಹಿಂದ ನಾಯಕ’ ಎಂದು ಬಿಂಬಿಸಲಾಗುತ್ತಿದೆ.ಅಹಿಂದ ವರ್ಗಗಗಳ ಅಭಿವೃದ್ಧಿಯ ಬಗೆಗೆ ದೃಢಸಂಕಲ್ಪ ಹೊಂದಿರುವ ಸಿದ್ರಾಮಯ್ಯನವರು ಎಲ್ಲ ಜಾತಿ,ಜನಾಂಗಗಳ ಬಡವರ ಉದ್ಧಾರಕ್ಕೆ ಬದ್ದರಿರುವ ‘ ಸಮಷ್ಟಿಕಲ್ಯಾಣದ ಕನಸಿನ ನಾಯಕರು’.ಸಿದ್ರಾಮಯ್ಯನವರಿಗೆ ಸಿಗಬೇಕಾದ ಪ್ರಚಾರಕ್ಕಿಂತ ದೊರೆತ ಅಪಪ್ರಚಾರವೇ ಹೆಚ್ಚು.ಅಧಿಕಾರವು ತಮ್ಮ ಜಾತಿ ಜನಾಂಗಗಳಿಗೇ ಮೀಸಲಿರಬೇಕು ಎಂದು ಬಯಸುವ ಸಂಕುಚಿತ ಮನಸ್ಕ ಮೇಲ್ಜಾತಿಯ ಜನರೇ ಸಿದ್ರಾಮಯ್ಯನವರ ವಿರುದ್ಧ ಇಲ್ಲ ಸಲ್ಲದ ಆರೋಪಮಾಡುತ್ತಾರೆ .ಸಿದ್ರಾಮಯ್ಯನವರ ಏಳ್ಗೆಯನ್ನು ಸಹಿಸದ ಜನರು ಸಿದ್ರಾಮಯ್ಯನವರ ಬಗ್ಗೆ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ; ಆದರೂ ಸಿದ್ರಾಮಯ್ಯನವರ ಜನಪ್ರಿಯತೆ ಕಡಿಮೆಯಾಗಿಲ್ಲ.ಸಿದ್ರಾಮಯ್ಯನವರು ಅಹಿಂದ ವರ್ಗಗಳ ಪ್ರಶ್ನಾತೀತ ನಾಯಕರಿರುವಂತೆಯೇ ಎಲ್ಲ ಜಾತಿಗಳ ಪ್ರಬುದ್ಧ ಮನಸ್ಕರ ನಿಜನಾಯಕರೂ ಅಹುದು.ಸಿದ್ರಾಮಯ್ಯನವರು ಹುಟ್ಟಿನ ಕಾರಣದಿಂದ ಕುರುಬರ ಪ್ರಶ್ನಾತೀತ ನಾಯಕರು ಆಗಿರಬಹುದು ಆದರೆ ಅವರು ತಾವು ನಂಬಿದ ಸರ್ವರುನ್ನತಿಯ ತತ್ತ್ವ,ಆದರ್ಶಗಳಿಂದ ಸರ್ವರ ಹಿತವನ್ನು ಬಯಸುವ ಸಮಷ್ಟಿಹಿತಚಿಂತಕರೂ ಅಹುದು.ಸಿದ್ರಾಮಯ್ಯನವರ ‘ ಅಹಿಂದ ನಾಯಕತ್ವ’ಕ್ಕೆ ಸಿಕ್ಕ ಪ್ರಚಾರ,ಮನ್ನಣೆಗಳು ಅವರ ‘ ಸಮಷ್ಟಿ ಕಲ್ಯಾಣದ ನಾಯಕತ್ವ’ ಕ್ಕೆ ಸಿಕ್ಕಿಲ್ಲ.ಹೀಗಾಗಿ ಸಿದ್ರಾಮಯ್ಯನವರ ಬಗ್ಗೆ ಕೆಲವರು ತಪ್ಪು ತಿಳಿದುಕೊಂಡಿದ್ದಾರೆ,ಕೆಲವರು ಅವರನ್ನು ಅನುಮಾನದಿಂದ ಕಾಣುತ್ತಾರೆ.

ಸಿದ್ರಾಮಯ್ಯನವರು ಎಲ್ಲರಂತೆ ಒಬ್ಬ ರಾಜಕಾರಣಿ; ಇಂದಿನ ರಾಜಕಾರಣದಲ್ಲಿ ಜಾತಿಯಬಲದ ಅನಿವಾರ್ಯತೆಯನ್ನರಿತ ಕಾರಣದಿಂದ ಅವರು ಕುರುಬ ಸಮುದಾಯದ ಮೇಲೆ ಪ್ರೀತಿ ತೋರಿಸುತ್ತಿರಬಹುದು.ಸಿದ್ರಾಮಯ್ಯನವರು ಜಾತಿ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸುವವರು ಕರ್ನಾಟಕದಲ್ಲಿ ಜಾತಿ ರಾಜಕಾರಣ ಮಾಡದ ರಾಜಕಾರಣಿ ಯಾರಿದ್ದಾರೆ ಎನ್ನುವುದನ್ನು ಎತ್ತಿ ತೋರಿಸಲಿ.ಎಲ್ಲರಂತೆ ಮನುಷ್ಯರಿರುವ ಸಿದ್ರಾಮಯ್ಯನವರು ಅವರ ಜಾತಿಯ ಜನರ ಬಗ್ಗೆ ಸ್ವಲ್ಪ ಕಾಳಜಿ ತೋರಿಸಿದರೆ ಅದನ್ನು ‘ಮಹಾ ಅಪರಾಧ’ ಎಂಬಂತೆ ಬೊಬ್ಬೆ ಹೊಡೆಯುವವರು ಎಪ್ಪತ್ತು ವರ್ಷಗಳ ಈ ಅವಧಿಯಲ್ಲಿ ರಾಜಕೀಯ ಮತ್ತು ಸರಕಾರಿ ಸೇವಾ ಕ್ಷೇತ್ರಗಳಲ್ಲಿ ಯಾವ ಜಾತಿಯವರು ಹೆಚ್ಚು ಸುಖ- ಸೌಲಭ್ಯಗಳನ್ನು ಅನುಭವಿಸಿದ್ದಾರೆ ಎನ್ನುವುದನ್ನು ಪರಾಮರ್ಶಿಸಲಿ.ರಾಜ್ಯದ ದೊಡ್ಡಸಂಖ್ಯೆಯ ಸಮುದಾಯಗಳಲ್ಲಿ ಒಂದಾಗಿರುವ ಕುರುಬ ಸಮುದಾಯವು ರಾಜಕೀಯ ಮತ್ತು ಸರಕಾರಿ ಸೇವಾ ಕ್ಷೇತ್ರದಲ್ಲಿ ಪಡೆದ ಸ್ಥಾನಮಾನವು ಕೇವಲ 7% ಮಾತ್ರ!ಸರಕಾರಿ ಹುದ್ದೆಗಳಲ್ಲಿ,ರಾಜಕಾರಣದಲ್ಲಿ ಅತಿಹೆಚ್ಚು ಪ್ರಾತಿನಿಧ್ಯದ ಸುಖವನ್ನನುಭವಿಸುತ್ತಿರುವವರು ಸಿದ್ರಾಮಯ್ಯನವರನ್ನು ‘ ಜಾತಿರಾಜಕಾರಣ’ ಮಾಡುತ್ತಾರೆ ಎಂದು ದೂಷಿಸುತ್ತಾರೆ ! ಸಿದ್ರಾಮಯ್ಯನವರು ಕುರುಬರನ್ನು ಕೈಬಿಡದೆ ಎಲ್ಲರ ಕೈಗಳನ್ನು ಹಿಡಿದುಕೊಂಡು ಹೋಗುವ ಸ್ವಭಾವದ, ಸರ್ವೋದಯ ಬದ್ಧತೆಯ ರಾಜಕಾರಣಿ ಎನ್ನುವುದನ್ನು ಬಹಳಷ್ಟು ಜನರು ಅರ್ಥಮಾಡಿಕೊಂಡಿಲ್ಲ.ಸಿದ್ರಾಮಯ್ಯನವರ ಸುತ್ತಮುತ್ತ ಓಡಾಡಿಕೊಂಡಿರುವ ಕುರುಬರ ಕೆಲವು ನಾಯಕರುಗಳ ವರ್ತನೆಯಿಂದ ಸಿದ್ರಾಮಯ್ಯನವರಿಗೆ ಕುರುಬರ ನಾಯಕರ ಪಟ್ಟ ಕಟ್ಟಲಾಗಿದೆಯೇ ಹೊರತು ವಾಸ್ತವದಲ್ಲಿ ಸಿದ್ರಾಮಯ್ಯನವರು ಹಾಗೆ ಇರದೆ ಸರ್ವಜನಾಂಗದ ಹಿತೈಷಿ,ಸಮಷ್ಟಿಕಲ್ಯಾಣಕ್ಕೆ ಬದ್ಧರಿರುವ ನಾಯಕರಾಗಿದ್ದಾರೆ.ನಾನು ನನ್ನ ಪಿಯುಸಿ ಓದಿನ ದಿನಗಳಾದ 1987 ರಿಂದಲೂ ಸಿದ್ರಾಮಯ್ಯನವರನ್ನು ಹತ್ತಿರದಿಂದ ಕಂಡು ಬಲ್ಲೆನಾದ್ದರಿಂದ ಈ ಮಾತುಗಳನ್ನು ಗಟ್ಟಿಯಾಗಿ ಹೇಳುತ್ತಿದ್ದೇನೆ.

ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ರಾಮಯ್ಯನವರು ದಲಿತರು,ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಜನರ ಬವಣೆಗೀಡಾದ ಬದುಕುಗಳನ್ನು ಹತ್ತಿರದಿಂದ ಕಂಡವರು.ಹಳ್ಳಿಗಳಲ್ಲಿ ಶೋಷಿತರು,ಹಿಂದುಳಿದ ವರ್ಗದ ಜನತೆ ಅನುಭವಿಸುತ್ತಿದ್ದ ನೋವು,ಅಪಮಾನ,ಯಾತನೆಗಳನ್ನು ಸ್ವಯಂ ಅನುಭವಿಸಿದವರು.ಹೀಗಾಗಿ ಅವರು ಅಲ್ಪಸಂಖ್ಯಾತರು,ಹಿಂದುಳಿದವರು ಮತ್ತು ದಲಿತರ ಉದ್ಧಾರಕ್ಕೆ ಬದ್ಧರಾದರೆ ಅದರಲ್ಲಿ ತಪ್ಪೇನಿದೆ? ಸಿದ್ರಾಮಯ್ಯನವರ ‘ ಅಹಿಂದ’ ಕಲ್ಪನೆಯು ಮುಂದುವರೆದವರ ಹಕ್ಕು- ಅವಕಾಶಗಳನ್ನು ಕಸಿದುಕೊಂಡೋ,ಕಬಳಿಸಿಯೋ ಮೇಲೇರಬಯಸುವ ವರ್ಗ ಸಂಘರ್ಷವನ್ನುಂಟು ಮಾಡುವ ಕಲ್ಪನೆಯಲ್ಲ; ಬದಲಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಹಕ್ಕು ಅವಕಾಶಗಳು ಎಲ್ಲರಿಗೂ ಸಿಗಲಿ ಎನ್ನುವ ಸಂವಿಧಾನ ಬದ್ಧ ಜನತೆಯ ಉದ್ಧಾರದ ಬದ್ಧತೆ.ರಾಜ್ಯದಲ್ಲಿ ಇಂದಿಗೂ ಅಸಮಾನತೆ ಇದೆ,ಶೈಕ್ಷಣಿಕ- ರಾಜಕೀಯ- ಆರ್ಥಿಕ ಅವಕಾಶಗಳನ್ನು ಕೆಲವೇ ಜಾತಿಗೆ ಸೇರಿದ ಮೇಲ್ವರ್ಗದವರು ತಮ್ಮ ವಿಶೇಷ ಹಕ್ಕು ಎನ್ನುವಂತೆ ಅನುಭವಿಸುತ್ತಿದ್ದಾರೆ.ಒಕ್ಕಲಿಗರು ಮತ್ತು ಲಿಂಗಾಯತರು ಅರ್ಧಕ್ಕಿಂತ ಹೆಚ್ಚು ಪಾಲು ಅವಕಾಶಗಳನ್ನು ಪಡೆದಿದ್ದಾರೆ.ಕೇವಲ 3% ಇರುವ ಜನರು 10% ಮೀಸಲಾತಿ ಪಡೆದಿದ್ದಾರೆ! ನ್ಯಾಯಾಧೀಶರ ಹುದ್ದೆಗಳು ಸೇರಿದಂತೆ ಉನ್ನತ ಸಾರ್ವಜನಿಕ ಸ್ಥಾನ ಮಾನಗಳ ಸಿಂಹಪಾಲು ಕೆಲವೇ ಜಾತಿ,ಸಮುದಾಯಗಳಿಗೆ ದಕ್ಕುತ್ತಿದೆ ಎನ್ನುವ ಕಟುವಾಸ್ತವ ನಮ್ಮೆದುರು ಇದೆ.ಇಂತಹ ‘ವಿಷಮಸ್ಥಿತಿ’ ಯನ್ನು ಸರಿಪಡಿಸಿ ಸರ್ವರಿಗೂ ಅವಕಾಶಗಳು ಸಿಕ್ಕಲಿ,ಶೋಷಿತರು- ಪದದುಳಿತರನ್ನು ಒಳಗೊಂಡಂತೆ ಶೂದ್ರಸಮುದಾಯವು ಅವಕಾಶಗಳನ್ನು ಅನುಭವಿಸಲಿ ಎಂದು ಬಯಸುತ್ತಿದ್ದಾರೆ ಸಿದ್ರಾಮಯ್ಯನವರು.ಶೂದ್ರ ಮತ್ತು ದಲಿತವರ್ಗದ ಜನರ ಪರ ಇರುವ ಸಿದ್ರಾಮಯ್ಯನವರ ಪ್ರಾಮಾಣಿಕ ಕಳಕಳಿ- ಕಾಳಜಿಗಳೇ ಅವರನ್ನು ‘ಮೇಲ್ವರ್ಗದ ವಿರೋಧಿ’ ಎಂಬಂತೆ ಬಿಂಬಿಸಲು ಕಾರಣ.

ಬಸವಣ್ಣನವರ ಅಭೂತಪೂರ್ವವೂ ಅನ್ಯಾದೃಶ್ಯವೂ ಆದ ‘ ವಿಶ್ವವಿಭೂತಿ’ ವ್ಯಕ್ತಿತ್ವದಿಂದ ಪ್ರಭಾವಿತಗೊಂಡ ಸಿದ್ರಾಮಯ್ಯನವರು ಲಿಂಗಾಯತ ಸಮುದಾಯದ ಕೆಲವುಜನ ಸ್ನೇಹಿತರ ಮಾತುಗಳಿಗೆ ಸಮ್ಮತಿಸಿ ‘ ಸ್ವತಂತ್ರ ಲಿಂಗಾಯತ ಧರ್ಮ’ ವನ್ನು ಬೆಂಬಲಿಸಿದ್ದಕ್ಕೇ ಆಕ್ಷೇಪಿಸಿ ಏನೇನೋ ಆಡಿದ,ಏನೇನೋ ಮಾಡಿದ ಜನರು ಸಿದ್ರಾಮಯ್ಯನವರನ್ನು ‘ ಧರ್ಮವಿರೋಧಿ’ ಎಂದರು,ಆ ಕಾರಣದಿಂದಾಗಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು ಎಂದೂ ಕೊಚ್ಚಿಕೊಂಡರು.ಬಸವಣ್ಣನವರ ಸರ್ವೋದಯ ತತ್ತ್ವದ ಶಿವಸಮಾಜ ನಿರ್ಮಾಣ,ಜಾತಿಮುಕ್ತ ಸಮಾಜದ ನಿರ್ಮಾಣ,ಅವಕಾಶಗಳ ಸಮಾನ ಹಂಚಿಕೆಯಂತಹ ಮಹೋನ್ನತ ಆದರ್ಶಗಳಿಂದ ಪ್ರಭಾವಿತಗೊಂಡಿರುವ ಸಿದ್ರಾಮಯ್ಯನವರು ಲಿಂಗಾಯತ ಸ್ವತಂತ್ರ ಧರ್ಮ ಆಂದೋಲವನ್ನು ಬೆಂಬಲಿಸಿದ್ದರೇ ಹೊರತು ವೀರಶೈವರ ಮೇಲಿನ ದ್ವೇಷದಿಂದ ಅಲ್ಲ.ಸಿದ್ರಾಮಯ್ಯನವರು ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್,ಉಚಿತ ಪಡಿತರ ಯೋಜನೆಗಳಂತಹ ಕಾರ್ಯಕ್ರಮಗಳ ಹಿಂದೆ ಬಸವಣ್ಣನವರ ದಾಸೋಹದ ಪರಿಕಲ್ಪನೆ ಇದೆ.ಸಮಾಜವಾದಕ್ಕೂ ಬಸವಣ್ಣನವರ ಕಲ್ಯಾಣವಾದಕ್ಕೂ ಬಹಳ ಸಾಮೀಪ್ಯ,ಹೋಲಿಕೆ ಇದೆ ಎಂದರಿತು ಸಿದ್ರಾಮಯ್ಯನವರು ಬಸವ ತತ್ತ್ವವನ್ನು ಬೆಂಬಲಿಸಿದ್ದರು.ಇತ್ತ ಲಿಂಗಪೂಜೆ ಮಾಡುತ್ತ ಅತ್ತ ಕಂಡಕಂಡ ದೈವಗಳಿಗೆರಗುವ ದುರ್ಬಲ ಮನಸ್ಕರುಗಳು’ ಪರಮಪತಿವ್ರತೆಗೆ ಗಂಡನೊಬ್ಬನಿರುವಂತೆ ನಿಜಭಕ್ತರಿಗೆ ಶಿವನೊಬ್ಬನೇ ದೇವರು’ ಎನ್ನುವ ಬಸವಣ್ಣನವರ ಮಾತನ್ನು ಅರ್ಥಮಾಡಿಕೊಳ್ಳದೆ ವಿರೋಧಿಸಿದರು ಸಿದ್ರಾಮಯ್ಯನವರನ್ನು.

ಸಿದ್ರಾಮಯ್ಯನವರ ಯಾರಿಗೂ ತಲೆಬಾಗದ ಸ್ವಾಭಿಮಾನದ ವ್ಯಕ್ತಿತ್ವವು ಶೂದ್ರರು,ದಲಿತರಿಗೆಲ್ಲ ಆದರ್ಶವಾಗಬೇಕು.ಆಧ್ಯಾತ್ಮಿಕವಾಗಿ ಶೂನ್ಯರಾಗಿರುವ ಕಾವಿಧಾರಿ ಮಠ ಪೀಠಗಳ ಸ್ವಾಮಿಗಳಿಗೆ ಸಾರ್ವಜನಿಕವಾಗಿ ಸಾಷ್ಟಾಂಗ ಪ್ರಣಾಮಗಳನ್ನರ್ಪಿಸುವ ಜನರು ಸಿದ್ರಾಮಯ್ಯನವರನ್ನು ‘ ದುರಂಹಕಾರಿ’ ಎನ್ನಬಹುದು.ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುವ ಏಕೈಕ ಪ್ರಬುದ್ಧ ರಾಜಕಾರಣಿ ಸಿದ್ರಾಮಯ್ಯ ಎನ್ನುವುದನ್ನು ಮರೆಯಬಾರದು.ಸಂವಿಧಾನದ ಮುಂದೆ ಎಲ್ಲರೂ ಸಮಾನರು,ಸಂವಿಧಾನವೇ ನಮ್ಮ ರಾಷ್ಟ್ರೀಯ ಗ್ರಂಥ ಎಂದರಿಯದವರು ಸರಕಾರಿ ಸಭೆ ಸಮಾರಂಭಗಳಿಗೂ ಸ್ವಾಮೀಜಿಗಳವರ ‘ದಿವ್ಯಸಾನ್ನಿಧ್ಯ’ ಬಯಸುವುದು ಸಂವಿಧಾನ ವಿರೋಧಿಕೃತ್ಯವಲ್ಲವೆ? ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುತ್ತಿರುವ,ಸರಕಾರಿ ಶಿಷ್ಟಾಚಾರವನ್ನು ಪಾಲಿಸುತ್ತಿರುವ ಸಿದ್ರಾಮಯ್ಯನವರು ಸಮಕಾಲೀನ ರಾಜಕಾರಣದಲ್ಲೊಂದು ಅಚ್ಚರಿಯ ವ್ಯಕ್ತಿತ್ವ.ಹಿಂದುಳಿದವರು,ಶೂದ್ರರು ತಮ್ಮ ಪಾದಗಳ ಪೂಜೆಯಲ್ಲಿಯೇ ಸಾರ್ಥಕತೆ ಕಾಣಬೇಕು,ತಮ್ಮ ಮನೆ- ಮಠಗಳನ್ನು ಕಾಯ್ದುಕೊಂಡು ಬಿದ್ದಿರಬೇಕು ಎಂದು ನಿರೀಕ್ಷಿಸುವ ಜನರು ಸಿದ್ರಾಮಯ್ಯನವರ ಸ್ವಾಭಿಮಾನಿ ವ್ಯಕ್ತಿತ್ವವು ಪ್ರಜಾಪ್ರಭುತ್ವ ಭಾರತದ ಯಶಸ್ಸಿನ ಸಹಜಸಿದ್ಧ ವ್ಯಕ್ತಿತ್ವ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸು ಅವರುಗಳ ಕಾಲಕ್ಕಿಂತ ಇತ್ತೀಚಿನವರಾಗಿರುವ ಸಿದ್ರಾಮಯ್ಯನವರು ಶೋಷಿತರು,ಪದದುಳಿತರು ಮತ್ತು ಶೂದ್ರಸಮುದಾಯಗಳ ಉದ್ಧಾರವನ್ನು ಸಾಧಿಸುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇವರಾಜ ಅರಸು ಅವರಿಗಿಂತ ಹತ್ತುಹೆಜ್ಜೆ ಮುಂದೆ ಇದ್ದಾರೆ.

About The Author