ಮೂರನೇ ಕಣ್ಣು : ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹ –ಗೆದ್ದರು ಸಿದ್ರಾಮಯ್ಯ;ಮುಖ್ಯಮಂತ್ರಿಯೂ ಆದರು ! : ಮುಕ್ಕಣ್ಣ ಕರಿಗಾರ

    ಸಿದ್ರಾಮಯ್ಯನವರು ಎಲ್ಲ ಅಡೆ ತಡಗಳನ್ನು ದಾಟಿ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಜಗನ್ಮಾತಾಪಿತರುಗಳಾದ ವಿಶ್ವೇಶ್ವರ ಶಿವ ,ವಿಶ್ವೇಶ್ವರಿ ದುರ್ಗಾದೇವಿಯರು ಸಿದ್ರಾಮಯ್ಯನವರನ್ನು ಹರಸಿ,ಆಶೀರ್ವದಿಸಲಿ,ಆಯುರಾರೋಗ್ಯಭಾಗ್ಯವನ್ನಿತ್ತು ಪೊರೆಯಲಿ; ಸಿದ್ರಾಮಯ್ಯನವರ ಬಲಿಷ್ಠ ರಾಜ್ಯ ನಿರ್ಮಾಣದ ಕನಸಿಗೆ ಪರಾಶಕ್ತಿಸಹಿತ ಪರಶಿವನು ಬಲ,ಶಕ್ತಿಗಳನ್ನು ತುಂಬಲಿ  ಎಂದು ಪ್ರಾರ್ಥಿಸುತ್ತೇವೆ.ಸಿದ್ರಾಮಯ್ಯನವರು ಗೆದ್ದು ಬರಲು ಮತ್ತು ಮುಖ್ಯಮಂತ್ರಿಯಾಗಲು ನಮ್ಮ ಮಹಾಶೈವ ಧರ್ಮಪೀಠದಲ್ಲಿ ‘ ವಿಜಯದುರ್ಗೆ’ ಎಂದು ಲೋಕಪ್ರಸಿದ್ಧಳಾಗಿರುವ ತಾಯಿ ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹವೇ ಕಾರಣ ಎನ್ನುವುದನ್ನು ಈ ಲೇಖನದಲ್ಲಿ ನಮ್ಮ ಓದುಗ ಮಿತ್ರರುಗಳೊಂದಿಗೆ ಹಂಚಿಕೊಳ್ಳುವೆವು.
      ಸಿದ್ರಾಮಯ್ಯನವರನ್ನು ನಾನು 1987 ರಿಂದಲೂ ಬಲ್ಲೆ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾಗುವ ಪೂರ್ವದಲ್ಲಿ ಅವರನ್ನು ಹಲವು ಬಾರಿ ಭೇಟಿ ಆಗಿದ್ದೆ,ಅವರ ಮನೆಗೂ ಹೋಗಿದ್ದೆ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾದ ಬಳಿಕ ಯಾವ ರಾಜಕಾರಣಿಯ ಹತ್ತಿರ ಹೋಗುತ್ತಿಲ್ಲವಾದ್ದರಿಂದ ಸಿದ್ರಾಮಯ್ಯನವರ ಬಳಿಯೂ ಹೋಗಿಲ್ಲ.ಆದರೂ ಅವರ ಬಗ್ಗೆ ಗೌರವ,ಅಭಿಮಾನಗಳು ಹಾಗೆಯೇ ಇವೆ.ಅವರ ಹಿತವನ್ನು ಸದಾ ಬಯಸುತ್ತ ದೂರದಿಂದಲೇ ಅವರ ಹಿತಸಾಧಿಸುತ್ತಿದ್ದೇನೆ.ಸಿದ್ರಾಮಯ್ಯನವರ ಎಲ್ಲ ಕಾರ್ಯ- ಚಟುವಟಿಕೆಗಳಿಗೆ ಯಶ ಕರುಣಿಸಲು ದೂರದ ಗಬ್ಬೂರಿನ ನಮ್ಮ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಹಾಗೂ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯರಲ್ಲಿ ಪ್ರಾರ್ಥಿಸುತ್ತಿರುತ್ತೇವೆ.ಈ ಸಾರೆಯ ಅಂದರೆ ೨೦೨೩ ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ರಾಮಯ್ಯನವರು ಎಲ್ಲ ಅಡೆತಡೆಗಳನ್ನು ದಾಟಿ,ಪ್ರಬಲಶತ್ರುಗಳನ್ನು ಮಣಿಸಿ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಸಂಕಲ್ಪದಿಂದ ನಮ್ಮ ಮಹಾಶೈವ ಧರ್ಮಪೀಠದಲ್ಲಿ ಮುವ್ವತ್ತುದಿನಗಳ ಅನುಷ್ಠಾನ ಕೈಗೊಂಡೆವು.’ವಿಜಯದುರ್ಗೆ’ ಎಂದು ಪ್ರಸಿದ್ಧಳಾಗಿರುವ ತಾಯಿ ವಿಶ್ವೇಶ್ವರಿ ದುರ್ಗಾದೇವಿಯು ಸಿದ್ರಾಮಯ್ಯನವರನ್ನು ಗೆಲ್ಲಿಸಿದಳು ಮಾತ್ರವಲ್ಲ ಮುಖ್ಯಮಂತ್ರಿಯನ್ನಾಗಿಯೂ ಮಾಡಿದಳು.ವಿಶ್ವೇಶ್ವರಿ ದುರ್ಗಾದೇವಿಯ ಮಹಿಮೆಯು ವರ್ಣಿಸಲಸದಳ.ತಾಯಿಯು ಅಸಾಧ್ಯವಾದ ಕಾರ್ಯಗಳನ್ನು ಸುಲಭವಾಗಿ ಸಾಧ್ಯ ಮಾಡಿಕೊಡುತ್ತಿದ್ದಾಳೆ.ಸಿದ್ರಾಮಯ್ಯನವರು ಗೆದ್ದದ್ದು ಮತ್ತು ಮುಖ್ಯಮಂತ್ರಿಗಳಾದದ್ದು ವಿಶ್ವನಿಯಾಮಕಿ, ಸರ್ವಶಕ್ತಿಸ್ವರೂಪಿಣಿಯಾಗಿರುವ ತಾಯಿ ವಿಶ್ವೇಶ್ವರಿ ದುರ್ಗಾದೇವಿಯ ನಿಗ್ರಹಾನುಗ್ರಹ ಸಾಮರ್ಥ್ಯದಿಂದ.
       ಸಿದ್ರಾಮಯ್ಯನವರನ್ನು ಸೋಲಿಸಲೇಬೇಕು ಎಂದು ಅವರ ವಿರೋಧಿಗಳು ಬಹಳ ದೊಡ್ಡ ಪ್ರಮಾಣದ ಕುತಂತ್ರ ಮಾಡಿದ್ದರು.ಎರಡು ಕಡೆ ಸ್ಪರ್ಧಿಸಿದರೆ ಒಂದು ಕ್ಷೇತ್ರದಲ್ಲಿ ಗೆಲ್ಲಬಹುದು; ಗೆದ್ದರೆ ಮತ್ತೆ ಅಧಿಪತ್ಯ ಮುಂದುವರೆಸುತ್ತಾರೆ ಎನ್ನುವ ದುರಾಲೋಚನೆಯಿಂದ ಸಿದ್ರಾಮಯ್ಯನವರಿಗೆ ಕೋಲಾರ ಟಿಕೆಟ್ ನಿರಾಕರಿಸಿ ವರುಣಾ ಕ್ಷೇತ್ರದ ಟಿಕೆಟ್ ಮಾತ್ರ ನೀಡಿದರು ವರುಣಾದಲ್ಲಿ ಸಿದ್ರಾಮಯ್ಯನವರು ಸೋಲುತ್ತಾರೆ ಎನ್ನುವ ಕಾರಣದಿಂದ.ತಾಯಿ ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹ ಆಗದಿದ್ದರೆ ಸಿದ್ರಾಮಯ್ಯನವರು ವರುಣಾದಲ್ಲಿ ಸೋಲುತ್ತಿದ್ದರು.ಒಂದು ಘಟನೆ ನಿಮ್ಮ ನೆನಪಿಗೆ ತರಬಯಸುವೆ– ಸಿದ್ರಾಮಯ್ಯನವರ ಪುತ್ರ ಡಾ.ಯತೀಂದ್ರ ಅವರು ಕುಲದೈವದ ಬಳಿ ಪ್ರಶ್ನೆ ಮಾಡಿದಾಗ ಆವೇಶಗೊಂಡ ಆ ದೈವ ‘ ಸಿದ್ರಾಮಯ್ಯನವರಿಗೆ ಎರಡುಕಡೆ ನಿಲ್ಲಲು ಹೇಳಿ,ಒಂದು ಕಡೆ ನಿಂತರೆ ಕಷ್ಟ’ ಎಂದು ನುಡಿದಿತ್ತು.ಇದು ಡಾ.ಯತೀಂದ್ರ ಅವರ ಆತಂಕಕ್ಕೆ ಕಾರಣವಾದರೆ ಸಿದ್ರಾಮಯ್ಯನವರ ವಿರೋಧಿಗಳಲ್ಲಿ  ಎಲ್ಲಿಲ್ಲದ ಬಲವನ್ನುಂಟು ಮಾಡಿ  ಅವರು ಕೋಲಾರ ಟಿಕೆಟ್ ತಪ್ಪಿಸಿದರು.ಸಿದ್ರಾಮಯ್ಯನವರ ಬಹಳಷ್ಟು ಅಭಿಮಾನಿಗಳು ಅನುಯಾಯಿಗಳಲ್ಲಿ ಅಧೈರ್ಯವನ್ನುಂಟು ಮಾಡಿತ್ತು ಈ ಪ್ರಸಂಗ.ತಮ್ಮ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರುಗಳಿಗಿಂತ  ಸ್ವಪಕ್ಷೀಯರೇ ಹೂಡುತ್ತಿದ್ದ ತಂತ್ರದಿಂದ ಸಿದ್ರಾಮಯ್ಯನವರೂ ಆತಂಕಿತರಾಗಿದ್ದರು.ಸಿದ್ರಾಮಯ್ಯನವರ ವಿರೋಧಿಗಳ ತಂತ್ರ- ಕುತಂತ್ರಗಳನ್ನು ಸುಟ್ಟುರುಹಿ ಅವರನ್ನು ಗೆಲ್ಲಿಸಬೇಕು ಮತ್ತು ಮುಖ್ಯಮಂತ್ರಿಯನ್ನಾಗಿ ಮಾಡಿ ಅವರ ವಿರೋಧಿಗಳಿಗೆ ಮುಖಭಂಗ ಮಾಡಬೇಕು ಎನ್ನುವ ದೃಢನಿಶ್ಚಯದಿಂದ ನಾವು ಕಾರ್ಯತತ್ಪರರಾದೆವು.ಎಪ್ರಿಲ್ 11 ರಿಂದ ಮೇ 10 ರ ವರೆಗೆ ನಮ್ಮ ಮಹಾಶೈವ ಧರ್ಮಪೀಠದ ಮಹಾಕಾಳಿಯ ಸನ್ನಿಧಿಯಲ್ಲಿ ಅನುಷ್ಠಾನ ನಿರತರಾದೆವು.
    ಕಳೆದ ಮುವ್ವತ್ತು ವರ್ಷಗಳಿಂದಲೂ ಯೋಗಸಾಧನೆ,ಶಕ್ತಿ ಉಪಾಸನೆ ಮಾಡುತ್ತಿರುವುದರಿಂದ ಅಸಾಧ್ಯವಾದುದನ್ನು ಸಾಧಿಸುತ್ತಿದ್ದೇವೆ,ಬಯಸಿದ ಫಲ ಪದವಿಗಳನ್ನು ಪಡೆಯುವುದಲ್ಲದೆ ಲೋಕಸಮಸ್ತರ ಕಲ್ಯಾಣ ಸಾಧಿಸುವುದರಲ್ಲಿಯೂ ಯಶಸ್ವಿ ಆಗಿದ್ದೇವೆ.ಶ್ರೀದೇವಿ ಪುರಾಣದ ಅಖಂಡ ಪಾರಾಯಣ ಮತ್ತು ಪ್ರತ್ಯಂಗಿರಾ ಹೋಮದಿಂದ ನಾವು ಅಸಾಧ್ಯ ಕಾರ್ಯಗಳನ್ನು ಸಾಧಿಸುತ್ತಿದ್ದು ಈ ಶಕ್ತಿತಂತ್ರದ ಅನುಷ್ಠಾನ ಬಲದಿಂದಲೇ ಗೆದ್ದು,ಮುಖ್ಯಮಂತ್ರಿಯಾದರು ಸಿದ್ರಾಮಯ್ಯನವರು.ಚಿದಾನಂದಾವಧೂತರು ರಚಿಸಿದ ‘ ಶ್ರೀ ಪಾರ್ವತಿ ದೇವಿ ಮಹಾತ್ಮೆ’ ಎನ್ನುವ ಶ್ರೀದೇವಿ ಪುರಾಣವು  ಭಕ್ತರ ಸಕಲ ಮನೋಭಿಷ್ಟಗಳನ್ನು ಈಡೇರಿಸುವ ಪ್ರತ್ಯಕ್ಷ ದೇವಿಯಹುದಲ್ಲದೆ ಕಲಿಯುಗದ ಕಾಮಧೇನು- ಕಲ್ಪವೃಕ್ಷವಾಗಿದೆ.ಶ್ರೀದೇವಿ ಪುರಾಣದ ಪಾರಾಯಣದಿಂದ ಅಸಾಧ್ಯಕಾರ್ಯಗಳನ್ನು ಸಾಧಿಸಬಹುದು,ಶತ್ರುಗಳನ್ನು ಸುಲಭವಾಗಿ ಗೆಲ್ಲಬಹುದು,ದುಷ್ಟಶಕ್ತಿ- ಕ್ಷುದ್ರವಿದ್ಯೆಗಳ ಮೇಲೆ ಸಂಪೂರ್ಣವಿಜಯ ಸಾಧಿಸಬಹುದು.
      ಎಪ್ರಿಲ್ 11 ರ ಬೆಳಿಗ್ಗೆ ತಾಯಿ ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿ ಸಿದ್ರಾಮಯ್ಯನವರ ಯಶಸ್ಸಿಗಾಗಿ ಸಂಕಲ್ಪಿಸಿ ಮಹಾಕಾಳಿಯ ಸನ್ನಿಧಿಯಲ್ಲಿ ಅನುಷ್ಠಾನ ಪ್ರಾರಂಭಿಸಿದೆವು.ಬೆಳಿಗ್ಗೆ ಶ್ರೀದೇವಿ ಪುರಾಣದ ಅಖಂಡ ಪಾರಾಯಣ ಮಾಡುತ್ತ ರಾತ್ರಿ ಪ್ರತ್ಯಂಗಿರಾ ಹೋಮ ಮಾಡತೊಡಗಿದೆವು.ದೇವಿ ಪುರಾಣದ ಅಖಂಡ ಪಾರಾಯಣವೆಂದರೆ ಚಿದಾನಂದಾವಧೂತರು ರಚಿಸಿದ ಭಾಮಿನೀ ಷಟ್ಪದಿಯ 796 ಪದಗಳ ಹದಿನೆಂಟು ಅಧ್ಯಾಯಗಳ ಪೂರ್ಣ ಪುರಾಣವನ್ನು  ಪಾರಾಯಣ ಸಂಕಲ್ಪಿಸಿದ ಸ್ಥಳ ಬಿಟ್ಟು ಕದಲದೆ ಓದುವುದು.ನ್ಯಾಸ ಪೂರ್ವಕವಾಗಿ ಪುರಾಣದ ಅಖಂಡ ಪಾರಾಯಣಕ್ಕೆ ಮೂರು ತಾಸುಗಳು ಬೇಕು.ಪ್ರತ್ಯಂಗಿರಾ ಹೋಮಕ್ಕೆ ಎರಡು ತಾಸುಗಳ ಅವಧಿ ಹಿಡಿಯುತ್ತದೆ.ಒಂದು ತಿಂಗಳಕಾಲ ಪ್ರತಿದಿನ ಐದು ತಾಸುಗಳನ್ನು ಸಿದ್ರಾಮಯ್ಯನವರ ಯಶಸ್ಸಿಗೆ ಮೀಸಲಿಟ್ಟೆವು.ಪ್ರತಿದಿನ ಆರು ತಾಸುಗಳ ಆಧ್ಯಾತ್ಮಿಕ ಸಾಧನೆಯ ನಮ್ಮ ನಿತ್ಯನಿಯಮವನ್ನು ಬದಲಿಸಿಕೊಂಡು ಒಂದು ತಾಸನ್ನು ಮಾತ್ರ ವೈಯಕ್ತಿಕ ಸಾಧನೆಗೆ ಮೀಸಲಿರಿಸಿ ಉಳಿದ ಐದು ತಾಸುಗಳನ್ನು ಸಿದ್ರಾಮಯ್ಯನವರಿಗಾಗಿ ನಿಗದಿಪಡಿಸಿದೆವು.
     ನಾವು ಶ್ರೀದುರ್ಗಾ ಅನುಷ್ಠಾನ ಮಾಡದೆ ಇದ್ದರೆ ಸಿದ್ರಾಮಯ್ಯನವರು ಗೆಲ್ಲುತ್ತಿರಲಿಲ್ಲ,ಮುಖ್ಯಮಂತ್ರಿ ಆಗುತ್ತಿರಲಿಲ್ಲ.ಮುಖ್ಯಮಂತ್ರಿ ಹುದ್ದೆಯನ್ನು ಪಡೆಯಲೇಬೇಕು ಎನ್ನುವ ಹಠ ಮತ್ತು ಮಹತ್ವಾಕಾಂಕ್ಷೆಯೊಂದಿಗೆ ಈ ಬಾರಿ ಕಣಕ್ಕಿಳಿದಿದ್ದ ಡಿ.ಕೆ.ಶಿವಕುಮಾರ ಅವರು ಅವರ ಅತ್ಯಾಪ್ತ ಜ್ಯೋತಿಷಿಯ ಸಲಹೆಯಂತೆ ಹಲವು ತಾಂತ್ರಿಕ ಆಚರಣೆಗಳನ್ನು ಕೈಗೊಂಡಿದ್ದರು,ಕೆಲವು ವಿಶೇಷ ಪೂಜೆಗಳನ್ನೂ ಮಾಡಿದ್ದರು.ನೊಣವಿನಕೆರೆ ಸ್ವಾಮೀಜಿಯವರು ಡಿ.ಕೆ.ಶಿವಕುಮಾರ ಅವರಿಗಾಗಿ ಕೆಲವು ಪ್ರಯೋಗಗಳನ್ನು ಮಾಡಿದ್ದರು.ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಚಂಡೀಹೋಮವನ್ನು ಮಾಡಿಸಿದ್ದರು ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾಗುವ ಸಂಕಲ್ಪದಿಂದ.ನಾವು ಅಖಂಡ ದೇವಿಪುರಾಣದ ಪಾರಾಯಣದ ಜೊತೆಗೆ ಪ್ರತ್ಯಂಗಿರಾ ಹೋಮ ಮಾಡದೆ ಇದ್ದರೆ ಡಿ.ಕೆ.ಶಿವಕುಮಾರ ಅವರನ್ನು  ತಡೆಯುವವರೇ ಇರಲಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮತ್ತು ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನಿಸುತ್ತಿದ್ದ ಸಂದರ್ಭಗಳಲ್ಲಿ ಸಿದ್ರಾಮಯ್ಯನವರು ಭಯ- ಆತಂಕಗಳಿಗೆ ಒಳಗಾದ ಕ್ಷಣಗಳಲ್ಲಿ ಅನಿರೀಕ್ಷಿತವಾದ ದಾರಿಯೊಂದು ಕಾಣಿಸುತ್ತಿತ್ತು,ಅವರ ಆಂತರ್ಯದಲ್ಲಿ ಕಾರ್ಯಸಾಧನೆಯ ಹೊಳಹು ಹೊಳೆಯುತ್ತಿತ್ತು ಸ್ವತಃ ಸಿದ್ರಾಮಯ್ಯನವರೇ ಆಶ್ಚರ್ಯಪಡುವಂತೆ ತಾಯಿ ದುರ್ಗಾದೇವಿಯ ಅನುಗ್ರಹದಿಂದ.ಡಿ.ಕೆ.ಶಿವಕುಮಾರ ಅವರು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಕೈಗೆ ಬಂದು ತುತ್ತು ಬಾಯಿಗೆ ಸಿಗದಂತೆ ಕಾರ್ಯಸಾಧನೆಯಲ್ಲಿ ಹಿನ್ನಡೆಯಾಗುತ್ತಿತ್ತು.ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಕೈಗೊಂಡ ಡಿ.ಕೆ.ಶಿವಕುಮಾರ ಅವರ ಚಂಡಿಹೋಮ ನಿಶ್ಚಿತಫಲ ನೀಡುವಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿರಲಿಲ್ಲ ನಾವು ‘ ಪ್ರತ್ಯಂಗಿರಾ ಹೋಮ’ ಮಾಡದೆ ಇದ್ದರೆ.’ ಪ್ರತ್ಯಂಗಿರಾ ಹೋಮ’ ವು ಶತ್ರುಗಳ ಮೇಲೆ ನಿಗ್ರಹವನ್ನು ಮಾತ್ರವಲ್ಲ,ದೇವ ದೇವಿಯರನ್ನು ನಿಗ್ರಹಿಸುವ ಸಾಮರ್ಥ ಉಳ್ಳ ಅತಿಶಕ್ತಿಶಾಲಿ ಹೋಮ.ಆ ಕಾರಣದಿಂದಲೇ ಹಿನ್ನಡೆಯಾಯಿತು ಡಿ.ಕೆ.ಶಿವಕುಮಾರ ಅವರಿಗೆ.
     ‌ ಸಿದ್ರಾಮಯ್ಯನವರ ಮೇಲಿನ ಬಹುಕಾಲದಿಂದಲೂ ಇರುವ ಪ್ರೀತಿ,ಅಭಿಮಾನ,ಗೌರವಗಳಿಂದ ನಾವು ‘ ಅಖಂಡದೇವಿ ಪುರಾಣ ಮತ್ತು ಪ್ರತ್ಯಂಗಿರಾ ಹೋಮ’ವನ್ನು ನೆರವೇರಿಸಿ ಅವರನ್ನು ಗೆಲ್ಲಿಸಿ,ಮುಖ್ಯಮಂತ್ರಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದೇವೆ.ಹಾಗಂತ ಡಿ.ಕೆ.ಶಿವಕುಮಾರ ಅವರಿಗೆ ಅನ್ಯಾಯ ಮಾಡಿದ್ದೇವೆ ಎಂದು ಭಾವಿಸಬಾರದು. ಡಿ.ಕೆ.ಶಿವಕುಮಾರ ಅವರು ಮಹಾಶೈವ ಧರ್ಮಪೀಠಕ್ಕೆ ಬಂದು ವಿಶ್ವೇಶ್ವರಿ ದುರ್ಗಾದೇವಿಯಲ್ಲಿ ಪ್ರಾರ್ಥಿಸಿದರೆ ಮುಂಬರುವ ದಿನಗಳಲ್ಲಿ ಅವರಿಗೂ ಒದಗಿ ಬರಲಿದೆ ಮುಖ್ಯಮಂತ್ರಿ ಯೋಗ.

About The Author