ಮೂರನೇ ಕಣ್ಣು :  ಶೈವಸಂಸ್ಕೃತಿಯ ‘ಬಲ’ ಪಡೆಯುವ ನಿರೀಕ್ಷೆಯಲ್ಲಿದ್ದಾರೆಯೇ ಪ್ರಧಾನಿ ಮೋದಿಯವರು? : ಮುಕ್ಕಣ್ಣ ಕರಿಗಾರ

ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ತಮಿಳುನಾಡಿನ ಆಧೀನಂ ಶೈವ ಮಠದಿಂದ ಬರಮಾಡಿಕೊಂಡ ಸೆಂಗೋಲ್ ಅನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಿದ ಕ್ಷಣಗಳ ಪ್ರಧಾನಿಯವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನೂತನ ಸಂಸತ್ ಭವನವನ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜಕೀಯ ಚಾಣಾಕ್ಷ್ಯತನ ಪ್ರದರ್ಶಿಸಿದ್ದಾರೆ ನರೇಂದ್ರ ಮೋದಿಯವರು ಎನ್ನಿಸುತ್ತದೆ.ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸಲ್ಪಟ್ಟ ಧಾರ್ಮಿಕ ಮುಖಂಡರುಗಳೆಂದರೆ ತಮಿಳುನಾಡಿನ ಆಧೀನಂಗಳೆಂಬ ಶೈವ ಮಠಗಳ ಪೀಠಾಧಿಪತಿಗಳು ಮಾತ್ರ.ದೇಶದ ಅತಿಪ್ರಮುಖ ಸ್ವಾಮಿಗಳು,ಮಠ- ಪೀಠಾಧೀಶರುಗಳನ್ನು ಈ ಸಮಾರಂಭಕ್ಕೆ ಪ್ರಧಾನಿಯವರು ಆಹ್ವಾನಿಸದೆ ಕೇವಲ ತಮಿಳುನಾಡಿನ ಶೈವಮಠಗಳ ಪೀಠಾಧಿಪತಿಗಳನ್ನಷ್ಟೇ ಆಹ್ವಾನಿಸಿದ್ದು ಏಕೆ ಎಂದು ವಿಚಾರಿಸಿದಾಗ ಮೋದಿಯವರ ರಾಜಕೀಯ ಲೆಕ್ಕಾಚಾರವೇನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ತಮಿಳುನಾಡು ಬ್ರಾಹ್ಮಣರ ವಿರೋಧಿ ದ್ರಾವಿಡನಾಡು; ಶೈವಭೂಮಿ.ಶಿವಪುತ್ರ ಸ್ಕಂದನರಾಜ್ಯವೂ ಹೌದು ತಮಿಳುನಾಡು.ಮುರುಗನ್,ವೇಲಾಯುಧನ್,ಷಣ್ಮುಗಂ,ಆರ್ಮೊಗನ್ ಮೊದಲಾದ ಹೆಸರಿನಲ್ಲಿ ತಮಿಳುನಾಡಿನ ಉದ್ದಗಲಕ್ಕೂ ಪೂಜೆಗೊಳ್ಳುತ್ತಿದ್ದಾನೆ ಶಿವಪುತ್ರ ಸ್ಕಂದ,ಸುಬ್ರಹ್ಮಣ್ಯನು.ಶಿವಸಂಸ್ಕೃತಿಯು ಆಳವಾಗಿ ಬೇರೂರಿರುವುದರಿಂದ ತಮಿಳುನಾಡಿನ ಧಾರ್ಮಿಕ ಕ್ಷೇತ್ರದಲ್ಲಿ ಶೈವ ಮಠಗಳದ್ದೇ ಮೇಲುಗೈ,ಶೈವ ಮಠಗಳೇ ತಮಿಳುನಾಡಿನ ರಾಜಕೀಯವನ್ನು ನಿರ್ಧರಿಸುತ್ತ ಬಂದಿವೆ.ತಮಿಳುನಾಡಿನ ಶೈವ ಮಠಗಳನ್ನು ‘ ಆಧೀನಮ್’ ಎಂದು ಕರೆಯಲಾಗುತ್ತಿದ್ದು ಈ ಆಧೀನಂಗಳ ಪ್ರಭಾವ ದಟ್ಟವಾಗಿದೆ ತಮಿಳುಜನರ ಮೇಲೆ.ಆಧೀನಂಗಳ ಮಠಾಧಿಪತಿಗಳಾಗಿ ಮೇಲ್ವರ್ಗದವರಂತೆ ಹಿಂದುಳಿದವರ್ಗದವರೂ ಇದ್ದಾರೆ.ಮೇಲ್ವರ್ಗದ ವೆಲ್ಲಾರ್ ಸಮುದಾಯದವರೇ ಬಹಳಷ್ಟು ಆಧೀನಮ್ ಗಳ ಮಠಾಧಿಪತಿಗಳಾಗಿದ್ದು ಅವರು ಮೇಲ್ವರ್ಗದ ಜನತೆಯ ಮೇಲಷ್ಟೇ ಅಲ್ಲದೆ ಹಿಂದುಳಿದ ವರ್ಗಗಳ ಜನತೆಯ ಮೇಲೂ ಪ್ರಭಾವಹೊಂದಿದ್ದಾರೆ.ಜೊತೆಗೆ ಹಿಂದುಳಿದ ವರ್ಗಗಳ ಮಠಾಧೀಶರುಗಳನ್ನು ಒಳಗೊಂಡ ನಾಲ್ಕು ಆಧೀನಂ ಶೈವಮಠಗಳಿವೆ ತಮಿಳುನಾಡಿನಲ್ಲಿ.ಹಿಂದುಳಿದ ವರ್ಗಗಳ ಜನತೆಯ ಮೇಲೆ ಈ ನಾಲ್ಕು ಆಧೀನಂಗಳ ಪ್ರಭಾವ ದಟ್ಟವಾಗಿದೆ.

ದಕ್ಷಿಣಭಾರತದಲ್ಲಿ ಹೇಗಾದರೂ ತಮಿಳುನಾಡನ್ನು ‘ ಸ್ವಾಧೀನ’ ಪಡಿಸಿಕೊಳ್ಳಲೇಬೇಕು ಎನ್ನುವ ಗಟ್ಟಿ ನಿರ್ಧಾರದ ಕಾರಣದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆಂಗೋಲ್ ನ ಸ್ಥಾಪನೆ ಮತ್ತು ಆಧೀನಂಗಳ ಮಠಾಧೀಶರುಗಳಿಗೆ ಮಾತ್ರ ಆಹ್ವಾನ ನೀಡುವ ಜಾಣ್ಮೆ ಪ್ರದರ್ಶಿಸಿದ್ದಾರೆ.ಸೆಂಗೋಲ್ ಅನ್ನು ಸಂಸತ್ತಿಗೆ ಬರಮಾಡಿಕೊಂಡ ಸಂದರ್ಭದಲ್ಲಿ ಪ್ರಧಾನಿಯವರು ಸಂಸತ್ ಭವನದಲ್ಲಿ ಸೆಂಗೋಲ್ ಗೆ ದೀರ್ಘದಂಡ ಪ್ರಣಾಮ ಸಮರ್ಪಿಸಿದ್ದಾರೆ ಮತ್ತು ಶೈವಮಠಾಧೀಶರುಗಳನ್ನು ಒಬ್ಬೊಬ್ಬರನ್ನಾಗಿ ಕೈಮುಗಿದು ವಿನಯ‌ ಪ್ರದರ್ಶಿಸಿದ್ದಾರೆ.ತಮಿಳುನಾಡಿನ ಆಧಿನಂಗಳೆನ್ನುವ ಶೈವಮಠಗಳು ಬಿಜೆಪಿಯು ಬ್ರಾಹ್ಮಣರಿಗೆ ಪ್ರಾಧಾನ್ಯ ನೀಡುವ ಪಕ್ಷ ಎನ್ನುವ ಕಾರಣದಿಂದ ಬಿಜೆಯಿಂದ ದೂರ ಇದ್ದು ತಮಿಳು ಸಂಸ್ಕೃತಿಯ ರಾಜಕೀಯ ಪಕ್ಷಗಳಾದ ಡಿ ಎಂ ಕೆ ಮತ್ತು ಎ ಐ ಡಿ ಎಂ ಕೆ ಪಕ್ಷಗಳನ್ನು ಬೆಂಬಲಿಸುತ್ತ ಬಂದಿವೆ.ಆಧೀನಂಗಳು ಬ್ರಾಹ್ಮಣರ ಶ್ರೇಷ್ಠತೆಯ ವಿರೋಧಿ ಶೈವಮಠಗಳು.ಆಧೀನಂಗಳ ಪ್ರಭಾವ ರಾಜ್ಯದಾದ್ಯಂತ ದಟ್ಟವಾಗಿದೆ.ಕೋಯಮತ್ತೂರಿನ ಪೆರೂರ ಮಠವು ರಾಜ್ಯದ ಪ್ರಬಲಶೈವ ಮಠ ಎನ್ನುವ ಅಗ್ಗಳಿಕೆಯನ್ನು ಪಡೆದಿದ್ದು ತಮಿಳುನಾಡಿನಾದ್ಯಂತ ಆ ಮಠದ ಪ್ರಭಾವವಿದೆ.ಹೀಗೆ ದ್ರಾವಿಡ ಸಂಸ್ಕೃತಿಯ ಜನತೆಯ ಮೇಲೆ ಹಿಡಿತಹೊಂದಿರುವ ಆಧೀನಂಗಳ ಮೂಲಕ ತಮಿಳುನಾಡಿನ ರಾಜಕೀಯ ಚುಕ್ಕಾಣಿ ಹಿಡಿಯಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ.

ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಾಮಲೈಯವರು ತಮಿಳು ಜನರ ನಾಡಿ ಮಿಡಿತವನ್ನು ಚೆನ್ನಾಗಿ ಬಲ್ಲವರಾಗಿದ್ದು ಬಿಜೆಪಿಯಿಂದ ದೂರ ಇರುವ ಆಧೀನಂ ಶೈವಮಠಗಳನ್ನು ಬಿಜೆಪಿಗೆ ಹತ್ತಿರ ತರುವಲ್ಲಿ ಮುಖ್ಯಪಾತ್ರವಹಿಸಿದ್ದಾರೆ.ಅಣ್ಣಾಮಲೈಯವರು 2022 ರಲ್ಲಿ ಅನಿರೀಕ್ಷಿತವಾಗಿ ಒದಗಿಬಂದ ಧಾರ್ಮಿಕ ಪ್ರಸಂಗ ಒಂದರಿಂದ ತಮಿಳು ಆಧೀನಂಗಳ ಹಿತಚಿಂತಕರಾಗಿ ಹೊರಹೊಮ್ಮಿದರು.ಧರ್ಮಪುರಂ ಆಧೀನಂ ಪೀಠಾಧಿಪತಿಯು ವಾರ್ಷಿಕ ಧಾರ್ಮಿಕ ಸಂಪ್ರದಾಯಂತೆ ಪಲ್ಲಕ್ಕಿಯಲ್ಲಿ ದೇವಸ್ಥಾನ ಪ್ರವೇಶಿಸುವುದನ್ನು ರಾಜ್ಯದ ಡಿ ಎಂ ಕೆ ಸರ್ಕಾರವು ನಿಷೇಧಿಸಿ,ಆದೇಶಿತು.ಇದರ ಪ್ರಯೋಜನ ಪಡೆದ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈಯವರು ತಮ್ಮ ಪಕ್ಷದ ಕಾರ್ಯಕರ್ತರುಗಳು ಮತ್ತು ಅನುಯಾಯಿಗಳೊಂದಿಗೆ ಮಠಾಧಿಪತಿಗಳ ಪಲ್ಲಕ್ಕಿ ಮೆರವಣಿಗೆಯನ್ನು ಬೆಂಬಲಿಸಲು’ ಪಟ್ಟಿನ ಪ್ರವೇಶಂ’ ಪ್ರತಿಭಟನೆ ನಡೆಸಿದರು.ತಮಿಳುನಾಡು ಸರಕಾರವು ನಿರ್ಬಂಧವನ್ನು ಹಿಂತೆಗೆದುಕೊಂಡಿತು.ಅಂದಿನಿಂದಲೇ ಆಧೀನಂಗಳ ಒಡನಾಟ ಇಟ್ಟುಕೊಂಡರು ಅಣ್ಣಾಮಲೈಯವರು.ಪ್ರಧಾನಿ ನರೇಂದ್ರ ಮೋದಿಯವರಿಗೆ ಸೆಂಗೋಲ್ ಸ್ಥಾಪನೆಯ ವಿಚಾರ ಮತ್ತು ಆಧೀನಂ ಮಠಗಳ ಸ್ವಾಮಿಗಳನ್ನು ಆಹ್ವಾನಿಸುವ ಸಲಹೆ ನೀಡಿದ್ದೇ ಅಣ್ಣಾಮಲೈಯವರು.

ತಮಗೆ ಮತ್ತು ಬಿಜೆಪಿಗೆ ಲಾಭವೆನ್ನಿಸುವ ಎಲ್ಲ ವಿಚಾರಗಳನ್ನು ಮುಕ್ತಮನಸ್ಸಿನಿಂದ ಸ್ವಾಗತಿಸುವ ಪ್ರಧಾನಿ ನರೇಂದ್ರ ಮೋದಿಯವರು ಅಣ್ಣಾಮಲೈಯವರ ಸಲಹೆಯನ್ನು ಒಪ್ಪಿ,ಕಾರ್ಯತತ್ಪರರಾದರು.ಈ ಸಲಹೆ ಮತ್ತು ರಾಜಕೀಯ ಮುಂದಾಲೋಚನೆಯ ಕಾರಣದಿಂದ ಸೆಂಗೋಲ್ ಪ್ರವೇಶಿಸಿತು ನೂತನ ಸಂಸತ್ ಭವನವನ್ನು ,ಆಹ್ವಾನಿತರಾದರು ಆಧೀನಂ ಶೈವ ಮಠಾಧಿಪತಿಗಳು.ನರೇಂದ್ರ ಮೋದಿಯವರ ರಾಜಕೀಯ ಚಾಣಾಕ್ಷತೆಯನ್ನು ಗುರುತಿಸುವಲ್ಲಿ ವಿಫಲವಾದ ವಿರೋಧ ಪಕ್ಷಗಳು ಸೆಂಗೋಲ್ ಸ್ಥಾಪನೆ ಮತ್ತು ನೂತನ ಸಂಸತ್ ಭವನದ ಉದ್ಘಾಟನೆಯನ್ನು ವಿರೋಧಿಸುವಲ್ಲಿಯೇ ಸಂತಸಪಟ್ಟವು.ಒಬ್ಬ ಯಶಸ್ವಿ ರಾಜಕಾರಣಿ ಪ್ರತಿದಿನದ 24 ಘಂಟೆಗಳ ಕಾಲವೂ ರಾಜಕಾರಣಿಯಾಗಿಯೇ ಇರುತ್ತಾನೆ ವರ್ಷದ 365 ದಿನಗಳಲ್ಲಿಯೂ ರಾಜಕೀಯ ಲೆಕ್ಕಾಚಾರದಲ್ಲಿಯೇ ಇರುತ್ತಾನೆ ಎನ್ನುವುದಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿಯವರು ಉತ್ತಮ ಉದಾಹರಣೆ.ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡುವವರಿಗೆ,ರಾಜಕಾರಣದಲ್ಲಿ ಓಬಿರಾಯನ ಕಾಲದಲ್ಲೇ ಇರುವವರಿಗೆ ನರೇಂದ್ರಮೋದಿಯವರಂತಹ ಚಾಣಾಕ್ಷ ಮತ್ತು ಯಶಸ್ವಿರಾಜಕಾರಣಿಯ ನಡೆ- ನುಡಿ,ವರ್ತನೆಗಳು ಅರ್ಥವಾಗುವುದಿಲ್ಲ.

ಕರ್ನಾಟಕದಲ್ಲಿ ಆರ್ ಎಸ್ ಎಸ್ ಮತ್ತು ಬ್ರಾಹ್ಮಣ ಮುಖಂಡರುಗಳಿಗೆ ಅಗ್ರಮನ್ನಣೆ ನೀಡಿದ ಫಲವಾಗಿಯೇ ಅಧಿಕಾರಕಳೆದುಕೊಂಡು ಆ ತಪ್ಪಿನ ಅರಿವಾಗಿ ಬಿಜೆಪಿಯನ್ನು ಮತ್ತೆ ದಕ್ಷಿಣದಲ್ಲಿ ಅಧಿಕಾರಕ್ಕೆ ತರಬೇಕು,ದಕ್ಷಿಣದ ಪ್ರಬಲ ದ್ರಾವಿಡ ರಾಜ್ಯವನ್ನು ಕಬಳಿಸಬೇಕು ಎನ್ನುವ ಮುಂದಾಲೋಚನೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಶೈವಸಂಸ್ಕೃತಿಗೆ ತಲೆಬಾಗಿದ್ದಾರೆ,ತಮಿಳರ ಮನಸ್ಸುಗಳನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಿದ್ದಾರೆ.

About The Author