ಮೂರನೇ ಕಣ್ಣು : ಸಿದ್ರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕು,ಏಕೆ? : ಮುಕ್ಕಣ್ಣ ಕರಿಗಾರ

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ನಿರೀಕ್ಷೆಗೂ ಮೀರಿ ಜನಮತಪಡೆದು 135 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸುವ ಸಿದ್ಧತೆಯಲ್ಲಿದೆ.ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಷಯ ಈಗ ಕಾಂಗ್ರೆಸ್ ವರಿಷ್ಠರಿಗೆ ತಲೆನೋವು ಆಗಿದೆ.ಸಿದ್ರಾಮಯ್ಯನವರು ವರುಣಾದಲ್ಲಿ ಸೋಲಬಹುದು ಎಂದು ನಿರೀಕ್ಷಿಸಿ ಡಿ.ಕೆ.ಶಿವಕುಮಾರ ಅವರಿಗೆ ಮುಖ್ಯಮಂತ್ರಿ ಪಟ್ಟಕಟ್ಟಬಹುದು ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್ ನಾಯಕರು ಸಿದ್ರಾಮಯ್ಯನವರ ಗೆಲುವಿನಿಂದ ವಿಚಲಿತರಾಗಿದ್ದರು.ಸಿದ್ರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರಿಬ್ಬರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು ಚುನಾವಣಾ ಪೂರ್ವದಲ್ಲಿಯೇ ಅವರಿಬ್ಬರು ಮುಖ್ಯಮಂತ್ರಿಯಾಗುವ ತಮ್ಮ ಮನದಾಳವನ್ನು ಸಾರ್ವಜನಿಕ ಸಭೆಗಳಲ್ಲಿ ವ್ಯಕ್ತಪಡಿಸುತ್ತಿದ್ದರು.ಇದರಿಂದ ಪಕ್ಷಕ್ಕೆ ಹೊಡೆತ ಬೀಳಲಿದೆ ಎಂದ ಕಾಂಗ್ರೆಸ್ ನ ವರಿಷ್ಠರು ಅವರಿಬ್ಬರೂ ಮುಖ್ಯಮಂತ್ರಿಸ್ಥಾನದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದರು.ಕಾಂಗ್ರೆಸ್ ಪಕ್ಷ ಈಗ ನಿರೀಕ್ಷೆಗೂ ಮೀರಿದ ಯಶಸ್ಸು ಸಾಧಿಸಿರುವುದರಿಂದ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಸಿದ್ರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರಿಬ್ಬರ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಶಾಸಕಾಂಗ ಪಕ್ಷದ ನಾಯಕರು ಈ ಇಬ್ಬರಲ್ಲಿ ಯಾರಾಗಬೇಕು ಎನ್ನುವ ವಿಷಯದಲ್ಲಿ ಒಮ್ಮತಕ್ಕೆ ಬರಲಾಗದೆ ಮುಂದಿನ ಮುಖ್ಯಮಂತ್ರಿ ಆಯ್ಕೆಯ ನಿರ್ಧಾರವನ್ನು ಹೈಕಮಾಂಡಿನ ಅಂಗಳಕ್ಕೆ ವರ್ಗಾಯಿಸಲಾಗಿದೆ.ಸಿ.ಎಲ್.ಪಿ ಸಭೆಯಲ್ಲಿ ಹಾಜರಿದ್ದ ಶಾಸಕರಲ್ಲಿ 70 ಶಾಸಕರು ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಬೇಕೆಂದು ಬಯಸಿದರೆ 40 ಜನ ಶಾಸಕರು ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾಗಲಿ ಎಂದರಂತೆ.ಹೆಚ್ಚಿನ ಶಾಸಕರ ಬೆಂಬಲ ಸಿದ್ರಾಮಯ್ಯನವರಿಗಿರುವುದರಿಂದ ಎಚ್ಚೆತ್ತ ಹೈಕಮಾಂಡಿನ ಪ್ರತಿನಿಧಿಗಳು ವಿಷಯವನ್ನು ಹೈಕಮಾಂಡನ ನಿರ್ಧಾರಕ್ಕೆ ಬಿಡುವುದಾಗಿ ತಿಳಿಸಿದ್ದಕ್ಕೆ ಸಿ ಎಲ್ ಪಿ ಸಭೆ ಸಮ್ಮತಿಸಿದೆ.ಮುಖ್ಯಮಂತ್ರಿಯ ಆಯ್ಕೆಯನ್ನು ಹೈಕಮಾಂಡಿಗೆ ಬಿಡುವುದರಿಂದ ಸಹಜವಾಗಿಯೇ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ಹೆಚ್ಚಿದೆ.ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಬ್ಬರು ಡಿ.ಕೆ.ಶಿವಕುಮಾರ ಅವರ ಪರವಾಗಿದ್ದಾರೆ. ಸಿದ್ರಾಮಯ್ಯನವರು ಪ್ರಾಮಾಣಿಕ,ದಕ್ಷ ಮತ್ತು ನೇರನಡೆನುಡಿಯ ರಾಜಕಾರಣಿ ಎನ್ನುವ ಕಾರಣದಿಂದ ರಾಹುಲ್ ಗಾಂಧಿಯವರು ಸಿದ್ರಾಮಯ್ಯನವರ ಪರ ಬ್ಯಾಟಿಂಗ್ ಬೀಸಬಹುದಾದರೂ ಅದು ಕಾರ್ಯಗತಗೊಳ್ಳುವುದು ಕಷ್ಟ.

ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಪಕ್ಷಾಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ ಅವರು ಮಹತ್ವದ ಪಾತ್ರವಹಿಸಿದ್ದಾರೆ,ರಾಜ್ಯದಾದ್ಯಂತ ಸಂಚರಿಸಿ ಪ್ರಚಾರ ಮಾಡಿದ್ದಾರೆ ಎನ್ನುವುದು ನಿಜವಾದರೂ ಅವರು ಸಿದ್ರಾಮಯ್ಯನವರಿಗೆ ಒಂದರ್ಥದಲ್ಲಿ ದಿಗ್ಬಂಧನ ಹೇರಿ ತಾವೇ ಲೀಡ್ ತೆಗೆದುಕೊಂಡಿದ್ದರು.ತಮ್ಮ ಬೆಂಬಲಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಡಿ ಕೆ ಶಿವಕುಮಾರ ಗೆಲ್ಲಬಹುದಾಗಿದ್ದ ಸಿದ್ರಾಮಯ್ಯನವರ ಅನುಯಾಯಿಗಳಿಗೆ ಟಿಕೆಟ್ ಕೊಡಿಸಲಿಲ್ಲ.ಒಟ್ಟಿನಲ್ಲಿ ಪಕ್ಷದಲ್ಲಿ ತಮ್ಮದೆ ಹಿಡಿತ ಸಾಧಿಸಬೇಕು ಎನ್ನುವ ಮುಂದಾಲೋಚನೆಯಲ್ಲಿ ಡಿ.ಕೆ.ಶಿವಕುಮಾರ ಏನೆಲ್ಲವನ್ನೂ ಮಾಡಿದರು.ಆದರೆ ಹಳೆಯ ತಲೆಮಾರಿನ ಶಾಸಕರುಗಳು ಸೇರಿದಂತೆ ಹೊಸತಲೆಮಾರಿನ ಶಾಸಕರುಗಳು ಸಹ ಸಿದ್ರಾಮಯ್ಯನವರಲ್ಲಿಯೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿ.ಕೆ.ಶಿವಕುಮಾರ ಅವರ ಪರವಾಗಿ ಒಕ್ಕಲಿಗ ಸಮುದಾಯದ ಮಠಾಧೀಶರುಗಳು ಆಖಾಡಕ್ಕೆ ಇಳಿದಿದ್ದಾರೆ.ಒಕ್ಕಲಿಗರ ಸಂಘಟನೆಗಳು ಡಿ.ಕೆ.ಶಿವಕುಮಾರ ಅವರೇ ಮುಖ್ಯಮಂತ್ರಿ ಆಗಲಿ ಎಂದು ಒತ್ತಾಯಿಸುತ್ತಿವೆ.ಕುರುಬರ ಸಂಘಟನೆಗಳು ಸಿದ್ರಾಮಯ್ಯನವರ ಬೆಂಬಲಕ್ಕಿವೆ.ಕಾಂಗ್ರೆಸ್ ಹೈಕಮಾಂಡ್ ಯಾರದೆ ಒತ್ತಡಕ್ಕೆ ಮಣಿಯದೆ ಪಕ್ಷದ ವರ್ಚಸ್ಸು ಮತ್ತು ಪಕ್ಷವನ್ನು ಸುಭದ್ರಗೊಳಿಸುವ ದೃಷ್ಟಿಯಿಂದ ಸಿದ್ರಾಮಯ್ಯ ಅವರನ್ನೇ ಮುಖ್ಯಮಂತ್ರಿ ಎಂದು ಘೋಷಿಸಬೇಕು.ಸಿದ್ರಾಮಯ್ಯನವರು ಮುಖ್ಯಮಂತ್ರಿ ಆಗಬೇಕು ಎನ್ನಲು ನಾನು ಮುಂದಿಡುತ್ತಿರುವ ಕಾರಣಗಳಿವು ;

೧. ಸಿದ್ರಾಮಯ್ಯನರು ಭ್ರಷ್ಟಾಚಾರ ರಹಿತ ಸ್ವಚ್ಛ ವ್ಯಕ್ತಿತ್ವವನ್ನು ಹೊಂದಿದ್ದು ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಐದುವರ್ಷಗಳ ಕಾಲ ಹಗರಣರಹಿತ ಸರ್ಕಾರ ನೀಡಿದ್ದಾರೆ.

ಡಿ.ಕೆ.ಶಿವಕುಮಾರ ಅವರ ವಿರುದ್ಧ Money laundering case ಗಳು ಸೇರಿದಂತೆ ಹಲವು ಗಂಭೀರ ಸ್ವರೂಪದ ಕ್ರಿಮಿನಲ್ ಕೇಸುಗಳಿದ್ದು ಇ.ಡಿ ಮತ್ತು ಸಿ.ಬಿ.ಐನವರು ಅವರಿಗಾಗಿ ಕಾಯುತ್ತಿದ್ದಾರೆ.ಕರ್ನಾಟಕದ ಸೋಲೊನಿಂದ ಧೃತಿಗೆಟ್ಟಿರುವ ಪ್ರಧಾನಮಂತ್ರಿ ನರೇಂದ್ರಮೋದಿಯವರು ಮತ್ತು ಗೃಹಮಂತ್ರಿ ಅಮಿತ್ ಶಾ ಅವರು ಡಿ.ಕೆ.ಶಿವಕುಮಾರ ಅವರನ್ನು ಕಾನೂನು ಕುಣಿಕೆಯಲ್ಲಿ ಸಿಕ್ಕಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಾರೆ.ಚುನಾವಣೆಯ ಸಂದರ್ಭದಲ್ಲಿ ಮೂರುಸಾವಿರಕ್ಕು ಹೆಚ್ಚು ಜನರು ಡಿ.ಕೆ.ಶಿವಕುಮಾರ ಅವರ ಆಸ್ತಿಯ ವಿವರಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದು ಡಿ.ಕೆ.ಶಿವಕುಮಾರ ಅವರನ್ನು ಕಾನೂನಿನ ಖೆಡ್ಡಾಕ್ಕೆ ಕೆಡಹುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿಯೇ.ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾಗಿದ್ದಾಗ ಬಂಧಿಸಿದ್ದರೆ ಇಲ್ಲವೆ ಇ.ಡಿ,ಸಿ.ಬಿ.ಐ ಕಛೇರಿಗಳಿಗೆ ಸುತ್ತುವಂತೆ ಮಾಡಿದರೆ ಅದು ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತದೆ.ಆ.ಕಾರಣದಿಂದ ಯಾವುದೇ ಹಗರಣಗಳಿಲ್ಲದ,ಯಾವುದೇ ಕ್ರಿಮಿನಲ್ ಕೇಸುಗಳನ್ನು ಎದುರಿಸದ ಸಿದ್ರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಬಿಜೆಪಿಯು ಸಿದ್ರಾಮಯ್ಯನವರ ತಂಟೆಗೆ ಬರುವುದಿಲ್ಲ,ಕಾಂಗ್ರೆಸ್ ಪಕ್ಷವು ಸುಭದ್ರವಾಗಿರಬಹುದು,ನೆಮ್ಮದಿಯಿಂದ ಆಡಳಿತ ನಡೆಸಬಹುದು.

೨. ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮುಸ್ಲಿಮರು ತಮ್ಮ ಜನಾಂಗದ ಒಂದೇ ಒಂದು ಓಟು ಬಿಜೆಪಿ ಇಲ್ಲವೆ ಜೆಡಿಎಸ್ ಗೆ ಹೋಗದಂತೆ ಕಾಂಗ್ರೆಸ್ಸಿಗೆ ಮತಚಲಾಯಿಸಿದ್ದಾರೆ.ರಾಜ್ಯದ ಮುಸ್ಲಿಂ ಸಮುದಾಯ ಸಿದ್ರಾಮಯ್ಯನವರಲ್ಲಿ ತಮ್ಮ ಪಕ್ಷದ ಹಿತಕಾಯುವ ನಾಯಕನನ್ನು ಕಂಡಿದ್ದಾರೆಯೇ ಹೊರತು ಮುಸ್ಲಿಂ ಸಮುದಾಯವು ಡಿ.ಕೆ.ಶಿವಕುಮಾರ ಅವರಲ್ಲಿ ವಿಶ್ವಾಸ ಇರಿಸಿಲ್ಲ.ಯಾಕೆಂದರೆ ರಾಜ್ಯದಲ್ಲಿ ಮುಸ್ಲಿಂಸಮುದಾಯವು ಅಪಾಯದ ,ಆತಂಕದ ಸನ್ನಿವೇಶದಲ್ಲಿ ಇದ್ದ ಸಂದರ್ಭಗಳಲ್ಲೆಲ್ಲ ಸಿದ್ರಾಮಯ್ಯನವರು ಮುಸ್ಲಿಂ ಸಮುದಾಯದ ಬೆಂಬಲಕ್ಕೆ ನಿಂತಿದ್ದಾರೆ.ಡಿ.ಕೆ.ಶಿವಕುಮಾರ ಅವರು ಮುಸ್ಲಿಂಸಮುದಾಯದ ಪರ ನಿಲ್ಲುವ ಸಂದರ್ಭಗಳಲ್ಲಿ ‘ ಎಚ್ಚರಿಕೆಯ ಅಂತರ’ ಕಾಪಾಡಿಕೊಂಡಿದ್ದಾರೆ.ಮುಸ್ಲಿಮರು ದ್ವಿಮುಖ ನೀತಿಯನ್ನು ಅನುಸರಿಸುತ್ತಿದ್ದ ಮತ್ತು ಒಂದೊಮ್ಮೆ ಅಂತಂತ್ರಸ್ಥಿತಿ ಏರ್ಪಟ್ಟರೆ ಬಿಜೆಪಿಯೊಂದಿಗೆ ಕೈಜೋಡಿಸುವ ಪಕ್ಷ ಎನ್ನುವ ಕಾರಣದಿಂದಲೇ ಸಾರಾಸಗಟಾಗಿ ಜೆ ಡಿ ಎಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥಮಾಡಿಕೊಳ್ಳಬೇಕು.ಮುಸ್ಲಿಂ ಸಮುದಾಯದ ಪರ ನಿಲ್ಲದ ಡಿ.ಕೆ.ಶಿವಕುಮಾರ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದರೆ ಅದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಂತೆ.

೩. ಕುರುಬರು ಸೇರಿದಂತೆ ಕರ್ನಾಟಕದ ಹಿಂದುಳಿದ ವರ್ಗದವರೆಲ್ಲರೂ ಸಿದ್ರಾಮಯ್ಯನವರಲ್ಲಿಯೇ ತಮ್ಮ ನಾಯಕನನ್ನು ಕಂಡಿದ್ದಾರೆ.ಹಿಂದುಳಿದವರ್ಗದ ಜನಾಂಗವು ಸಿದ್ರಾಮಯ್ಯನವರಲ್ಲಿ ಸಂಶಯಾತೀತವಾದ ನಿಷ್ಠೆಯನ್ನಿರಿಸಿದೆ.ಸಿದ್ರಾಮಯ್ಯನವರು ಕುರುಬರ ನಾಯಕರು ಆದರೂ ಕೇವಲ ಕುರುಬರ ಹಿತ ಕಾಯದೆ ಎಲ್ಲ ಜನಾಂಗದ ಹಿತಕಾಯ್ದಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ಐದುವರ್ಷಗಳ ಅವಧಿಯಲ್ಲಿ ಕುರುಬ ಸಮುದಾಯದ ಯಾರೊಬ್ಬರನ್ನೂ ಸಚಿವರನ್ನಾಗಿ ಮಾಡಲಿಲ್ಲ.ಆದರೆ ಡಿ.ಕೆ.ಶಿವಕುಮಾರ ಅವರು ಒಕ್ಕಲಿಗರ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿದ್ದಾರೆಯೇ ಹೊರತು ಹಿಂದುಳಿದ ಎಲ್ಲ ಸಮುದಾಯಗಳ ನಾಯಕರು ಎಂದು ಗುರುತಿಸಿಕೊಂಡಿಲ್ಲ.

೪. ದಲಿತ ಸಮುದಾಯವು ಸಿದ್ರಾಮಯ್ಯನವರಲ್ಲಿ ಅಚಲ ವಿಶ್ವಾಸವನ್ನಿರಿಸಿದೆ.ಕನ್ನಡದ ಹೆಮ್ಮೆಯ ಸಾಹಿತಿ ದೇವನೂರು ಮಹಾದೇವ ಅವರು ಸಿದ್ರಾಮಯ್ಯನವರನ್ನು ಹೊಗಳಿ ಪತ್ರಿಕೆಗಳಿಗೆ ಲೇಖನ ಬರೆದದ್ದನ್ನು ಗಮನಿಸಬಹುದು.ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆದ ಕಾರಣದಿಂದ ದಲಿತಸಮುದಾಯದ ಓಟುಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿವೆ ಎಂದು ಕೆಲವರು ವಾದಿಸಬಹುದು,ಆದರೆ ಆ ವಾದವನ್ನು ಪುಷ್ಟೀಕರಿಸುವ ಬಲವಾದ ಸಾಕ್ಷಿಗಳಿಲ್ಲ. ಕರ್ನಾಟಕದ ಎಡಗೈ ದಲಿತರು ಇಂದಿಗೂ ಖರ್ಗೆ ಮತ್ತು ಅವರ ಕುಟುಂಬದ ಪರವಾಗಿ ಇಲ್ಲ.ಸ್ಪೃಶ್ಯ ಜಾತಿಯ ದಲಿತರು ಮಲ್ಲಿಕಾರ್ಜುನ ಖರ್ಗೆಯವರ ಹಿಂದೆ ಇಲ್ಲ.ಸಿದ್ರಾಮಯ್ಯನವರೊಬ್ಬರೇ ದಲಿತರೆಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋದ ನಾಯಕರು .ಸಿದ್ರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ದಲಿತ ಶಾಸಕರುಗಳಿಗೆ ಮಹತ್ವದ ಖಾತೆಗಳನ್ನು ನೀಡಿದ್ದರು.ಕ್ರಿಶ್ಚಿಯನ್ ಸಮುದಾಯದ ಜಾರ್ಜ್ ಅವರು ಗೃಹಖಾತೆಯನ್ನು ಹೊಂದಿದ್ದರೆ,ಡಾ. ಎಚ್.ಸಿ ಮಹಾದೇವಪ್ಪನವರು ಲೋಕೋಪಯೋಗಿಯಂತಹ ಭಾರೀಸಂಪನ್ಮೂಲದ ಖಾತೆಯನ್ನು ಹೊಂದಿದ್ದರು.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಇಚ್ಛಿಸಿದಷ್ಟು ಅನುದಾನವನ್ನು ಸಿದ್ರಾಮಯ್ಯನವರಿಂದ ಅವರ ಖಾತೆಗೆ ಪಡೆದುಕೊಂಡರು.ಆಂಜನೇಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗಲೂ ಸಿದ್ರಾಮಯ್ಯನವರು ಆಂಜನೇಯನವರ ಬೆಂಬಲಕ್ಕೆ ನಿಂತರು,ಆಂಜನೇಯ ಅವರನ್ನು ಆರೋಪಮುಕ್ತಗೊಳಿಸಿದರು.ಬಹುಶಃ ಡಾ. ಜಿ ಪರಮೇಶ್ವರ ,ಕೆ ಎಚ್ ಮುನಿಯಪ್ಪ ಅವರಂತಹ ಬೆರಳೆಣಿಕೆಯ ದಲಿತ ನಾಯಕರು ಡಿ.ಕೆ.ಶಿವಕುಮಾರ ಅವರ ಬೆಂಬಲಕ್ಕೆ ಇರಬಹುದಲ್ಲದೆ ದಲಿತ ಸಮುದಾಯದ ಬಹಳಷ್ಟು ಜನ ಶಾಸಕರು ಸಿದ್ರಾಮಯ್ಯನವರ ಪರವಾಗಿದ್ದಾರೆ.

೫. ಸಿದ್ರಾಮಯ್ಯನವರು ಕಾನೂನೂ ಪದವಿಧರರಾದರೂ ಆರ್ಥಿಕ ತಜ್ಞರಿಗೂ ಮಿಗಿಲಾದ ಅರ್ಥಶಾಸ್ತ್ರದಜ್ಞಾನವನ್ನು ಹೊಂದಿದ್ದಾರೆ.ಹದಿಮೂರು ಬಜೆಟ್ ಗಳನ್ನು ಮಂಡಿಸಿದ ಅನುಭವಹೊಂದಿರುವ ಸಿದ್ರಾಮಯ್ಯನವರು ಹಳಿತಪ್ಪಿದ ರಾಜ್ಯದ ಹಣಕಾಸು ಸ್ಥಿತಿಯನ್ನು ಸರಿಪಡಿಸಬಲ್ಲರು,ಕರ್ನಾಟಕವನ್ನು ಆರ್ಥಿಕತೆಯಿಂದ ಸುಭದ್ರರಾಜ್ಯವನ್ನಾಗಿ ಮಾಡಬಲ್ಲರು.ರಾಜ್ಯದ ಬೊಕ್ಕಸವು ಬರಿದಾಗದಂತೆ ಕಾಪಾಡಿಕೊಳ್ಳುವ ಆರ್ಥಿಕ ಶಿಸ್ತು,ಪ್ರಬುದ್ಧತೆಗಳು ಸಿದ್ರಾಮಯ್ಯನವರಲ್ಲಿವೆ.ಜೊತೆಗೆ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ ಐದು ಗ್ಯಾರಂಟಿಗಳನ್ನು ಕಾರ್ಯರೂಪಕ್ಕೆ ತರಬೇಕಾದರೆ ಕನಿಷ್ಟ ಹತ್ತುಲಕ್ಷಕೋಟಿಗೂ ಅಧಿಕ ಮೊತ್ತದ ಹಣಬೇಕು.ಸುಮಾರು ಮೂರು ಲಕ್ಷಕೋಟಿಗಳಷ್ಟಿರುವ ಕರ್ನಾಟಕದ ಬಜೆಟ್ ಗಾತ್ರದಿಂದ ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳನ್ನು ಈಡೇರಿಸಲು ಸಿದ್ರಾಮಯ್ಯನವರೇ ಮುಖ್ಯಮಂತ್ರಿ ಆಗಬೇಕು.

ದುಂದುವೆಚ್ಚದ ಪ್ರವೃತ್ತಿಯ ಡಿ.ಕೆ.ಶಿವಕುಮಾರ ಅವರು ಇಂಧನ ಸಚಿವರಾಗಿದ್ದಾಗ ರಾಜ್ಯದ ಬೊಕ್ಕಸಕ್ಕೆ ಭಾರೀ ಭಾರವನ್ನುಂಟು ಮಾಡಿದ್ದರು.ಅವರಿಗೆ ಆರ್ಥಿಕ ಔಚಿತ್ಯ ಸೂತ್ರಗಳಾಗಲಿ,ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವುದಾಗಲಿ ಗೊತ್ತಿಲ್ಲ.ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಗಳಾದರೆ ರಾಜ್ಯವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದು ನಿಶ್ಚಿತ.

೬. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ರಾಜಕೀಯ ಕಠಿಣಪರಿಸ್ಥಿತಿಯಲ್ಲಿ ಅಧಿಕಾರಕ್ಕೆ ಬರಲಿದೆ ಎನ್ನುವ ಕಟುವಾಸ್ತವವನ್ನು ಕಾಂಗ್ರೆಸ್ ಹೈಕಮಾಂಡ್ ಅರ್ಥಮಾಡಿಕೊಳ್ಳಬೇಕು.ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅಮಿತ್ ಶಾ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲ ರೀತಿಯ ಹೊಡೆತಕೊಡುತ್ತಾರೆ ಅವರ ಹೊಡೆತ,ಪಟ್ಟು- ಪೆಟ್ಟುಗಳನ್ನು ಎದುರಿಸಿ,ಸುಭದ್ರ ಸರ್ಕಾರ ನೀಡುವುದು ಸಿದ್ರಾಮಯ್ಯನವರೊಬ್ಬರಿಂದಲೇ ಸಾಧ್ಯ.ಸ್ವತಃ ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿ ಆದರೆ ನರೇಂದ್ರಮೋದಿ ಮತ್ತು ಅಮಿತ್ ಶಾ ಅವರಿಬ್ಬರ ತಂತ್ರಗಾರಿಕೆಯನ್ನು ಎದುರಿಸುವಲ್ಲಿ ಸೋಲುತ್ತಾರೆ.ಡಾ.ಜಿ.ಪರಮೇಶ್ವರ ಅವರ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಛೂ ಬಿಟ್ಟು ಕೇಂದ್ರಸರ್ಕಾರವು ಪರಮೇಶ್ವರ ಅವರನ್ನು ಕಟ್ಟಿಹಾಕಿದ ಪ್ರಸಂಗವು ರಾಜ್ಯದ ಕಾಂಗ್ರೆಸ್ ನಾಯಕರುಗಳಿಗೆ ತಿಳಿದಿರಬೇಕು.ಆಡಳಿತ,ಕಾನೂನು ವಿಷಯಗಳಲ್ಲಿ ಸಾಕಷ್ಟು ಪರಿಣತರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೇಂದ್ರದ ಬಿಜೆಪಿ ನಾಯಕರುಗಳು ಹಣ್ಣುಗಾಯಿ ನೀರುಗಾಯಿ ಮಾಡುತ್ತಿರುವಾಗ ಡಿ.ಕೆ.ಶಿವಕುಮಾರ ಅವರನ್ನು ಸುಮ್ಮನೆ ಬಿಡುತ್ತಾರೆಯೆ?

ರಾಜ್ಯದ ಹಿತವನ್ನು ಕಾಪಾಡಲು,ಕೇಂದ್ರದಲ್ಲಿ ರಾಜ್ಯದ ನಿಲುವನ್ನು ಒತ್ತಿಹಿಡಿಯಲು,ನೆರೆ ರಾಜ್ಯಗಳ ವಿಷಯದಲ್ಲಿ ರಾಜ್ಯದ ಹಿತಕಾಪಾಡಲು ಸಿದ್ರಾಮಯ್ಯನವರು ಮುಖ್ಯಮಂತ್ರಿ ಆಗುವುದೇ ಶ್ರೇಯಸ್ಕರ.

೭. ಕೊನೆಯದಾಗಿ ಮತ್ತು ಮಹತ್ವದ ಮಾತನ್ನು ಹೇಳಿ ನನ್ನ ವಾದಸರಣಿ ಮುಕ್ತಾಯಗೊಳಿಸುವೆ.ಡಿ.ಕೆ.ಶಿವಕುಮಾರ ಅವರಲ್ಲಿ ಮುಖ್ಯಮಂತ್ರಿ ಆಗುವ ಹೆಬ್ಬಯಕೆ ಇದೆಯೇ ಹೊರತು ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸುವ ,ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಮರ್ಥ ನಾಯಕತ್ವ ಅವರದಲ್ಲ.ಸಮಯ ಸಂದರ್ಭ ಬಂದಾಗ ಹೊಂದಾಣಿಕೆ ಮಾಡಿಕೊಳ್ಳುವ ಅವರು ವಿಷಮಪರಿಸ್ಥಿತಿಯಲ್ಲಿ ರಾಜ್ಯದ ಹಿತವನ್ನು ಎತ್ತಿಹಿಡಿಯಲಾರರು.ಡಿ.ಕೆ.ಶಿವಕುಮಾರ ಅವರು ಹಠಕ್ಕೆ ಬಿದ್ದು,ಹೈಕಮಾಂಡಿನ ಕೃಪಾಕಟಾಕ್ಷದಿಂದ ರಾಜ್ಯದ ಮುಖ್ಯಮಂತ್ರಿ ಆಗಬಹದು,ಆದರೆ ಬಹಳ ದಿನ ಸರಕಾರ ನಡೆಸುವುದಾಗಲಿ,ಕಾಂಗ್ರೆಸ್ ಪಕ್ಷದ ಶಾಸಕರುಗಳನ್ನೆಲ್ಲ ಒಟ್ಟಿಗೆ ಕರೆದೊಯ್ಯುವುದಾಗಲಿ,ಕರ್ನಾಟಕದ ಪ್ರಜಾಸಮಸ್ತರೆಲ್ಲರ ಹಿತಕಾಯುವುದಾಗಲಿ ಅವರಿಂದ ಸಾಧ್ಯವಿಲ್ಲ.

About The Author