ಬೆಂದ ಹೃದಯಕ್ಕೆ ನೆಮ್ಮದಿ ನೀಡುವ ಹಂಬಲ ಕವಿತೆಗಿದೆ – ಸಿದ್ಧರಾಮ ಹೊನಕಲ್

ಯಾದಗಿರಿ : ಸ್ನೇಹ ಪ್ರೀತಿಯ ವಿವಿಧ ಆಯಾಮಗಳನ್ನು ಕಾಣುವ ಪ್ರಯತ್ನದ ಜೊತೆಗೆ ಭಾವಲೋಕದಲ್ಲಿ ಕವಿಯ ಮನಸ್ಸು ಮೋಡಗಳಂತೆ ವಿಹರಿಸಿ ಮಳೆಗರೆದು ಬೆಂದ ಹೃದಯಕ್ಕೆ ನೆಮ್ಮದಿ ನೀಡುವ ಹಂಬಲ ಕಾವ್ಯಕ್ಕಿದೆ ಎಂದು ಹಿರಿಯ ಸಾಹಿತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಿದ್ಧರಾಮ ಹೊನಕಲ್ ಹೇಳಿದರು.

ಯಾದಗಿರಿ ನಗರ ದಲ್ಲಿರುವ ಲುಂಬಿನಿವನದ ಕೆರೆಯಂಗಳದಲ್ಲಿ ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ಆಯೋಜಿಸಿರುವ “ಸ್ನೇಹದ ಕಡಲಲ್ಲಿ ಕವಿಗೋಷ್ಠಿ” ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಾನು ಸಾಹಿತ್ಯ ಲೋಕದಲ್ಲಿ ಸುಮಾರು ನಲವತ್ತು ವರ್ಷಗಳ ಅನುಭವದ ಮೇಲೆ ಇಂಥ ಕವಿಗೋಷ್ಟಿ ಎಲ್ಲೂ ಕಂಡಿರಲಿಲ್ಲ ಇದೊಂದು ಹೊಸ ಅನುಭವ, ವಾಯುವಿಹಾರದ ಜೊತೆಗೆ ಸಾಮರಸ್ಯ ಸಾರುವ ಹಾಗೂ ಏಕತಾ ಮನೋಭಾವನೆ ಬೀರಿ ಸಮಾಜದಲ್ಲಿನ ಓರೆ ಕೋರೆಗಳು ತಿದ್ದುವುದರ ಮೂಲಕ ಹಲವಾರು ಕವಿಗಳು ಇಲ್ಲಿ ಕವನ ವಾಚಿಸಿದರು.

ಬಂಡಾಯ ಸಾಹಿತಿ ಹಾಗೂ ಚಿಂತಕ ಡಾ.ಗಾಳೆಪ್ಪ ಪೂಜಾರಿ ಮಾತನಾಡಿ ಬದುಕಿನ ಜಂಜಾಟವನ್ನು ಮರೆತು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುವುದೆ ನಮ್ಮ ಭಾಗ್ಯ,ಅಲ್ಲದೆ ಕಲ್ಯಾಣ ಕರ್ನಾಟಕದಲ್ಲಿ ಇದೊಂದು ವಿಶಿಷ್ಟ ವಿನೂತನ ಕಾರ್ಯಕ್ರಮ ಆಗಿರುವುದರಿಂದ ಟ್ರಸ್ಟ್ ನ ಕಾರ್ಯ ಶ್ಲಾಘನೀಯವಾದದ್ದು,ಅಲ್ಲದೆ ಇದೊಂದು ಹೊಸ ಅನುಭವದ ಜೊತೆಗೆ ಇನ್ನಿತರ ಕವಿಗೋಷ್ಠಿಗಳಿಗೆ ಇದೊಂದು ಮಾದರಿ ಕವಿಗೋಷ್ಟಿ ಎಂದೇ ಹೇಳಬಹುದು ಎಂದು ನುಡಿದರು.ಒಬ್ಬ ಕವಿಯ ಮನಸ್ಸು ಪ್ರಕೃತಿಯಂತೆ ಬಹಳ ವೈವಿಧ್ಯಮಯವಾದದ್ದು ಬ್ರಹ್ಮನೆದೆಯ ಕನಸುಗಳಂತೆ ಅಸಂಖ್ಯಾತ ಸಾಧ್ಯತೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಕವಿಗಳಲ್ಲಿ ಇರುತ್ತದೆ.ಅಂಥ ಅನೇಕ ಕವಿಗಳು ನಮ್ಮ ನಿಮ್ಮ ನಡುವೆ ಇದ್ದಾರೆ ಎಂದು ತಿಳಿಸಿದರು.

ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಾಸ್ತವಿಕವಾಗಿ ಮಾತನಾಡುತ್ತ ಪ್ರತಿಯೊಬ್ಬ ಕವಿ ಲೇಖಕ ತನ್ನೊಳಗಿನ ಬಾಹ್ಯ ಪ್ರಪಂಚವನ್ನು ಗ್ರಹಿಸಿಕೊಂಡು ತನ್ನ ಜೀವನದುದ್ದಕ್ಕೂ ತಾನು ಅನುಭವಿಸಿದ ಸಿಹಿ ಕಹಿ ಘಟನೆಗಳಿಗೆ ಸ್ಫೂರ್ತಿ ದೊರೆತಾಗ ಒಂದು ಕಾವ್ಯ ಸ್ವರೂಪದೊಂದಿಗೆ, ಲಯ ಪ್ರಾಸ ಗಳೊಂದಿಗೆ, ಅಭಿವ್ಯಕ್ತಿಗೊಳಿಸಿದಾಗ ಮಾತ್ರ ಅದು ಕವಿತೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.ನಮ್ಮ ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತಿರುವ ಯುವ ಕವಿ ಮನಸ್ಸುಗಳಿಗೆ ಪ್ರೇರಣೆ ಯಾಗಲಿ ಎಂಬ ಸದುದ್ದೇಶದಿಂದ ಇಂಥ ವಿನೂತನ ಮತ್ತು ವಿಶಿಷ್ಟ ಪ್ರಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಜೋಳ,ಅಕ್ಕಿ,ಸಜ್ಜೆ,ಜಲ ಚರಗಳಿಗೆ ಎರಚುವುದರ ಮುಖಾಂತರ ವಿಶೇಷವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕವಿಗಳಾದ ಗುರುಪ್ರಸಾದ ವೈದ್ಯ, ಶಂಕರ್ ಹುಲಕಲ್, ಬಿ.ಎನ್.ದೊಡ್ಡಮನಿ, , ದುರ್ಗಪ್ಪ ಪೂಜಾರಿ,ನಾನೆಗೌಡ ಚಂದಾಪೂರ,ಬಸವರಾಜ್ ಮಾನೆಗಾರ, ಶರಣಗೌಡ ಚಂದಾಪೂರ, ಸ್ವರಚಿತ ಕವನ ವಾಚಿಸಿದರು ಸಂಜು ಬೊಮ್ಮಣ್ಣಿ ಕಾಣದ ಕಡಲಿಗೆ,ಬೂದಯ್ಯ ಹಿರೇಮಠ ಆನಂದ ಪರಮಾನಂದ, ಮಹೇಶ್ ಶಿರವಾಳ ನಗುವಾ ನಯನಾ ಮಧುರಾ ಮೌನ’ಗೀತೆಗಳ ಹಾಡುವುದರ ಮುಖಾಂತರ ದೋಣಿಯ ವಾಯುವಿಹಾರದಲ್ಲಿ ಸಂಭ್ರಮಿಸಿದರ,ನೆರೆದಿದ್ದ ನೂರಾರು ಪ್ರೇಕ್ಷಕರ ಮನ ಸೆಳೆಯಿತು ಅಲ್ಲದೆ ಬೋಟ್ ಸಿಬ್ಬಂದಿ ಅಬ್ದುಲ್ ಹಾಗೂ ಇತರರು ಉಪಸ್ಥಿತರಿದ್ದರು.

About The Author