ಮೂರನೇ ಕಣ್ಣು : ಅಪ್ರಬುದ್ಧ ನಡೆ’ಗಳಿಂದಲೇ ಸುದ್ದಿಯಾಗುತ್ತಿರುವ ಕೆ.ಎಸ್.ಈಶ್ವರಪ್ಪ : ಮುಕ್ಕಣ್ಣ ಕರಿಗಾರ

ಕೆ.ಎಸ್.ಈಶ್ವರಪ್ಪನವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.ಈಶ್ವರಪ್ಪ ಯಾವಾಗಲೇ ಸುದ್ದಿಯಲ್ಲಿದ್ದರೂ ಅದು ಅವರ ವಿವಾದಾತ್ಮಕ,ಗೊಂದಲಕಾರಿ ನಡುವಳಿಕೆಗಳಿಂದ.ಈಗಲೂ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸುಡುವ ಮೂಲಕ ವಿವಾದದ ಕಿಡಿ ಹೊತ್ತಿಸಿ,ಸುದ್ದಿಯಲ್ಲಿದ್ದಾರೆ.ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ‘ ಬಜರಂಗದಳ ನಿಷೇಧ’ ಪ್ರಸ್ತಾಪವು ಈಶ್ವರಪ್ಪನವರನ್ನು ಕುದಿಯುವಂತೆ ಮಾಡಿತಂತೆ,ಸುಟ್ಟರಂತೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು !

ರಾಜಕೀಯ ಪಕ್ಷಗಳು ಪರಸ್ಪರ ಟೀಕಿಸಬಹುದು,ಪ್ರಣಾಳಿಕೆಗೆ ಪ್ರತಿ ಪ್ರಣಾಳಿಕೆ ತಯಾರಿಸಿ ಉತ್ತರಿಸಬಹುದು.ಆದರೆ ಒಂದು ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು ಮತ್ತೊಂದು ರಾಜಕೀಯ ಪಕ್ಷವು ಸುಡುವುದು ಪ್ರಬುದ್ಧ ನಡೆ ಎನ್ನಿಸಿಕೊಳ್ಳದು,ಪ್ರಜಾಪ್ರಭುತ್ವವನ್ನು ಗೌರವಿಸುವವರು ಇಂತಹ ಕೃತ್ಯಗಳನ್ನು ಎಸಗರು.ಈಶ್ವರಪ್ಪನವರಿಗೆ ಬಜರಂಗದಳ ನಿಷೇಧದ ಕಾಂಗ್ರೆಸ್ ಪ್ರಸ್ತಾವನೆಯ ಬಗ್ಗೆ ಸಿಟ್ಟು ಇದ್ದರೆ ಅದನ್ನು ಮತದಾರರ ಮುಂದೆ ಇಟ್ಟು ಬಜರಂಗದಳದ ರಕ್ಷಣೆಯ ಹೆಸರಿನಲ್ಲಿ ಮತಗಳನ್ನು ಪಡೆಯಲಿ.ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಪ್ರಚಾರಮಾಡಿ ಮತಗಳನ್ನು ಪಡೆಯಲಿ.ಆದರೆ ಬಜರಂಗದಳ ನಿಷೇಧದ ಪ್ರಸ್ತಾಪದ ಕಾರಣದಿಂದಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸುಟ್ಟ ಕೆ.ಎಸ್.ಈಶ್ವರಪ್ಪನವರ ನಡೆ ಸರಿಯಲ್ಲ,ಸಮರ್ಥನೀಯವೂ ಅಲ್ಲ.

ಬಿಜೆಪಿ ಪಕ್ಷದ ‘ ಅಬ್ಬರದ ಧ್ವನಿ’ ಗಳಲ್ಲಿ ಒಬ್ಬರಾಗಿರುವ ಈಶ್ವರಪ್ಪನವರು ಈ ಅಬ್ಬರದ ಆರ್ಭಟದಿಂದಾಗಿಯೇ ಇತರರೆದುರು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ.ಬಿಜೆಪಿಯಲ್ಲಿದ್ದುಕೊಂಡು’ ಹಿಂದುಳಿದ ವರ್ಗಗಳ ನಾಯಕ’ ನಾಗಿ ಬೆಳೆಯುವ ಎಲ್ಲ ಅವಕಾಶಗಳು ಅವರಿಗೆ ಇದ್ದವು.ಸಿದ್ರಾಮಯ್ಯನವರಿಗೆ ಪರ್ಯಾಯ ನಾಯಕನಾಗಿ ಬೆಳೆಯುವ ಅವಕಾಶವೂ ಅವರಿಗೆ ಇತ್ತು.ಆದರೆ ಅವರೆಂದೂ ಆ ಮಟ್ಟಕ್ಕೆ ಬೆಳೆಯಲಿಲ್ಲ.ತಮ್ಮ ‘ ಹಿಡಿತವಿಲ್ಲದ ನಾಲಿಗೆ’ ಯಿಂದಾಗಿಯೇ ಒಮ್ಮೊಮ್ಮೆ ಬಿಜೆಪಿಯ ವರಿಷ್ಠರೇ ತಲೆಚಚ್ಚಿಕೊಳ್ಳುವಂತಹ ಮುಜುಗರದ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದರು ಈಶ್ವರಪ್ಪ.

ಈಶ್ವರಪ್ಪನವರಿಗೆ ತಾವೊಬ್ಬ ಮಹಾನ್ ನಾಯಕನಾಗಿ ಬೆಳೆಯುವ ಮಹದಾಸೆ ಇರಲಿಲ್ಲ.ಸಮರ್ಥನಾಯಕತ್ವವನ್ನು ಬೆಳೆಸಿಕೊಳ್ಳುವತ್ತಲೂ ಅವರು ಆಲೋಚಿಸಲಿಲ್ಲ.ಪಕ್ಷ ಮತ್ತು ಆರ್ ಎಸ್ ಎಸ್ ನ ಮೇಲಿನ ಅಪಾರವಾದ ನಂಬಿಕೆಯಿಂದಲೇ ರಾಜಕೀಯಜೀವನವನ್ನು ರೂಪಿಸಿಕೊಂಡ ಕೆ.ಎಸ್.ಈಶ್ವರಪ್ಪ ಎಂದೂ ಬಿಜೆಪಿ ಮತ್ತು ಆರ್ ಎಸ್ ಎಸ್ ಗಳಾಚೆ ಯೋಚಿಸಲೇ ಇಲ್ಲ.ಬಿಜೆಪಿಯ ವರಿಷ್ಠರುಗಳು ಮತ್ತು ಆರ್ ಎಸ್ ಎಸ್ ನ ‘ ಹಿರಿಯರು’ ಈಶ್ವರಪ್ಪನವರನ್ನು ತಮ್ಮ ‘ ರಾಜಕೀಯದಾಳ’ ವಾಗಿ ಬಳಸಿದರೇ ಹೊರತು ಅವರನ್ನೊಬ್ಬ ಸಮರ್ಥ ನಾಯಕನನ್ನಾಗಿ ಬೆಳೆಸುವ ಪ್ರಯತ್ನ ಮಾಡಲಿಲ್ಲ.ಸಿದ್ರಾಮಯ್ಯನವರಿಗೆ ‘ಪರ್ಯಾಯ ನಾಯಕ’ ಎಂದು ಬಿಂಬಿಸಲು ಕುರುಬರ ಎಸ್.ಟಿ ಮೀಸಲಾತಿ ಹೋರಾಟದಲ್ಲಿ ಈಶ್ವರಪ್ಪನವರನ್ನು ಬಳಸಿಕೊಂಡ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಈಶ್ವರಪ್ಪ ಅತ್ತ ಕುರುಬರಿಗೂ ನಾಯಕರಾಗದಂತೆ ಇತ್ತ ಹಿಂದುಳಿದ ವರ್ಗಗಳ ನೇತಾರರಾಗದಂತೆ ನೋಡಿಕೊಂಡರು.ಸಿದ್ರಾಮಯ್ಯನವರಿಗೆ ಪರ್ಯಾಯ ನಾಯಕ ಎಂದು ಈಶ್ವರಪ್ಪನವರನ್ನು ಬಲೂನಿನಂತೆ ಉಬ್ಬಿಸಿದ ಬಿಜೆಪಿಯವರು ಪಕ್ಷನಿಷ್ಠೆ ಮತ್ತು ಆರ್ ಎಸ್ ಎಸ್ ನಲ್ಲಿ ದೇವರಿಗಿಂತಲೂ ಹೆಚ್ಚಿನಶ್ರದ್ಧೆಯನ್ನಿಟ್ಟಿದ್ದ ಈಶ್ವರಪ್ಪನವರನ್ನು ಮುಖ್ಯಮಂತ್ರಿ ಮಾಡದೆ ಅವರಿಗಿಂತ ಜೂನಿಯರ್ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕುಳ್ಳಿರಿಸಿದರು.ಅಷ್ಟೇ ಅಲ್ಲ ಹಿಂದೊಮ್ಮೆ ಉಪಮುಖ್ಯಮಂತ್ರಿ ಆಗಿದ್ದ ಈಶ್ವರಪ್ಪನವರ ಹಿರಿತನಕ್ಕೆ ಬೆಲೆಗೊಟ್ಟಾದರೂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಬಹುದಿತ್ತು.ಅದನ್ನೂ ಮಾಡಲಿಲ್ಲ,ಜೂನಿಯರ್ ಮುಖ್ಯಮಂತ್ರಿಯ ಎದುರು ಇಲಾಖೆಯ ಹಣಕಾಸು ಪ್ರಸ್ತಾವನೆಗಳಿಗಾಗಿ ಮಂಡಿಯೂರುವಂತಹ ದೈನ್ಯಸ್ಥಿತಿಯನ್ನು ತಂದಿಟ್ಟರು.ಈಶ್ವರಪ್ಪ ಆಗ ಪ್ರತಿಭಟಿಸಿದ್ದರೆ ಅವರಿಗೆ ಉಪಮುಖ್ಯಮಂತ್ರಿಯ ಜೊತೆಗೆ ಮಹತ್ವದ ಸಚಿವ ಖಾತೆಯಾದರೂ ಸಿಗುತ್ತಿತ್ತು.ಪ್ರತಿಭಟಿಸಲಿಲ್ಲ ಈಶ್ವರಪ್ಪ.

ತಮಗೆ ಅನ್ಯಾಯವಾದಾಗ ಮಾತ್ರ ಕುರುಬಸಮುದಾಯದತ್ತ ನೋಡುವ ಈಶ್ವರಪ್ಪ ಕುರುಬ ಸಮಾಜವನ್ನೂ ಬೆಳೆಸಲಿಲ್ಲ.ಸ್ವಜಾತಿಯ ಜನರನ್ನೇ ಬೆಳೆಸದ ಈಶ್ವರಪ್ಪ ಹಿಂದುಳಿದ ವರ್ಗದ ನಾಯಕರಾಗುವುದಾದರೂ ಹೇಗೆ? ಬಿಜೆಪಿಯ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಇಬ್ಬರೂ ಶಿವಮೊಗ್ಗ ಜಿಲ್ಲೆಯಿಂದಲೇ ಬಂದವರು,ಒಂದೇ ಕಾರಿನಲ್ಲಿ ಪಕ್ಷದ ಪ್ರಚಾರ ಪ್ರಾರಂಭಿಸಿ,ಪಕ್ಷವನ್ನು ಅಧಿಕಾರಕ್ಕೆ ತಂದವರು.ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪನವರಿಗೆ ಇರುವ ವರ್ಚಸ್ಸು,ಪ್ರಭಾವ ಈಶ್ವರಪ್ಪನವರಿಗೆ ಇಲ್ಲ.ಯಡಿಯೂರಪ್ಪ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿ ಬೆಳೆದರು,ಎಂತಹದೆ ಕಠಿಣ ಸಂದರ್ಭದಲ್ಲಿಯೂ ಲಿಂಗಾಯತಸಮುದಾಯ ಬೆನ್ನಹಿಂದಿರುವಂತೆ ಸಮುದಾಯವನ್ನು ಪೋಷಿಸಿದರು,ಬೆಳೆಸಿದರು.ಈಶ್ವರಪ್ಪ ಆ ಕೆಲಸ ಮಾಡಲಿಲ್ಲ.ತಾವು ಕುರುಬರ ಪ್ರಶ್ನಾತೀತ ನಾಯಕರಾಗದಿದ್ದರೂ ಸರಿಯೆ ಕುರುಬರ ಪ್ರಶ್ನಾತೀತ ನಾಯಕ ಮತ್ತು ಹಿಂದುಳಿದ ವರ್ಗಗಳ ಅಸ್ಮಿತೆ,ಸ್ವಾಭಿಮಾನದ ಸಂಕೇತವಾಗಿರುವ ಸಿದ್ರಾಮಯ್ಯನವರ ಬಗ್ಗೆ ಮೆದುಧೋರಣೆ ತಳೆದು,ಸುಮ್ಮನಿರುವ ಬದಲು ಸಿದ್ರಾಮಯ್ಯನವರನ್ನು ಬಾಯಿಗೆ ಬಂದಂತೆ ಟೀಕಿಸುತ್ತಿದ್ದರು.ಇದರಿಂದ ಕುರುಬರ ಕೆಂಗೆಣ್ಣಿಗೂ ಗುರಿಯಾದರು ಈಶ್ವರಪ್ಪ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸದಂತೆ ಸೂಚಿಸಿ ‘ ರಾಜಕೀಯ ವಿಶ್ರಾಂತಿ’ ಪಡೆಯಲು ನಿರ್ದೇಶಿಸಿದ ಬಿಜೆಪಿಯ ವಿರುದ್ಧ ತಿರುಗಿಬೀಳಬೇಕಿತ್ತು ಈಶ್ವರಪ್ಪ.ಅದನ್ನು ಪಕ್ಷದ ಆಣತಿ ಎಂದು ಒಪ್ಪಿಕೊಂಡ ಈಶ್ವರಪ್ಪ ಪ್ರಧಾನಮಂತ್ರಿ ನರೇಂದ್ರಮೋದಿಯವರು ದೂರವಾಣಿ ಕರೆಮಾಡಿ ‘ ಅಭಿನಂದನೆ’ಹೇಳಿದ್ದೇ ದೊಡ್ಡಸಾಧನೆ ಎಂಬಂತೆ ಹೇಳಿಕೊಂಡು ತಿರುಗುತ್ತಿದ್ದಾರೆ. ತಮಗೆ ಟಿಕೆಟ್ ನೀಡದೆ ಇದ್ದರೂ ಚಿಂತೆಯಿಲ್ಲ, ತಮ್ಮ ಮಗನಿಗಾದರೂ ಟಿಕೆಟ್ ನೀಡಲೇಬೇಕು ಎಂದು ಪಟ್ಟುಹಿಡಿಯುವ ವಿಚಾರವೂ ಅವರಿಗೆ ಹೊಳೆಯಲಿಲ್ಲ.ಯಡಿಯೂರಪ್ಪನವರ ಮಗ ವಿಜಯೇಂದ್ರರಿಗೆ ಯಡಿಯೂರಪ್ಪನವರು ಕಟ್ಟಿಬೆಳೆಸಿದ ಭದ್ರಕೋಟೆ ಶಿಕಾರಿಪುರವನ್ನೇ ಉಂಬಳಿಯಾಗಿ ನೀಡಿದ ಬಿಜೆಪಿ ಈಶ್ವರಪ್ಪನವರ ಮಗ ಕಾಂತೇಶ ಅವರಿಗೆ ಶಿವಮೊಗ್ಗ ನಗರ ಬೇಡ,ಬೇರೆ ಎಲ್ಲಿಯೂ ಟಿಕೆಟ್ ಸಿಗದಂತೆ ನೋಡಿಕೊಂಡರು.ಇದು ಈಶ್ವರಪ್ಪನವರು ಬಿಜೆಪಿ ಮತ್ತು ಆರ್ ಎಸ್ ಎಸ್ ನ ಮುಂದೆ ದಂಡವತ್ ಪ್ರಣಾಮ ಸಲ್ಲಿಸಿದ್ದಕ್ಕೆ ಸಿಕ್ಕ ಪ್ರತಿಫಲ.

ಮುಂದೆ ಏನೋ ಆಗಬಹುದು ಎನ್ನುವ ನಿರೀಕ್ಷೆಯಲ್ಲಿರುವ ಈಶ್ವರಪ್ಪ ಆರ್ ಎಸ್ ಎಸ್ ಮತ್ತು ಬಿಜೆಪಿಯ ಪ್ರಮುಖರಗಳನ್ನು ಒಲಿಸಿಕೊಳ್ಳಲು ಕಾಂಗ್ರೆಸ್ಸಿನ ಪ್ರಣಾಳಿಕೆ ಸುಡುವ ‘ ಘನಕಾರ್ಯ’ ಮಾಡಿರಬಹುದು.ಆದರೆ ಅವರು ನೆನಪಿನಲ್ಲಿಟ್ಟುಕೊಳ್ಳಬೇಕು,ಈ ಚುನಾವಣೆಯ ನಂತರ ಬಿಜೆಪಿಯವರಾಗಲಿ,ಆರ್ ಎಸ್ ಎಸ್ ನವರಾಗಲಿ ಈಶ್ವರಪ್ಪನವರತ್ತ ಸುಳಿದು ನೋಡುವುದೂ ಇಲ್ಲ.ಈಗಲಾದರೂ ಗಂಭೀರವಾಗಿ ಆಲೋಚಿಸಬೇಕಿದೆ ಈಶ್ವರಪ್ಪ.ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿಯಾದರೂ ಸಮಯಬಂದಾಗ ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಪರ ನಿಲ್ಲಬೇಕಿದೆ.ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಶ್ವರಪ್ಪನವರಿಗೂ ಬದಲಾವಣೆಯಾಗುವ ಅನಿವಾರ್ಯತೆಯು ಸೃಷ್ಟಿಯಾಗಲಿದೆ. ಬಿಜೆಪಿಯ ಖೆಡ್ಡಾಕ್ಕೆ ಬೀಳದೆ ಈಗಲೇ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕು ಕೆ.ಎಸ್.ಈಶ್ವರಪ್ಪ.

About The Author