ಮೂರನೇ ಕಣ್ಣು : ಭಾರಿ ಹೊರೆಯಾಗಲಿರುವ ಎಲ್ಲರನ್ನೂ ಸಂತೃಪ್ತಗೊಳಿಸಲಿಚ್ಛಿಸುವ ‘ ಸರ್ವಜನಾಂಗದ ಶಾಂತಿಯ ತೋಟ’ ಎನ್ನುವ ಕಾಂಗ್ರೆಸ್ ಪ್ರಣಾಳಿಕೆ : ಮುಕ್ಕಣ್ಣ ಕರಿಗಾರ

ಕಾಂಗ್ರೆಸ್ ಪಕ್ಷವು ‘ ಸರ್ವಜನಾಂಗದ ಶಾಂತಿಯ ತೋಟ ಇದುವೇ ಕಾಂಗ್ರೆಸ್ಸಿನ ಬದ್ಧತೆ’ ಎನ್ನುವ ಘೋಷವಾಕ್ಯದಡಿ ನಿನ್ನೆ ೨೦೨೩ ರ ವಿಧಾನಸಭಾ ಚುನಾವಣೆಗಳ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.ಕಾಂಗ್ರೆಸ್ ಪಕ್ಷವು ಇದುವರೆಗೂ ನೀಡಿದ ಆರು ಗ್ಯಾರಂಟಿಗಳೊಂದಿಗೆ ನೂರಾರು ಆಕರ್ಷಕ ಭರವಸೆಗಳನ್ನು ಈ ಪ್ರಣಾಳಿಕೆಯಲ್ಲಿ ನೀಡಲಾಗಿದೆ.ಎಲ್ಲ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಪಕ್ಷವು ಈ ಪ್ರಣಾಳಿಕೆಯನ್ನು ರೂಪಿಸಿದೆ .ಇತ್ತೀಚಿನ ವರ್ಷಗಳಲ್ಲಿ ಇಂತಹ ‘ ಅತ್ಯಾಕರ್ಷಕ ಭರವಸೆಗಳ ಪ್ರಣಾಳಿಕೆ’ ಇರಲಿಲ್ಲ ಎನ್ನುವ ಅಗ್ಗಳಿಕೆ ಪಡೆಯುವಂತೆ ರೂಪಿಸಿರುವ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಏಕಮಾತ್ರ ಉದ್ದೇಶವೇ ಮುಖ್ಯವಾಗಿದೆಯೇ ಹೊರತು ಆರ್ಥಿಕ ಶಿಸ್ತು,ಸಮತೋಲನಗಳಿಗೆ ಅವಕಾಶವಿಲ್ಲ. ಅನುಷ್ಠಾನ ಸಾಧ್ಯವಲ್ಲದ ಭರವಸೆಗಳ ವರ್ಷಧಾರೆಯನ್ನೇ ಕರೆದಿದೆ ಕಾಂಗ್ರೆಸ್ ಪಕ್ಷ ಎಲ್ಲ ಜಾತಿ,ವರ್ಗಗಳ ಮತಗಳನ್ನು ತನ್ನತ್ತ ಸೆಳೆಯಲು.

ಕಾಂಗ್ರೆಸ್ಸಿನ ಆರು ಗ್ಯಾರಂಟಿಗಳನ್ನು ಈಡೇರಿಸಲೇ ಒಂದು ಲಕ್ಷಕೋಟಿಗಳಿಗೂ ಮಿಗಿಲು ಹಣಬೇಕು.ಈಗ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಗಮನಿಸಿದರೆ ಅವುಗಳನ್ನು ಈಡೇರಿಸಲು ಕನಿಷ್ಠ ಹತ್ತುಲಕ್ಷಕೋಟಿಗಳ ಹಣಬೇಕು.ಎರಡು ಲಕ್ಷ ಕೋಟಿಗಳ ಆಸುಪಾಸಿನಲ್ಲಿರುವ ಕರ್ನಾಟಕದ ಬಜೆಟ್ ಗಾತ್ರಕ್ಕೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯು ಬಹುದೊಡ್ಡ ಹೊರೆ,ತೆರಿಗೆದಾರರ ಹೆಗಲುಗಳ ಮೇಲೆ ಹೊರಲಾರದ ಭಾರಹೊರಿಸುವ ಕಸರತ್ತು.ಎಲ್ಲರನ್ನು ಸಂತೃಪ್ತಗೊಳಿಸುವ ಈ ಪ್ರಣಾಳಿಕೆಯಲ್ಲಿ ಹತ್ತುಹಲವು ಅನವಶ್ಯಕ ಖರ್ಚಿನ ಘೋಷಣೆಗಳಿವೆ,ಜಾತಿ ಮತಗಳ ತುಷ್ಟೀಕರಣದ ಘೋಷಣೆಗಳಿವೆ,ಕಾನೂನು ತೊಡಕುಳ್ಳ ಈಡೇರಿಸಲಾಗದ ಭರವಸೆಗಳಿವೆ.ಕುಬೇರನ ಭಂಡಾರವನ್ನೇ ಪಡೆದವರಂತೆ ವರ್ತಿಸಿರುವ ಕಾಂಗ್ರೆಸ್ ನಾಯಕರು ಘೊಷಿಸಿರುವ ಪಕ್ಷದ ಚುನಾವಣಾ ಪ್ರಣಾಳಿಕೆ ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಆರ್ಥಿಕ ಶಿಸ್ತುಆಗಲಿ,ವಿವೇಕವಾಗಲಿ ಇಲ್ಲ.

‘ ಒಬ್ಬ ವಿವೇಕಯುತ ವ್ಯಕ್ತಿ ತನ್ನ ಮನೆಗಾಗಿ ಹೇಗೆ ವೆಚ್ಚ ಮಾಡುತ್ತಾನೋ ಹಾಗೆಯೇ ಸಾರ್ವಜನಿಕ ಸಂಪತ್ತನ್ನು ಬಳಸಬೇಕು’ ಎನ್ನುವುದು ಆರ್ಥಿಕ ಔಚಿತ್ಯದ ನಿಯಮಗಳಲ್ಲಿ ಒಂದು.ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಗಮನಿಸಿದಾಗ ಅಂತಹ ಯಾವ ಆರ್ಥಿಕ ಔಚಿತ್ಯವನ್ನಾಗಲಿ ವಿವೇಕವನ್ನಾಗಲಿ ಪ್ರದರ್ಶಿಸದೆ ಕೇವಲ ಅಧಿಕಾರಕ್ಕೆ ಬರಬೇಕು ಎನ್ನುವ ಮಹದಾಸೆಯಿಂದ ರೂಪಿಸಿದ ಪ್ರಣಾಳಿಕೆ‌ ಎನ್ನುವುದು ಸ್ಪಷ್ಟವಾಗುತ್ತದೆ.’ ಯಾರಪ್ಪನ ಗಂಟೋ ಯಲ್ಲಮ್ಮ ಜಾತ್ರೆ’ ಎಂಬಂತೆ ಆರ್ಥಿಕ ಅಪವ್ಯಯದ ಯೋಜನೆಗಳು,ಕಾರ್ಯಕ್ರಮಗಳನ್ನು ಪ್ರಣಾಳಿಕೆಯನ್ನಾಗಿ ಘೋಷಿಸಿರುವ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯ ಭರವಸೆಗಳ ಈಡೇರಿಕೆಗಾಗಿ ಹಣಕ್ಕಾಗಿ ಕಂಡವರ ಮುಂದೆ‌ಕೈಯೊಡ್ಡಿ ರಾಜ್ಯವನ್ನು ದಿವಾಳಿಸ್ಥಿತಿಗೆ ತರುವ ಅನಿವಾರ್ಯತೆ ಎದುರಾಗಲಿದೆ.ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ತುಷ್ಟೀಕರಣನೀತಿಗಾಗಿ ಬಹುದೊಡ್ಡ ಹೊರೆ ಹೊರಬೇಕಾಗುತ್ತದೆ.ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಮಹದಾಸೆಯೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಾಗಿ ಹೊರಹೊಮ್ಮಿದೆ.ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ಕರ್ನಾಟಕದ ಬಜೆಟ್ ನಿಂದ ಖಂಡಿತ ಸಾಧ್ಯವಿಲ್ಲ. ಒಂದೋ ದೇವತೆಗಳು ‘ ಹೊನ್ನಿನ ಮಳೆ ಕರೆಯಬೇಕು’ ಇಲ್ಲವೆ ವಿಶ್ವಬ್ಯಾಂಕ್,ಐಎಂಎಫ್ ನಂತಹ ಜಾಗತಿಕ ಹಣಕಾಸು ಸಂಸ್ಥೆಗಳು ಸಾವಿರಾರು ಕೋಟಿಗಳ ಅನುದಾನ ನೀಡಬೇಕು.ಇವೆರಡೂ ಅಸಂಭವವಾದುದರಿಂದ ಕರ್ನಾಟಕದ ಜನರೇ ಕಾಂಗ್ರೆಸ್ ಪಕ್ಷದ ಲಗಾಮು ಇಲ್ಲದ ಓಟದ ಕುದುರೆಯನ್ನು ಮೇಯಿಸುವಹೊಣೆ ಹೊರಬೇಕಿರುವುದರಿಂದ ಮತದಾರರು ಎಚ್ಚರಿಕೆಯಿಂದ ಮತಚಲಾಯಿಸಬೇಕಿದೆ.

ಎಲ್ಲರನ್ನೂ ಸಂತೃಪ್ತಗೊಳಿಸಬಯಸುವ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕಾರ್ಯಸಾಧುವಲ್ಲದ ಭರವಸೆಗಳನ್ನು ನೀಡಿದೆ,ಯಾರದೋ ಉದ್ಧಾರಕ್ಕೆ ತೆರಿಗೆದಾರರು ಭಾರಹೊರುವಂತಹ ಕಾರ್ಯಕ್ರಮಗಳೇ ಹೆಚ್ಚು ಉಳ್ಳ ‘ ಸರ್ವಜನಾಂಗದ ಶಾಂತಿಯ ತೋಟದ ‘ ಕಾಂಗ್ರೆಸ್ ಪಕ್ಷದ ಅಧಿಕಾರದಾಹಕ್ಕೆ ಬಡಮಧ್ಯಮ ವರ್ಗದ ತೆರಗೆದಾರರು ಬಲಿಯಾಗಬಾರದು.ಮೀನು ಹಿಡಿದು ಬದುಕುವುದನ್ನು ಕಲಿಸದ ರಾಜಕೀಯ ಪಕ್ಷವು ಮೀನನ್ನು ಬಾಯೊಳಗಿಡುತ್ತ ಜನರ ದುಡಿಮೆಯ ಸಂಸ್ಕೃತಿಯನ್ನು ಹಾಳು ಮಾಡುತ್ತದೆ,ಜನರು ಸ್ವಾವಲಂಬಿಗಳಾಗಿ,ಸ್ವಾಭಿಮಾನದಿಂದ ಬದುಕದಂತಹ ಪರಾವಲಂಬಿ ಬದುಕಿನ ಅನಿವಾರ್ಯತೆಗೆ ತಳ್ಳುತ್ತದೆ.

‌ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 15000 ಕ್ಕೆ ಹೆಚ್ಚಿಸುವ,ಮಿನಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 10,000 ರೂಪಾಯಿಗಳಿಗೆ ಹೆಚ್ಚಿಸುವುದು,2 ಲಕ್ಷ ರೂಪಾಯಿಗಳ ವಿಶ್ರಾಂತಿ ವೇತನ ನೀಡುವುದು,ಆಶಾ ಕಾರ್ಯಕರ್ತೆಯರ ಗೌರವಧನ 8000 ರೂಪಾಯಿಗಳಿಗೆ ಏರಿಸುವುದು,ಬಿಸಿಯೂಟದ ನೌಕರರ ಮಾಸಿಕಗೌರವಧನವನ್ನು 6000 ರೂಪಾಯಿಗಳಿಗೆ ಏರಿಸುವುದು,ಎಲ್ಲ ಪೋಲೀಸರಿಗೆ ಒಂದು ತಿಂಗಳ ಹೆಚ್ಚುವರಿ ವೇತನ,ರಾತ್ರಿಪಾಳಿಯ ಸಿಬ್ಬಂದಿಗೆ 5000 ರೂಪಾಯಿಗಳ ವಿಶೇಷವೇತನದಂತಹ ವೆಚ್ಚಗಳು ಆ ಸಿಬ್ಬಂದಿವರ್ಗದ ಜೀವನ ನಿರ್ವಹಣೆಗೆ ಅವಶ್ಯಕವಿರುವುದರಿಂದ ಒಪ್ಪಬಹುದು.ಆದರೆ ರಾಜ್ಯದಲ್ಲಿ ಖಾಲಿ ಇರುವ ಎಲ್ಲಾ ಸರಕಾರಿ ಹುದ್ದೆಗಳನ್ನು ಭರ್ತಿಮಾಡುವುದಾಗಲಿ,ಗುತ್ತಿಗೆ ನೌಕರರುಗಳನ್ನು ಖಾಯಂಗೊಳಿಸುವುದಾಗಲಿ ಸಾಧ್ಯವಾಗದ ಕಾರ್ಯಗಳು.ಡಿ.ಕೆ.ಶಿವಕುಮಾರ ಅವರು ಇತ್ತೀಚೆಗೆ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಭಾಗವಾಗಿರಲಿದೆ ಎಂದು ಹೇಳಿದ್ದರು.ಆದರೆ ಪ್ರಣಾಳಿಕೆಯಲ್ಲಿ ಆ ಪ್ರಸ್ತಾಪ ಇಲ್ಲ.ನೂರಾರು ಅನಗತ್ಯ ಹಾಗೂ ಅನುತ್ಪಾದಕ ಭರಸೆಗಳನ್ನು ನೀಡುವ ಬದಲು ‘ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಭರವಸೆ ನೀಡಿದ್ದರೆ ರಾಜ್ಯದ ಸುಮಾರು ಏಳುಲಕ್ಷ ಸರಕಾರಿ ನೌಕರರ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿದ್ದವು.

ಕರ್ನಾಟಕದ ಮತದಾರರು ತಾವು ನೀಡುವ ಮತ ತಮಗೇ ಆರ್ಥಿಕ ಹೊರೆಯಾದಂತೆ ಎಚ್ಚರಿಕೆ ವಹಿಸುವ ಅನಿವಾರ್ಯತೆಯನ್ನು ತಂದಿಟ್ಟಿದೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ.ಸರ್ವರ ಕಲ್ಯಾಣ ಸಾಧಿಸುವ ನೆಪದಲ್ಲಿ ಬಡವರು,ಮಧ್ಯಮವರ್ಗದವರು,ಜನಸಾಮಾನ್ಯರ ದುಡಿಮೆಯಲ್ಲಿ ಹೆಚ್ಚುವರಿ ತೆರಿಗೆಯನ್ನು ಹೊರಿಸಲಿರುವ ಕಾಂಗ್ರೆಸ್ ಪ್ರಣಾಳಿಕೆಯು ಆ ಪಕ್ಷದ ನಾಯಕರುಗಳ ರಾಜಕೀಯ ಮಹತ್ವಾಕಾಂಕ್ಷೆಯ ಪ್ರತಿಬಿಂಬವೇ ಹೊರತು ರಾಜ್ಯದ ಜನತೆಯ ಹಿತವನ್ನು ಲಕ್ಷ್ಯದಲ್ಲಿರಿಸಿಕೊಂಡ ದೂರದೃಷ್ಟಿಯ ಪ್ರಣಾಳಿಕೆಯಲ್ಲ !

‌‌ ೦೩.೦೫.೨೦೨೩

About The Author