ಮೂರನೇ ಕಣ್ಣು : ಮಸ್ಕಿಯ ಮಲ್ಲಿಕಾರ್ಜುನ ದೇವಸ್ಥಾನದ ಉಬ್ಬುಚಿತ್ರಕ್ಕೂ ಈಶೋಪನಿಷತ್ತಿಗೂ ಎತ್ತಣ ಸಂಬಂಧ ? : ಮುಕ್ಕಣ್ಣ ಕರಿಗಾರ

ಸುಧಾ’ ವಾರಪತ್ರಿಕೆಯ ಮೇ 4 ರ ಸಂಚಿಕೆಯನ್ನು ಓದುತ್ತಿದ್ದೆ.ಸಂಚಿಕೆಯಲ್ಲಿನ ನಿಮ್ಮ ಪುಟದಲ್ಲಿ ( ಪುಟ 54)ಪ್ರಕಟಗೊಂಡಿದ್ದ ‘ ಎನ್ ಸಿ ಇ ಆರ್ ಟಿ ಲಾಂಛನ ರಾಯಚೂರಿನದ್ದು’ ಎನ್ನುವ ಈರಣ್ಣ ಬೆಂಗಾಲಿಯವರ ಪುಟ್ಟ ಲೇಖನ ಕುತೂಹಲ ಕೆರಳಿಸಿತು,ಓದಿದೆ.ರಾಯಚೂರು ಜಿಲ್ಲೆಯ ಹಿರಿಮೆ – ಗರಿಮೆಗಳನ್ನು ಮಸ್ಕಿಯ ಅಶೋಕನ ಶಿಲಾಶಾಸನ ಮತ್ತು ಎರಡನೇ ಶ್ರೀಶೈಲ ಎಂದು ಖ್ಯಾತಿಗೊಂಡ ಮಸ್ಕಿಯ ಮಲ್ಲಿಕಾರ್ಜುನ ದೇವಸ್ಥಾನಗಳ ಬಗೆಗಿನ ವಿವರಗಳನ್ನು ಓದಿದೆ.ಆ ದೇವಸ್ಥಾನದ ಮೂರುಮುಖಗಳ ಹಂಸದ ಶಿಲ್ಪಕಲೆಯನ್ನು ಎನ್ ಸಿ ಆರ್ ಟಿ ಯು ತನ್ನ ಲಾಂಛನವನ್ನಾಗಿ ಬಳಸಿದೆ ಎನ್ನುವ ಈರಣ್ಣ ಬೆಂಗಾಲಿಯವರ ಲೇಖನವನ್ನು ಓದಿ,ಹರ್ಷಿತನಾದೆ.ನಮ್ಮ ಹೆಮ್ಮೆಯ ರಾಯಚೂರು ಜಿಲ್ಲೆಯ ಬಗ್ಗೆ ಅವರಷ್ಟೇ ಸಂತಸಾಭಿಮಾನಗಳು ನನ್ನಲ್ಲಿ ಉಂಟಾದವು.ಆದರೆ ಇದೇ ಪುಟ್ಟ ಪರಿಚಯಾತ್ಮಕ ಲೇಖನದಲ್ಲಿ ಈರಣ್ಣ ಬೆಂಗಾಲಿವರು ಬರೆದ ‘ ಈಶೋಪನಿಷತ್ತಿನಲ್ಲಿ ಈ ಲಾಂಛನದ ಬಗ್ಗೆ ಉಲ್ಲೇಖವಿದ್ದು’ ಎನ್ನುವ ಮಾತುಗಳನ್ನು ಮಾತ್ರ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.ರಾಯಚೂರು ಜಿಲ್ಲೆಯ ಬಗ್ಗೆ ಅತೀವ ಅಭಿಮಾನ ಹೊಂದಿರುವ ಈರಣ್ಣ ಬೆಂಗಾಲಿಯವರು ಯಾರೋ ಅಪಕ್ವಮತಿಗಳು ಬರೆದ ಪುಸ್ತಕವನ್ನು ಆಧರಿಸಿ ಈ ಮಾತುಗಳನ್ನು ಹೇಳಿರಬೇಕು.ಇದು ಸರಿಯಲ್ಲ.ಈಶೋಪನಿಷತ್ತಿಗೂ ಮಸ್ಕಿಯ ಮಲ್ಲಿಕಾರ್ಜುನ ದೇವಸ್ಥಾನದ ಗೋಡೆಯ ಮೇಲಿರುವ ಮೂರುಮುಖಗಳ ಹಂಸದ ಉಬ್ಬುಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಮತ್ತು ಈಶೋಪನಿಷತ್ತಿನಲ್ಲಿ ಇದರ ಉಲ್ಲೇಖವೂ ಇಲ್ಲ.ಈರಣ್ಣ ಬೆಂಗಾಲಿಯವರು ತಮ್ಮ ಅಭಿಪ್ರಾಯವನ್ನು ಸರಿಪಡಿಸಿಕೊಳ್ಳಬೇಕಿದೆ.

ವೇದದ ಅರ್ಥವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಲು ಅನುಕೂಲವಾಗುವಂತೆ ಸರಳವಾಗಿ ರಚಿಸಿದ ತಾತ್ತ್ವಿಕ ವಿವರಣೆ ನೀಡುವ ಕೃತಿಗಳೇ ಉಪನಿಷತ್ತುಗಳು.ಗುರು ಶಿಷ್ಯರ ನಡುವೆ ನಡೆಯುವ ಸಂಭಾಷಣೆಯ ರೂಪದಲ್ಲಿರುವ ಉಪನಿಷತ್ತುಗಳು ಋಷಿಗಳ ಆಶ್ರಮ ಜೀವನವನ್ನು ನೆನಪಿಸುತ್ತವೆ.ಉಪನಿಷತ್ತುಗಳು ಮೊದಲು ಹತ್ತು ಇದ್ದವು.ಅವುಗಳನ್ನು ‘ ದಶೋಪನಿಷತ್’ ಎಂದು ಕರೆದರು.ನಂತರ ಉಪನಿಷತ್ತುಗಳ ಸಂಖ್ಯೆ ಬೆಳೆಯುತ್ತ ೧೦೮ ಆಗಿ ಈಗ ಇತ್ತೀಚಿನವರೂ ಬರೆದ ಉಪನಿಷತ್ತುಗಳು ಸೇರಿ ಇನ್ನೂರಕ್ಕು ಹೆಚ್ಚು ಉಪನಿಷತ್ತುಗಳಿವೆ.ಇತ್ತೀಚಿನ ರಚನೆಗಳು ಉಪನಿಷತ್ತುಗಳ ತತ್ತ್ವಕ್ಕೆ ವಿರುದ್ಧವಾಗಿರುವುದರಿಂದ ಅವುಗಳು ಪ್ರಮಾಣ ಎಂದು ಹೇಳಲಾಗುವುದಿಲ್ಲ.ಭಾರತೀಯರು ಮೊದಲಿನಿಂದಲೂ ದಶೋಪನಿಷತ್ತುಗಳು ವೇದಾರ್ಥದ ಮೂಲ ಉಪನಿಷತ್ತುಗಳು ಎಂದು ಒಪ್ಪಿ,ಅವುಗಳನ್ನು ಪ್ರಮಾಣ ಎಂದು ಸ್ವೀಕರಿಸಿದ್ದರು.ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ‘ ತಾನು ಗೋವಳನೆಂದೂ ದಶೋಪನಿಷತ್ತುಗಳೇ ಗೋವುಗಳು’ ಎಂದು ಹೇಳಿದ್ದನ್ನು ಗಮನಿಸಬಹುದು.ಅಂದರೆ ಮಹಾಭಾರತದ ಕಾಲದವರೆಗೆ ದಶೋಪನಿಷತ್ತುಗಳೇ ಪ್ರಾಧಾನ್ಯ ಪಡೆದಿದ್ದವು.ಕೃಷ್ಣನು ತಾನು ಗೋಪಾಲನಾಗಿ ದಶೋಪನಿಷತ್ತುಗಳೆಂಬ ಹಸುಗಳಿಂದ ಕರೆದ ತತ್ತ್ವಾಮೃತವೇ ಗೀತೆ ಎನ್ನುತ್ತಾನೆ.ದಶೋಪನಿಷತ್ತುಗಳಲ್ಲಿ ಮೊದಲನೆಯದೇ ಈಶೋಪನಿಷತ್ತು.ಈಶ,ಕೇನ,ಕಠ,ಪ್ರಶ್ನ,ಮುಂಡಕ,ಮಾಂಡೂಕ್ಯ,ತೈತ್ತೀರಿ,ಐತರೇಯ,ಛಾಂದೋಗ್ಯ ಮತ್ತು ಬೃಹದಾರಣ್ಯಕೋಪನಿಷತ್ತುಗಳೇ ದಶೋಪನಿಷತ್ತುಗಳು.ಶಂಕರಾಚಾರ್ಯರು ಸಹ ಈ ದಶೋಪನಿಷತ್ತುಗಳ ಪ್ರಾಮಾಣ್ಯ ಒಪ್ಪಿ ಇವುಗಳನ್ನು ಅರ್ಥೈಸಿ ಅದ್ವೈತ ಸಿದ್ಧಾಂತ ಮಂಡಿಸಿದ್ದಾರೆ.

ವೇದ ಸಾಹಿತ್ಯವು ವಿಶ್ವದ ಅತಿಪುರಾತನ ಸಾಹಿತ್ಯವಾಗಿದ್ದು ಅವುಗಳ ರಚನೆಯ ಕಾಲವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ.ವೇದದ ಅರ್ಥವಿವರಣೆ ನೀಡಲು ಬಂದ ಉಪನಿಷತ್ತುಗಳಿಗೂ ವೇದಗಳಿಗೂ ಏನಿಲ್ಲವೆಂದರೂ ಒಂದು ಸಾವಿರ ವರ್ಷಗಳ ಅಂತರವಿದೆ.ವೇದದಲ್ಲಿ ಯಜ್ಞವು ಪ್ರಧಾನ ತತ್ತ್ವವಾದರೆ ಓಂ ಕಾರವು ಉಪನಿಷತ್ತುಗಳ ಕಾಲದ ಋಷಿಗಳ ದರ್ಶನ.ವೇದಗಳಲ್ಲಾಗಲಿ,ಉಪನಿಷತ್ತುಗಳಲ್ಲಾಗಲಿ ದೇವಾಲಯ ನಿರ್ಮಾಣದ ಬಗ್ಗೆ ವಿವರಣೆಗಳಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.ವೇದದ ಕಾಲದಲ್ಲಿ,ದಶೋಪನಿಷತ್ತುಗಳ ಕಾಲದಲ್ಲಾಗಲಿ ವಿಗ್ರಹರಾಧನೆ ಅಥವಾ ಮೂರ್ತಿಪೂಜೆ ಇರಲಿಲ್ಲ.ಋಷಿಗಳು ಏಕಮೇವಾದ್ವಿತೀಯವಾದ ಪರಬ್ರಹ್ಮನನ್ನು ಉಪಾಸಿಸಿದರು.ಕ್ರಿ.ಶ ಪೂರ್ವ 5 ಮತ್ತು 6 ನೇ ಶತಮಾನದಲ್ಲಿದ್ದ ಗುಪ್ತದೊರೆಗಳು ಮತ್ತು ಅವರ ಸಾಮಂತ ಅರಸರುಗಳ ಕಾಲದಲ್ಲಿ ‘ಪುರಾಣಯುಗ’ ವು ಪ್ರಾರಂಭವಾಗಿ ಪುರಾಣಗಳ ರಚನೆ ಪ್ರಾರಂಭವಾಯಿತು.ಪುರಾಣಗಳ ಕಾಲಘಟ್ಟದಲ್ಲಿ ದೇವಾಲಯಗಳ ಪರಿಕಲ್ಪನೆ ಮೂಡಿತು,ಶಿಲ್ಪಶಾಸ್ತ್ರ,ವಾಸ್ತುಕಲೆ ಮೊದಲಾದವು ಗುಪ್ತರ ಕಾಲದ ಕೊಡುಗೆಗಳು.ಅದಕ್ಕೂ ಮುಂಚೆ ದೇವಾಲಯಗಳಿರಲಿಲ್ಲ,ಶಿಲ್ಪಕಲೆಯೂ ಇರಲಿಲ್ಲ.ಶಿಲಾಶಾಸನಗಳು ಅರಸರುಗಳ ದಿಗ್ವಿಜಯದ ವಿವರಗಳನ್ನುಳ್ಳ ಬರಹಗಳಾಗಿದ್ದು ಅಶೋಕನಿಂದಲೇ ಶಿಲಾಶಾಸನಗಳನ್ನು ಬರೆಸುವ ಪದ್ಧತಿ ಮೊದಲಾಯಿತು.ಭಾರತದ ಬಹುಭಾಗವು ಅಶೋಕನ ಆಡಳಿತಕ್ಕೆ ಒಳಪಟ್ಟಿದ್ದುದರಿಂದ ದೇಶದಾದ್ಯಂತ ಅಶೋಕನ ಶಿಲಾಶಾಸನಗಳನ್ನು ಗುರುತಿಸಬಹುದು.ಅಶೋಕನ ಇತಿಹಾಸವನ್ನು ರಚಿಸುವಲ್ಲಿ ಬ್ರಹ್ಮಗಿರಿಯ ಶಾಸನ ಮತ್ತು ಮಸ್ಕಿಯ ಶಿಲಾಶಾಸನಗಳು ಮಹತ್ವವನ್ನು ಪಡೆದುಕೊಂಡಿವೆ.ಅಶೋಕನನ್ನು ‘ ದೇವಾನಾಂಪ್ರಿಯ ಅಶೋಕ'( ದೇವಾನಾಂಪ್ರಿಯ ಅಶೋಕಸ) ಎಂದು ಮಸ್ಕಿಯ ಶಾಸನವು ಉಲ್ಲೇಖಿಸುತ್ತಿರುವುದರಿಂದ ಮಸ್ಕಿಯ ಶಾಸನಕ್ಕೆ ಮಹತ್ವ ಬಂದಿದೆ.ಆದರೆ ಅಶೋಕನ ಕಾಲದಲ್ಲಿ ಮಸ್ಕಿಯಲ್ಲಿ ಮಲ್ಲಿಕಾರ್ಜುನ ದೇವಾಲಯ ಇರಲಿಲ್ಲ,ಅದು ಹೆಚ್ಚೆಂದರೆ ಐದಾರು ನೂರು ವರ್ಷಗಳ ಹಿಂದೆ ಕಟ್ಟಲ್ಪಟ್ಟ ದೇವಸ್ಥಾನ.ಆ ದೇವಸ್ಥಾನದ ಶಿಲ್ಪಿ ‘ತ್ರ್ಯಯಂಬಕ ಶಿವನು ಹಂಸರೂಪಿ ಪರಬ್ರಹ್ಮ’ ಎಂದು ಸಂಕೇತಿಸಲು ಮೂರು ಮುಖಗಳ ಹಂಸದ ಉಬ್ಬು ಚಿತ್ರವನ್ನು ಕೊರೆದಿದ್ದಾನೆ.

ಕ್ರಿಸ್ತಪೂರ್ವ ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಈಶೋಪನಿಷತ್ತಿನಲ್ಲಿ ನಾಲ್ಕೈದು ನೂರು ವರ್ಷಗಳ ಹಿಂದೆ ಕಟ್ಟಲ್ಪಟ್ಟ ಮಸ್ಕಿಯ ಮಲ್ಲಿಕಾರ್ಜುನ ದೇವಾಲಯದ ಉಬ್ಬುಶಿಲ್ಪದ ಬಗ್ಗೆ ವಿವರಣೆ ಇರಲು ಹೇಗೆ ಸಾಧ್ಯ? ಬೇಕಿದ್ದರೆ ಈಶೋಪನಿಷತ್ತಿನ ತತ್ತ್ವವನ್ನು ಮೂರುಮುಖಗಳ ಹಂಸ ಸಂಕೇತಿಸುತ್ತದೆ ಎಂದು ಹೇಳಬಹುದು.ಅದುಕೂಡ ಸರಿಯಾದ ಅಭಿಪ್ರಾಯವಲ್ಲ.ಈಶೋಪನಿಷತ್ತಿನಲ್ಲಿ 18 ಮಂತ್ರಗಳಿದ್ದು ಆ ಮಂತ್ರಗಳಲ್ಲಿ ಎಲ್ಲಿಯೂ ಹಂಸರೂಪಿ ಪರಮಾತ್ಮನ ವರ್ಣನೆಗಳಿಲ್ಲ.’ ಈಶಾವಾಸ್ಯಮಿದಃ ಸರ್ವಂ ಯತ್ಕಿಂಚ ಜಗತ್ಯಾ ಜಗತ್’ ಎಂದು ಪ್ರಾರಂಭವಾಗುವ ಈಶೋಪನಿಷತ್ತು ಹದಿನೆಂಟು ಮಂತ್ರಗಳುಳ್ಳ ಚಿಕ್ಕ ಉಪನಿಷತ್ತು ಆಗಿದ್ದು ಅದು ಜೀವನದ ಸಾರ್ಥಕತೆಯ ಬಗ್ಗೆ ಚರ್ಚಿಸುತ್ತದೆ.’ ಈಶಾವಾಸ್ಯ’ ದಿಂದ ಪ್ರಾರಂಭವಾಗುವ ಈಶೋನಿಪತ್ತು ‘ ಅಗ್ನೇನಯ ಸುಪಥಾರಾಯೇ’ ಮಂತ್ರದಿಂದ ಮುಕ್ತಾಯಗೊಳ್ಳುತ್ತಿದೆ.

ಈಶೋಪನಿಷತ್ತಿನ ಹದಿನೆಂಟು ಮಂತ್ರಗಳ ಭಾವಾರ್ಥವನ್ನು ಇಲ್ಲಿ ನೀಡುತ್ತಿದ್ದೇನೆ ಈರಣ್ಣ ಬೆಂಗಾಲಿಯವರು ಸೇರಿದಂತೆ ಯಾರಾದರೂ ಅಲ್ಲಿ ಮೂರುಮುಖಗಳ ಹಂಸದ ಪರಿಕಲ್ಪನೆ ಇದೆಯೇ ಎಂದು ಅವಗಾಹಿಸಲು
ಮಂತ್ರ೧— ಈ ಸೃಷ್ಟಿಯಲ್ಲಿರುವ ಜಡ,ಚೇತನವಾದಿ ಸಮಸ್ತವೂ ಈಶನಿಂದ ಆವೃತವಾಗಿದೆ.ಈ ಜಗತ್ತು ಈಶನ ಆಧೀನದಲ್ಲಿಯೇ ಇದೆ.ಆತನಿಂದ ಕೊಡಲ್ಪಟ್ಟಿದ್ದನ್ನು ಮಾತ್ರ ಅನುಭವಿಸು.ಅದಕ್ಕಿಂತ ಹೆಚ್ಚು ಪಡೆಯಲು ಆಶಿಸಬೇಡ.ಈ ಧನವಾದರೂ ಯಾರದ್ದು? ಯಾರೊಬ್ಬರ ಸ್ವತ್ತಲ್ಲದ ಈ ಸಂಪತ್ತು ಈಶ್ವರನಿಗೇ ಸೇರಿದ್ದು.

ಮಂತ್ರ ೨– ಈಶ್ವರ ನಿಯಾಮಕವಾದ ಈ ಪ್ರಪಂಚದಲ್ಲಿ ಕರ್ಮಗಳನ್ನು ಮಾಡುತ್ತ ನೂರು ವರ್ಷಗಳ ಕಾಲ ಬದುಕುವ ಅಭಿಲಾಷೆ ಉಳ್ಳವರಾಗಿರಬೇಕು.ಈಶ್ವರೇಚ್ಛೆಯಂತೆ ಬದುಕಿದರೆ ಕರ್ಮಗಳು ಅಂಟಲಾರವು.ವಿಕಾರರಹಿತವಾದ ಜೀವನದ ಮಾರ್ಗದರ್ಶನವು ನಿನಗಾಗಿಯೇ ಇದೆ.ಇದರ ಹೊರತಾಗಿ ಜೀವಿಗಳ ಕಲ್ಯಾಣಕ್ಕೆ ಮತ್ತೊಂದು ಮಾರ್ಗವಿಲ್ಲ.

ಮಂತ್ರ ೩– ಈಶ್ಚರೇಚ್ಛೆಯ ವಿಶ್ವನಿಯತಿಯನ್ನು ಮೀರುವವರು ‘ ಅಸೂರ್ಯ’ ರು ಅಂದರೆ ತಾಮಸ ಜೀವಿಗಳಾಗಿದ್ದು ಶರೀರ ಮತ್ತು ಇಂದ್ರಿಯಗಳ ದಾಸರಾಗಿದ್ದು ಜೀವನವಿಡೀ ಗಾಡಾಂಧಕಾರದ ಅಜ್ಞಾನದ ಜೀವನ ನಡೆಯಿಸಿ ಮರಣಾನಂತರ ಅಂತಹದೇ ಅಂಧಕಾರಮಯ ಲೋಕಕ್ಕೆ ತೆರಳುತ್ತಾರೆ.

ಮಂತ್ರ ೪–ಅವಿಚಲನಾಗಿರುವ ಆ ‘ ಈಶನು’ ಒಬ್ಬನೇ ಆಗಿದ್ದಾನೆ.ಅವನು ಮನಸ್ಸಿಗಿಂತಲೂ ಅಧಿಕವೇಗಶಾಲಿಯು.ಅವನು ಇತರರಿಗಿಂತ ಬಹಳ ಪುರಾತನನೂ ಹಾಗೂ ಸ್ಫೂರ್ತಿದಾಯಕನೂ ಆಗಿರುವನು.ಅವನನ್ನು ದೇವಗಣಗಳು ಕೂಡ ಪಡೆಯಲಾರರು.ಅವನು ಸ್ಥಿರವಾಗಿದ್ದರೂ,ಧಾವಿಸಿ ಇತರರಿಗಿಂತ ಮುಂಚೆ ಹೋಗುತ್ತಿರುತ್ತಾನೆ.ವಾಯುವು ಆತನ ಆಧೀನದಲ್ಲಿದ್ದು ಜಲವನ್ನು ಧಾರಣೆ ಮಾಡಿದೆ.

ಮಂತ್ರ ೫– ಆ ಪರಮಾತ್ಮತತ್ತ್ವವು ಗತಿಶೀಲವೂ ಹೌದು,ಸ್ಥಿರವೂ ಹೌದು.ಅದು ದೂರಕ್ಕಿಂತ ದೂರವಿದೆ,ಸಮೀಪಕ್ಕಿಂತ ಸಮೀಪವಾಗಿದೆ‌.ಅದು ಜಡಚೇತನವಾದ ಈ ಜಗತ್ತಿನ ಒಳಗೂ ಇರುವಂತೆಯೇ ಎಲ್ಲವನ್ನೂ ಆವರಿಸಿಯೂ ಇದೆ.

ಮಂತ್ರ ೬– ಸರ್ವಭೂತಗಳನ್ನು ಆತ್ಮತತ್ತ್ವದಲ್ಲಿ ನೋಡುತ್ತಿರುವವನು,ಸರ್ವಭೂತಗಳ ಅಂತರಂಗದಲ್ಲಿ ಆತ್ಮತತ್ತ್ವ ಇದೆ ಎಂಬ ಅನುಭವ ಹೊಂದಿರುವವನು ಯಾವ ಭ್ರಮೆಗೂ ಪಕ್ಕಾಗುವುದಿಲ್ಲ.

ಮಂತ್ರ ೭–ಆತ್ಮತತ್ತ್ವವೇ ಸರ್ವಭೂತಗಳ ರೂಪದಲ್ಲಿ ಪ್ರಕಟಗೊಂಡಿದೆ.ಆತ್ಮನ ಏಕತ್ವದಾನುಭೂತಿಯಲ್ಲಿ ಮೋಹ ಶೋಕಗಳಿಗೆ ಅವಕಾಶವೆಲ್ಲಿ? ಆತ್ಮಭಾವಸ್ಥಿತನಿಗೆ ಶೋಕ ಮೋಹಗಳು ಬಾಧಿಸುವುದಿಲ್ಲ.

ಮಂತ್ರ ೮–ಆ ಪರಮಾತ್ಮನಾದರೋ ಸರ್ವಾವ್ಯಾಪಿಯಾಗಿದ್ದಾನೆ.ತೇಜಸ್ವಿಯಾಗಿದ್ದಾನೆ.ಪರಮಾತ್ಮನು ದೇಹರಹಿತನೂ ಸ್ನಾಯುರಹಿತನೂ ವರ್ಣರಹಿತನೂ ಆಗಿದ್ದಾನೆ‌.ಅವನು ಶುದ್ಧನೂ ನಿಷ್ಪಾಪನೂ ಆಗಿದ್ದಾನೆ.ಅವನು ಕವಿ,ದಾರ್ಶನಿಕ ಹಾಗೂ ಸ್ವಯಂಭೂ.ಅವರವರ ಯೋಗ್ಯತೆಗನುಗುಣವಾಗಿ ಅವರವರಿಗೆ ಬೇಕಾದ ಸುಖ ಸೌಲಭ್ಯಗಳನ್ನು ಅನುಗ್ರಹಿಸುತ್ತಿದ್ದಾನೆ.

ಮಂತ್ರ ೯– ಯಾರು ಕೇವಲ ಅವಿದ್ಯೆಯನ್ನು ಉಪಾಸಿಸುತ್ತಾರೋ ಅವರು ಗಾಡಾಂಧಕಾರದಲ್ಲಿ ಸಿಲುಕುವರು.ಯಾರು ವಿದ್ಯೆಯನ್ನು ಅಂದರೆ ಭೌತಜಗತ್ತಿಗೆ ಪರಿಮಿತವಾದ ವಿದ್ಯೆಯನ್ನು ಉಪಾಸಿಸುವರೋ ಅವರು ಸಹ ಅಂಧಕಾರದಲ್ಲಿ ಸಿಲುಕುವರು.

ಮಂತ್ರ ೧೦- ಪರಮಾತ್ಮನಿಂದ ಲೋಕಕಲ್ಯಾಣಾರ್ಥವಾಗಿ ಸ್ಫುರಿಸಲ್ಪಟ್ಟ,ಮಹಾಪುರುಷರಿಂದ ಬೋಧಿಸಲ್ಪಟ್ಟ ವಿದ್ಯೆ( ಆಧ್ಯಾತ್ಮಿಕ ಜ್ಞಾನ)ವು ಬೇರೆಯದೇ ಆಗಿದ್ದು ಅದು ಅವಿದ್ಯೆಯಿಂದ ಭಿನ್ನವಾಗಿದೆ.

ಮಂತ್ರ ೧೧– ವಿದ್ಯೆ ಮತ್ತು ಅವಿದ್ಯೆಗಳನ್ನು ಒಮ್ಮೆಲೇ ತಿಳಿದುಕೊಳ್ಳಬೇಕು.ಅವಿದ್ಯೆಯಿಂದ ಮೃತ್ಯುವನ್ನು ಜಯಿಸಿ,ವಿದ್ಯೆಯಿಂದ ಅಮರತ್ವವನ್ನು ಪಡೆಯಬೇಕು.

ಮಂತ್ರ ೧೨–ಸಂಭೂತಿ ಮತ್ತು ಅಸಂಭೂತಿ( ವಿನಾಶ) ಈ ಎರಡು ಕಲೆಗಳನ್ನು ಒಟ್ಟಿಗೆ ತಿಳಿಯಬೇಕು.ವಿನಾಶದ ಕಲೆಯಿಂದ ಮೃತ್ಯುವನ್ನು ಜಯಿಸಿ,ಸಂಭೂತಿ ಕಲೆಯಿಂದ ಅಮರತ್ವವನ್ನು ಪಡೆಯಬೇಕು.

ಮಂತ್ರ ೧೩– ಸ್ವರ್ಣ ಪಾತ್ರೆಯಿಂದ ಸತ್ಯದ ಮುಖ ಮುಚ್ಚಲ್ಪಟ್ಟಿದೆ( ಪರಮಾತ್ಮನು ಪ್ರಕಾಶಮಾನವಾದ ಆದಿತ್ಯಮಂಡಲಾಂತರ್ಗತನು ಎಂದರ್ಥ) ಹೇ ಪೂಷನ್ ದೇವನೆ ಆತ್ಮಾವಲೋಕೇಚ್ಛುವಾದ ನನ್ನಂತಹ ಸತ್ಯಾನ್ವೇಷಿಗೆ ಈ ಆವರಣವನ್ನು ತೆಗೆದುಹಾಕು.

೧೪ ರಿಂದ ೧೮ ರವರೆಗಿನ ಮಂತ್ರಗಳ ಭಾವಾನುವಾದ–ಹೇ ಪೂಷನ್,ಏಕಾಂಕಿಯಾಗಿ ಚಲಿಸುವ ದೇವನೆ,ಹೇ ಸೂರ್ಯನೇ,ಹೇ ಪ್ರಜಾಪತಿಯೇ ಕಣ್ಣುಗಳನ್ನು ಕೋರೈಸುವ ನಿನ್ನ ಕಿರಣಗಳನ್ನು ಹಿಂತೆಗೆದುಕೋ.ನಿನ್ನ ಅತಿಶಯವಾಗಿರುವ ಕಲ್ಯಾಣಸ್ವರೂಪವನ್ನು ನಾನು ವೀಕ್ಷಿಸುತ್ತಿದ್ದೇನೆ.ಆದಿತ್ಯಮಂಡಲಸ್ಥನಾಗಿರುವ ಬ್ರಹ್ಮನು ನಾನೇ ಆಗಿದ್ದೇನೆ.ಈ ಮನುಷ್ಯ ಜೀವನವು ವಾಯು,ಅಗ್ನಿ ಮುಂತಾದ ಪಂಚಭೂತಗಳಿಂದ ಹಾಗೂ ಅಮೃತದ ಸಂಯೋಗದಿಂದ ಮಾಡಲ್ಪಟ್ಟಿದೆ.ಈ ಶರೀರವು ಕ್ರಮೇಣ ಭಸ್ಮೀಭೂತವಾಗುತ್ತದೆ.ಆದ್ದರಿಂದ ನೀನು ಸದಾ ಪರಮಾತ್ಮನನ್ನು ಸ್ಮರಿಸುತ್ತಿರು.ಅಂತೆಯೇ ನಿನ್ನ ಸಾಮರ್ಥ್ಯವನ್ನೂ ಸಹ ಸ್ಮರಿಸುತ್ತಿರು.ನೀನು ಇದುವರೆಗೆ ಗೈದ ಕರ್ಮಗಳ ಬಗೆಗೆ ಚಿಂತನ ಮಾಡುತ್ತಿರು.ಹೇ ಅಗ್ನಿಯೇ ನೀನು ಶ್ರೇಷ್ಠ ಮಾರ್ಗದ ಮೂಲಕ ಸಂಪತ್ತಿನತ್ತ ಕರೆದೊಯ್ಯುವವನಾಗು.ಹೇ ವಿಶ್ವದ ಅಧಿಷ್ಠಾತೃದೇವನೆ ನೀನು ನಮ್ಮ ಕರ್ಮಗಳನ್ನು ಚೆನ್ನಾಗಿ ಬಲ್ಲೆ.ನಮ್ಮನ್ನು ಕುಟಿಲ ಕರ್ಮಗಳಿಂದ ಪಾರುಮಾಡು.ನಾವು ನಿನಗೆ ಮತ್ತೆಮತ್ತೆ ನಮಸ್ಕರಿಸುತ್ತ ನಿನ್ನನ್ನು ಪ್ರಾರ್ಥಿಸುತ್ತೇವೆ.

ಈರಣ್ಣ ಬೆಂಗಾಲಿಯವರು ನನಗೆ ಪರಿಚಿತರೂ ಅಹುದು,ಅವರ ವ್ಯಂಗ್ಯಚಿತ್ರರಚನಾ ಪ್ರತಿಭೆ ಮತ್ತು ಸಾಹಿತ್ಯಾಸಕ್ತಿಗಳ ಬಗ್ಗೆ ನನ್ನಲ್ಲಿ ಅಭಿಮಾನವಿದೆ.ಆದರೆ ಅವರ ಒಂದು ತಪ್ಪು ಉಲ್ಲೇಖವು ಇತರರ ಆಕ್ಷೇಪಕ್ಕೆ ಗುರಿಯಾಗಬಾರದು ಎನ್ನುವ ಕಾರಣದಿಂದ ಇಷ್ಟು ದೀರ್ಘ ಲೇಖನ ರೂಪದ ಪ್ರತಿಕ್ರಿಯೆ ಬರೆಯಬೇಕಾಯಿತು.

‌ ೨೭.೦೪.೨೦೨೩

About The Author