ಮೂರನೇ ಕಣ್ಣು : ಹೋಮ- ಹವನಗಳು ಹಣೆಬರಹವನ್ನು ಬದಲಿಸಲಾರವು ! : ಮುಕ್ಕಣ್ಣ ಕರಿಗಾರ

ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ‘ ಚಂಡಿಕಾ ಹೋಮ’ ಮಾಡಿಸಿ ಸುದ್ದಿಯಲ್ಲಿದ್ದಾರೆ.ಹೋಮ ನೆರವೇರಿಸಿದ ಅರ್ಚಕರು ‘ ಅವರ ಕಷ್ಟಗಳೆಲ್ಲ ಕರಗಿ ಮುಖ್ಯಮಂತ್ರಿಯಾಗಲಿ’ ಎಂದು ಆಶೀರ್ವದಿಸಿದ್ದಾರಂತೆ! ಮುಖ್ಯಮಂತ್ರಿ ಆಗುವುದು ಇಷ್ಟು ಸುಲಭ ಇದ್ದರೆ ಎಲ್ಲರೂ ಹೋಮ ಹವನ ಮಾಡಿಸುತ್ತಿದ್ದರು.ಅರ್ಚಕರುಗಳಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಪ್ರದಾನಿಸುವಷ್ಟು ಸಾಮರ್ಥ್ಯ ಇದ್ದರೆ ಮತದಾನ,ಮತದಾರರ ಅವಶ್ಯಕತೆ ಇರುವುದಿಲ್ಲ.

ಹೋಮ ಹವನಗಳ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಹೆಚ್ಚಿನ ಮಟ್ಟದಲ್ಲಿದೆ.ಚುನಾವಣಾ ಸಂದರ್ಭದಲ್ಲಿಯಂತೂ ಹರಕುಬಾಯಿಯ ಜ್ಯೋತಿಷಿಗಳು,ಸಂಸ್ಕೃತ ಸರಿಯಾಗಿ ಉಚ್ಛರಿಸಲು ಬಾರದ’ ವಿದ್ವಾನರುಗಳು’ ಹೋಮ,ಹವನ,ವಿಶೇಷ ಪೂಜೆ ಎಂದೆಲ್ಲ ಗಳಹುತ್ತ ರಾಜಕಾರಣಿಗಳನ್ನು ತಮ್ಮತ್ತ ಸೆಳೆಯುತ್ತಾರೆ.ಈಗೀಗ ನಮ್ಮ ರಾಜಕಾರಣಿಗಳು ತಮಿಳುನಾಡು,ಕೇರಳ ರಾಜ್ಯಗಳ ಮಾಂತ್ರಿಕರು,ತಾಂತ್ರಿಕರುಗಳಿಂದ ಪ್ರತ್ಯಂಗಿರಾಹೋಮ ಮಾಡಿ ಶತ್ರುಸಂಹಾರ ಮಾಡಿಸುತ್ತಿದ್ದಾರೆ.ಶತ್ರುಸಂಹಾರವೆಂದರೆ ಶತ್ರುವಿಗೆ ಪರಾಜಯವಾಗಿ ವಿಜಯಮಾಲೆ ತಮಗೆ ಒಲಿದು ಬರಬೇಕು ಎನ್ನುವ ಹೋಮಸಂಕಲ್ಪ.ರಾವಣನ ಮಗ ಇಂದ್ರಜಿತ್ ಪ್ರತ್ಯಂಗಿರಾ ಯಜ್ಞ ಮಾಡುತ್ತಿದ್ದ. ಅದು ಪೂರ್ಣಗೊಂಡಿದ್ದರೆ ರಾಮ ಲಕ್ಷ್ಮಣರು ಬದುಕುತ್ತಿರಲಿಲ್ಲ,ರಾಮಾಯಣದ ಗತಿಯೇ ಬೇರಾಗುತ್ತಿತ್ತು.ವಿಭೀಷಣನು ರಾಮನಿಗೆ ಇಂದ್ರಜಿತ್ತುವಿನ ಯಾಗ ಸಾಮರ್ಥ್ಯವನ್ನು ಹೇಳಿ ಅದನ್ನು ವಿಫಲಗೊಳಿಸಲು ನೀಡಿದ ಸಲಹೆಯಂತೆ ರಾಮ ಕಾರ್ಯತತ್ಪರನಾದುದರಿಂದ ಹನುಮನ ಮೂಲಕ ಇಂದ್ರಜಿತ್ತುವಿನ ಪ್ರತ್ಯಂಗಿರಾ ಹೋಮಕ್ಕೆ ವಿಘ್ನಗಳುಂಟಾಗಿ ಪ್ರತ್ಯಂಗಿರಾಯಜ್ಞವು ಸಂಪನ್ನವಾಗದೆ ಇದ್ದುದರಿಂದ ಇಂದ್ರಜಿತ್ತು ಮರಣಹೊಂದಿದ ಎನ್ನುವ ವಿವರಣೆಗಳಿವೆ.ಯಜ್ಞದ ಸರಳ ಮತ್ತು ಸಂಕ್ಷಿಪ್ತರೂಪವೇ ಹೋಮ.ಹೋಮದಲ್ಲಿ ಅರ್ಪಿಸುವ ಹವಿರ್ಭಾಗವನ್ನು ಸ್ವೀಕರಿಸಿ,ಸಂತೃಪ್ತರಾಗುವ ದೇವತೆಗಳು ಅಧ್ವರ್ಯು( ಹೋಮಮಾಡುವ ಪುರೋಹಿತ) ವಿನ ಮನೋಭಿಲಾಷೆ ಈಡೇರಿಸುತ್ತಾರೆ ಎನ್ನುವ ನಂಬಿಕೆ ಇದೆ. ಹಿಂದೆ ಯಜ್ಞ ಹೊಮಗಳನ್ನು ರಾಜ್ಯದ ಪ್ರಜಾಸಮಸ್ತರ ಕಲ್ಯಾಣ,ಮಳೆ ಬೆಳೆಗಳಂತಹ ಲೋಕಕಲ್ಯಾಣಕಾರಿ ಉದ್ದೇಶಗಳಿಂದ ಮಾಡಲಾಗುತ್ತಿತ್ತು. ಯಜ್ಞವು ಋಷಿಗಳಿಂದ ಮಾಡಲ್ಪಡುತ್ತಿದ್ದುದರಿಂದ ಋಷಿಗಳ ತಪೋಸಾಮರ್ಥ್ಯದಿಂದಾಗಿ ಯಜ್ಞ ಸಫಲವಾಗುತ್ತಿತ್ತು.ಆದರೆ ಈಗ ಹೋಮಮಾಡುತ್ತಿರುವವರಲ್ಲಿ ತಪೋಬಲವಾಗಲಿ,ಆಧ್ಯಾತ್ಮಿಕ ಶಕ್ತಿಯಾಗಲಿ ಇಲ್ಲ.ಹೀಗಾಗಿ ಅವರು ಮಾಡುವ ಹೋಮವು ಫಲ ನೀಡಿದರೆ ಅದು ಆ ಕ್ಷೇತ್ರದ ದೈವೀಶಕ್ತಿಯ ಪ್ರಭಾವವೇ ಹೊರತು ಹೋಮ ಮಾಡುವವರ ಪ್ರಭಾವದಿಂದಲ್ಲ.

ದೇವರು,ದೇವತೆಗಳು ನಮ್ಮ ಮನೋಭಿಷ್ಟಗಳನ್ನು ಖಂಡಿತವಾಗಿಯೂ ಈಡೇರಿಸುತ್ತಾರೆ.ಆದರೆ ಅದಕ್ಕೆ ನಮ್ಮ ವೈಯಕ್ತಿಕ ಪರಿಶ್ರಮ ಬೇಕೇ ಹೊರತು ಜ್ಯೋತಿಷಿಗಳು,ಹೋಮಮಾಡುವ ಮಧ್ಯಸ್ಥಗಾರರ ಅವಶ್ಯಕತೆ ಇಲ್ಲ.ತಾವು ಸ್ವತಃ ಪೂಜೆ,ಆರಾಧನೆಗಳನ್ನು ಮಾಡಿ ತಮ್ಮ ಇಷ್ಟದೇವರ ಅನುಗ್ರಹಪಡೆದು ಮನೋಭಿಲಾಷೆ ಈಡೇರಿಸಿಕೊಳ್ಳಬಹುದು.ತಮ್ಮ ಪರವಾಗಿ ಇನ್ನೊಬ್ಬರು ಮಾಡುವ ಪೂಜೆ,ಸೇವೆ,ಹೋಮಗಳು ಫಲ ನೀಡಲಾರವು.ಜ್ಯೋತಿಷಿಗಳು,ಶಾಸ್ತ್ರಿಗಳೆನ್ನುವವರು ಹೊಟ್ಟೆಹೊರೆಯಲು ಹುಟ್ಟಿಸುವ ಶಾಸ್ತ್ರವಿಧಿ,ಪರಿಹಾರಗಳಿಂದ ಯಾವ ಫಲವೂ ಇಲ್ಲ,ಪ್ರಯೋಜನವೂ ಇಲ್ಲ.

ಮುಖ್ಯಮಂತ್ರಿ ಆಗಬೇಕು ಎನ್ನುವ ದೈವ ಸಂಕಲ್ಪ ಇದ್ದರೆ ಯಾರಾದರೂ ಖಂಡಿತ ಮುಖ್ಯಮಂತ್ರಿ ಆಗಬಹುದು.ಸಿದ್ರಾಮಯ್ಯನವರು ದೇವರು,ಜ್ಯೋತಿಷಿಗಳು,ಶಾಸ್ರ್ತಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ,ನಾಸ್ತಿಕತೆ ಎನ್ನಬಹುದಾದ ವೈಚಾರಿಕತೆ ಅವರದು.ಎಂದೂ ಯಾವ ದೇವರನ್ನೂ ಪೂಜಿಸದೆ ಮುಖ್ಯಮಂತ್ರಿಯಾದರು ಮಾತ್ರವಲ್ಲ, ಐದುವರ್ಷ ನಿರಾಂತಕದಿಂದ ರಾಜ್ಯಭಾರ ಮಾಡಿ,ರಾಜ್ಯಕ್ಕೆ ಸುಭದ್ರ ಸರಕಾರ ನೀಡಿದರು.ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಪದವಿ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ಹೆದರಿ ಅದುವರೆಗಿನ ಯಾವ ಮುಖ್ಯಮಂತ್ರಿಯೂ ಮಾಡದ ಸಾಹಸ ಮಾಡಿದರು ಅಂದರೆ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು.ಆದರೂ ಅವರ ಅಧಿಕಾರ ಹೋಗಲಿಲ್ಲ.ಚಾಮರಾಜನಗರದ ಮೇಲಿದ್ದ ಅಪವಾದ ತಪ್ಪಿತಷ್ಟೆ.

ಡಿ.ಕೆ.ಶಿವಕುಮಾರ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು.ಅವರು ಇತರರಿಗೆ ಮೇಲ್ಪಂಕ್ತಿ ಆಗಬೇಕು,ಸಂವಿಧಾನದ ಆಶಯಗಳಂತೆ ನಡೆದುಕೊಳ್ಳಬೇಕು.ಇದಾವುದರಲ್ಲಿ ಡಿ.ಕೆ.ಶಿವಕುಮಾರ ಅವರಿಗೆ ಆಸಕ್ತಿಯಿಲ್ಲ ಮುಖ್ಯಮಂತ್ರಿ ಆಗಬೇಕು ಎನ್ನುವ ಮಹದಾಸೆ ಒಂದನ್ನು ಬಿಟ್ಟರೆ.ಕಾಂಗ್ರೆಸ್ ಪಕ್ಷದಲ್ಲಿಯೇ ಸಿದ್ರಾಮಯ್ಯ ಮತ್ತು ಸತೀಶ ಜಾರಕಿ ಹೊಳಿಯವರಂತಹ ವೈಚಾರಿಕತೆಗೆ ಬದ್ಧರಿರುವ ನಾಯಕರಿದ್ದಾರೆ.ಸತೀಶ ಜಾರಕಿಹೊಳಿಯವರು ಮೂಢನಂಬಿಕೆಗಳ ವಿರುದ್ಧ ಸಮರವನ್ನೇ ಸಾರಿದ್ದು ಮೊನ್ನೆ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ರಾಹುಮುಹೂರ್ತದಲ್ಲೇ ನಾಮಪತ್ರ ಸಲ್ಲಿಸಿದ್ದಾರೆ.ಡಿ.ಕೆ.ಶಿವಕುಮಾರ ಅವರಿಗೆ ನಾಮಪತ್ರ ಸಲ್ಲಿಸಲು ಶುಭಮುಹೂರ್ತವೇ ಬೇಕಿತ್ತು.ಸತೀಶಜಾರಕಿಹೊಳಿಯವರಿಗೆ ರಾಹುಮುಹೂರ್ತವು ತಮ್ಮ ಹಣೆಬರಹವನ್ನು ಬದಲಿಸಲಾರದು ಎನ್ನುವ ಅಚಲ ನಂಬಿಕೆ ಇದೆ.

ಮುಹೂರ್ತಗಳಾಗಲಿ,ಹೋಮ ಹವನಗಳಾಗಲಿ ಹಣೆಬರಹವನ್ನು ಬದಲಿಸಲಾರವು.ಹಣೆಬರಹ ಎಂದರೆ ಪರಮಾತ್ಮನ ಸಂಕಲ್ಪ.ಲೋಕದಲ್ಲಿ ಕೇವಲ ದೊಡ್ಡವರ ಹುಟ್ಟಿಗಷ್ಟೇ ಮಹತ್ವವಿಲ್ಲ– ಎಲ್ಲರ ಹುಟ್ಟಿನ ಹಿಂದೆಯೂ ಪರಮಾತ್ಮನ ಸಂಕಲ್ಪವಿದೆ.ಪ್ರತಿಯೊಬ್ಬರ ಹುಟ್ಟಿನ ಹಿಂದೆಯೂ ಒಂದು ಕಾರಣವಿದೆ,ಒಂದು ಉದ್ದೇಶವಿದೆ.ಬದುಕನ್ನು ಪರಮಾತ್ಮನು ನಿರ್ಧರಿಸುವುದರಿಂದ ಬದುಕು ಪೂರ್ವನಿರ್ಧಾರಿತವಾದುದು.ಪರಮಾತ್ಮನ ಸಂಕಲ್ಪದಂತೆ ಯಾರಿಂದ ಏನಾಗಬೇಕು ಎಂದು ಇದೆಯೋ ಅದು ಆಗುತ್ತದೆ; ಯಾರು ಏನು ಆಗಬೇಕು ಎಂದು ಪರಮಾತ್ಮನು ನಿರ್ಧಾರಿಸಿದ್ದಾನೋ ಅವರು ಅದು ಆಗುತ್ತಾರೆ.ಮುಖ್ಯಮಂತ್ರಿ,ಪ್ರಧಾನಮಂತ್ರಿಗಳು ಆಗುವುದು ಪರಮಾತ್ಮನ ಸಂಕಲ್ಪ ಮತ್ತು ಅನುಗ್ರಹದಿಂದ.ಪರಮಾತ್ಮನ ಅನುಗ್ರಹವಿಲ್ಲದೆ ಯಾವ ಜ್ಯೋತಿಷಿಯು ಮುಖ್ಯಮಂತ್ರಿಯ ಪದವಿಯನ್ನು ತಂದುಕೊಡಲಾರ.ಹಣೆಬರಹದಲ್ಲಿ ಇಲ್ಲದೆ ಇದ್ದರೆ ಯಾವ ಹೋಮವೂ ಮುಖ್ಯಮಂತ್ರಿ ಪದವಿಯನ್ನು ಅನುಗ್ರಹಿಸಲಾರದು.ಹೋಮ ಹವನಗಳು ಹಣೆಬರಹವನ್ನು ಬದಲಿಸಲಾರವು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳಲ್ಲಿ ಆತ್ಮವಿಶ್ವಾಸ ಇರಬೇಕು, ಪರಮಾತ್ಮನಲ್ಲಿ ಅಚಲ ಶ್ರದ್ಧೆ ಇಟ್ಟಿರಬೇಕು,ಮತದಾರರಲ್ಲಿ ನಂಬಿಕೆ ಇರಬೇಕು ಮತ್ತು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯುವ ಬದ್ಧತೆ ಇರಬೇಕು.ಈ ನಾಲ್ಕು ಅವಶ್ಯಕ ಗುಣಗಳಿದ್ದವರೇ ಯಶಸ್ವಿ ರಾಜಕಾರಣಿಗಳಾಗಬಲ್ಲರು,ಇಚ್ಛಿಸಿದ ಹುದ್ದೆ- ಪದವಿಗಳನ್ನು ಪಡೆಯಬಲ್ಲರು.

About The Author