ಮೂರನೇ ಕಣ್ಣು : ಬಿಜೆಪಿ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಬಯಸಿದೆ ! : ಮುಕ್ಕಣ್ಣ ಕರಿಗಾರ

ಲಿಂಗಾಯತ ನಾಯಕರುಗಳಾದ ಲಕ್ಷ್ಮಣ ಸವದಿ ಮತ್ತು ಜಗದೀಶ ಶೆಟ್ಟರ್ ಅವರಿಬ್ಬರು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದು ಕಾಂಗ್ರೆಸ್ಸಿಗೆ ಬಯಸದೆ ಬಂದ ಭಾಗ್ಯವಾಗಿದೆ.ಈ ಇಬ್ಬರು ಲಿಂಗಾಯತ ಸಮುದಾಯದ ನಾಯಕರುಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವು ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂದು ಪ್ರಚಾರಮಾಡುತ್ತಿದೆ.ಪಕ್ಷವು ಲಿಂಗಾಯತ ವಿರೋಧಿ ಎನ್ನುವ ಭಾವನೆ ಸಮುದಾಯದಲ್ಲಿ ಮೂಡಬಾರದು ಎಂದು ಬಿಜೆಪಿಯ ಲಿಂಗಾಯತ ನಾಯಕರುಗಳು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ ಲಿಂಗಾಯತರನ್ನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಬೇಕು’ ಎನ್ನುವ ಆಗ್ರಹ ಮಂಡಿಸಿದ್ದಾರೆ.ಲಿಂಗಾಯತ ಸಮುದಾಯದ ಪ್ರಬಲನಾಯಕ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಬಿಜೆಪಿಯ ಲಿಂಗಾಯತ ಸಮುದಾಯದ ಮುಖಂಡರುಗಳೇನಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.ಇಂತಹದ್ದೊಂದು ಅನಿರೀಕ್ಷಿತ ಬೇಡಿಕೆಯಿಂದ ಶಾಕ್ ಆಗಿರುವ ಧರ್ಮೇಂದ್ರ ಪ್ರಧಾನ್ ಅವರು ಪಕ್ಷದ ಹೈಕಮಾಂಡ್ ಗಮನಕ್ಕೆ ನಿಮ್ಮ ಭಾವನೆಗಳು ತಲುಪಿಸುವೆ ಎಂದಷ್ಟೇ ಹೇಳಿ,ಪಾರಾಗಿದ್ದಾರೆ.

ಇಲ್ಲಿ ಒಂದು ಪ್ರಶ್ನೆ ಸಹಜವಾಗಿಯೇ ಏಳುತ್ತದೆ,ಯಾರೋ ಒಬ್ಬಿಬ್ಬರು ಕಾಂಗ್ರೆಸ್ ನಾಯಕರು ಆಗ್ರಹಿಸಿದ ಮಾತ್ರಕ್ಕೆ ಬಿಜೆಪಿಯು ಲಿಂಗಾಯತರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆ? ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರು ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳಲ್ಲವೆ? ಇನ್ನೊಂದು ಸಾರೆ ಲಿಂಗಾಯತರಿಗೆ ಯಾಕೆ ಅವಕಾಶ ಕೊಡಬೇಕು? ಬಿಜೆಪಿಯಲ್ಲಿ ಇತರ ಜಾತಿಗಳಿಗೆ ಸೇರಿದ ಮುಖ್ಯಮಂತ್ರಿ ಹುದ್ದೆಯನ್ನು ನಿಭಾಯಿಸುವ ಸಮರ್ಥರು ಇಲ್ಲವೆ?ಒಕ್ಕಲಿಗ ಸಮುದಾಯದಿಂದ ಆರ್ ಅಶೋಕ ಮತ್ತು ಸಿ ಟಿ ರವಿಯವರು ತಮಗೊಂದು ಅವಕಾಶ ಸಿಗಲಿ ಎಂದು ಕಾಯುತ್ತಿದ್ದಾರೆ.ಬಿಜೆಪಿಯಲ್ಲಿ ಪ್ರಬಲ ಕುರುಬ ನಾಯಕರು ಇಲ್ಲದೆ ಇದ್ದುದರಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಇದ್ದ ಈಶ್ವರಪ್ಪನವರಿಗೆ ಕಡ್ಡಾಯ ರಾಜಕೀಯ ನಿವೃತ್ತಿ ಘೋಷಿಸಲಾಗಿದೆ ಮತ್ತು ಅವರ ಮಗ ಕಾಂತೇಶಗೆ ಶಿವಮೊಗ್ಗ ಟಿಕೇಟ್ ನಿರಾಕರಿಸಲಾಗಿದೆ.ಎಸ್ ಟಿ ಸಮುದಾಯದಿಂದ ಬಿ ಶ್ರೀರಾಮುಲು ಕೂಡ ಮುಖ್ಯಮಂತ್ರಿ ಆಕಾಂಕ್ಷಿಯೆ.

ಬಿಜೆಪಿಯು ತನ್ನ ವರ್ಚಸ್ಸು ವೃದ್ಧಿಸಿಕೊಳ್ಳಬೇಕು ,ಪಕ್ಷವು ದಲಿತರ ಪರವಾಗಿ ಇದೆ ಎಂದು ಹೇಳಿಕೊಳ್ಳಬೇಕಾದರೆ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು.ಗೋವಿಂದ ಕಾರಜೋಳ ಅವರು ಸಂಭಾವಿತ ರಾಜಕಾರಣಿ ಮಾತ್ರವಲ್ಲದೆ ಅವರು ದಲಿತರು ಮತ್ತು ಬಿಜೆಪಿಯ ಪ್ರಶ್ನೆ ಬಂದಾಗ ದಲಿತರ ಹಿತಾಸಕ್ತಿಯನ್ನು ಬದಿಗೊತ್ತಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.ಜೊತೆಗೆ ಕಾರಜೋಳ ಅವರು ದಲಿತರಿಗಿಂತ ಲಿಂಗಾಯತರು ಸೇರಿದಂತೆ ಸವರ್ಣೀಯ ರಾಜಕೀಯ ನಾಯಕರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.ಬಿಜೆಪಿ ವರಿಷ್ಠರ ಆಣತಿಯನ್ನು ತುಟಿ ಪಿಟಕ್ ಎನ್ನದೆ ಪಾಲಿಸುವ ‘ ವಿಧೇಯ ಸ್ವಾಮಿನಿಷ್ಠ’ ರೂ ಹೌದು.ಇದಕ್ಕಿಂತ ಬಿಜೆಪಿಗೆ ಇನ್ನೇನು ಬೇಕು? ಬಸವರಾಜ ಬೊಮ್ಮಾಯಿ ಅವರಂತಹ ಲಿಂಗಾಯತ ನಾಯಕರುಗಳಿಗೆ ಗೋವಿಂದ ಕಾರಜೋಳ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಮುನ್ನೆಲೆಗೆ ತರುವುದು ಬೇಕಿಲ್ಲ.ಪಕ್ಷವು ದಲಿತರನ್ನು ಮುಖ್ಯಮಂತ್ರಿ ಎಂದು ಘೋಷಿಸಬೇಕು ಎನ್ನುವ ನಿರ್ಣಯ ಬಸವರಾಜ ಬೊಮ್ಮಾಯಿ ಮತ್ತು ಅವರ ಟೀಮ್ ಮಾಡಿದ್ದರೆ ಬಿಜೆಪಿಗೆ ಇನ್ನೂ ಬಲ ಬರುತ್ತಿತ್ತು.ರಾಜ್ಯ ಬಿಜೆಪಿ ನಾಯಕರಲ್ಲಿಯೇ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎನ್ನುವ ಇಚ್ಛೆ ಇಲ್ಲದೆ ಇರುವಾಗ ಬಿಜೆಪಿ ಹೈಕಮಾಂಡಿನಿಂದ ಅದನ್ನು ನಿರೀಕ್ಷಿಸಬಹುದೆ ? ಬಸವರಾಜ ಬೊಮ್ಮಾಯಿಯವರು ಲಿಂಗಾಯತರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವ ಘೋಷಣೆಗೆ ಒತ್ತಡ ಹೇರುತ್ತಿರುವುದು ಅವಕಾಶ ಸಿಕ್ಕರೆ ತಾವು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅದಾಗದಿದ್ದರೆ ಮುರುಗೇಶ ನಿರಾಣಿ ಇಲ್ಲದಿದ್ದರೆ ವಿಜಯೇಂದ್ರ ಆಗಲಿ ಎಂಬ ಲೆಕ್ಕಾಚಾರದಿಂದ

ಈಗಿರುವ ಮಾಹಿತಿಯಂತೆ ಬಿಜೆಪಿಯ ವರಿಷ್ಠರು ಕರ್ನಾಟಕದಲ್ಲಿ ಪಕ್ಷವು ಸ್ಪಷ್ಟ ಬಹುಮತ ಪಡೆದದ್ದಾದರೆ ಆರ್ ಎಸ್ ಎಸ್ ನಿಷ್ಠರು ಅದರಲ್ಲೂ ಬ್ರಾಹ್ಮಣರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಆಲೋಚಿಸಿದೆ.ಬಿಜೆಪಿ ವರಿಷ್ಠರ ಮೊದಲ ಆಯ್ಕೆ ಮತ್ತು ಆದ್ಯತೆ ಬಿ ಎಲ್ ಸಂತೋಷ.ಸಂತೋಷ ಅವರ ಬಗ್ಗೆ ಅವರ ಕಡುವಿರೋಧಿ ಬಿ ಎಸ್ ಯಡಿಯೂರಪ್ಪನವರು ಮೃದು ಧೋರಣೆ ತಳೆದಿರುವುದನ್ನು ಗಮನಿಸಬಹುದು.ಬಿ ಎಲ್ ಸಂತೋಷ ಅವರಿಗೆ ತೊಡರುಗಾಲು ಆಗಬಹುದು ಎನ್ನುವ ಕಾರಣದಿಂದಲೇ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಪ್ರಹ್ಲಾದ ಜೋಶಿ ಬಿಜೆಪಿ ವರಿಷ್ಠರ ಎರಡನೇ ಆಯ್ಕೆ.ಬಿ ಎಲ್ ಸಂತೋಷ ಮತ್ತು ಪ್ರಹ್ಲಾದ ಜೋಶಿ ಅವರಿಬ್ಬರ ಬಗ್ಗೆ ಅಪಸ್ವರ,ಆಕ್ಷೇಪ ಕೇಳಿ ಬಂದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬಹುದಾದ ಮೂರನೇ ಹೆಸರು.ನಾಗಪುರ ಕಛೇರಿಯಲ್ಲಿ ಇಂತಹದ್ದೊಂದು ಚರ್ಚೆ ನಡೆದಿದೆಯಂತೆ.ಪಕ್ಷದ ಹಿರಿಯ ನಾಯಕ ಎನ್ನುವ ಕಾರಣದಿಂದ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸಬಹುದು ಎನ್ನುವ ಮುಂದಾಲೋಚನೆಯಿಂದಲೇ ಕೆ ಎಸ್ ಈಶ್ವರಪ್ಪನವರಿಗೆ ಚುನಾವಣಾ ರಾಜಕೀಯದಿಂದ ನಿವೃತ್ತಿಹೊಂದಲು ಸೂಚಿಸಿದ್ದು.

ಬಿಜೆಪಿ ವರಿಷ್ಠರ ಮನೋಸ್ಥಿತಿ ಏನೆಂದು ಅರಿಯದ ರಾಜ್ಯ ಬಿಜೆಪಿ ನಾಯಕರು ಲಿಂಗಾಯತ ಮುಖ್ಯಮಂತ್ರಿ ವಿಚಾರವನ್ನು ಮುನ್ನಲೆಗೆ ತರಬಯಸುತ್ತಿರುವುದು ವ್ಯರ್ಥಕಸರತ್ತು ಮಾತ್ರ.

About The Author