ಮೂರನೇ ಕಣ್ಣು : ಸಿದ್ರಾಮಯ್ಯನವರು ಗೆಲ್ಲಲೇಬೇಕು,ಸಂವಿಧಾನ ಮತ್ತು ಪ್ರಜಾಪ್ರಭುತ್ವ ಗೆಲ್ಲಬೇಕೆಂದರೆ : ಮುಕ್ಕಣ್ಣ ಕರಿಗಾರ

ಸಿದ್ರಾಮಯ್ಯನವರು ವರುಣಾ ಕ್ಷೇತ್ರದಲ್ಲಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಅಪಾರ ಸಂಖ್ಯೆಯ ಅಭಿಮಾನಿಗಳು,ಬೆಂಬಲಿಗರ ಜಯಘೋಷ,ಶುಭಹಾರೈಕೆಗಳ ಮಹಾಪೂರದ ನಡುವೆ ನಾಮಪತ್ರ ಸಲ್ಲಿಸಿರುವ ಸಿದ್ರಾಮಯ್ಯನವರಲ್ಲಿ ಆತಂಕ ಮನೆಮಾಡಿದೆ.ಬಿಜೆಪಿಯ ವರಿಷ್ಠರು ವಿ ಸೋಮಣ್ಣನವರನ್ನು ವರುಣಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರ ಬಗ್ಗೆ ಭಯಗೊಳ್ಳದ ಸಿದ್ರಾಮಯ್ಯನವರು ಸ್ವಪಕ್ಷೀಯರ ಒಳಸಂಚಿನ ಬಗ್ಗೆ ಬೇಸರಗೊಂಡಿದ್ದಾರೆ,ಆತಂಕಿತರಾಗಿದ್ದಾರೆ.ಸಿದ್ರಾಮಯ್ಯನವರ ಜನಪ್ರಿಯತೆ,ನೇರ ನಿಷ್ಠುರ ನಡೆಗಳನ್ನು ಸಹಿಸದ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಮತ್ತು ಹೈಕಮಾಂಡ್ ಸಿದ್ರಾಮಯ್ಯನವರನ್ನು ಮಣಿಸಬೇಕೆಂಬ ದುರಾಲೋಚನೆಯಿಂದ ಅವರಿಗೆ‌ ಕೋಲಾರ ಟಿಕೆಟ್ ನಿರಾಕರಿಸಿದ್ದಾರೆ.ತಮ್ಮ ದುರುದ್ದೇಶವನ್ನು ಮುಚ್ಚಿಕೊಳ್ಳಲು ಎರಡು ಕಡೆ ಟಿಕೆಟ್ ನೀಡಿದರೆ ಸಿದ್ರಾಮಯ್ಯನವರು ಅಲ್ಲಿ ಇಲ್ಲಿ ಓಡಾಡಬೇಕಾಗುವುದರಿಂದ ರಾಜ್ಯದಾದ್ಯಂತ ಪ್ರಚಾರಕೊಳ್ಳಲು ಕಷ್ಟವಾಗುತ್ತದೆ,ಸಿದ್ರಾಮಯ್ಯ ವರುಣಾದಲ್ಲಿ ಅತಿಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಹೇಳುತ್ತಲೇ ಸಿದ್ರಾಮಯ್ಯನವರ ಸೋಲಿಗೆ ಸ್ಕೆಚ್ ಹಾಕಿದ್ದಾರೆ.

ಹಾಗೆ ನೋಡಿದರೆ ಸಿದ್ರಾಮಯ್ಯನವರಿಗೆ ಬಿಜೆಪಿಯಲ್ಲಿ ವಿರೋಧಿಗಳಿಲ್ಲ,ಜೆಡಿಎಸ್ ನಲ್ಲಿ ಅವರ ಸೋಲು ಬಯಸುವವರಿಲ್ಲ; ಆದರೆ ಕಾಂಗ್ರೆಸ್ ಪಕ್ಷದಲ್ಲಿಯೇ ಸಿದ್ರಾಮಯ್ಯನವರನ್ನು ತುಳಿಯುವ ಕೆಟ್ಟಮನಸ್ಸಿನ ನಾಯಕರುಗಳಿದ್ದಾರೆ.ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಎನ್ನುವ ಆಲೋಚನೆಯ ಡಿ ಕೆ ಶಿವಕುಮಾರ,ಡಿ ಕೆ ಶಿವಕುಮಾರ ಅವರನ್ನು ಬಳಸಿಕೊಂಡು ಹಿಂಬಾಗಿಲಿನಿಂದ ಪ್ರವೇಶಿಸಿ ಮುಖ್ಯಮಂತ್ರಿಗಾದಿಯನ್ನು ಆಕ್ರಮಿಸಿಕೊಳ್ಳಬೇಕು ಎನ್ನುವ ಮಹಾನುಭಾವರುಗಳು ಸಿದ್ರಾಮಯ್ಯನವರನ್ನು ಸೋಲಿಸಲು ಸಂಚು ರೂಪಿಸಿದ್ದಾರೆ.

ಕರ್ನಾಟಕದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್,ದೇವರಾಜು ಅರಸು ಅವರ ನಂತರ ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಪ್ರಾಮಾಣಿಕ ಕಾಳಜಿ- ಕಳಕಳಿಯಿಂದ ಕೆಲಸ ಮಾಡಿದ ನಾಯಕರೆಂದರೆ ಸಿದ್ರಾಮಯ್ಯನವರೆ.ಕರ್ನಾಟಕದ ಇಂದಿನ ರಾಜಕಾರಣಿಗಳಲ್ಲಿ ಸಂವಿಧಾನಕ್ಕೆ ಬದ್ಧರಿರುವ,ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುವ ಏಕೈಕ ರಾಜಕಾರಣಿ ಸಿದ್ರಾಮಯ್ಯ.ಸಂವಿಧಾನದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಕಾಂಗ್ರೆಸ್ ನಾಯಕರುಗಳಲ್ಲಿಯೇ ಸಂವಿಧಾನದ ಬಗೆಗೆ ಬದ್ಧತೆಯಿಲ್ಲ,ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುವವರು ಕಾಂಗ್ರೆಸ್ ಪಕ್ಷದಲ್ಲಿ ಬೆರಳೆಣಿಕೆಯ ನಾಯಕರು ಮಾತ್ರ.ಸಿದ್ರಾಮಯ್ಯನವರನ್ನು ಬಿಟ್ಟರೆ ಕಾಂಗ್ರೆಸ್ ನಲ್ಲಿ ಸಂವಿಧಾನದ ಪರಧ್ವನಿ ಎತ್ತುವ,ಸಂವಿಧಾನದ ಜಾಗೃತಿಮೂಡಿಸುತ್ತಿರುವ ನಾಯಕರೆಂದರೆ ವಿ ಎಸ್ ಉಗ್ರಪ್ಪನವರು ಮಾತ್ರ! ಹಾಗಾಗಿ ವರುಣಾ ಕ್ಷೇತ್ರದ ಮತದಾರರು ಸಂವಿಧಾನವನ್ನು ಗೆಲ್ಲಿಸಬೇಕಿದೆ,ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕಿದೆ.ವರುಣಾದಲ್ಲಿ ಸಿದ್ರಾಮಯ್ಯನವರು ಗೆಲ್ಲುವುದು ಎಂದರೆ ಅದು ಪ್ರಜಾಪ್ರಭುತ್ವದ ಗೆಲುವು,ಸಂವಿಧಾನದ ಗೆಲುವು.ಸಿದ್ರಾಮಯ್ಯ ಪ್ರಜಾಪ್ರಭುತ್ವದ ಆಶಯಗಳ ಸಾಕಾರರೂಪ,ಸಂವಿಧಾನದ ಆಶಯಗಳ ಮೂರ್ತಸ್ವರೂಪ.ಈ ಕಾರಣದಿಂದ ಸಿದ್ರಾಮಯ್ಯನವರು ಗೆಲ್ಲಲೇಬೇಕು.

ಸಿದ್ರಾಮಯ್ಯನವರ ಬಗೆಗೆ ಕೆಲವು ಜನರು ಇಲ್ಲಸಲ್ಲದ ಆರೋಪ ಮಾಡುತ್ತಾರೆ.ಆದರೆ ಯಾವುದೇ ಹಗರಣಗಳಿಲ್ಲದ ಸ್ವಚ್ಛ ಮತ್ತು ಜನಪರ ಆಡಳಿತ ನೀಡಿದ ಮುಖ್ಯಮಂತ್ರಿ ಸಿದ್ರಾಮಯ್ಯ ಎನ್ನುವುದನ್ನು ಮರೆಯುತ್ತಾರೆ.ಹತ್ತು ಹಲವು ಭಾಗ್ಯಗಳನ್ನಿತ್ತು ಬಡವರ ಬದುಕುಗಳಲ್ಲಿ ಭರವಸೆಮೂಡಿಸಿದ ಭಾಗ್ಯವಿಧಾತ ಸಿದ್ರಾಮಯ್ಯನವರು.ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸ್ವಜಾತಿಯ ಸಚಿವ ಆಕಾಂಕ್ಷಿಗಳನ್ನು ಪಕ್ಕಕ್ಕೆ ಸರಿಸಿ ದಲಿತರು,ಹಿಂದುಳಿದವರು ಮತ್ತು ಅಲ್ಪ ಸಂಖ್ಯಾತರಿಗೆ ಮಹತ್ವದ ಸಚಿವ ಸ್ಥಾನಗಳನ್ನು ನೀಡಿದರು.ಎಚ್ ಸಿ ಮಹಾದೇವಪ್ಪನವರಿಗೆ ಲೋಕೋಪಯೋಗಿಯಂತಹ ಅದುವರೆಗೂ ದಲಿತರಿಗೆ ಗಗನಕುಸುಮವಾಗಿದ್ದ ಮಹತ್ವದ ಖಾತೆಯನ್ನು ನೀಡಿದರು.ಎಚ್ ಆಂಜನೇಯ ಅವರಿಗೆ ಸಮಾಜಕಲ್ಯಾಣ ಇಲಾಖೆಯನ್ನು ನೀಡಿದ್ದಲ್ಲದೆ ಅವರು ಕೇಳಿದಷ್ಟು ಅನುದಾನವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಿದರು.ಆಂಜನೇಯ ಅವರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ಅವರ ಬೆಂಬಲಕ್ಕೆ ನಿಂತರು.ಜಾರ್ಜ್ ಅವರಿಗೆ ಗೃಹಖಾತೆಯನ್ನು ನೀಡಿದ್ದರು.ದಲಿತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ತೆಗೆದಿರಿಸಬೇಕು ಎಂದು ಶಾಸನ ರೂಪಿಸಿ ಅನುಷ್ಠಾನಗೊಳಿಸಿದ ಪ್ರಾಮಾಣಿಕ ದಲಿತಪರ ಕಾಳಜಿಯ ನಾಯಕ.ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೊಡ್ಡ ದೊಡ್ಡ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದ ದಲಿತ ಜನಾಂಗಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ ನಾಯಕರುಗಳು ಬಜೆಟಿನಲ್ಲಿ ದಲಿತರಿಗೆ ಪ್ರತ್ಯೇಕ ಅನುದಾನ ತೆಗೆದಿರಿಸುವ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ.ಆಂಧ್ರಪ್ರದೇಶವನ್ನು ಹೊರತುಪಡಿಸಿದರೆ ಇಡೀ ದೇಶದಲ್ಲಿ ಪರಿಶಿಷ್ಟಜಾತಿ,ಪರಿಶಿಷ್ಟ ಪಂಗಡಗಳ ಜನಾಂಗಗಳ ಏಳ್ಗೆಗೆ ಬಜೆಟಿನಲ್ಲಿ ಅನುದಾನ ಕಾಯ್ದಿರಿಸಿ,ಬಳಸುವ ಏರ್ಪಾಟು ಮಾಡಿದವರೆಂದರೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ರಾಮಯ್ಯನವರು ಮಾತ್ರ.ಸಿವಿಲ್ ಕಾಮಗಾರಿಗಳಲ್ಲಿ ದಲಿತ ಗುತ್ತೆದಾರರಿಗೆ ಮೀಸಲಾತಿ ಕಲ್ಪಿಸಿದರು,ಐವತ್ತು ಲಕ್ಷಗಳವರೆಗಿನ ಕಾಮಗಾರಿಗಳಿಗೆ ಅವರಿಗೆ ಕೆ ಟಿ ಪಿ ಪಿ ನಿಯಮಗಳಲ್ಲಿ ವಿನಾಯತಿ ನೀಡಿದರು.ದಲಿತರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರುವಂತಹ ಕ್ರಾಂತಿಕಾರಕ ಕಾನೂನು,ಯೋಜನೆಗಳನ್ನು ರೂಪಿಸಿ,ಅನುಷ್ಠಾನಗೊಳಿಸಿದವರು ಸಿದ್ರಾಮಯ್ಯನವರು.

ಅನ್ನಭಾಗ್ಯ ಯೋಜನೆಯ ಮೂಲಕ ಬಡವರ ಹೊಟ್ಟೆಯ ಬವಣೆ ನೀಗಿಸಿದರು.ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿದ್ದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಕೆಲವರು ಆರೋಪಿಸಬಹುದು.ಆದರೆ ಆ ಅಕ್ಕಿಯನ್ನು ಮಾರಿದ ಹಣವಾದರೂ ಬಡವರು,ದುರ್ಬಲ ವರ್ಗಗಳ ಜನರಿಗೆ ಸೇರುತ್ತಿತ್ತಲ್ಲ.ಬಡವರಿಗೆ ಅದು ಕೂಡ ಆರ್ಥಿಕ ಭದ್ರತೆಯೆ. ಇಂದಿರಾ ಕ್ಯಾಂಟೀನ್ಗಳ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಪೌಷ್ಠಿಕ ಊಟ ಉಪಹಾರ ನೀಡುವ ಏರ್ಪಾಟು ಮಾಡಿದರು.ಸಮಷ್ಟಿ ಕಲ್ಯಾಣದ ಕಲ್ಪನೆಯಲ್ಲಿ ಅರಳಿದ ಸಿದ್ರಾಮಯ್ಯನವರ ಕೊಡುಗೆಗಳನ್ನು ಕರ್ನಾಟಕದ ಜನತೆ ಅರ್ಥಮಾಡಿಕೊಳ್ಳಬೇಕು.

ತಮ್ಮ ಬದುಕುವ ಹಕ್ಕುಗಳೊಂದಿಗೆ ಅಧಿಕಾರಸ್ಥರು ಆಟವಾಡುತ್ತಿದ್ದ ವಿಷಮ ದಿನಗಳಲ್ಲಿ ಭಯ ಆತಂಕಕ್ಕೆ ಈಡಾಗಿದ್ದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಪರವಾಗಿ ನಿಜವಾದ ಕಾಳಜಿಯಿಂದ ನಿಂತು ಅವರ ಪರವಾಗಿ ಧ್ವನಿ ಎತ್ತಿದ್ದಾರೆ ಸಿದ್ರಾಮಯ್ಯನವರು.ಮುಸ್ಲಿಂ ಸಮುದಾಯ ಯಾವ ಕಾಂಗ್ರಸ್ ನಾಯಕರುಗಳನ್ನು ನಂಬುವುದಿಲ್ಲ; ಆದರೆ ಸಿದ್ರಾಮಯ್ಯನವರಲ್ಲಿ ತಮ್ಮಪರವಾಗಿ ಇರುವ ನಿಜನಾಯಕನನ್ನು ಗುರುತಿಸಿದ್ದಾರೆ.ಮುಸ್ಲಿಂ ಸಮುದಾಯದವರು ಸಿದ್ರಾಮಯ್ಯನವರನ್ನು ಮುಕ್ತಮನಸ್ಸಿನಿಂದ ಬೆಂಬಲಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಉಳಿದದ್ದು ಸಿದ್ರಾಮಯ್ಯನವರ ಅಬ್ಬರದಿಂದಾಗಿಯೇ ಎನ್ನುವುದನ್ನು ಆ ಪಕ್ಷದ ದೊಡ್ಡ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು.ಸಾವಿರಾರುಕೋಟಿಗಳ ಆಸ್ತಿ ಮಾಡಿದ ಕಾಂಗ್ರೆಸ್ ನಾಯಕರುಗಳು ಮೋದಿ,ಅಮಿತ್ ಶಾ ಅವರ ಹೆಸರುಗಳನ್ನು ಕೇಳಿಯೇ ಗಡಗಡ ನಡುಗುತ್ತಿದ್ದ ಸಂದರ್ಭದಲ್ಲಿ ಸಿದ್ರಾಮಯ್ಯ ಒಬ್ಬರೇ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಬ್ಬರ ವಿರುದ್ಧ ಗುಡುಗುತ್ತಿದ್ದರು.ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರುಗಳು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಬ್ಬರ ವಿರುದ್ಧ ಧ್ವನಿ ಎತ್ತಿ ಮಾತನಾಡಿದ್ದು ಕಡಿಮೆ.ಹಾಗೆ ಮಾತನಾಡುವ ಸಂದರ್ಭದಲ್ಲಿ ತಮಗೆ ಧಕ್ಕೆ ಬಾರದ ರೀತಿಯಲ್ಲಿ ಸಮತೋಲಿತ ಮಾತುಗಳನ್ನಾಡುತ್ತಿದ್ದರು.ಬಿಜೆಪಿಯ ಅಗ್ರ ನೇತಾರರುಗಳಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಬ್ಬರಿಗೂ ಕರ್ನಾಟಕದ ರಾಜಕಾರಣದಲ್ಲಿ ಹುಲಿ ಎಂದರೆ ಸಿದ್ರಾಮಯ್ಯ ಎಂದು ಮನವರಿಕೆಯಾಗಿ ಅವರನ್ನು ಸೋಲಿಸಲು ಪ್ರಯತ್ನಿಸುತ್ತಿದ್ದಾರೆ.ಅದು ಸಹಜ.ಆದರೆ ಕಾಂಗ್ರೆಸ್ ನಾಯಕರುಗಳಿಗೇಕೆ ಸಿದ್ರಾಮಯ್ಯನವರ ಬಗ್ಗೆ ಅಸಹನೆ? ಇಂದಿಗೂ ಸಿದ್ರಾಮಯ್ಯನವರನ್ನು ವಲಸಿಗರು ಎಂದೇ ಕರೆಯುವ ಕಾಂಗ್ರೆಸ್ಸಿನ ನಾಯಕರುಗಳು ಸಿದ್ರಾಮಯ್ಯನವರಿಲ್ಲದೆ‌ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬಹುದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು.

ನಿಜವಾದ ನಾಯಕರು ಮಾತ್ರ ನಾಯಕರುಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಬಿ ಎಸ್ ಯಡಿಯೂರಪ್ಪನವರು ಉತ್ತಮ ನಿದರ್ಶನ.ಬಿಜೆಪಿಯ ವರಿಷ್ಠರು ವರುಣಾದಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ನಿಲ್ಲಿಸಲು ಆಲೋಚಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕೊಡನೆ ಅತ್ಯುತ್ಸಾಹದಲ್ಲಿ ಮುನ್ನುಗ್ಗುತ್ತಿದ್ದ ವಿಜಯೇಂದ್ರರಿಗೆ ಬುದ್ಧಿ ಹೇಳಿ,ವಿಜಯೇಂದ್ರ ವರುಣಾದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು ಯಡಿಯೂರಪ್ಪನವರು.ಇದು ಯಡಿಯೂರಪ್ಪನವರ ರಾಜಕೀಯ ಪ್ರಬುದ್ಧ ನಡೆ.ಲಿಂಗಾಯತ ಜನಾಂಗದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರು ಕುರುಬರ ಪ್ರಶ್ನಾತೀತ ನಾಯಕ ಮತ್ತು ಅಹಿಂದ ವರ್ಗಗಳ ಮಹಾನ್ ಶಕ್ತಿ ಸಿದ್ರಾಮಯ್ಯನವರಿಗೆ ತೊಡರು ಆಗಬಾರದು ಎಂದು ಯೋಚಿಸಿದರು.ಬಿಜೆಪಿ ವರಿಷ್ಠರು ಯಡಿಯೂರಪ್ಪನವರ ಬಗ್ಗೆ ಏನೇ ತಿಳಿದುಕೊಳ್ಳಲಿ,ಯಡಿಯೂರಪ್ಪನರ ನಿಲುವು ಪಕ್ವವಾಗಿತ್ತು,ನಿರ್ಧಾರ ಸರಿಯಾಗಿತ್ತು.ನರೇಂದ್ರ ಮೋದಿ,ಅಮಿತ್ ಶಾ ಅವರ ಮಾತುಗಳನ್ನು ಕೇಳಿ ರಾಜ್ಯದಲ್ಲಿ ನಾವೇಕೆ ಸಂಬಂಧಗಳನ್ನು ಹಾಳುಮಾಡಿಕೊಳ್ಳಬೇಕು ಎನ್ನುವ ಯಡಿಯೂರಪ್ಪನವರ ಆಲೋಚನೆ ಸರಿಯಾದುದು.

ಜೆಡಿಎಸ್ ನ ಹೆಚ್ ಡಿ ಕುಮಾರಸ್ವಾಮಿಯವರು ರಾಜಕೀಯ ಭಿನ್ನಾಭಿಪ್ರಾಯಗಳಿಗಾಗಿ ಸಿದ್ರಾಮಯ್ಯನವರನ್ನು ವಿರೋಧಿಸುತ್ತಾರೆಯೇ ಹೊರತು ಸಿದ್ರಾಮಯ್ಯನವರು ರಾಜಕೀಯವಾಗಿ ಮೂಲೆಗುಂಪಾಗಲಿ ಎಂದು ಬಯಸುವುದಿಲ್ಲ.ಎಚ್ ಡಿ ರೇವಣ್ಣನವರಿಗಂತೂ ಸಿದ್ರಾಮಯ್ಯನವರ ಬಗ್ಗೆ ವಿಶೇಷ ಗೌರವಾದರಗಳು.ಜೆಡಿಎಸ್ ನ ಅಗ್ರಮಾನ್ಯ ನಾಯಕ ಎಚ್ ಡಿ ದೇವೆಗೌಡರು ಕೂಡ ಸಿದ್ರಾಮಯ್ಯನವರ ಏಳ್ಗೆಯನ್ನು ಬಯಸುತ್ತಾರೆ.ಸಿದ್ರಾಮಯ್ಯನವರು ಲಿಂಗಾಯತರ ವಿರೋಧಿ ಎಂದು ಬಿಂಬಿಸುವುದು ಅಪ್ಪಟ ಸುಳ್ಳು.ಯಾವುದೇ ಮಹತ್ವಾಕಾಂಕ್ಷೆಯ ರಾಜಕೀಯ ನಾಯಕ ಎಲ್ಲ ಜನಾಂಗಗಳ ನಾಯಕರುಗಳಲ್ಲಿ ತನ್ನನ್ನು ಬೆಂಬಲಿಸುವ ಯುವಮುಖಗಳನ್ನು ನಿರೀಕ್ಷಿಸುವಂತೆ ಸಿದ್ರಾಮಯ್ಯನವರು ಲಿಂಗಾಯತ ಸಮುದಾಯದ ಕೆಲವು ಜನ ಹಳೆಯ ತಲೆಮಾರಿನ ನಾಯಕರುಗಳನ್ನು ಕಡೆಗಣಿಸಿರಬಹುದು.ಎಂ.ಬಿ.ಪಾಟೀಲ್ ,ಎಸ್ ಆರ್ ಪಾಟೀಲ್ ಅವರಂತಹ ಲಿಂಗಾಯತ ನಾಯಕರುಗಳನ್ನು ಪ್ರೋತ್ಸಾಹಿಸಿದ್ದಾರೆ,ಅವರ ರಾಜಕೀಯ ಕನಸುಗಳಿಗೆ ಕಸುವು ತುಂಬಿದ್ದಾರೆ ಸಿದ್ರಾಮಯ್ಯನವರು.ನಾಲ್ಕೈದು ತಿಂಗಳುಗಳ ಹಿಂದೆ ಸಿದ್ರಾಮಯ್ಯನವರು ರಂಭಾಪುರಿ ಪೀಠಕ್ಕೂ ಭೇಟಿ ನೀಡಿದ್ದರು.ಮೈಸೂರಿನ ಸುತ್ತೂರು ಶ್ರೀಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.ಶಾಮನೂರು ಶಿವಶಂಕ್ರಪ್ಪ,ಹಂಪನಗೌಡ ಬಾದರ್ಲಿ ಅವರಂತಹ ಲಿಂಗಾಯತ ನಾಯಕರುಗಳ ಮನೆಗಳ ಮದುವೆ ಸಮಾರಂಭದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಉತ್ಸುಕತೆಯಿಂದ ಪಾಲ್ಗೊಂಡಿದ್ದಾರೆ.ಲಿಂಗಾಯತ ಸಮುದಾಯದ ನಾಯಕರಾರೂ ಸಿದ್ರಾಮಯ್ಯನವರನ್ನು ಲಿಂಗಾಯತ ವಿರೋಧಿ ಎನ್ನುವುದಿಲ್ಲ,ಬೇರೆ ಸಮಾಜದ ರಾಜಕಾರಣಿಗಳು ಇಂತಹ ಆರೋಪ ಮಾಡುತ್ತಿದ್ದಾರೆ.

‌ಸಿದ್ರಾಮಯ್ಯನವರ ಮೇಲಿನ ಪ್ರೀತಿ,ಅಭಿಮಾನಗಳಿಂದ ನಾನು ಈ ಲೇಖನ ಬರೆಯುತ್ತಿಲ್ಲ.ಸಂವಿಧಾನವನ್ನು ಧಿಕ್ಕರಿಸಿ ನಡೆಯುತ್ತಿರುವ,ಬಡವರು- ದುರ್ಬಲ ವರ್ಗಗಳ ಗೌರವಯುತ ಬದುಕುವ ಹಕ್ಕುಗಳೊಂದಿಗೆ ಚೆಲ್ಲಾಟವಾಡುತ್ತಿರುವ ವ್ಯಕ್ತಿಗಳ ಕೈ ಮೇಲಾಗಬಾರದು,ಪ್ರಜಾಪ್ರಭುತ್ವದ ಸಂತುಲತೆಗೆ,ಸಮತೋಲನಕ್ಕೆ‌ ಪ್ರಶ್ನಿಸುವ ಮನೋಭಾವದ ಸಮರ್ಥ ನಾಯಕರೊಬ್ಬರು ಇರಬೇಕು ಎನ್ನುವ ಕಾಳಜಿ,ಕಳಕಳಿಗಳಿಂದ ಈ ಲೇಖನ ಬರೆದಿದ್ದೇನೆ.ನನ್ನ ಲೇಖನದ ವಿಷಯ ಒಪ್ಪುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು.ಸದಾ ಪ್ರಜಾಪ್ರಭುತ್ವದ ಪರವಾಗಿಯೇ ಇರುವ ,ಸಂವಿಧಾನಪ್ರಜ್ಞೆಯನ್ನು ಬಿತ್ತಿ ಬೆಳೆಯುತ್ತಿರುವ ನಾನು ಸಿದ್ರಾಮಯ್ಯನವರು ಸಂವಿಧಾನಕ್ಕೆ ಬದ್ಧರಿರುವ ಪ್ರಬುದ್ಧ ನಾಯಕ ಎನ್ನುವ ಕಾರಣದಿಂದ ಅವರನ್ನು ಬೆಂಬಲಿಸಿದ್ದೇನೆ.

About The Author