ಮೂರನೇ ಕಣ್ಣು : ಯಾರಾಗುತ್ತಾರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ? –ಮುಕ್ಕಣ್ಣ ಕರಿಗಾರ

ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಸಮಾಜಪರ ಬದ್ಧತೆಯುಳ್ಳ ಕನ್ನಡದ ಪ್ರಬುದ್ಧ ಪತ್ರಕರ್ತರು.ಲಂಕೇಶರಷ್ಟು ಪ್ರಖರ ಗಟ್ಟಿತನ ಇರದೆ ಇದ್ದರೂ ಮೆಲುದನಿಯಲ್ಲಿಯೇ ಸತ್ಯವನ್ನು,ಸಮಾಜಪರ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸಬಲ್ಲ ಸಮಾಜಮುಖಿ ಬರಹಗಾರ,ಪತ್ರಕರ್ತ.ಈ ಕಾರಣದಿಂದ ಅವರು ನನಗೆ ಇಷ್ಟವಾಗುತ್ತಾರೆ.ಸೌಹಾರ್ದ ಕರ್ನಾಟಕ ಕಟ್ಟುವ ಚಂದ್ರಕಾಂತ ವಡ್ಡು ಅವರ ಪ್ರಾಮಾಣಿಕ ಕಾಳಜಿ,ಕಳಕಳಿಗಳು ಉಲ್ಲೇಖನಾರ್ಹ.ಅವರು ‘ ಸಮಾಜಮುಖಿ’ ಎನ್ನುವ ಮಾಸಪತ್ರಿಕೆ ಒಂದನ್ನು ಹೊರತರುತ್ತಿದ್ದು ಅದು ಕನ್ನಡದ ವಿಶಿಷ್ಟಪತ್ರಿಕೆಯಾಗಿದ್ದು ಯಾರ ಪ್ರೀತಿ,ಯಾವುದೇ ಭೀತಿಗೆ ಒಳಗಾಗದೆ ವಸ್ತುನಿಷ್ಠವಾಗಿ,ಸತ್ಯನಿಷ್ಠವಾಗಿ ಮೂಡಿ ಬರುತ್ತಿರುವುದರಿಂದ ಅದು ‘ಕನ್ನಡದ ಪ್ರಾತಿನಿಧಿಕ ಮಾಸಪತ್ರಿಕೆ’ ಯ ಹೆಗ್ಗಳಿಕೆ ಪಡೆದಿದೆ.ಈ ಸಲದ ಸಂಚಿಕೆಯ ಸಂಪಾದಕೀಯದಲ್ಲಿ ಚಂದ್ರಕಾಂತ ವಡ್ಡು ಅವರು ತಮ್ಮ ಪತ್ರಿಕೆಯ ಬರಹಗಾರರು ಮತ್ತು ಓದುಗರ ಅಭಿಪ್ರಾಯಗಳನ್ನು ಆಧರಿಸಿ ಸಿದ್ರಾಮಯ್ಯ,ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರ ಹೆಸರುಗಳನ್ನು ಪ್ರಸ್ತಾಪಿಸಿ ಈ ಮೂವರಲ್ಲಿ ಯಾರು ಮುಖ್ಯಮಂತ್ರಿಯಾದರೆ ಒಳ್ಳೆಯದು ಎನ್ನುವ ಅಭಿಪ್ರಾಯ ಸಂಗ್ರಹಿಸಿ’ ಯಾರು ಹಿತವರು ಈ ಮೂವರೊಳಗೆ?’ ಎಂದು ಬರೆಯುತ್ತ ಕವಿ ಕೆ.ಎಸ್ ನಿಸಾರ ಅಹಮದ್ ಅವರ ಕವನ ಒಂದರ ‘ ಮತ್ತದೆಬೇಸರ..’ ಸಾಲುಗಳನ್ನು ಉಲ್ಲೇಖಿಸಿ ಸಂಪಾದಕೀಯ ಬರೆದಿದ್ದಾರೆ.

ಚಂದ್ರಕಾಂತ ವಡ್ಡು ಅವರು ಪ್ರಸ್ತಾಪಿಸುವ ಮೂವರೊಳಗೆ ಸಿದ್ರಾಮಯ್ಯ ಒಬ್ಬರಿಗೆ ಮಾತ್ರ ಮುಖ್ಯಮಂತ್ರಿ ಆಗುವ ಅರ್ಹತೆ,ಸಾಮರ್ಥ್ಯ,ಸತ್ತ್ವಗಳಿವೆ .ಸಿದ್ರಾಮಯ್ಯ ಅವರ ಬಗ್ಗೆ ಯಾರು ಏನೇ ಹೇಳಲಿ ಪ್ರಸ್ತುತದಿನಮಾನಗಳ ಅವಕಾಶವಾದಿ,ಸಣ್ಣಮನಸ್ಸಿನ ರಾಜಕಾರಣಿಗಳ ನಡುವೆ ದಲಿತರು,ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಪ್ರಾಮಾಣಿಕ ಕಾಳಜಿ,ಕಳಕಳಿಗಳನ್ನುಳ್ಳ ,ಸಂವಿಧಾನಕ್ಕೆ ಬದ್ಧರಿರುವ,ಸಂವಿಧಾನದ ಆಶಯಗಳಂತೆ ನಡೆದುಕೊಳ್ಳುವ ಪ್ರಬುದ್ಧ ರಾಜಕಾರಣಿ,ಏಕೈಕ ರಾಜಕಾರಣಿ ಎಂದರೆ ಸಿದ್ರಾಮಯ್ಯ ಒಬ್ಬರೇ!

ಚಂದ್ರಕಾಂತ ವಡ್ಡು ಅವರು ಸಿದ್ರಾಮಯ್ಯ,ಎಚ್ ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಈ ಮೂವರಲ್ಲಿ ಯಾರಾದರೂ ಒಬ್ಬರು ಮುಖ್ಯಮಂತ್ರಿ ಆಗಬಹುದು ಎಂದು ತರ್ಕಿಸಿದ್ದಾರೆ.ಆದರೆ ಇವರಾರೂ ಮುಖ್ಯಮಂತ್ರಿಗಳಾಗುವುದಿಲ್ಲ! ಬಿಜೆಪಿಯ ವಿರೋಧಿ ಅಲೆ ಇದೆಯಾದರೂ ಕಾಂಗ್ರೆಸಿನಲ್ಲಿ ಸಿದ್ರಾಮಯ್ಯನವರನ್ನು ಮೂಲೆಗುಂಪು ಮಾಡಲು ಆ ಪಕ್ಷದ ವರಿಷ್ಠರು ನಡೆಸುತ್ತಿರುವ ಕುತಂತ್ರವೇ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿ ಮತದಾರರು ಬಿಜೆಪಿಯತ್ತ ವಾಲುತ್ತಾರೆ.ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರುಗಳ ಸ್ವಾರ್ಥ,ಸಣ್ಣತನಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅವಕಾಶ ಕಳೆದುಕೊಳ್ಳಲಿದೆ.

ಜನತಾದಳವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ.ಆದರೆ ರಾಜಕೀಯ ಆಟ ಆಡುವಷ್ಟು ಸೀಟುಗಳನ್ನು ಆ ಪಕ್ಷ ಪಡೆಯುವುದಿಲ್ಲ‌.ಕೆಲವೊಂದು ಅನಿರೀಕ್ಷಿತ ಪೆಟ್ಟುಗಳಿಂದ ಜೆಡಿಎಸ್ ತತ್ತರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆಯು ಫಲಿಸಿ ಕರ್ನಾಟಕದಲ್ಲಿ ಬಿಜೆಪಿಯು ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.ಆದರೆ ಬಸವರಾಜ ಬೊಮ್ಮಾಯಿ ಅವರು ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ.ಆರ್ ಎಸ್ ಎಸ್ ನಿಷ್ಠ ಸೌಮ್ಯಸ್ವಭಾವದ ವ್ಯಕ್ತಿ ಒಬ್ಬರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ.

About The Author