ಚಿಂತನೆ : ವಿಜಯವನ್ನು ಕರುಣಿಸುವ ವಿಶ್ವೇಶ್ವರಿ ದುರ್ಗಾ ಪರಮೇಶ್ವರಿ : ಮುಕ್ಕಣ್ಣ ಕರಿಗಾರ

‘ ದುರ್ಗಾ’ ಎಂದರೆ ‘ ದುರಿತ ನಿವಾರಕಿ’ ಎಂದರ್ಥ.ಮನುಷ್ಯರನ್ನು ಕಾಡುವ ಅಪಮೃತ್ಯು,ಅಪಜಯ,ಶತ್ರುಪೀಡೆ,ಗ್ರಹಬಾಧೆ,ಅಭಿಚಾರಾದಿ ಕರ್ಮಗಳಿಂದ ಭಕ್ತರನ್ನು ರಕ್ಷಿಸಿ,ಕಾಪಾಡುವ ದೇವಿಯೇ ದುರ್ಗಾ ಪರಮೇಶ್ವರಿ.ಹಿಂದೆ ರಾಜಮಹಾರಾಜರುಗಳು ಶತ್ರುಗಳ ವಿರುದ್ಧ ವಿಜಯಕ್ಕೆ ಮತ್ತು ಶತ್ರುಗಳಿಂದ ತಮ್ಮ ರಾಜ್ಯ ರಕ್ಷಣೆಗೆ ದೇವಿದುರ್ಗೆಯ ಮಂದಿರಗಳನ್ನು ಕಟ್ಟಿ ಪೂಜಿಸುತ್ತಿದ್ದರು.ಹಳೆಯ ಕಾಲದ ಕೋಟೆಗಳಲ್ಲಿ ದುರ್ಗಾದೇವಿಯ ದೇವಸ್ಥಾನ,ಪುಟ್ಟ ಗುಡಿಗಳಿರುತ್ತಿದ್ದವು.ದುರ್ಗ ಎಂದರೆ ಕೋಟೆ ಎಂದರ್ಥವಿದ್ದು ಕೋಟೆಯನ್ನು ಶತ್ರುಗಳಿಂದ ರಕ್ಷಿಸುವ ದೇವಿಯೇ ದುರ್ಗಾದೇವಿ ಎಂದು ದೇವಿಯನ್ನು ಪೂಜಿಸುತ್ತಿದ್ದರು.ದೇಹವು ದುರ್ಗವೇ ಆಗಿದ್ದು ದೇಹವನ್ನು ರಕ್ಷಿಸುವ ದೇವಿಯೇ ದುರ್ಗಾದೇವಿ.

ದುರ್ಗಾದೇವಿಯ ಆರಾಧನೆ ಬಹು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ ಎನ್ನುವುದಕ್ಕೆ ವೇದದ ‘ ದುರ್ಗಾಸೂಕ್ತ’ ವೇ ಸಾಕ್ಷಿ.ವೇದದಲ್ಲಿ ದುರ್ಗಾದೇವಿಯನ್ನು ಅಗ್ನಿಯೊಂದಿಗೆ ಸಮೀಕರಿಸಲಾಗಿದೆ.ರುದ್ರನು ಅಗ್ನಿಯಾಗಿದ್ದು ರುದ್ರನ ಪತ್ನಿಯೇ ದುರ್ಗೆಯಾದುದರಿಂದ ಅಗ್ನಿಯೊಂದಿಗೆ ದುರ್ಗೆಯನ್ನು ಸಮೀಕರಿಸಿದ್ದು ಸರಿಯಾಗಿದೆ.ವೇದಕಾಲದ ಋಷಿಗಳು ಸಹ ಸಂಸಾರನಾವೆಯಿಂದ ನಮ್ಮನ್ನು ರಕ್ಷಿಸು ಎಂದು ದುರ್ಗಾದೇವಿಯನ್ನು ಮೊರೆಯುತ್ತಿದ್ದರು.ಅನಾದಿಕಾಲದಿಂದಲೂ ದೇವಿ ದುರ್ಗೆಯು ರಕ್ಷಕ ದೇವಿಯಾಗಿದ್ದಳು ಎನ್ನುವುದನ್ನು ವೇದದ ‘ದುರ್ಗಾಸೂಕ್ತ’ ವು ಸ್ಪಷ್ಟವಾಗಿ ಸಾರುತ್ತದೆ.ವೇದದ ದುರ್ಗಾಸೂಕ್ತದಂತಹ ಮೂಲಸೂಕ್ತಗಳೊಂದಿಗೆ ಶ್ರೀಸೂಕ್ತಗಳಂತಹ ಖಿಲಸೂಕ್ತಗಳನ್ನು ಅಧ್ಯಯನ ಮಾಡಿ ಋಷಿ ಮಾರ್ಕಂಡೇಯರು ದುರ್ಗಾದೇವಿಯನ್ನು ಮಹಾಕಾಲಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರೆಂಬ ಮೂರು ಮಹಾಶಕ್ತಿಗಳ ಸಂಗಮಶಕ್ತಿ,ಸಮೈಕ್ಯಶಕ್ತಿ ಎಂದು ದುರ್ಗಾದೇವಿಯನ್ನು ದರ್ಶಿಸಿದ್ದಾರೆ ‘ ದುರ್ಗಾಸಪ್ತಶತಿ’ ಯಲ್ಲಿ.

ಮಹಾಶೈವ ಧರ್ಮಪೀಠದಲ್ಲಿ ಶಿವನ ಶಕ್ತಿಯಾಗಿರುವ ದುರ್ಗಾದೇವಿಯನ್ನು ವೇದದ ‘ ದುರ್ಗಾಸೂಕ್ತ’ ಮತ್ತು ಮಾರ್ಕಂಡೇಯ ಋಷಿಗಳ ‘ ದುರ್ಗಾಸಪ್ತಶತಿ’ ತತ್ತ್ವಗಳಿಗನುಗುಣವಾಗಿ ಪ್ರತಿಷ್ಠಾಪಿಸಿರುವುದರಿಂದ ದೇವಿಯು ‘ ವಿಶ್ವೇಶ್ವರಿ ದುರ್ಗಾ’ ಎಂದು ಕರೆಯಿಸಿಕೊಂಡಿದ್ದಾಳೆ.ಮಹಾಶೈವ ಧರ್ಮಪೀಠವು ಶಿವಶಕ್ತ್ಯಾದ್ವೈತದ ಮಹಾಮಠವಾಗಿದ್ದು ಶಿವನು ವಿಶ್ವನಿಯಾಮಕನಾದ ವಿಶ್ವೇಶ್ವರನಾಗಿದ್ದರೆ ಶಿವನ ಅರ್ಧಾಂಗಿನಿಯಾಗಿರುವ ಶಕ್ತಿಯು ಜಗನ್ನಿಯಾಮಕಳಾದ ‘ ವಿಶ್ವೇಶ್ವರಿ’ ಎನ್ನಿಸಿಕೊಂಡಿದ್ದಾಳೆ.ದೇವಿ ದುರ್ಗೆಯ ‘ ವಿಶ್ವೇಶ್ವರಿ’ ತತ್ತ್ವವು ‘ದುರ್ಗಾಸೂಕ್ತ’ ಮತ್ತು ‘ದುರ್ಗಾಸಪ್ತಶತಿ’ ಗಳ ದರ್ಶನದ ಬೆಳಕಿನಲ್ಲರಳಿದ ಮಹಾತತ್ತ್ವವು.ವಿಶ್ವೇಶ್ವರಿ ದುರ್ಗಾದೇವಿಯ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಚಂಡಿಹೋಮದೊಂದಿಗೆ ದುರ್ಗಾಸೂಕ್ತ ಪಠಣೆ ಮತ್ತು ದುರ್ಗಾಸಪ್ತಶತಿಯ ಅಖಂಡಪಾರಾಯಣ ಮತ್ತು ದುರ್ಗಾಸಹಸ್ರನಾಮ ಪಠಣೆಯೊಂದಿಗೆ ದೇವಿದುರ್ಗೆಯ ದೈವೀಶಕ್ತಿಯನ್ನು,ದಿವ್ಯಕಳೆಯನ್ನು ಆಹ್ವಾನಿಸಲಾಗಿದೆ.ಷೋಡಶಕಳಾಪ್ರಪೂರ್ಣೆಯಾಗಿ ಪ್ರಕಟಗೊಂಡಿದ್ದಾಳೆ ವಿಶ್ವೇಶ್ವರಿ ದುರ್ಗಾದೇವಿಯು.

ವಿಶ್ವೇಶ್ವರಿ ದುರ್ಗಾದೇವಿಯು ವಿಶ್ವನಿಯಾಮಕಿಯಾಗಿರುವುದರಿಂದ ತನ್ನನ್ನು ನಂಬಿ ಬರುವ ಭಕ್ತರಿಗೆ ಭೋಗ ಮೋಕ್ಷಗಳೆರಡನ್ನು ಕರುಣಿಸುತ್ತಿದ್ದಾಳೆ.ನಿಗ್ರಹಾನುಗ್ರಹ ಸಮರ್ಥಳಿರುವ ವಿಶ್ವೇಶ್ವರಿ ದುರ್ಗೆಯು ದುಷ್ಟರನ್ನು ಶಿಕ್ಷಿಸುತ್ತ ಶಿಷ್ಟರನ್ನು ರಕ್ಷಿಸಿ,ಪೊರೆಯುತ್ತಿದ್ದಾಳೆ.ವಿಶ್ವೇಶ್ವರಿ ದುರ್ಗಾದೇವಿಯು ‘ ವಿಜಯದುರ್ಗೆ’ ಯಾಗಿಯೂ ಪ್ರಕಟಗೊಂಡಿರುವುದರಿಂದ ಆಕೆಯನ್ನು ನಂಬಿದ ರಾಜಕಾರಣಿಗಳಿಗೆ ಯಶಸ್ಸು ನಿಶ್ಚಿತ.ಮಹಾಶೈವ ಧರ್ಮಪೀಠಕ್ಕೆ ಬಂದು ವಿಶ್ವೇಶ್ವರಿ ದುರ್ಗಾದೇವಿಗೆ ಶರಣು ಬಂದ ರಾಜಕಾರಣಿಗಳೆಲ್ಲ ಗೆಲುವು ಕಂಡಿದ್ದಾರೆ, ಎಂತಹ ದುಸ್ತರವಾದ ಚುನಾವಣೆಯಲ್ಲೂ ಗೆದ್ದಿದ್ದಾರೆ.ಗ್ರಾಮ ಪಂಚಾಯತಿ ಸದಸ್ಯನಿಂದ ಹಿಡಿದು ಲೋಕಸಭಾ ಸದಸ್ಯರವರೆಗೆ ಆಯ್ಕೆಯಾಗಿದ್ದಾರೆ ವಿಶ್ವೇಶ್ವರಿ ದುರ್ಗಾದೇವಿಯ ಅನುಗ್ರಹದಿಂದ.ನಮ್ಮ ಮಠದ ದುರ್ಗಾದೇವಿಯನ್ನು ಭಜಿಸಿ,ಪೂಜಿಸಿದವರು ರಾಜಕೀಯ ಉನ್ನತಿಯನ್ನು ಕಂಡರೆ ನಮ್ಮ ಮಠವನ್ನು ಮರೆತವರು ಮೂಲೆಗುಂಪು ಆಗಿದ್ದಾರೆ,ಆಗಲಿದ್ದಾರೆ.ಪರಬ್ರಹ್ಮೆಯೂ ಪರಾಶಕ್ತಿಯೂ ಆಗಿರುವ ವಿಶ್ವನಿಯಾಮಕಿ ದುರ್ಗಾದೇವಿಗೆ ತನ್ನನ್ನು ನಂಬಿ ಬಂದ ಭಕ್ತರನ್ನು ಉದ್ಧರಿಸುವುದು ದೊಡ್ಡ ಸಂಗತಿ ಏನಲ್ಲ.ವಿಶ್ವೇಶ್ವರಿ ದುರ್ಗೆಯನ್ನು ನಂಬಿ ಉದ್ಧಾರವಾದ,ಮರೆತು ಮಲಗಿದವರು ಸರ್ವನಾಶವಾದ ಸಾಕಷ್ಟು ನಿದರ್ಶನಗಳಿವೆ.ದೇವಿ ದುರ್ಗೆಯ ಮಹಿಮೆಯನ್ನನುಭವಿಸಿದ ರಾಜಕಾರಣಿಗಳೇನಕರು ಇದ್ದಾರೆ.ವಿಶ್ವೇಶ್ವರಿ ದುರ್ಗಾದೇವಿಯನ್ನು ನಂಬಿದವರಿಗೆ ರಾಜಕಾರಣದಲ್ಲಿ ಗೆಲುವು ನಿಶ್ಚಿತ ಎನ್ನುವುದು ಇಲ್ಲಿಯವರೆಗೆ ನಡೆದ ನೂರಾರು ಪ್ರಸಂಗಗಳಲ್ಲಿ ದೃಢಪಟ್ಟಿದೆ.ನಾವು ಯಾರನ್ನೂ ನಮ್ಮ ಮಠಕ್ಕೆ ಕರೆಯುವುದಿಲ್ಲ,ಅವರಾಗಿಯೇ ನಮ್ಮ ಮಠಕ್ಕೆ ದುರ್ಗಾದೇವಿಯ ಆಶೀರ್ವಾದ ಪಡೆಯಬೇಕು.ಯಾರಿಗೆ ಗೆಲುವಿನ ಯೋಗ ಇರುತ್ತದೆಯೋ ಅವರನ್ನು ತಾಯಿ ದುರ್ಗಾದೇವಿಯು ತಾನಾಗಿಯೇ ತನ್ನ ಸನ್ನಿಧಿಗೆ ಕರೆಯಿಸಿಕೊಂಡು ಆಶೀರ್ವದಿಸುತ್ತಾಳೆ.ಯಾರು ಸೋಲಲಿದ್ದಾರೋ ಅವರು ನಮ್ಮ ಮಠದತ್ತ ಕಾಲಿಡಲೂ ಆಗದು. ನಮ್ಮ ಮಠದಲ್ಲಿ ರಾಜಕಾರಣಿಗಳು ಅವರು ಯಾರೇ ಆಗಿರಲಿ,ಎಷ್ಟೇ ದೊಡ್ಡವರು ಆಗಿರಲಿ ಎಲ್ಲ ಭಕ್ತರಂತೆ ಅವರನ್ನೂ ಭಕ್ತರನ್ನಾಗಿ ಕಾಣಲಾಗುತ್ತಿದೆಯೇ ಹೊರತು ವಿಐಪಿ,ವಿ ವಿ ಐಪಿಗಳೆಂದು ಯಾರಿಗೂ ವಿಶೇಷ ಮಾನ್ಯತೆ ನೀಡುವುದಿಲ್ಲ.ಹಾಗಾಗಿ ನಮ್ಮ ಮಠದ ಯಾವುದೇ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಆಹ್ವಾನಿಸುವುದಿಲ್ಲ.ನಮ್ಮ ಮಠವು ಸರಕಾರದಿಂದ ಅನುದಾನ,ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ನಿರೀಕ್ಷಿಸುವ ‘ ಹಂಗಿನ ಮಠ’ವಲ್ಲವಾದ್ದರಿಂದ ನಾವು ಯಾರಿಗೂ ವಿಶೇಷ ಮನ್ನಣೆ ನೀಡುವುದಿಲ್ಲ.ಕೆಲವರು ರಾಜಕಾರಣಿಗಳನ್ನು ಕರೆಯಿಸುವುದೇ ತಮ್ಮ ಸಾಧನೆ ಎಂದು ಭ್ರಮಿಸಿರಬಹುದು,ಆಧ್ಯಾತ್ಮತತ್ತ್ವ,ಸಾಮರ್ಥ್ಯವಿಹೀನರಾದ ಅಂಥವರ ಬಗ್ಗೆ ನಮಗೆ ಅನುಕಂಪವಿದೆ.ಮಠ- ಪೀಠಗಳು ಅಲ್ಲಿಯ ಪೀಠಾಧಿಪತಿಗಳ ಆಧ್ಯಾತ್ಮಿಕ ಶಕ್ತಿ- ಸಾಮರ್ಥ್ಯಗಳಿಂದ ಬೆಳೆಯಬೇಕು,ಭಕ್ತರಿಂದ ಪರಿಪೋಷಿತಗೊಳ್ಳಬೇಕು.ವಿಧಾನಸೌಧ ಸುತ್ತುವ,ರಾಜಕಾರಣಿಗಳನ್ನು ಮಠ ಪೀಠಕ್ಕೆ ಆಹ್ವಾನಿಸಿ ಸಂಭ್ರಮಿಸುವ ಮಠಾಧೀಶರುಗಳು,ಅನುದಾನಕ್ಕಾಗಿ ರಾಜಕಾರಣಿಗಳ ಮನೆಬಾಗಿಲು ಬಡಿಯುವ ಕಾವಿಧಾರಿಗಳು ಆಧ್ಯಾತ್ಮ ತತ್ತ್ವಕ್ಕೆ ಅಪಚಾರ,ಕಾಷಾಯ ತತ್ತ್ವಕ್ಕೆ ಸಲ್ಲದವರು.

ಮುಕ್ಕಣ್ಣ ಕರಿಗಾರ

About The Author