ಶ್ರೀ ವಿಶ್ವೇಶ್ವರ ಮಹಾತ್ಮೆ : ಶ್ರೀ‌ ವಿಶ್ವೇಶ್ವರ ಶಿವನ‌ ಅನುಗ್ರಹ; ಅಳಿಯನಿಗೆ ಗಂಡು ಮಗುವಿನ ಜನನ : ಮುಕ್ಕಣ್ಣ‌ ಕರಿಗಾರ

‌.   ಪರಶಿವನು ಮಹಾಶೈವ ಧರ್ಮಪೀಠದ‌ ಶ್ರೀಕ್ಷೇತ್ರ ಕೈಲಾಸದಲ್ಲಿ ನೆಲೆಸಿ ,ಲೋಕೋದ್ಧಾರ ಲೀಲೆಯನ್ನಾಡುತ್ತಿದ್ದಾನೆ.ಪರಮೇಶ್ವರನಾಗಿರುವ ಪರಶಿವನು‌ ಕರುಣಾಮಯಿಯೂ ಹೌದು,ತನ್ನನ್ನು ನಂಬಿದ ಭಕ್ತರಿಗೆ ಅವರು ಕೇಳಿದ ಎಲ್ಲವನ್ನೂ ನೀಡಬಲ್ಲ ಮಹೋದಾರಿ.’ ಮಾತನಾಡುವ ಮಹಾದೇವ’ ಎಂದು ಬಿರುದುಗೊಂಡಿರುವ ನಮ್ಮ ಶಿವ ವಿಶ್ವೇಶ್ವರನು ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಸಂಕಷ್ಟಗಳನ್ನು ಕಳೆದು ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾನೆ.ಸರ್ವಶಕ್ತನಾದ ಶಿವನಿಗೆ ಭಕ್ತರ ಸಮಸ್ಯೆಗಳು ದೊಡ್ಡವೆ? ಮಹಾಶೈವ ಧರ್ಮಪೀಠದಲ್ಲಿ‌ ‘ ಶಿವೋಪಶಮನ‌ ಕಾರ್ಯ’ ಎನ್ನುವ ಶಿವಕಾರುಣ್ಯ ವಿಶೇಷದ ಲೀಲೆಯನ್ನು ನನ್ನ ಮೂಲಕ ಆಡುತ್ತ ಲೋಕಸಮಸ್ತರನ್ನು ಉದ್ಧರಿಸುತ್ತಿದ್ದಾನೆ.’ ಶಿವೋಪಶಮನ ಕಾರ್ಯ’ ವು ಶಿವನದೇ ಭಕ್ತೋದ್ಧಾರ ಲೀಲಾ ವಿಶೇಷವು.ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ.ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರ ಸಮಸ್ಯೆಗಳನ್ನು‌ ವಿಶ್ವೇಶ್ವರನ‌ ಸನ್ನಿಧಿಯಲ್ಲಿ ನಿವೇದಿಸುವುದಷ್ಟೇ ನನ್ನ ಕೆಲಸ.ವಿಶ್ವೇಶ್ವರನೇ ಭಕ್ತರ ಸಮಸ್ಯೆಯ ಕಾರಣ,ಪರಿಹಾರೋಪಾಯವನ್ನು ಸೂಚಿಸುತ್ತಾನೆ.ಹಾಗಾಗಿ ವಿಶ್ವೇಶ್ವರನಲ್ಲಿ ನಿಜ ನಿಷ್ಠೆಯನ್ನಿಟ್ಟು ಬರುವವರ ಸಕಲಾಭಿಷ್ಟಗಳು ಸಿದ್ಧಿಸುತ್ತಿವೆ.ಮದುವೆಯಾಗಿ ಬಹುವರ್ಷಗಳಾದರೂ ಮಕ್ಕಳಾಗದವರು,ವೈದ್ಯರಲ್ಲಿ ತೋರಿಸಿ ಗುಣಮುಖರಾಗದ ಅಸಾಧ್ಯರೋಗಪೀಡಿತರು,ಕೌಟುಂಬಿಕ ಸಮಸ್ಯೆ,ಆರ್ಥಿಕ‌‌ ಸಮಸ್ಯೆ,ವ್ಯಾಪಾರದ ಸಮಸ್ಯೆ,ದಾಂಪತ್ಯಜೀವನದ ಸಂಘರ್ಷ,ಆಸ್ತಿವಿವಾದ,ಕೋರ್ಟ್ ಕಛೇರಿ ವಿವಾದಗಳು ಸೇರಿದಂತೆ‌ ನಾನಾ ತರಹದ ಸಮಸ್ಯೆಗಳಿಂದ‌ ಬಳಲುತ್ತಿರುವವರು‌ ಪ್ರತಿ ರವಿವಾರ ನಡೆಯುವ ಶಿವೋಪಶನ ಕಾರ್ಯದಲ್ಲಿ ಪಾಲ್ಗೊಂಡು,ಪರಿಹಾರ ಪಡೆದು ಜೀವನವನ್ನು ಆನಂದಿಸುತ್ತಿದ್ದಾರೆ.ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವವರಲ್ಲಿ ಸಂತಾನಾರ್ಥಿಗಳ ಸಂಖ್ಯೆಯು ಹೆಚ್ಚಿನದು.ವಿಶ್ವೇಶ್ವರನ ಅನುಗ್ರಹದಿಂದ ಮದುವೆಯಾಗಿ ಮುವ್ವತ್ತು ವರ್ಷಗಳಾದವರು ಸಹ ಮಕ್ಕಳನ್ನು ಪಡೆದಿದ್ದಾರೆ.

ನನ್ನ ಅಳಿಯ ಸುನಿಲಕುಮಾರನ ಜೀವನದಲ್ಲೂ ಹರ್ಷಾತಿರೇಕದ ಚಿಲುಮೆ ಚಿಮ್ಮಿಸಿದ್ದಾನೆ ಶಿವ ವಿಶ್ವೇಶ್ವರ.ಸುನಿಲಕುಮಾರ ನನ್ನ ಹೆಂಡತಿ ಸಾಧನಾಳ ತಮ್ಮ,ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ.ನಾಲ್ಕು ವರ್ಷಗಳ ಅವಧಿ ದೊಡ್ಡದೇನಲ್ಲದಿದ್ದರೂ ನನ್ನ ಅಳಿಯನ‌ ಕುಟುಂಬ ದುಃಖಪೀಡಿತವಾಗಿತ್ತು.ನಮ್ಮ‌ ಮಾವ‌‌ ಕರಬಸ್ಸಪ್ಪ ಮತ್ತು ಅತ್ತೆ ಶಾರದಾಬಾಯಿಯವರು ಒಂದೇ ವರ್ಷದ ಅಂತರದಲ್ಲಿ ನಿಧನರಾಗಿದ್ದರು.ನನ್ನ ಮಡದಿ ಸಾಧನಾ ಮಕ್ಕಳೊಂದಿಗೆ ನನ್ನೊಂದಿಗೆ ವಾಸಿಸುತ್ತಿದ್ದುದರಿಂದ ಮನೆಯ ಹಿರಿಯ ಮಗನಾಗಿ ಸುನಿಲನೇ ಕುಟುಂಬದ ಹೊಣೆಹೊತ್ತು ನಿಭಾಯಿಸುತ್ತಿದ್ದ.ಪತ್ನಿ ಜ್ಯೋತಿ ಮತ್ತು ತಮ್ಮ‌ಅನಿಲಕುಮಾರನೊಂದಿಗೆ ಬದುಕುತ್ತಿದ್ದ ಅವನ ಕುಟುಂಬಕ್ಕೆ ನೆಮ್ಮದಿಯನ್ನು ಕರುಣಿಸುವ ಉದ್ದೇಶದಿಂದ‌ ಕುಟುಂಬ ಸಮೇತನಾಗಿ ವಿಶ್ವೇಶ್ವರನ‌ ಸನ್ನಿಧಿಗೆ ಬರಲು ತಿಳಿಸಿದ್ದೆ.

‌ ಸುನಿಲಕುಮಾರನಿಗೆ‌ ನನ್ನ ಆಧ್ಯಾತ್ಮಿಕ ಜೀವನ,ಸಿದ್ಧಿ- ಸಾಧನೆಗಳ ಪರಿಚಯ ಇರುವುದರಿಂದ ನನ್ನಲ್ಲಿ ವಿಶ್ವಾಸ,ಗೌರವಾದರಗಳನ್ನು ಹೊಂದಿದ್ದಾನೆ.ನನ್ನ ಸಲಹೆ– ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ.ನನ್ನ ಮಾತನ್ನು ಕೇಳಿ ಅಳಿಯನು ಕುಟುಂಬಸಮೇತನಾಗಿ ನಮ್ಮ ಮಠಕ್ಕೆ,ವಿಶ್ವೇಶ್ವರನ ಸನ್ನಿಧಿಗೆ ಬಂದನು.

ದಂಪತಿಗಳಿಬ್ಬರನ್ನು ಶಿವ ವಿಶ್ವೇಶ್ವರ ಸನ್ನಿಧಿಯಲ್ಲಿ ಪುತ್ರಸಂತಾನ ನೀಡುವಂತೆ ಪ್ರಾರ್ಥಿಸಿದೆ.’ ತಥಾಸ್ತು’ ಎಂದನು ವಿಶ್ವನಿಯಾಮಕ ವಿಶ್ವೇಶ್ವರನು.ವರ್ಷದ‌ ಒಳಗೆ ಗಂಡುಮಗುವಾಗುತ್ತದೆ ಎಂದು ದಂಪತಿಗಳೀರ್ವರನ್ನು ಹರಸಿ,ಬೀಳ್ಕೊಟ್ಟೆನು.ಮೊನ್ನೆ ಶೋಭನ ಸಂವತ್ಸರದ ಯುಗಾದಿಯಂದು ಮಹಾಶೈವ ಧರ್ಮಪೀಠದಲ್ಲಿ ಶಿವ ದುರ್ಗಾ ದೇವಸ್ಥಾನಗಳಿಗೆ‌ ಕಳಶಾರೋಹಣ ನಡೆಯಿಸಿದೆವು.ಅದೇ ಶುಭದಿನದಂದು ಅಳಿಯ ಸುನಿಲಕುಮಾರನಿಗೆ ಬೆಳಿಗ್ಗೆ 8.45 ಕ್ಕೆ ಗಂಡುಮಗುವಾಯಿತು.ಬೆಳಗಿನ ಒಂಬತ್ತು ಘಂಟೆಗೆ ನಾವು ಮಠದಲ್ಲಿ ಕಳಶಾರೋಹಣ ಕಾರ್ಯ ನಿಗದಿಪಡಿಸಿದ್ದೆವು.ಅದಕ್ಕೆ ಕಾಲು ಘಂಟೆಯ ಮುಂಚೆಯೇ ಶಿವ ವಿಶ್ವೇಶ್ವರನು ಅಳಿಯನಿಗೆ ಗಂಡುಮಗುವನ್ನಿತ್ತು ಎರಡೂ ಕುಟುಂಬಗಳಲ್ಲಿ ಆನಂದದ ವಾತಾವರಣವನ್ನುಂಟು ಮಾಡಿದ್ದನು.

ಕಳಶಾರೋಹಣ ಮತ್ತು ತತ್ಸಬಂಧಿ ಕಾರಣಗಳಲ್ಲಿ ತೊಡಗಿಕೊಂಡಿದ್ದರಿಂದ ಇಲ್ಲಿಯವರೆಗೆ ಬೀದರ್ ಗೆ ಬರಲಾಗಿರಲಿಲ್ಲ.ಮಾರ್ಚ್ ತಿಂಗಳ ಕೊನೆಯದಿನವಾದ ಇಂದು ಕುಟುಂಬ ಸಮೇತನಾಗಿ ಕಲ್ಬುರ್ಗಿಗೆ ಬಂದು ಅಳಿಯ ಸುನಿಲಕುಮಾರನ ಜೊತೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ ಬಿ ಪಟ್ಟಣಕ್ಕೆ ಬಂದು ವಿಶ್ವೇಶ್ವರಾನುಗ್ರಹದಿಂದ ಹುಟ್ಟಿದ ಅಳಿಯನ ಮುದ್ದು ಮಗುವನ್ನು ಕಂಡು ಸಂತಸಪಟ್ಟೆನು.ಸುನಿಲಕುಮಾರ ಜ್ಯೋತಿ ದಂಪತಿಗಳು ಸೇರಿದಂತೆ ಸುನಿಲಕುಮಾರನ ಮಾವನ ಮನೆಯ ಎಲ್ಲರಲ್ಲೂ ಸಂತೋಷ‌ ಉಂಟಾಗಿತ್ತು.ನನ್ನ ಮಕ್ಕಳಾದ ವಿಂಧ್ಯಾ ಮತ್ತು ನಿತ್ಯಾ ಸಣ್ಣಮಗುವನ್ನು ಕಂಡು ‘ ಪಾಪು,ಪಾಪು,ಜ್ಯೋತಿ ಅಕ್ಕನ ಪಾಪು’ ‘ ತಮ್ಮ’ ಎಂದು ಕುಣಿದಾಡುತ್ತಿದ್ದರು.ವಿಶ್ವನಿಯಾಮಕ ವಿಶ್ವೇಶ್ವರ ಶಿವನಿಗೆ ಮನದಲ್ಲಿಯೇ ಭಕ್ತಿಪೂರ್ವಕವಾಗಿ ವಂದಿಸಿ,’ಮಗುವಿಗೆ ಉಜ್ವಲಭವಿಷ್ಯ ಕರುಣಿಸು ‘ ಎಂದು ಪ್ರಾರ್ಥಿಸಿ, ಅಳಿಯನಿಗೆ ಮಗುವಿನ ನಾಮಕರಣ ಸಂಬಂಧದ ಕೆಲವು ಸೂಚನೆಗಳನ್ನು ನೀಡಿದೆನು.

‌‌‌ ‌

About The Author