ಮೂರನೇ ಕಣ್ಣು : ಚುನಾವಣಾ ನೀತಿ ಸಂಹಿತೆ — ಜನಸಾಮಾನ್ಯರಿಗೆ ‘ ಶಿಕ್ಷೆ’ ಆಗದಿರಲಿ : ಮುಕ್ಕಣ್ಣ ಕರಿಗಾರ

ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 2023 ನೇ ಅವಧಿಯ ವಿಧಾನ ಸಭಾ ಚುನಾವಣೆಗಳನ್ನು 29.03.2023 ರಂದು ಘೋಷಣೆ ಮಾಡಿ,ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದಾಗಿ ಹೇಳಿದ್ದಲ್ಲದೆ ಅಧಿಕಾರಿಗಳು ಹಣ ಹಂಚುವುದು ಸೇರಿದಂತೆ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿದೆ.ಮುಕ್ತ ,ನಿರ್ಭೀತ ಮತ್ತು‌ಪಾರದರ್ಶಕ ಚುನಾವಣೆಗಳನ್ನು ನಡೆಸಲು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ತೆಗೆದುಕೊಳ್ಳುವ ಕ್ರಮಗಳು ಸ್ವಾಗತಾರ್ಹ.ಆದರೆ ಚುನಾವಣೆ ನೀತಿ ಸಂಹಿತೆಯ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳು ಜನಸಾಮಾನ್ಯರ ಬದುಕುಗಳೊಂದಿಗೆ ಚೆಲ್ಲಾಟವಾಡದಂತೆ ಕ್ರಮವಹಿಸುವುದು ಚುನಾವಣಾ ಆಯೋಗದ ಜವಾಬ್ದಾರಿ.

ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಪ್ರಜಾಪ್ರಭುತ್ವಪದ್ಧತಿಯನ್ನು ಯಶಸ್ವಿಗೊಳಿಸಲು ನಮ್ಮಲ್ಲಿ ಚುನಾವಣೆಗಳು ನಡೆಯುತ್ತಿವೆ.ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ವಿವಿಧ ಚುನಾವಣೆಗಳ ಜವಾಬ್ದಾರಿಯನ್ನು ನಿಭಾಯಿಸುತ್ತಿವೆ.ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಾಗಿ ಚುನಾವಣಾ ಆಯೋಗದ ನಿರ್ದೇಶನಗಳಂತೆ ಕಾರ್ಯನಿರ್ವಹಿಸುತ್ತಾರೆ.ಆದರೆ ಚುನಾವಣಾ ಅಕ್ರಮಗಳನ್ನು ತಡೆಯುವ ನೆಪದಲ್ಲಿ ಚುನಾವಣಾ ಮೇಲು ಉಸ್ತುವಾರಿಗೆ ನೇಮಕಗೊಂಡ ಅಧಿಕಾರಿಗಳು,ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಪೋಲೀಸರು,ವಿಚಕ್ಷಣಾಧಿಕಾರಿಗಳು ಅತ್ಯಾತುರದಿಂದ,ಅತ್ಯಾವೇಶದಿಂದ ವರ್ತಿಸಿ ಜನಸಾಮಾನ್ಯರಿಗೆ ತೊಂದರೆ ಕೊಡುವುದನ್ನು ಚುನಾವಣಾ ಆಯೋಗವೇ ನಿಯಂತ್ರಿಸಬೇಕು.ಭಾರತ ಪ್ರಜಾಪ್ರಭುತ್ವ ರಾಷ್ಟ್ರ,ಪ್ರಜಾಪ್ರಭುತ್ವದ ಬಲವರ್ಧನೆಗೆ ಚುನಾವಣೆಗಳು ನಡೆಯುತ್ತಿವೆ.ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ಚುನಾವಣಾ ಕರ್ತವ್ಯದ ಮೇಲಿರುವ ಸಾರ್ವಜನಿಕ ಸೇವಕರ ಕರ್ತವ್ಯ,ಜವಾಬ್ದಾರಿ.ಪ್ರಜೆಗಳೇ ಪ್ರಭುಗಳಾಗಿರುವ ದೇಶದಲ್ಲಿ ಪ್ರಜೆಗಳ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುತ್ತಿರುವ ಸರಕಾರಿ ಅಧಿಕಾರಿಗಳು ಚುನಾವಣೆಯ ನೀತಿಸಂಹಿತೆಯ ನೆಪದಲ್ಲಿ ಪ್ರಜೆಗಳೊಂದಿಗೆ ಅನುಚಿತವಾಗಿ,ಸೌಜನ್ಯದ ಎಲ್ಲೆಮೀರಿ ವರ್ತಿಸುವುದು ಸರಿಯಲ್ಲ.ಅಕ್ರಮ ಹಣ ವರ್ಗಾವಣೆ ಆಗುತ್ತಿದ್ದರೆ ,ಅಂತಹ ಅನುಮಾನಗಳಿದ್ದರೆ ಅಂತಹ ವಾಹನಗಳನ್ನು ತಡೆದು ನಿಲ್ಲಿಸಿ ಪರಿಶೀಲಿಸಲಿ.ಮದುವೆಗೆಂದು ಹೆಂಗಸರು ಮಕ್ಕಳುಗಳ ಜೊತೆಗೆ ಕಾರಿನಲ್ಲಿ,ವಾಹನಗಳಲ್ಲಿ ಪ್ರಯಾಣಿಸುವವರನ್ನು ಗಂಟೆಗಟ್ಟಲೆ ನಿಲ್ಲಿಸಿ ಪರಿಶೀಲಿಸುವುದು ಸಮರ್ಥನೀಯವಲ್ಲ.ಚುನಾವಣಾ ಘೋಷಣೆ ಆದ ಕ್ಷಣದಿಂದಲೇ ಜನಸಾಮಾನ್ಯರು ಪರಿತಪಿಸುವಂತೆ ಆಗಬಾರದು.ರಾಜಕಾರಣಿಗಳು,ರಾಜಕೀಯ ಪುಢಾರಿಗಳು,ರಾಜಕೀಯ ಪಕ್ಷಗಳ ಮೇಲೆ ನಿಗಾ ಇಡಲಿ,ಅವರು ಜನರಿಗೆ ಆಮಿಷ ಒಡ್ಡಲು ಹಣ,ಸ್ವತ್ತುಗಳನ್ನು ಕೊಂಡೊಯ್ಯುತ್ತಿದ್ದರೆ ವಶಪಡಿಸಿಕೊಳ್ಳಲಿ.ಆದರೆ ಜನಸಾಮಾನ್ಯರು ಮದುವೆ,ದೇವತಾಕಾರ್ಯಗಳಿಗೆಂದು ಜೊತೆಗೆ ಹಣ ಒಯ್ಯುತ್ತಿದ್ದರೆ ಅವರನ್ನು ತಡೆದು ನಿಲ್ಲಿಸಿ,ಸತಾಯಿಸುವುದು ಸಮರ್ಥನೀಯವಲ್ಲ.ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ,ಜೊತೆಗೆ ಕೊಂಡೊಯ್ಯುತ್ತಿರುವ ಹಣಕ್ಕೆ ದಾಖಲೆಗಳನ್ನು ಒಯ್ಯಬೇಕು ಎನ್ನುವ ಮುಂದಾಲೋಚನೆ ರೈತರು,ಜನಸಾಮಾನ್ಯರಿಗೆ ಇರಬೇಕಲ್ಲ!ಬಂಗಾರದ ಬೆಲೆ ಹತ್ತು ಗ್ರಾಮ್ ಗೆ 63000 ರೂಪಾಯಿಗಳಷ್ಟು ಇರುವಾಗ ಮದುವೆಗೆ ಕನಿಷ್ಠ ಬಂಗಾರದ ಮಾಂಗಲ್ಯವನ್ನಾದರೂ ಮಾಡಿಸಲು ಜನಸಾಮಾನ್ಯರು ಬಂಗಾರ ಖರೀದಿಸಲು ಹಣ ಇಟ್ಟುಕೊಂಡು ಹೋಗಬಾರದೆ? 50000 ರೂಪಾಯಿಗಳ ಮಿತಿ ವಿಧಿಸಿ,ಅದಕ್ಕಿಂತ ಹೆಚ್ಚಿಗೆ ಹಣ ಇದ್ದರೆ ಸ್ವಾಧೀನ ಪಡಿಸಿಕೊಳ್ಳಲು ಆದೇಶಿಸುವ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶಗಳು ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುತ್ತವೆ.ಬಡವರು ಊರಲ್ಲಿ ಉಳ್ಳವರು,ಲೇವಾದೇವಿಯವರ ಬಳಿ 3 ರಿಂದ 5 ರ ಬಡ್ಡಿಗೆ ಸಾಲ ಪಡೆದಿರುತ್ತಾರೆ.ಈ ಸಾಲದ ಹಣಕ್ಕೆ ಯಾವ ದಾಖಲೆಗಳೂ ಇರುವುದಿಲ್ಲ.ಇದು ಅಕ್ರಮ ಎಂದು ಅಧಿಕಾರಿಗಳು ನೂರೆಂಟು ಕಾನೂನುಗಳನ್ನು ಉಲ್ಲೇಖಿಸಿ,ತೊಂದರೆ ಕೊಟ್ಟರೆ ಬಡವರು ಮದುವೆ ನಿಲ್ಲಿಸಬೇಕೆ ?ಚುನಾವಣೆಯ ನೆಪದಲ್ಲಿ ಜನಸಾಮಾನ್ಯರ ಸಂವಿಧಾನದತ್ತ ಗೌರವಯುತ ಬದುಕಿನ ಹಕ್ಕಿಗೆ ಧಕ್ಕೆಯೊದಗಬಾರದು.ಚುನಾವಣಾ ಜಾಗೃತಿಗೆ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸ್ವೀಪ್ ಕಮಿಟಿಗಳ ಮುಖ್ಯಸ್ಥರುಗಳನ್ನಾಗಿ ನೇಮಿಸಿರುವಂತೆ ಚುನಾವಣಾ ಆಯೋಗವು ಚುನಾವಣೆಯ ನೆಪದಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಬೇಕು; ಅದಕ್ಕೂ ಅಧಿಕಾರಿಗಳನ್ನು ನೇಮಿಸಬೇಕು.ಮುಕ್ತ,ನ್ಯಾಯ ಸಮ್ಮತ ಚುನಾವಣೆಗಳನ್ನು ನಡೆಸುವ ಚುನಾವಣಾ ಆಯೋಗದ ಕೈ ಬಲಪಡಿಸುವುದು,ಆ ನಿಟ್ಟಿನಲ್ಲಿ ಆಯೋಗವು ಕೈಗೊಳ್ಳುವ ಕ್ರಮಗಳನ್ನು ಬೆಂಬಲಿಸುವುದು ಪ್ರಜೆಗಳ ಕರ್ತವ್ಯ; ಆದರೆ ಅದೇ ವೇಳೆಗೆ ಜನರ ಸಂವಿಧಾನ ದತ್ತ ಹಕ್ಕುಗಳ ಉಲ್ಲಂಘನೆ ಆಗದಂತೆ,ಜನರ ಗೌರವಯುತ ಬದುಕಿನ ಹಕ್ಕಿನ ಮೇಲೆ ಅತಿಕ್ರಮಣ‌ ಆಗದಂತೆ ತಡೆಯುವ ಜವಾಬ್ದಾರಿಯೂ ಚುನಾವಣಾ ಆಯೋಗದ ಮೇಲಿದೆ.ಆದ್ದರಿಂದ ಚುನಾವಣಾ ಆಯೋಗವು ಚೆಕ್ ಪೋಸ್ಟ್ ಗಳು,ಚುನಾವಣಾ ವಿಚಕ್ಷಣಾಧಿಕಾರಿಗಳ ವಿವರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಪ್ರಚುರಪಡಿಸಬೇಕು,ಚೆಕ್ ಪೋಸ್ಟ್ ಗಳಲ್ಲಿ ಪ್ರಕಟಿಸಬೇಕು.ಯಾವುದೇ ಅಧಿಕಾರಿ,ನೌಕರರು ಸಭ್ಯನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದರೆ,ವಿನಾ ಕಾರಣ ತೊಂದರೆ ನೀಡಿದರೆ ಅಂಥವರ ವಿರುದ್ಧ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಅವಕಾಶಕಲ್ಪಿಸಬೇಕು.ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳು ಅಕ್ರಮಹಣ ಸಾಗಣೆಯ ಪ್ರಕರಣಗಳಲ್ಲಿ ಕಾನುನು ಕ್ರಮತೆಗೆದುಕೊಳ್ಳುವಲ್ಲಿ ತೋರುವ ಅವಸರವನ್ನೇ ಜನಸಾಮಾನ್ಯರ ಗೌರವಯುತ ಬದುಕಿನ ಹಕ್ಕಿನ ಮೇಲೆ ನಡೆಯುವ ಆಕ್ರಮಣಗಳ ಬಗ್ಗೆಯೂ ಕ್ರಮ ಕೈಗೊಳ್ಳಬೇಕು.ಜನರಿಗಾಗಿ ಚುನಾವಣೆಗಳು ಇವೆಯೇ ಹೊರತು ಚುನಾವಣೆಗಾಗಿಯೇ ಜನರು ಇಲ್ಲ; ಪ್ರಜೆಗಳ ಅನುಕೂಲಕ್ಕಾಗಿ ಕಾನೂನುಗಳಿವೆಯೇ ಹೊರತು ಸಾರ್ವಜನಿಕ ಸೇವಕರ ಸ್ವೇಚ್ಛೆಯನ್ನು ಬೆಂಬಲಿಸಲು ಕಾನೂನುಗಳಿಲ್ಲ.ಚುನಾವಣೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಗಳು ಕೆಲವು ವಿಶೇಷಾಧಿಕಾರ,ವಿವೇಚನಾಧಿಕಾರಗಳನ್ನು ಪಡೆದಿರಬಹುದು ಆದರೆ ಆ ವಿಶೇಷಾಧಿಕಾರ,ವಿವೇಚನಾಧಿಕಾರ ಜನಸಾಮಾನ್ಯರ ಗೌರವಯುತ ಬದುಕಿನ ಹಕ್ಕುಗಳನ್ನು ಅತಿಕ್ರಮಿಸಬಾರದು.

About The Author