ಸ್ವಾನುಭಾವ : ನನ್ನ ಬದುಕನ್ನು ರೂಪಿಸಿದ ಮೂರು ಪುಸ್ತಕಗಳು : ಮುಕ್ಕಣ್ಣ ಕರಿಗಾರ

ಮನುಷ್ಯರ ಬದುಕನ್ನು ರೂಪಿಸುವ ಪುಸ್ತಕಗಳೇ ಶ್ರೇಷ್ಠ ಪುಸ್ತಕಗಳು.ಕಥೆ,ಕಾದಂಬರಿ,ಕವನಗಳು ತಾತ್ಕಾಲಿಕ ಸಂತೋಷವನ್ನುಂಟು ಮಾಡುವ ಸಾಹಿತ್ಯವೇ ಹೊರತು ಶಾಶ್ವತವಾದ ಆನಂದವನ್ನು ಕರುಣಿಸುವ ಸತ್ಯಶಾಸ್ತ್ರವಲ್ಲ.ಭಾರತದಲ್ಲಿ ವೇದ- ಉಪನಿಷತ್ತು,ರಾಮಾಯಣ- ಮಹಾಭಾರತ,ಶಿವಪುರಾಣ- ಸ್ಕಂದಪುರಾಣಗಳಂತಹ ಕೃತಿಗಳನ್ನು ಆತ್ಮಾನುಸಂಧಾನಕ್ಕಾಗಿ ಓದುವ ಕೃತಿಗಳೆಂದು ಗ್ರಹಿಸಿ ಪಠಣೆ- ಪಾರಾಯಣ ಮಾಡಲಾಗುತ್ತಿದೆ.ಕ್ರಿಶ್ಚಿಯನ್ನರಿಗೆ ಬೈಬಲ್,ಮುಸ್ಲಿಮರಿಗೆ ಕುರ್ ಆನ್,ಸಿಖ್ಖರಿಗೆ ಗ್ರಂಥಸಾಹೇಬ ಕೃತಿಗಳು ಆತ್ಮೋನ್ನತಿ ಸಾಧಕ ಪುಸ್ತಕಗಳು.ಧಾರ್ಮಿಕ ಕೃತಿಗಳಲ್ಲಿ ಮಾತ್ರ ವ್ಯಕ್ತಿಯ ಸರ್ವತೋಮುಖ ವಿಕಾಸಕ್ಕೆ ಪೂರಕವಾಗುವ,ಪ್ರೇರಕವಾಗುವ ಅಂಶಗಳಿರುತ್ತವೆ.ಸಮಾಜಮುಖಿ ಎಂದು ಕೊಚ್ಚಿಕೊಂಡರೂ ಕಥೆ,ಕವನ,ಕಾದಂಬರಿಗಳಂತಹ ಸಾಮಾಜಿಕ ಸಾಹಿತ್ಯ ಕೃತಿಗಳು ಯಾರ ವ್ಯಕ್ತಿತ್ವದ ವಿಕಾಸಕ್ಕೂ ಕಾರಣವಾಗುವುದಿಲ್ಲ.ಲಿಯೋ ಟಾಲ್ ಸ್ಟಾಯ್ ಅವರ ‘ ಯುದ್ಧ ಮತ್ತು ಶಾಂತಿ’ ಯಂತಹ ಮಹಾನ್ ಕೃತಿಗಳು ಕೆಲವರಿಗೆ ಸ್ಫೂರ್ತಿ ಆಗಬಹುದು‌.ರಸ್ಕಿನ್ನನ ‘ ಅನ್ ಟು ದಿ ಲಾಸ್ಟ್’ ಕೃತಿಯು ಮಹಾತ್ಮ ಗಾಂಧೀಜಿಯವರಿಗೆ ಅವರ ಸಮಾಜಪರ ಚಿಂತನೆಗಳನ್ನು ರೂಪಿಸಿಕೊಳ್ಳಲು ಪ್ರೇರಣೆಯಾಯಿತು.ಗಾಂಧೀಜಿಯವರಿಗೆ ‘ ಅನ್ ಟು ದಿ ಲಾಸ್ಟ್’ ಕೆಲವಂಶಗಳಲ್ಲಿ ಮಾತ್ರ ಪ್ರೇರಣೆ ನೀಡಿದೆ; ಗಾಂಧೀಜಿಯವರ ನಿಜವ್ಯಕ್ತಿತ್ವ,ದಾರ್ಶನಿಕ ವ್ಯಕ್ತಿತ್ವ ಪ್ರಕಟಗೊಂಡಿದ್ದು ‘ ಭಗವದ್ಗೀತೆ’ ಯಿಂದ.’ ಗೀತೆ ನನ್ನ ತಾಯಿ’ ಎನ್ನುತ್ತಿದ್ದರು ಗಾಂಧೀಜಿ.ಹಾಗೆಯೇ ಬಾಲಗಂಗಾಧರ ತಿಲಕರು,ಮಹರ್ಷಿ ಅರವಿಂದರಂತಹವರ ಮೇಲೆಯೂ ಭಗವದ್ಗೀತೆಯು ಗಾಢಪ್ರಭಾವ ಬೀರಿದೆ.

ಇಲ್ಲಿಯವರೆಗೆ ನಾನು ಹತ್ತಾರು ಸಾವಿರ ಪುಸ್ತಕಗಳನ್ನು ಓದಿದ್ದೇನೆ.ಕನ್ನಡ,ಇಂಗ್ಲಿಷ ಮತ್ತು ಸಂಸ್ಕೃತ ಭಾಷೆಯ ಮಹತ್ವದ ಕೃತಿಗಳನ್ನೆಲ್ಲ ಓದಿದ್ದೇನೆ,ವಿಜ್ಞಾನ,ಮನೋವಿಜ್ಞಾನ,ವೈದ್ಯಕೀಯ,ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನೂ ಓದಿದ್ದೇನೆ.ನಾನು ಓದಿದ ಅಸಂಖ್ಯಾತ ಪುಸ್ತಕಗಳಲ್ಲಿ ನನ್ನ ಮೇಲೆ ಗಾಢಪ್ರಭಾವ ಬೀರಿ,ನನ್ನ ವ್ಯಕ್ತಿತ್ವವನ್ನು ರೂಪಿಸಿದ ಪುಸ್ತಕಗಳೆಂದರೆ ಮೂರೇ ಮೂರು! ಚಿದಾನಂದಾವಧೂತರ ‘ ಶ್ರೀ ದೇವಿ ಮಹಾತ್ಮೆ ‘ ( ಶ್ರೀದೇವಿ ಪುರಾಣ), ದುರ್ಗಾಸಪ್ತಶತಿ ಮತ್ತು ದುರ್ಗಾ ಸಹಸ್ರನಾಮ ಎನ್ನುವ ಮೂರು ಪುಸ್ತಕಗಳೇ ನನ್ನ ವ್ಯಕ್ತಿತ್ವ ವರ್ಧಿಸಲು,ವೃದ್ಧಿ-ಸಿದ್ಧಿ- ಪ್ರಸಿದ್ಧಿಗಳನ್ನು ಪಡೆಯಲು ಕಾರಣವಾದ ಕೃತಿಗಳು,ಲೋಕೋತ್ತರ ಸಾಹಿತ್ಯಕೃತಿಗಳು.ನನ್ನ ಯಶಸ್ಸು,ಉನ್ನತಿಕೆಗಳ ಹಿಂದೆ ಈ ಮೂರು ಪುಸ್ತಕಗಳ ಅಂತರ್ಗತ ಶಕ್ತಿಯಾದ ತಾಯಿ ದುರ್ಗಾದೇವಿ ಇದ್ದಾಳೆ.ಈ ಮೂರು ಪುಸ್ತಕಗಳು ನನಗೆ ಬರಿಯ ಪುಸ್ತಕಗಳಲ್ಲ,ಸಾಕ್ಷಾತ್ ತಾಯಿ ದುರ್ಗಾದೇವಿಯ ಪ್ರಕಟರೂಪ,ವ್ಯಕ್ತದರ್ಶನ.ಈ ಮೂರು ಪುಸ್ತಕಗಳು ನಾನು ಕೇಳಿದ್ದೆಲ್ಲವನ್ನೂ ಕೊಟ್ಟಿವೆ,ಕೊಡುತ್ತಿವೆ.ಹಾಗಾಗಿ ನಾನು ಇಂದಿಗೂ ಆಜನ್ಮವ್ರತದಂತೆ ಈ ಪುಸ್ತಕಗಳನ್ನು ಓದುತ್ತೇನೆ,ಅನುಷ್ಠಾನ ಮಾಡುತ್ತೇನೆ.

ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಚಿದಾನಂದಾವಧೂತರ ದೇವಿಪುರಾಣವನ್ನು ಓದುತ್ತಿದ್ದೆ.ಎರಡನೇ ಪಿಯುಸಿಯಲ್ಲಿದ್ದಾಗ ಅದರ ಅಖಂಡ ಪಾರಾಯಣ ಪ್ರಾರಂಭಿಸಿದೆ.ಪದವಿ ತರಗತಿಗಳಲ್ಲಿದ್ದಾಗ ದೂರಶ್ರವಣ,ದೂರದೃಶ್ಯ,ವಾಕ್ ಸಿದ್ಧಿಗಳಂತಹ ಸಿದ್ಧಿಗಳನ್ನು ಪಡೆದಿದ್ದಲ್ಲದೆ ದಿವ್ಯೋನ್ಮಾದದ ಸ್ಥಿತಿಗೇರುತ್ತಿದ್ದೆ.ಚಿದಾನಂದಾವಧೂತರು ಶ್ರೀದೇವಿ ಮಹಾತ್ಮೆಯಲ್ಲಿ ‘ ಬಗಳಾಂಬಾ ದೇವಿ’ಯ ದರ್ಶನ ಮಾಡಿಸಿದ್ದಾರಾದರೂ ಆ ಪುರಾಣದಲ್ಲಿ ನನಗೆ ದುರ್ಗಾ ಮಾತೆಯ ದರ್ಶನವಾಯಿತು.ದೇವಿ ಪುರಾಣ ಓದುತ್ತ ನಾನು ದುರ್ಗಾದೇವಿಯನ್ನು ಉಪಾಸಿಸತೊಡಗಿದೆ.ಪದವಿ ಓದುತ್ತಿದ್ದಾಗ ದೇವಿಪುರಾಣದೊಂದಿಗೆ ದುರ್ಗಾ ಸಹಸ್ರನಾಮವನ್ನು ಅನುದಿನವೂ ಪಠಿಸುತ್ತಿದೆ.ಫಲವಾಗಿ ದುರ್ಗಾ ಅಷ್ಟಾಕ್ಷರಿ ಮಂತ್ರವು ಗೋಚರಿಸಿತು.ದುರ್ಗಾ ಅಷ್ಟಾಕ್ಷರಿ ಮಂತ್ರದಿಂದ ಯೋಗಸಾಧನೆ ಮಾಡುತ್ತ ದುರ್ಗಾಸಹಸ್ರನಾಮ ಮತ್ತು ದುರ್ಗಾ ಸಪ್ತಶತಿಗಳ ಮೂಲಕ ದೇವಿತತ್ತ್ವಾನುಸಂಧಾನ ಮಾಡುತ್ತಿದ್ದೆ.

ಚಿದಾನಂದಾವಧೂತರು ಸಿದ್ಧಪರ್ವತದಲ್ಲಿರುವ ದೇವಿ ಬಗಳಾಮುಖಿಯ ಮಹಿಮಾತಿಶಯಗಳನ್ನು ಶ್ರೀದೇವಿ ಪುರಾಣದಲ್ಲಿ ಬಣ್ಣಿಸಿದ್ದಾರೆ.ದುರ್ಗಾ ಸಹಸ್ರನಾಮ ದೇವಿ ದುರ್ಗೆಯ ವಿರಾಟ್ ರೂಪದ ದರ್ಶನ ಮಾಡಿಸಿದರೆ ದುರ್ಗಾ ಸಪ್ತಶತಿಯು ವಿಶ್ವನಿಯಾಮಕಿಯಾಗಿರುವ ವಿಶ್ವೇಶ್ವರಿ ದುರ್ಗೆಯು ಪರಾಶಕ್ತಿ,ಪರಬ್ರಹ್ಮೆಯು ಎನ್ನುವ ಪರತತ್ತ್ವದ ದರ್ಶನ ಮಾಡಿಸುತ್ತದೆ.ಈ ಮೂರು ಪುಸ್ತಕಗಳ ಅಧ್ಯಯನ,ಅನುಷ್ಠಾನ ಮತ್ತು ಅನುಸಂಧಾನಗಳಿಂದ ನಾನು ಅಸಾಧ್ಯವಾದುದನ್ನು ಸಾಧಿಸಿದ್ದೇನೆ,ಇಚ್ಛಿಸಿದ ಫಲ- ಪದವಿಗಳನ್ನು ಪಡೆದಿದ್ದೇನೆ ಮಾತ್ರವಲ್ಲ ‘ ನಿಗ್ರಹಾನುಗ್ರಹ ಸಾಮರ್ಥ್ಯ’ ವನ್ನೂ ಸಂಪಾದಿಸಿದ್ದೇನೆ.

‌ಈಗ ಬಹಳಷ್ಟು ಜನ ಚಪಲಕ್ಕಾಗಿ,ಆಡಂಬರಕ್ಕಾಗಿ ಶ್ರೀದೇವಿ ಪುರಾಣ ಓದುತ್ತಿದ್ದಾರೆ.ದೇವಿ ಪುರಾಣದ ಮಹತ್ವವನ್ನೇ ಅರಿಯದ ಮಹಾನುಭಾವರುಗಳೇನಕರು ದೇವಿ ಪುರಾಣ ಓದುತ್ತಿದ್ದಾರೆ.ಕೆಲವರು ದೇವಿಯನ್ನು ಒಲಿಸುತ್ತೇವೆ ಎಂದು ಅಖಂಡಪಾರಾಯಣ ವ್ರತ ಎಂದು ಕಂಡವರ ಮುಂದೆ ಹೇಳಿಕೊಂಡು ತಿರುಗುತ್ತಿದ್ದಾರೆ.ಮತ್ತೆ ಕೆಲವರು ಜನರನ್ನು ಹೆದರಿಸಲು ದೇವಿ ಪುರಾಣ ಓದುತ್ತಿದ್ದಾರೆ.ಇನ್ನು ಕೆಲವರು ಮಠ- ಮಂದಿರಗಳಲ್ಲಿ ದೇವಿಪುರಾಣದ ಹೆಸರಿನಲ್ಲಿ ಹಣಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.ಮೂರುದಶಕಗಳಿಗೂ ಮೀರಿದ ಸುದೀರ್ಘ ಅವಧಿಯ ದೇವಿತತ್ತ್ವಾನುಸಂಧಾನದಲ್ಲಿರುವ ನಾನು ದೇವಿಪುರಾಣದ ಹೆಸರಿನ ಆಡಂಬರ ಜೀವಿಗಳಿಗೆ ಒಂದು ಎಚ್ಚರಿಕೆಯ ಮಾತನ್ನು ಹೇಳಬಯಸುವೆ’ ಬಡಿವಾರದಿಂದ ದೇವಿಯನ್ನು ಒಲಿಸಲಾಗದು; ಬಯಲಾದರೆ ಮಾತ್ರ ದೇವಿ ದರ್ಶನ ಸಾಧ್ಯ’.ಬಯಲಾಗಬೇಕು ಪರಾಶಕ್ತಿಯ ದರ್ಶನಕ್ಕೆ.ಮಂದಿಯನ್ನು ಮೆಚ್ಚಿಸಲೋ,ಹೆದರಿಸಲೋ ದೇವಿಪುರಾಣ ಓದದೆ ಮಹಾದೇವಿ ದುರ್ಗೆಯ ಅನುಗ್ರಹ ಸಂಪಾದಿಸಲು ದೇವಿಪುರಾಣ ಓದಬೇಕು.ದೇವಿ ಪುರಾಣ ಪಾರಾಯಣ ಮಾಡುತ್ತಿರುವುದು,ದೇವಿ ಪೂಜೆ ಮಾಡುತ್ತಿರುವುದು ಉಪಾಸಕನಾದ ತನಗೆ ಮತ್ತು ಉಪಾಸ್ಯಶಕ್ತಿಯಾದ ದೇವಿಗೆ ಮಾತ್ರ ತಿಳಿದಿರಬೇಕೇ ಹೊರತು ಜನರ ಮುಂದೆ ಆಡಿ ಹೇಳಬಾರದು.ದೇವಿಯ ದರ್ಶನ ಪಡೆಯುತ್ತೇನೆ ಎಂದು ಗಡ್ಡ ಮೀಸೆಗಳನ್ನು ಬಿಡುವುದಾಗಲಿ,ಒಪ್ಪತ್ತು ಊಟ ಮಾಡುವೆ ಎನ್ನುವ ವ್ರತಕೈಗೊಳ್ಳುವುದಾಗಲಿ ಅರ್ಥವಿಲ್ಲದ ಆಚರಣೆಗಳು.ದೇವಿಪುರಾಣ ಓದುತ್ತ ಮದ್ಯ ಮಾಂಸಸೇವಿಸುವವರಂತೂ ಅಧಃಪತನ ಹೊಂದುತ್ತಾರೆ.ಅಷ್ಟೋಪಚಾರ,ಷೋಡಶೋಪಚಾರಗಳ ಪೂಜೆಯ ಅಗತ್ಯವೂ ಇಲ್ಲ.ಭಕ್ತಿಯಿಂದ ತಾಯಿಗೆ ಶರಣಾಗಿ,ಕಾಯಿ ಊದುಬತ್ತಿ ಇದ್ದರಷ್ಟೇ ಸಾಕು.ಅನುಕೂಲವಿದ್ದರೆ ಹೂವು ಒಂದಿಷ್ಟು ಸಕ್ಕರೆ ಇಷ್ಟೇ ಸಾಕು.ಇಂತಹ ಸರಳ ಪೂಜೆಯಿಂದಲೇ ನಾನು ದುರ್ಗಾದೇವಿಯ ಅನುಗ್ರಹ ಪಡೆದಿದ್ದೇನೆ.ಆಡಂಬರದ ಪೂಜೆ,ವ್ರತಗಳು ಅಡ್ಡದಾರಿ ಹಿಡಿಸುತ್ತವೆ.ದೇವಿಯನ್ನು ಒಲಿಸಲು ಬೇಕಾದುದು ಕಠೋರ ನಿಷ್ಠೆ ಮತ್ತು ವಿಶ್ವಮಾತೆಯ ತಾಯ್ತನದಲ್ಲಿ ಅಚಲ ನಂಬಿಕೆ.ದೇವಿಪುರಾಣದ ಅಖಂಡಪುರಾಣದಿಂದ ಒಂದೇ ವರ್ಷದಲ್ಲಿ ದೇವಿಯನ್ನು ಕಾಣಬಹುದು ನಿಜ.ಆದರೆ ಆ ಪೂಜೆ ನಿಜವಾದ ಪೂಜೆಯಾಗಿರಬೇಕು.ನಿಜ ನಿಷ್ಠೆಯಿಂದ ಪುರಾಣ ಓದಿದ್ದಾದರೆ ವರ್ಷವೂ ಬೇಕಿಲ್ಲ ವಾತ್ಸಲ್ಯಮಯಿಯಾದ ತಾಯಿಯ ದರ್ಶನಕ್ಕೆ.ಮಂದಿಯನ್ನು ಮೆಚ್ಚಿಸಲು ದೇವಿಪುರಾಣ ಓದುವವರಿಗೆ ಒಂದು ವರ್ಷವಲ್ಲ,ಜೀವನವಿಡೀ ಓದಿದರೂ ದೇವಿಯ ದರ್ಶನ ಸಾಧ್ಯವಿಲ್ಲ.

About The Author