ಮೂರನೇ ಕಣ್ಣು : ದನಗಳಿಗೂ ಮನುಷ್ಯರ ಹಾಗೆಯೇ ಜೀವವಿಲ್ಲವೆ ? : ಮುಕ್ಕಣ್ಣ ಕರಿಗಾರ

ಕಾರ್ಯನಿಮಿತ್ತವಾಗಿ ಇಂದು ( 28.03.2023) ಗಬ್ಬೂರಿನಿಂದ ಯಾದಗಿರಿಗೆ ಹೊರಟಿದ್ದೆ.ಕಾರಿನಲ್ಲಿ ನಮ್ಮೂರು ಗಬ್ಬೂರಿನಿಂದ ಯಾದಗಿರಿಗೆ ಒಂದುವರೆ ಘಂಟೆಯ ಪ್ರಯಾಣ.ಗೂಗಲ್ ಮಾರ್ಗವಾಗಿ ಪ್ರಯಾಣ ಪ್ರಾರಂಭಿಸಿದ್ದೆ.ಗೂಗಲ್ ಬಳಿ ಬಂದಾಗ ಸಾವಿರಾರು ದನಗಳನ್ನು ಸಾಲಾಗಿ ಗೂಟಗಳಿಗೆ ಕಟ್ಟಿದ್ದನ್ನು ಕಂಡೆ.ಹನ್ನೊಂದು ಘಂಟೆಯ ಹೊತ್ತಿಗಾಗಲೆ ಸೂರ್ಯನ ಬಿಸಿಲಿನ ಪ್ರಖರತೆ ಏರತೊಡಗಿತ್ತು.ಸಾವಿರಾರು ದನಗಳನ್ನು ಕಟ್ಟಿದ್ದರಿಂದ ಮೊನ್ನೆಯಷ್ಟೇ ಗೂಗಲ್ಲಿನ ಅಲ್ಲಮಪ್ರಭುದೇವರ ರಥೋತ್ಸವ ನಡೆದದ್ದು ನೆನಪಿಗೆ ಬಂದು ಗೂಗಲ್ಲಿನ ದನದ ಜಾತ್ರೆ ಇದು ಎಂದು ಹೊಳೆಯಿತು.ದೇವದುರ್ಗ ತಾಲೂಕಿನಲ್ಲಿ ಅತಿದೊಡ್ಡ ದನಗಳ ಜಾತ್ರೆಯಾಗಿರುವ ಗೂಗಲ್ ದನಗಳ ಜಾತ್ರೆಯು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಸುಡುಬಿಸಿಲಿಗೆ ಎತ್ತುಗಳು,ಆಕಳುಗಳು,ಕರುಗಳು ಮೈಯೊಡ್ಡಿ ನಿಂತಿರುವುದನ್ನು ಕಂಡೊಡನೆ ಕಲ್ಲೆದೆಯವರ ಕರುಳುಗಳೂ ಚುಂಯ್ ಗುಟ್ಟುತ್ತವೆ.ದನಗಳ ವ್ಯಾಪಾರ ಅಷ್ಟೇನೂ ಜೋರಾಗಿ ಇರಲಿಲ್ಲ,ಅಲ್ಲೊಬ್ಬರು ಇಲ್ಲೊಬ್ಬರು ಖರೀದಿಯಲ್ಲಿ ತೊಡಗಿದ್ದನ್ನು ಕಾರಿನಲ್ಲಿಯೇ ಗಮನಿಸಿದೆ.ಹತ್ತಾರು ಎಕರೆ ವಿಸ್ತಾರದ ದನಗಳ ಮಾರಾಟಸ್ಥಳಗಳಲ್ಲಿ ಗಿಡಗಳೇ ಇರಲಿಲ್ಲ.ಎಲ್ಲೋ ಒಬ್ಬಿಬ್ಬರು ತಮ್ಮ ದನಕರುಗಳಿಗೆ ತಾಡುಪಾಲು ಮತ್ತು ಸುಪಾರಿ ಚೀಲಗಳ ನೆರಳನ್ನು ಮಾಡಿದ್ದರು.ಮಿಕ್ಕೆಲ್ಲ ದನಗಳು ಬಿಸಿಲಿನಲ್ಲಿಯೇ ನಿಂತಿದ್ದವು.ದನಗಳ ವ್ಯಾಪಾರ ಒಂದೇ ದಿನದಲ್ಲಿ ಆಗುವುದಿಲ್ಲ,ಒಮ್ಮೊಮ್ಮೆ ವಾರಗಟ್ಟಲೆ ಸಮಯ ಹಿಡಿಯುತ್ತದೆ.ಅಷ್ಟು ದಿನಗಳ ಕಾಲ ದನಗಳು ಬಿಸಿಲಿಗೆ ಮೈಯೊಡ್ಡಿ ನಿಂತಿರಬೇಕಾದ ಕರುಣಾಜನಕ ಸ್ಥಿತಿ.ಎತ್ತುಗಳನ್ನು ಮಾರುವವರಿಗೆ ಹೇಗಾದರೂ ಸರಿ ಅವುಗಳನ್ನು ಸಾಗುಹಾಕಿದರೆ ಸಾಕು ಎನ್ನುವ ವ್ಯಾಪಾರಿ ಬುದ್ಧಿ.ದನಗಳನ್ನು ಖರೀದಿಸುವವರು ತಮ್ಮ ಅಭಿರುಚಿ,ಅಭಿಲಾಷೆ ಮತ್ತು ಉಳುಮೆಗೆ ಯೋಗ್ಯ ದನಗಳನ್ನು ಖರೀದಿಸುತ್ತಾರೆ.ಉತ್ತಮ ದನಗಳನ್ನು ಆಯ್ಕೆ ಮಾಡಬೇಕಿದ್ದರಿಂದ ಅವರಿಗೆ ಅವಸರವಿಲ್ಲ,ಅಳೆದು ತೂಗಿ ವ್ಯಾಪಾರ ಮಾಡುತ್ತಾರೆ.ದನಗಳನ್ನು ಮಾರುವವರಿಗೆ ಹೇಗೂ ಮಾರುತ್ತೇವೆ,ಇವು ನಮ್ಮ ದನಗಳಲ್ಲ,ಯಾಕೆ ಆರೈಕೆ ಮಾಡಬೇಕು ಎನ್ನುವ ಉದಾಸೀನಭಾವವಿದ್ದರೆ ದನಗಳನ್ನು‌ ಖರೀದಿಸುವವರದ್ದು ನಿಧಾನ ಮನೋಭಾವ.ಕೊಡುವವರು- ಕೊಳ್ಳುವವರ ವ್ಯಾಪಾರದ ನಡುವೆ ಬಿಸಿಲಿನ ತಾಪಕ್ಕೆ ಸಿಕ್ಕು ಒದ್ದಾಡುತ್ತಿವೆ ಮೂಕ‌ಪ್ರಾಣಿಗಳು.

ಮಾರ್ಚ್ ತಿಂಗಳ ಆರಂಭದಿಂದಲೇ ಬಿಸಿಲಿನ ಝಳ ಹೆಚ್ಚುತ್ತಿದೆ,ಈಗ ದಿನದಿನಕ್ಕೂ ಹೆಚ್ಚುತ್ತಿದೆ ಸೂರ್ಯನ ಪ್ರಖರತೆ.ಹನ್ನೊಂದು ಘಂಟೆಗೇ ಹೊರಗೆ ಬರಲಾರದಂತಹ ಬಿಸಿಲಿನ ತಾಪ.ಆದರೆ ಸಾವಿರಾರು ದನಗಳು ಉರಿಬಿಸಿಲಿಗೆ ಮೈಯೊಡ್ಡಿ ನಿಂತಿರುವ ಕರುಳುಹಿಂಡುವ ದೃಶ್ಯ ಕಂಡು ಜಾತ್ರೆಯ ಸಂಘಟಕರು ಏನೂ ಮಾಡಿಲ್ಲವಲ್ಲ ಎನ್ನುವ ಬೇಸರ ಉಂಟಾಯಿತು.ದನಗಳ ಜಾತ್ರೆಯಿಂದ ಗ್ರಾಮ ಪಂಚಾಯತಿ ಮತ್ತು ಮುಜರಾಯಿ ಇಲಾಖೆಗೆ ಸಣ್ಣಪ್ರಮಾಣದಲ್ಲಾದರೂ ಆದಾಯ ಬರುತ್ತದೆ.ಗ್ರಾಮ ಪಂಚಾಯತಿ ಮತ್ತು ಕಂದಾಯ ಇಲಾಖೆಗಳವರು ದನಗಳಿಗಾಗಿ ಟೆಂಟುಗಳ ವ್ಯವಸ್ಥೆ ಮಾಡಬೇಕಿತ್ತು.ಕೊನೆಗೆ ಪಶುಸಂಗೋಪನೆ ಇಲಾಖೆಯಾದರೂ ಇತ್ತ ಗಮನಹರಿಸಬೇಕಿತ್ತು.ಮಾರ್ಚ್ ತಿಂಗಳು ಅಂತ್ಯಗೊಳ್ಳಲು ಕೆಲವೇ ದಿನಗಳಿವೆ,ಬಿಲ್ಲುಗಳನ್ನು ಪಾಸು ಮಾಡಿಸುವ ಒತ್ತಡದಲ್ಲಿ ಸರಕಾರಿ ಅಧಿಕಾರಿಗಳು,ಸಿಬ್ಬಂದಿಯವರು ಬ್ಯುಸಿ ಇರಬಹುದು.ಮತ್ತೆ ಕೆಲವರು ಚುನಾವಣೆ ಘೋಷಣೆ ಆಗುತ್ತಿರುವುದನ್ನೇ ಕಾಯುತ್ತಿರಬಹುದು.ಕೊನೆಗೆ ಸ್ವಯಂ ಸೇವಾ ಸಂಘಟನೆಗಳಾದರೂ ಸಾವಿರಾರು ದನಗಳಿಗೆ ನೆರಳಿನ ವ್ಯವಸ್ಥೆ ಮಾಡಿ, ಬಿಸಿಲಿನ ತಾಪದಿಂದ ಅವುಗಳನ್ನು ರಕ್ಷಿಸುವ ಪುಣ್ಯಕಾರ್ಯ ಮಾಡಬೇಕಿತ್ತು.

ಎಲ್ಲರೂ ಅವರವರ ಕೆಲಸ- ಕಾರ್ಯಗಳಲ್ಲಿ ಬ್ಯುಸಿ ಆಗಿರುವಾಗ ಕೇವಲ ‘ ಪಶುಗಳು’ ಆಗಿರುವ ದನಗಳ ಬಗ್ಗೆ ಯೋಚಿಸುವಷ್ಟು ಪುರಸೊತ್ತಾದರೂ ಎಲ್ಲಿ ? ದನಗಳಿಗೆ ಬಾಯಿ ಇಲ್ಲ ಎನ್ನುವ ಕಾರಣಕ್ಕೆ ಅವು ತಮ್ಮ ನೋವನ್ನು ಹೇಳಿಕೊಳ್ಳಲಾರವು.ಆದರೆ ಹೃದಯ,ಭಾವನೆಗಳನ್ನು ಉಳ್ಳ ಮನುಷ್ಯ ಮೂಕಪ್ರಾಣಿಗಳ ನೋವನ್ನು ಅರ್ಥಮಾಡಿಕೊಳ್ಳದಷ್ಟು ಸಂವೇದನಾಶೂನ್ಯನಾದದ್ದು ಮಾತ್ರ ನಿರಾಶೆ,ಬೇಸರದ ಸಂಗತಿ.

About The Author