ಮಹಾಶೈವ ಧರ್ಮಪೀಠ ವಾರ್ತೆ :  ಜೀವಸಮಸ್ತರ ಕಲ್ಯಾಣವೇ ಮಹಾಶೈವ ಧರ್ಮದ ಗುರಿ– ಮುಕ್ಕಣ್ಣ ಕರಿಗಾರ

ರಾಯಚೂರು : ಶಿವಸರ್ವೋತ್ತಮ ತತ್ತ್ವವನ್ನು ಪ್ರತಿಪಾದಿಸುವ ಮಹಾಶೈವ ಧರ್ಮವು ಲೋಕಸಮಸ್ತರ ಕಲ್ಯಾಣವನ್ನು ಸಾಧಿಸಬಯಸುತ್ತದೆ.ಶುಭಕರನೂ ಮಂಗಳಕರನೂ ಅಭಯಕರನೂ ಆಗಿರುವ ಶಿವನ ಜೀವದಯಾಭಾವವೇ ಮಹಾಶೈವ ಧರ್ಮದ ತಿರುಳಾಗಿದ್ದು ಶಿವನ ಕಲ್ಯಾಣಗುಣವನ್ನೇ ಪರಮಾರ್ಥವಾಗಿ ಸ್ವೀಕರಿಸಿರುವ ಮಹಾಶೈವ ಧರ್ಮವು ಜೀವಸಮಸ್ತರ ಕಲ್ಯಾಣವನ್ನು ಸಾಧಿಸಬಯಸುತ್ತದೆ.

ಧರ್ಮದ ಕೆಲಸ ಮನಸ್ಸುಗಳು ಒಗ್ಗೂಡಿಸುವುದು,ಒಡೆಯುವುದಲ್ಲ.ಧರ್ಮ ಮನುಷ್ಯರ ಕಲ್ಯಾಣಕ್ಕಾಗಿ ಇದೆಯೇ ಹೊರತು ಮನುಷ್ಯ ಮನುಷ್ಯರ ನಡುವೆ ಹಗೆ- ಮತ್ಸರಗಳನ್ನು ಸಾಧಿಸಲು ಅಲ್ಲ.ಧರ್ಮದ ಹೆಸರಿನಲ್ಲಿ ಮನುಷ್ಯ ಸಂಬಂಧಗಳನ್ನು ಹಾಳುಗೆಡವಬಾರದು’ ಎಂದು ಮಹಾಶೈವ ಧರ್ಮಪೀಠದ ಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಹೇಳಿದರು.

ಮಾರ್ಚ 22 ನೇ ದಿನದ ಯುಗಾದಿಯಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದಲ್ಲಿರುವ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಕಳಶಾರೋಹಣ ನೆರವೇರಿಸಿ ‘ ಯುಗಾದಿ ಉತ್ಸವ –೨೦೨೩’ ರ ಸಾನ್ನಿಧ್ಯ ಮತ್ತು ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಧಾರವಾಡದ ಸಿಸ್ಲೆಪ್ ಸಂಸ್ಥೆಯ ಉಪನ್ಯಾಸಕ ಡಾ. ಎನ್ .ಹೆಚ್. ಪೂಜಾರ್ ಅವರು ಮಾತನಾಡಿ ಕಳೆದ ಹತ್ತುವರ್ಷಗಳಿಂದ ಮಹಾಶೈವ ಧರ್ಮಪೀಠದಲ್ಲಿ ಹಮ್ಮಿಕೊಳ್ಳಲಾದ ಸಾಹಿತ್ಯಕ,ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಗಳ ಬಗ್ಗೆ ವಿವರಿಸುತ್ತ ‘ ಜಾತಿ,ಧರ್ಮಗಳ ಹಂಗಿಗೊಳಗಾಗದೆ ಮಹಾಶೈವ ಧರ್ಮಪೀಠವು ಶಿವನ ಲೋಕಕಾರುಣ್ಯಗುಣವನ್ನು ಪಸರಿಸುವ ಕೆಲಸ ಮಾಡುತ್ತಿದೆ’ ಎಂದರು.ಮಾನ್ವಿಯ ಪ್ರಗತಿ ಪಿ ಯು ಕಾಲೇಜಿನ ಪ್ರಾಂಶುಪಾಲರು ಮತ್ತು ಕಥೆಗಾರರಾಗಿರುವ ಬಸವರಾಜ ಭೋಗಾವತಿಯವರು’ ಸರಕಾರದ ಉನ್ನತ ಹುದ್ದೆಗಳಲ್ಲಿದ್ದೂ ಹಣದ ಆಶೆಗೊಳಗಾದೆ ಕೈಬಾಯಿಗಳನ್ನು ಸ್ವಚ್ಛವಾಗಿಟ್ಟುಕೊಂಡು,ಅಧಿಕಾರದ ಅಹಂಮಿಕೆಯನ್ನು ಮೈಗಂಟಿಸಿಕೊಳ್ಳದೆ ಸರ್ವರಲ್ಲಿಯೂ ಶಿವನನ್ನು ಕಾಣುವ ಬದುಕು ಬರಹಗಳಲ್ಲಿ ಅಭಿನ್ನತೆಯನ್ನು ಕಾಯ್ದುಕೊಂಡಿರುವ ಮುಕ್ಕಣ್ಣ ಕರಿಗಾರ ಅವರು ಸಂತರು,ಸಂತ ಸಾಹಿತಿಗಳು.ಅವರ ಬದುಕು ನಮಗೆಲ್ಲರಿಗೂ ಆದರ್ಶವಾದುದು’ ಎಂದು ನುಡಿದರು.ಶಹಾಪುರದ ಕವಿ ಬಸವರಾಜ ಸಿನ್ನೂರ ಅವರು ಮಾತನಾಡಿ ‘ ಸಮಾಜಮುಖಿಯಾಗಿ ಜೀವಿಸುತ್ತ ಲೋಕಕಲ್ಯಾಣಕಾರ್ಯ ಸಾಧಿಸುತ್ತಿರುವ ಮುಕ್ಕಣ್ಣ ಕರಿಗಾರ ಅವರ ಮೌಲ್ಯಾಧಾರಿತ ಬದುಕು ಎಲ್ಲರಿಗೂ ಸ್ಫೂರ್ತಿದಾಯಕವಾದುದು ‘ ಎಂದರು.ಸ್ಥಳೀಯ ವಿದ್ಯಾಜ್ಯೋತಿ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಚೆನ್ನಪ್ಪ ಬೂದಿನಾಳ ಅವರು ಮಾತನಾಡಿ ‘ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ‘ ಶಿವೋಪಶಮನ ಕಾರ್ಯ’ ವು ಜಂಜಡದ ಬದುಕಿನಲ್ಲಿ ಬದುಕುತ್ತಿರುವವರ ಭಯ- ಆತಂಕಗಳನ್ನು ನಿವಾರಿಸಿ,ಅವರಲ್ಲಿ ಧೈರ್ಯ ತುಂಬುತ್ತಿದೆ.ವೈದ್ಯರುಗಳ ಬಳಿ ತೋರಿಸಿಕೊಂಡು ಹಣ ಕಳೆದುಕೊಂಡು ನಿರಾಶರಾಗಿ ಮಹಾಶೈವ ಧರ್ಮಪೀಠಕ್ಕೆ ಬಂದು ಗುಣಮುಖರಾಗಿ,ಧೈರ್ಯದಿಂದ ಬದುಕುತ್ತಿರುವ ಅಸಂಖ್ಯಾತ ಜನರ ಉದಾಹರಣೆ ನಮ್ಮ ಕಣ್ಣೆದುರಿಗಿದೆ.ಜನರ ಮನಸ್ಸಿನಲ್ಲಿನ ನಕರಾತ್ಮಾಕ ಭಾವನೆಗಳನ್ನು ಕಳೆದು ಶಕ್ತಿ,ಚೈತನ್ಯಗಳನ್ನು ತುಂಬಿ ಭಕ್ತರುಗಳನ್ನು ಉತ್ಸಾಹದಿಂದ ಬದುಕುವಂತೆ‌ ಪ್ರೇರೇಪಿಸುವ ಮುಕ್ಕಣ್ಣ ಕರಿಗಾರ ಅವರ ಶಿವೋಪನ ಕಾರ್ಯವು ಅತಿವಿಶಿಷ್ಟಕಾರ್ಯವಾಗಿದೆ’ ಎಂದರು.ಕನ್ನಡಪ್ರಭ ದಿನ ಪತ್ರಿಕೆಯ ಬೆಳಗಾವಿಯ ಹಿರಿಯ ಉಪಸಂಪಾದಕ ಮಲ್ಲಿಕಾರ್ಜುನ ದೇಸಾಯಿ ಅವರು ಮಾತನಾಡಿ ಕಳೆದ ಮುವ್ವತ್ತು ವರ್ಷಗಳಿಂದ ತಾವು ಕಂಡ ಮುಕ್ಕಣ್ಣ ಕರಿಗಾರ ಅವರ ಹಣದ ಆಸೆ ಇಲ್ಲದ,ಇತರರಿಗಾಗಿ ಹಣ ಖರ್ಚು ಮಾಡುವ ವ್ಯಕ್ತಿವಿಶೇಷತೆಯನ್ನು ಬಣ್ಣಿಸಿದರಲ್ಲದೆ ಮುಕ್ಕಣ್ಣ ಕರಿಗಾರ ಅವರು ‘ ಸ್ವಯಂ ನಿವೃತ್ತಿ ಪಡೆಯುವ ನಿರ್ಧಾರವನ್ನು ಪ್ರಕಟಿಸುವಾಗ ನಾವೆಲ್ಲರು ದಿಗ್ಭ್ರಾಂತರಾದೆವು,ಭಯ- ಆತಂಕಗಳಿಂದ ನಿಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಂದೆವು.ಆದರೆ ದೃಢಮನಸ್ಕರಾದ ಅವರು ಯಾರ ಮಾತುಗಳನ್ನು ಕೇಳದೆ ಸ್ವಯಂ ನಿವೃತ್ತಿಯನ್ನು ಘೋಷಿಸಿಯೇ ಬಿಟ್ಟರು.ಸರಕಾರದ ಉನ್ನತ ಹುದ್ದೆಯಲ್ಲಿದ್ದು ಇನ್ನೂ ಎತ್ತರದ ಸ್ಥಾನ ಮಾನಗಳನ್ನು ಪಡೆಯಬಹುದಿದ್ದ ಇನ್ನೂ ಆರು ವರ್ಷಗಳ ಸೇವಾವಧಿ ಪೂರೈಸಬೇಕಿದ್ದ ಅವರು ಅಂಗಿಕಳಚಿದಷ್ಟೇ ಸಹಜವಾಗಿ ಸ್ವಯಂ ನಿವೃತ್ತಿ ಘೋಷಿಸಿ,ಶಿವ ಸೇವೆಗೆ ಸಮರ್ಪಿಸಿಕೊಂಡಿದ್ದನ್ನು ಮತ್ತು ಮಹಾಶೈವ ಧರ್ಮಪೀಠದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ಕಂಡರೆ ಮುಕ್ಕಣ್ಣ ಕರಿಗಾರ ಅವರ ಸರಕಾರಿ ಸೇವೆಯಿಂದ ಹೊರಬರುವ ನಿರ್ಧಾರ ಶಿವಪ್ರೇರಣೆಯಂತೆ ಕಾಣಿಸುತ್ತಿದೆ’ ಎಂದರು.ಸುಲ್ತಾನ ಪುರದ ಗಂಗಾಧರ ಶಾಂತಾಶ್ರಮದ ಶರಣಪ್ಪ ಶರಣರು ಸಮಾರಂಭದಲ್ಲಿ ಅನುಭಾವಿಗಳಾಗಿ ಉಪಸ್ಥಿತರಿದ್ದರು.

‌ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿ ದೇವಸ್ಥಾನಗಳ ಗೋಪುರ ನಿರ್ಮಾಣ ಹಾಗೂ ಕಳಶಕಾರ್ಯಗಳಿಗೆ ದಾನ ಮಾಡಿದ ದಾನಿಗಳು ಸೇರಿದಂತೆ ಮಹಾಶೈವ ಧರ್ಮಪೀಠಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ 35 ಜನರನ್ನು ಇದೇ ಸಂದರ್ಭದಲ್ಲಿ ” ಶ್ರೀ ವಿಶ್ವೇಶ್ವರ ಅನುಗ್ರಹ ಪ್ರಶಸ್ತಿ” ಯನ್ನು ನೀಡಿ,ಸತ್ಕರಿಸಲಾಯಿತು.ಕಳಶಾರೋಹಣ ಕಾರ್ಯ ನೆರವೇರಿಸಿದ ಮುಕ್ಕಣ್ಣ ಕರಿಗಾರ ಅವರನ್ನು ವಿವಿಧ ವ್ಯಕ್ತಿ ಹಾಗೂ ಸಂಘಟನೆಗಳಿಂದ ಸನ್ಮಾನಿಸಲಾಯಿತು. ಗುರುಬಸವ ಹುರಕಡ್ಲಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ‘ ಯುಗಾದಿ ಉತ್ಸವ –೨೦೨೩ ರ ಕಾರ್ಯಕ್ರಮ’ ದಲ್ಲಿ ಶಿಕ್ಷಕ ಷಣ್ಮುಖ ಹೂಗಾರ ಸ್ವಾಗತಿಸಿದರೆ ಮತ್ತೊಬ್ಬ ಶಿಕ್ಷಕ ಬಸವಲಿಂಗ ಕರಿಗಾರ ಕಾರ್ಯಕ್ರಮ ನಿರೂಪಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ ಕಾರ್ಯಕ್ರಮವನ್ನು ಸಂಘಟಿಸಿದ್ದರು,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ
ಹಾಗೂ ಸುತ್ತಮುತ್ತಣ ಗ್ರಾಮಗಳ ಮಹಾಶೈವ ಧರ್ಮಪೀಠದ ಭಕ್ತರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author