ಮಠ- ಪೀಠಗಳಿಗೆ ಅನುದಾನ ನೀಡುವುದು ತಪ್ಪಲ್ಲ:ಮುಕ್ಕಣ್ಣ ಕರಿಗಾರ

ಇತ್ತೀಚೆಗೆ ಹಿಂದುಳಿದ ವರ್ಗಗಳ ಮಠಾಧೀಶರ ಒಕ್ಕೂಟದ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಸಲ್ಲಿಸಿದ್ದನ್ನು ಪರಿಗಣಿಸಿ,ಮುಖ್ಯ ಮಂತ್ರಿಯವರು ಹಿಂದುಳಿದ ಮತ್ತು ದಲಿತ ಮಠಗಳು ಹಾಗೂ ಸಂಸ್ಥೆಗಳಿಗೆ 119 ಕೋಟಿ ರೂಪಾಯಿಗಳ ಹಣ ಬಿಡುಗಡೆಗೆ ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ.ವಿಧಾನಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ ಅವರು ‘ ಇದನ್ನು ಆಕ್ಷೇಪಿಸಿ,ಮಠಗಳಿಗೆ ಸರಕಾರ ಹಣ ನೀಡಬಾರದು ‘ ಎಂದಿದ್ದಾರಲ್ಲದೆ ಮುಖ್ಯಮಂತ್ರಿಯವರು ಆಡಿದ್ದ ‘ ಸರಕಾರವು ಮಾಡದ ಕೆಲಸವನ್ನು ಮಠಗಳು ಮಾಡುತ್ತಿವೆ’ ಎನ್ನುವ ಮಾತನ್ನೂ ಸಹ ಆಕ್ಷೇಪಿಸಿದ್ದಾರೆ.( ‘ಪ್ರಜಾವಾಣಿ’ ದಿನಪತ್ರಿಕೆಯ 09.04.2022 ರ ಪುಟ 8 ರಲ್ಲಿ ಪ್ರಕಟಗೊಂಡ ವರದಿ).ಯಾವ ಕಾರಣಕ್ಕಾಗಿ ಹೆಚ್ ವಿಶ್ವನಾಥ ಅವರು ಆ ಮಾತುಗಳನ್ನು ಹೇಳಿದ್ದಾರೋ ತಿಳಿಯದು.ಆದರೆ ಮಠಮಾನ್ಯಗಳಿಗೆ ಸರಕಾರದ ಅನುದಾನ ನೀಡಿದರೆ ತಪ್ಪೇನೂ ಆಗುವುದಿಲ್ಲ; ಬದಲಿಗೆ ಮಠ- ಪೀಠಗಳು ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನೆರವು ಆಗುತ್ತದೆ.ಸರಕಾರವು ಮಾಡದ ಕೆಲಸ ಮಠಗಳು ಮಾಡುತ್ತಿವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದರಲ್ಲಿ ಸತ್ಯಾಂಶವೂ ಇದೆಯಲ್ಲ ! ಸಿದ್ಧಗಂಗಾ ಮಠದ ಸ್ವಾಮೀಜಿಗಳಾಗಿದ್ದ ಶಿವಕುಮಾರಸ್ವಾಮೀಜಿಯವರು ಮಾಡಿದ ಅನ್ನದಾಸೋಹ- ಜ್ಞಾನದಾಸೋಹ ಕಾರ್ಯವನ್ನು ಸರಕಾರ ಮಾಡಲು ಸಾಧ್ಯವೆ ? ಶಿವಕುಮಾರಸ್ವಾಮೀಜಿಯವರ ಮಾನವೀಯತೆ,ಸಮಾಜಪರ ಕಾಳಜಿ- ಕಳಕಳಿಗಳಿಂದ ಎಲ್ಲ ಜಾತಿ- ಜನಾಂಗಗಳಿಗೆ ಸೇರಿದ ಲಕ್ಷಾಂತರ ಜನರು ಶಿಕ್ಷಣ ಪಡೆಯಲು,ಸಾವಿರಾರು ಜನರು ಉದ್ಯೋಗ ಪಡೆಯಲು ಸಾಧ್ಯವಾಯಿತು.ಸ್ವಾತಂತ್ರ್ಯಾಪೂರ್ವದಿಂದಲೂ ನೂರಾರು ಮಠಗಳು ಸಮಾಜದ ಬಡವರು,ಕೆಳವರ್ಗದ ವಿದ್ಯಾರ್ಥಿಗಳಿಗೆ ಇಲ್ಲವೆ ಸ್ವಾಮೀಜಿಗಳ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಿ,ಬಾಳು ಬೆಳಗುವ ಕಾರ್ಯ ಮಾಡುತ್ತಿವೆ.ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿನ ‘ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು’ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿವೆ.ಮೈಸೂರಿನ ಸುತ್ತೂರು ಮಠವು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಬಡವರ ಮಕ್ಕಳಿಗೆ ಶಿಕ್ಷಣದಲ್ಲಿ ರಿಯಾಯತಿ,ಅವಕಾಶಗಳನ್ನು ಕೊಡುವ ಮೂಲಕ ನಾಡಿನಾದ್ಯಂತ ಹೆಸರಾಗಿದೆ.ಇಂತಹ ಸಂಸ್ಥೆಗಳು ಅಕ್ಷರ ಮತ್ತು ಅನ್ನಗಳೊಂದಿಗೆ ಸಂಸ್ಕಾರವನ್ನೂ ನೀಡುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ಮತ್ತು ದಲಿತ ಮಠಾಧೀಶರುಗಳು ಸರಕಾರದ ಸಹಾನುದಾನ ಪಡೆದು ಅವರವರ ಜಾತಿಗಳ ಜನರ ಉನ್ನತಿ ಮತ್ತು ಜಾಗೃತಿಯ ಕಾರ್ಯ ಮಾಡುತ್ತಿದ್ದಾರೆ.ಮಠ- ಪೀಠಗಳ ಸ್ವಾಮಿಗಳೇನು ಸರಕಾರದ ಅನುದಾನ ಪಡೆದು ಬಡ್ಡಿವ್ಯವಹಾರ ಮಾಡುವುದಿಲ್ಲ; ಬದಲಿಗೆ ಸಮಾಜದ ಜನರಿಗೆ ಉಪಯುಕ್ತವಾಗುವ ಸಮುದಾಯಭವನಗಳ ನಿರ್ಮಾಣ,ಕಲ್ಯಾಣ ಮಂಟಪಗಳು,ಶಾಲೆ- ಆಸ್ಪತ್ರೆಗಳನ್ನು ಕಟ್ಟಿಸುತ್ತಿದ್ದಾರೆ.ಕೇವಲ ಭಕ್ತರುಗಳನ್ನೇ ನಂಬಿ ಕೋಟ್ಯಾಂತರ ರೂಪಾಯಿಗಳ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ.ಒಂದು ಮದುವೆ ಮಾಡಬೇಕಾದರೆ ನಗರಗಳಲ್ಲಿ ಕಲ್ಯಾಣ ಮಂಟಪ ಇಲ್ಲವೆ ಛತ್ರಗಳ ಒಂದು ದಿನದ ಬಾಡಿಗೆಯೇ ಹಲವು ಲಕ್ಷ ರೂಪಾಯಿಗಳು ಆಗಿರುತ್ತದೆ.ಬಡವರು ಇಂತಹ ದುಬಾರಿ ಕಲ್ಯಾಣಮಂಟಪಗಳಲ್ಲಿ ಮದುವೆ ಮಾಡಲು ಸಾಧ್ಯವೆ ? ಸ್ವಾಮಿಗಳು ಕಟ್ಟಿಸಿದ ಕಲ್ಯಾಣ ಮಂಟಪಗಳಲ್ಲಿ ಉಚಿತವಾಗಿ ಇಲ್ಲವೆ ನಿರ್ವಹಣಾ ವೆಚ್ಚ ಪಾವತಿಸಿ ಬಡವರು ತಮ್ಮ ಮನೆಗಳ ಮದುವೆ ಕಾರ್ಯ ನೆರವೇರಿಸುತ್ತಾರೆ.ಬಹಳಷ್ಟು ಮಠಾಧೀಶರುಗಳು ಇತ್ತೀಚೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಿದ್ದಾರೆ.ಇದು ಒಳ್ಳೆಯ ಮತ್ತು ಸ್ವಾಗತಾರ್ಹ ಕಾರ್ಯ.

ಹಿಂದುಳಿದ ದಲಿತವರ್ಗಗಳಿಗೆ ಸೇರಿದ ಎಲ್ಲ ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಪಡೆದು ಶಿಕ್ಷಣ ಪಡೆಯಲು ಸಾಧ್ಯವಿಲ್ಲ.ಆಯಾ ಸಮಾಜದ ಮಠಗಳ ಸ್ವಾಮಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಇಲ್ಲವೆ ಹಾಸ್ಟೆಲ್ಲುಗಳ ಆಸರೆಯಲ್ಲಿ ಶಿಕ್ಷಣಪಡೆಯುತ್ತಿದ್ದಾರೆ ಆಯಾ ಸಮುದಾಯದ ವಿದ್ಯಾರ್ಥಿಗಳು.ಕೆಲವು ಮಠಾಧೀಶರು ಆಸ್ಪತ್ರೆಗಳನ್ನು ಸಹ ನಡೆಸುತ್ತಿದ್ದಾರೆ.ಲಕ್ಷಗಳು,ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಡೊನೇಶನ್ ಪಡೆದು ಖಾಸಗಿ ವ್ಯಾಪಾರೋದ್ಯಮಿಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.ಬಡವರು,ದಲಿತರ ಮಕ್ಕಳು ಇಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವುದು ಸಾಧ್ಯವಿಲ್ಲ.ಮಠಗಳ ಸ್ವಾಮೀಜಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬಡವರು ಓದಬಹುದು.ನನಗೆ ಹಲವಾರು ಮಠ ಪೀಠಾಧೀಶರುಗಳು ಒಡನಾಟ,ಸಂಪರ್ಕ ಇದೆ.ಬಡಪ್ರತಿಭಾವಂತ ಮಕ್ಕಳ ಅಡ್ಮಿಶನ್ ಕುರಿತು ನಾನು ಮನವಿ ಮಾಡಿದಾಗ ಸ್ವಾಮೀಜಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,ಬಡಮಕ್ಕಳಿಗೆ ಶುಲ್ಕ ವಿನಾಯತಿ ಇಲ್ಲವೆ ಕಡಿಮೆ ಪ್ರಮಾಣದ ಶುಲ್ಕ ಪಡೆದು ಶಿಕ್ಷಣ ನೀಡಿದ್ದಾರೆ.ಬಹಳಷ್ಟು ಜನ ಸ್ವಾಮೀಜಿಗಳು ಭಕ್ತರು ತಮ್ಮನ್ನು ಸಂಪರ್ಕಿಸಿ ಮನವಿ ಮಾಡಿದಾಗ ಬಡವಿದ್ಯಾರ್ಥಿಗಳಿಗೆ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಕೊಡಿಸಿ,ಔದಾರ್ಯ ಮೆರೆದಿದ್ದಾರೆ.ಇಂತಹ ಸಮಾಜೋಪಯೋಗಿ ಕಾರ್ಯಗಳನ್ನು ಮಾಡುತ್ತಿರುವ ಮಠ ಪೀಠಗಳಿಗೆ ಸರಕಾರ ಅನುದಾನ ನೀಡಿದರೆ ತಪ್ಪೇನು ? ಸರಕಾರದಲ್ಲಿ ಬಹಳಷ್ಟು ಅನುತ್ಪಾದಕ ಇಲ್ಲವೆ ಅನಗತ್ಯ ದುಂದುವೆಚ್ಚದ ಬಾಬತ್ತುಗಳಿರುತ್ತವೆ.ಅಂತಹವುಗಳಲ್ಲಿ ಮಠ ಪೀಠಗಳಿಗೆ ನೀಡುವ ಐದಾರುನೂರು ಕೋಟಿಗಳ ಸಹಾನುದಾನ ದೊಡ್ಡದಲ್ಲ.

ರಾಜ್ಯದ ಹಿಂದುಳಿದ ಜಿಲ್ಲೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಅಮಾತೇಶ್ವರ ಮಠದ ಸ್ವಾಮಿಗಳಾದ ಗಿರಿಮಲ್ಲದೇವರು ತಮ್ಮ ಭಕ್ತರುಗಳಲ್ಲಿ ಭಿಕ್ಷೆ ಬೇಡಿಯೇ ಬಡಮಕ್ಕಳಿಗೆ ಶಿಕ್ಷಣ ನೀಡುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ.ಎಲ್ಲ ಜಾತಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಗಿರಿಮಲ್ಲದೇವರು.ಸಮಾಜಪರ ಕಾಳಜಿಯಿಂದ ದುಡಿಯುತ್ತಿರುವ ಗಿರಿಮಲ್ಲದೇವರು ಅವರಂತಹ ಸ್ವಾಮಿಗಳು ಸಾಕಷ್ಟಿದ್ದಾರೆ ನಮ್ಮಲ್ಲಿ.

ಮಠ ಪೀಠಗಳು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವಿಶಿಷ್ಟ ರೀತಿಯಲ್ಲಿ ಸೇವೆಸಲ್ಲಿಸುತ್ತಿರುವಾಗ ಅಂತಹ ಸಮಾಜಮುಖಿ ಮಠಗಳಿಗೆ ಸರಕಾರದ ಹಣ,ಅನುದಾನ ನೀಡುವುದು ಕೂಡ ಸಾರ್ಥಕ ಕಾರ್ಯವೆ.

About The Author