ಚಿಂತನೆ : ಕತ್ತರಿ–ಸೂಜಿ : ಮುಕ್ಕಣ್ಣ ಕರಿಗಾರ

ಕತ್ತರಿ ಮತ್ತು ಸೂಜಿಗಳು ಮನುಷ್ಯ ಸಮಾಜದ ವಿಭಿನ್ನ ಸ್ವಭಾವದ ಜನರ ಗುಣ- ಸ್ವಭಾವಗಳಿಗೆ ಉತ್ತಮ ನಿದರ್ಶನಗಳು.ಟೇಲರ್ಗಳಿಗೆ ಕತ್ತರಿ ಮತ್ತು ಸೂಜಿಗಳೆರಡೂ ಅವಶ್ಯಕ.ಕತ್ತರಿಯು ಬಟ್ಟೆಯನ್ನು ಕತ್ತರಿಸಿದರೆ ಸೂಜಿಯು ಕತ್ತರಿಯು ತುಂಡರಿಸಿದ ಬಟ್ಟೆಯ ತುಣುಕುಗಳನ್ನು ಒಂದುಗೂಡಿಸುತ್ತದೆ,ನಮಗೆ ಬೇಕಾದ ಉಡುಪುಗಳನ್ನು ಸಿದ್ಧಪಡಿಸಲು ನೆರವಾಗುತ್ತದೆ.ಕತ್ತರಿಯು ತುಂಡರಿಸಿದ ಬಟ್ಟೆಗಳನ್ನು ಒಪ್ಪವಾಗಿ ಜೋಡಿಸಿ ಸುಂದರವಾದ ಉಡುಗೆಗಳನ್ನು ತಯಾರಿಸುವ ಸೂಜಿಯು ಕಟ್ಟುವ, ಕೂಡಿಸುವ ಕೆಲಸ ಮಾಡುತ್ತದೆ.ಕತ್ತರಿಯ ಸ್ವಭಾವ ಕತ್ತರಿಸುವುದು,ತುಂಡರಿಸುವುದು,ಪ್ರತ್ಯೇಕಿಸುವುದು; ಕತ್ತರಿಯು ಕತ್ತರಿಸಿದ ಬಟ್ಟೆಯ ತುಣುಕುಗಳನ್ನು ಒಂದುಗೂಡಿಸುವುದು ಸೂಜಿಯ ಹಿರಿಮೆ.

ಮನುಷ್ಯ ಸಮಾಜದಲ್ಲಿ ಕತ್ತರಿಯಂಥವರು ಇದ್ದಾರೆ,ಸೂಜಿಯಂಥವರೂ ಇದ್ದಾರೆ.ಮನುಷ್ಯ ಮನುಷ್ಯರ ನಡುವೆ ದ್ವೇಷಾಸೂಯೆಗಳ ಬೀಜ ಬಿತ್ತಿ,ಸಂಘರ್ಷವನ್ನುಂಟು ಮಾಡುವುದು ವಿಚ್ಛಿದ್ರಕಾರಿಪ್ರವೃತ್ತಿಯ ಜನರ ಹುಟ್ಟುಗುಣ.ಮನುಷ್ಯ ಮನುಷ್ಯರಲ್ಲಿ ಪ್ರೀತಿ,ಬಾಂಧವ್ಯದ ಬೀಜಗಳನ್ನು ಬಿತ್ತಿ ಮನುಷ್ಯ ಸಮಾಜವು ಸಹೋದರತೆ,ಬಂಧುತ್ವ ಭಾವದಲ್ಲಿ ಇರುವಂತೆ ಪ್ರಯತ್ನಿಸುವ ಶ್ರೇಷ್ಠಕಾರ್ಯವನ್ನು ಸೂಜಿಯಂತೆ ಇರುವ ಜನರು ಮಾಡುತ್ತಾರೆ.ಮನಸ್ಸುಗಳನ್ನು ಒಡೆಯುವ,ಮನೆಗಳನ್ನು ಮುರಿಯುವ ಕೆಲಸ ಸುಲಭ,ಆದರೆ ಬಿರುಕುಬಿಟ್ಟ ಮನೆಗಳನ್ನು ಕೂಡಿಸುವುದು,ಒಡೆದ ಮನಗಳನ್ನು ಒಂದುಗೂಡಿಸುವುದು ಮಹತ್ವದಕಾರ್ಯ,ಸಮಾಜನಿರ್ಮಾಣ ಕಾರ್ಯ.

ನಮಗೆ ಬೇಕಾದ ಉಡುಗೆ- ತೊಡುಗೆಗಳು ಸಿದ್ಧವಾಗಬೇಕಾದರೆ ಬರಿ ಸೂಜಿ ಇದ್ದರೆ ಮಾತ್ರ ಸಾಲದು,ಕತ್ತರಿಯೂ ಬೇಕಾಗುತ್ತದೆ.ಸಮಾಜ,ರಾಷ್ಟ್ರಜೀವನ ಸುಂದರವಾಗಿ,ಭದ್ರವಾಗಿ ಇರಬೇಕಾದರೆ ಮನೆಮುರುಕರು,ಮನಗಳನ್ನು ಒಡೆಯುವವರೂ ಇರಬೇಕು! ಮನೆಮುರುಕರು ಹಚ್ಚಿದ ಕಿಚ್ಚಿನಿಂದ ಆಸ್ತಿ,ಮನೆ ಮೊದಲಾದವುಗಳನ್ನು ಕಳೆದುಕೊಂಡವರು ತಡವಾಗಿಯಾಗಿದರೂ ಅರ್ಥಮಾಡಿಕೊಂಡು ಪರಸ್ಪರ ಒಂದುಗೂಡುತ್ತಾರೆ.ಮನೆಮುರುಕರ ಸಹವಾಸದಿಂದ ಅಷ್ಟುದಿನ ದೂರ ಇದ್ದವರು ಪರಸ್ಪರ ಪ್ರೀತಿ- ವಾತ್ಸಲ್ಯಗಳಿಂದ ಒಂದಾಗುತ್ತಾರೆ.ರಾಷ್ಟ್ರಜೀವನದಲ್ಲಿಯೂ ಹಾಗೆಯೇ.ಒಂದು ರಾಷ್ಟ್ರವು ಭವ್ಯವಾಗಿ ,ಚಿರಕಾಲ ಕೀರ್ತಿಶಾಲಿಯಾಗಿ ಬಾಳಬೇಕಾದರೆ ರಾಷ್ಟ್ರದ ಪ್ರಜೆಗಳೆಲ್ಲರನ್ನು ಪ್ರೀತಿಸಿ,ರಾಷ್ಟ್ರವನ್ನು ಕಟ್ಟುವವರು ಇರುವಂತೆಯೇ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ವಿಭಜಕ- ವಿದ್ವೇಷಕ- ವಿಧ್ವಂಸಕ ಶಕ್ತಿಗಳೂ ಇರಬೇಕು! ವಿಭಜಕಪ್ರವೃತ್ತಿಯ ಜನರಿಂದ ಬವಣೆಗೊಳಗಾದ ರಾಷ್ಟ್ರದ ಪ್ರಜೆಗಳು ಎಚ್ಚೆತ್ತು ರಾಷ್ಟ್ರೀಯ ಏಕತೆ,ಸಹೋದರತೆಯಿಂದ ಬದುಕಬೇಕಾದರೆ ವಿನಾಶಕಾರಿ ಶಕ್ತಿಗಳಿಗೆ ಕೆಲಕಾಲವಾದರೂ ಮೇಲುಗೈ ಒದಗಲೇಬೇಕು.ಕತ್ತರಿಯು ಬಟ್ಟೆಯನ್ನು ತುಂಡು ತುಂಡುಗಳನ್ನಾಗಿ ಮಾಡಿದ ಮೇಲೆಯೇ ಸೂಜಿಯ ಕೆಲಸ ಆರಂಭವಾಗುತ್ತದೆ.ಹಾಗೆಯೇ ರಾಷ್ಟ್ರದ ಪ್ರಜೆಗಳಲ್ಲಿ ಪರಸ್ಪರ ಒಡಕನ್ನುಂಟುಮಾಡಿ,ಪ್ರತ್ಯೇಕತೆಯ ಆನಂದವನ್ನು ಅನುಭವಿಸುವವರು ಅಳಿದಮೇಲೆಯೇ ರಾಷ್ಟ್ರನಿರ್ಮಾಪಕರ ಕೆಲಸ ಪ್ರಾರಂಭವಾಗುತ್ತದೆ.ಇದು ಸೃಷ್ಟಿ ನಿಯಮ! ಪ್ರಕೃತಿಯ ಹವಣು.ನಾವು ಬೇಡವೆಂದರೆ ನಡೆಯದು.ದೈವೀಶಕ್ತಿಗಳು ಇರುವ ಸೃಷ್ಟಿಯಲ್ಲಿ ಅಸುರೀಶಕ್ತಿಗಳು ಇವೆ.ಸಕಾರಾತ್ಮಕ ಶಕ್ತಿ ತರಂಗಗಳು ಪಸರಿಸಿರುವೆಡೆ ನಕಾರಾತ್ಮಕ ಶಕ್ತಿಗಳು ಹರಡುತ್ತಿವೆ.ಬೆಳಕು ಇದ್ದಲ್ಲಿ ಕತ್ತಲೆಯು ಬರುತ್ತದೆ.ಬೆಳಕು ಕತ್ತಲೆಗಳು ಸೇರಿ ಒಂದು ದಿನವಾಗುವಂತೆ ಒಳಿತು ಕೆಡುಕುಗಳ ಸಹಯೋಗದಲ್ಲಿ ನಡೆಯುತ್ತದೆ ಪ್ರಕೃತಿ ವ್ಯಾಪಾರ.ಒಳಿತು ಬಂದಾಗ ಹಿಗ್ಗದೆ ಕೆಡುಕು ಬಂದಾಗ ಕುಗ್ಗದೆ ಬರುವುದೆಲ್ಲವೂ ಪೂರ್ಣತೆಯು ಪ್ರಕಟವಾಗುವ ಉದ್ದೇಶದಿಂದ ಎಂದು ನಿರಿದ್ವಿಗ್ನಭಾವದಿಂದ ನಡೆಯಬೇಕು.

About The Author