ಶಾಸಕರಿಂದ ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಆದೇಶ ಪತ್ರ ವಿತರಣೆ

ಶಹಾಪುರ : ತಾಲೂಕಿನ ನಗರಸಭೆ ಕಚೇರಿಯ ಆವರಣದಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪುರ 2021- 22ನೇ ಸಾಲಿನ ಅಂಬೇಡ್ಕರ ಮತ್ತು ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ನಿವೇಶನ ಹೊಂದಿದ  317 ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿದರು. ಒಟ್ಟಾರೆ 500 ಪಲಾನುಭವಿಗಳಿಗೆ ಆದೇಶ ಪತ್ರ ಬಂದಿದ್ದು, ಉಳಿದವುಗಳನ್ನು ನಗರಸಭೆಯಿಂದ ವಿತರಿಸಲಾಗುವುದು ಎಂದು ತಿಳಿಸಿದರು.
   ಈ ಮೊದಲು ಲಾಟರಿ ಮೂಲಕ 448 ನಿವೇಶನಗಳ ಆಯ್ಕೆಯು ರಾಜಕೀಯ ಗುದ್ದಾಟದಿಂದ ತಡೆಹಿಡಿಯಲಾಗಿತ್ತು. ಆದರೆ ಮಾರ್ಚ್ ಎರಡರಂದು ಎಪಿಎಂಸಿ ಆವರಣದಲ್ಲಿ ಲಾಟರಿ ಮೂಲಕವೇ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದ್ದು, ಆಯ್ಕೆಯಾದ ನಂತರ 10 ದಿನಗಳ ಗಡುವು ನೀಡಲಾಗುತ್ತದೆ. ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.
   ನಗರೋತ್ಥಾನದಿಂದ ₹8.50 ಕೋಟಿ ಅನುದಾನದಲ್ಲಿ ನಗರದಲ್ಲಿರುವ ವಿವಿಧ ರಸ್ತೆಗಳು ಸೇರಿದಂತೆ ಇತರ ಕಾಮಗಾರಿಗಳಿಗೆ ಉಪಯೋಗಿಸಲಾಗುವುದು ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಪೌರಾಯುಕ್ತರಾದ ರಮೇಶ ಬಡಿಗೇರ್,ಜೆಇ ನಾನಾ ಸಾಹೇಬ್ ಮಡಿವಾಳಕರ್, ನಗರಸಭೆಯ ಅಧ್ಯಕ್ಷೆ ಗಿರಿಜಮ್ಮ ಹನುಮಂತರಾಯ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ್ ಸುರಪುರಕರ್, ಸಮಿತಿಯ ನಾಮ ನಿರ್ದೇಶಕ ಸದಸ್ಯರಾದ ಅಮೃತ ಹೂಗಾರ, ಧರ್ಮಣ್ಣ, ನೂರುದ್ದೀನ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣಪ್ಪ, ಶಾಂತಪ್ಪ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ : ಶಹಾಪುರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಭೀಮಾನದಿಯಿಂದ ನಗರಕ್ಕೆ ಬರುವ ಕಾಮಗಾರಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು. ನಗರದಲ್ಲಿರುವ ಕೆರೆಗಳಲ್ಲಿನ ನೀರನ್ನು ಬಳಕೆ ಮಾಡಿಕೊಂಡು ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

About The Author