ಅಧಿಕಾರಿಗಳ, ಗುತ್ತಿಗೆದಾರರ ನಿರ್ಲಕ್ಷ್ಯ, ಜೆಜೆಎಂ ಕಾಮಗಾರಿ ಕಳಪೆ ಗ್ರಾಪಂ ಅಧ್ಯಕ್ಷರ ಆಕ್ರೋಶ ಪೆ.10ರೊಳಗೆ ಕಾಮಗಾರಿ ಪೂರ್ಣ ಅಧಿಕಾರಿಗಳ ಹೇಳಿಕೆ

ವಡಗೇರಾ :ತಾಲೂಕಿನ ಹಯ್ಯಳ ಬಿ ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಕಾಮಗಾರಿಯನ್ನು ಗುತ್ತಿಗೆದಾರರು ಮತ್ತು ಕುಡಿಯುವ ನೀರಿನ ನೈರ್ಮಲ್ಯ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷದಿಂದ ಕಾಮಗಾರಿ ಹಳ್ಳ ಹಿಡಿದಿದೆ. ಕಾಮಗಾರಿಯು ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು, ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಹಯ್ಯಳ ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವದ ಯೋಜನೆ ಇದಾಗಿದ್ದು, ಪ್ರತಿ ಗ್ರಾಮದಲ್ಲಿ ನೀರಿನ ಕೊರತೆಯಾಗದಂತೆ  24 ಗಂಟೆಗಳ ಕಾಲ ನೀರು ಒದಗಿಸುವ ಯೋಜನೆ ಸಂಪೂರ್ಣವಾಗದೆ ಇರುವುದು ದುರದೃಷ್ಟಕರ.ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭವಾದ ಜೆಜೆಎಂ ಕಾಮಗಾರಿ ಸಂಪೂರ್ಣವಾಗಿಲ್ಲ. ಇದಕ್ಕೆಲ್ಲ ಕಿರಿಯ ಸಹಾಯಕ ಅಭಿಯಂತರರು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ಕಾರಣ. ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ 8 ಲಕ್ಷ ರೂ.ಗಳನ್ನು ಜೆಜೆಎಂ ಕಾಮಗಾರಿಗೆ ಕೊಡಲಾಗಿದೆ.ಸುಮಾರು ಎರಡು ವರ್ಷಗಳಿಂದ ಕಾಮಗಾರಿ ನಡೆದರೂ ಗ್ರಾಮಕ್ಕೆ ನೀರು ಒದಗಿಸಲಾಗುತ್ತಿಲ್ಲ.

 

ಪ್ರಸ್ತುತದಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಯೂ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು,ಅಂದಾಜು ಯೋಜನೆಯ ಪ್ರಕಾರ ಕೆಲಸ ನಿರ್ವಹಿಸಿಲ್ಲ.ಗ್ರಾಮದೊಳಗೆ 73 ಎಂಎಂ ಪೈಪ್ ಗಳನ್ನು ಹಾಕಬೇಕಿತ್ತು, ಆದರೆ 63 ಎಂಎಂ ಪೈಪ್ ಗಳನ್ನು ಹಾಕಲಾಗಿದೆ. ಸಿಸಿ ರಸ್ತೆಗಳನ್ನು ತೆಗೆದು ಪೈಪ್ ಗಳನ್ನು ಹಾಕಲಾಗಿದ್ದು, ಸಿಸಿ ರಸ್ತೆಯನ್ನು ಪುನಃ ಮಾಡದೆ ಹಾಗೆಯೆ ಬಿಡಲಾಗಿದೆ. ಕೇವಲ ಒಂದು ಇಂಚಿನ ಸಿಸಿ ರಸ್ತೆಯನ್ನು ಹಾಕಿ ಬಿಡಲಾಗಿದ್ದು,ಅಂದಾಜು ಯೋಜನೆಯ ಪ್ರಕಾರ ಆರು ಇಂಚು ಸಿಸಿ ರಸ್ತೆಯನ್ನು ಹಾಕಬೇಕಾಗಿತ್ತು ಎಂದು ಆರೋಪಿಸಿದರು.

 

ಗ್ರಾಮದೊಳಗೆ ಜೆಜೆಎಂ ಕಾಮಗಾರಿನ ಪೈಪ್ ಲೈನ್ ಶೇ. 10 ರಷ್ಟು ಮಾತ್ರ ಹಾಕಲಾಗಿದ್ದು, ಇನ್ನೂ ಶೇ. 90ರಷ್ಟು ಪೈಪ್ ಗಳನ್ನು ಹಾಕಬೇಕಿದೆ. ಕಾಮಗಾರಿ ಟೆಂಡರ್ ಅವಧಿ ಮುಗಿದರೂ, ಕಾಮಗಾರಿ ಮುಗಿದಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಒಳ ಒಪ್ಪಂದವಾಗಿದೆ ಎಂದು ಅನುಮಾನ ವ್ಯಕ್ತವಾಗುತ್ತಿದೆ.ಇಕತಹ ಅಧಿಕಾರಿಗಳಿಂದ ಸರಕಾರದ ಯೋಜನೆಗಳು ಹಳ್ಳ ಹಿಡಿಯುತ್ತಿವೆ ಎಂದು ಅಧಿಕಾರಿಗಳ ಮೇಲೆ ಆರೋಪಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಶನಿವಾರದಂದು ಜೆಜೆಎಂ ಕಾಮಗಾರಿಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಿರಿಯ ಸಹಾಯಕ ಅಭಿಯಂತರರಾದ ಶಿವಪುತ್ರಪ್ಪ ಮತ್ತು ಗುತ್ತಿಗೆದಾರರ ಸ್ಥಳದಲ್ಲಿದ್ದು ಕಳಪೆ ಕಾಮಗಾರಿಯನ್ನು ಕಂಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕೆಂಡಮಂಡಲವಾಗಿ, ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು ಅದನ್ನು ಪುನಃ ಮಾಡುವಂತೆ ತಾಕೀತು ಮಾಡಿದರು. ಇದನ್ನು ಮನಗಂಡ ಶಿವಪುತ್ರಪ್ಪ ಕಿರಿಯ ಸಹಾಯಕ ಅಭಿಯಂತರರು ಫೆಬ್ರುವರಿ 10ರೊಳಗೆ ಗುಣಮಟ್ಟದ ಕಾಮಗಾರಿಗಳ ಜೊತೆಗೆ ಸಂಪೂರ್ಣವಾದ ಜೆಜೆಎಂ ಕಾಮಗಾರಿ ಮಾಡಿಕೊಡುತ್ತೇವೆ ಎಂದು ಅಧ್ಯಕ್ಷರಿಗೆ ಭರವಸೆ ನೀಡಿದರು.

ಜೆಜೆಎಂ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಹಲವಾರು ಬಾರಿ ನೋಟಿಸ್ ನೀಡಿದ್ದೇವೆ ಎಂದು ಕಿರಿಯ ಸಹಾಯಕ ಅಭಿಯಂತರರಾದ ಶಿವಪುತ್ರಪ್ಪ  ಅಧ್ಯಕ್ಷರಿಗೆ ತಿಳಿಸಿದರು. ಕಾಮಗಾರಿಯನ್ನು ಪೂರ್ತಿ ಮಾಡಿಕೊಡದಿದ್ದರೆ ಅವರ ಲೈಸೆನ್ಸ್ ಅನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

 

ತಾಲೂಕು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಅಭಿಯಂತರರು ಹಂಚಿನಾಳ ಗೊಂದೇನೂರು ಉಳೇಸೂಗುರು ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಜೆಜೆಎಂ ಕಾಮಗಾರಿಗಳಲ್ಲಿ ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಇದರ ಬಗ್ಗೆ ಉನ್ನತ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ.ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

About The Author