ಮಹಾಶೈವ ಪ್ರಬೋಧ ಮಾಲೆ –೦೪ : ಸಂತ ಮತ್ತು ಚೇಳುಗಳು : ಮುಕ್ಕಣ್ಣ ಕರಿಗಾರ

ಒಬ್ಬ ಸಂತರು ಇದ್ದರು.ಸರಳ,ಪ್ರಶಾಂತ ವ್ಯಕ್ತಿತ್ವದಿಂದ ಸರ್ವಪೂಜ್ಯರಾಗಿದ್ದರವರು.ದ್ವೇಷ- ಮಮಕಾರಗಳಿಂದ ದೂರವಿದ್ದ ನಿರ್ಲಿಲ್ಪ,ನಿರಾಡಂಬರ ವ್ಯಕ್ತಿತ್ವ ಅವರದು.ಊರ ಹೊರಗಿನ ಆಶ್ರಮದಲ್ಲಿ ವಾಸಿಸುತ್ತಿದ್ದ ಸಂತರು ಆಗಾಗ ಊರೊಳಗೆ ಬರುತ್ತಿದ್ದರು,ಜನರ ನಡೆ ನುಡಿಗಳನ್ನು ತಿದ್ದುತ್ತಿದ್ದರು.

ಹೀಗೆ ಒಮ್ಮೆ ಸಂತರು ಊರೊಳಗೆ ನಡೆದಿದ್ದರು.ಒಂದು ಬಾವಿ.ನೀರು ಹೊರಚೆಲ್ಲಲು ಸ್ವಲ್ಪವೆ ಕಡಿಮೆ ಇರುವಷ್ಟು ನೀರುತುಂಬಿದ್ದ ಬಾವಿ ಅದು.ಬಾವಿಯ ದಂಡೆಯ ಮೇಲೆ ಹತ್ತಾರು ತರುಣರು ನಿಂತು ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು’ ಸಾಯಲಿ,ಸಾಯಲಿ’ ಎಂದು ಅರಚಿ,ಸಂಭ್ರಮಿಸುತ್ತಿದ್ದರು.ಆ ಮಾರ್ಗವಾಗಿ ಹೋಗುತ್ತಿದ್ದ ಸಂತರು ತರುಣರ ಅರಚಾಟ,ಆರ್ಭಟ ಕಂಡು ಕುತೂಹಲದಿಂದ ಬಾವಿಯ ಬಳಿ ಬಂದರು.ಬಾವಿಯ ನೀರಿನಲ್ಲಿ ಐದಾರು ಚೇಳುಗಳು ಬಿದ್ದು ಈಜಲರಿಯದೆ ಸಾವಿನ ಭಯದಲ್ಲಿ ಒದ್ದಾಡುತ್ತಿದ್ದವು.ಚೇಳುಗಳ ಭಯ,ಆತಂಕವನ್ನು ಕಂಡೇ ತರುಣರು ಕೂಗಾಡಿ,ಸಂಭ್ರಮಿಸುತ್ತಿದ್ದರು.

ಸಂತರು ನೇರವಾಗಿ ಬಾವಿಗೆ ಇಳಿದರು.ಚೇಳುಗಳನ್ನು ತೆಗೆಯಲು ಕೈ ಒಡ್ಡಿದರು.ಅವುಗಳನ್ನು ಬದುಕಿಸಲು ಎಡಗೈಯಿಂದ ಚೇಳುಗಳನ್ನು ಹಿಡಿದು ಬಲಗೈಯ ಮೇಲೆ ಹಾಕಿಕೊಂಡು ಅವುಗಳನ್ನು ಬದುಕಿಸಲು ಪ್ರಯತ್ನಿಸತೊಡಗಿದರು.ಕೈ ಒಡ್ಡಿದಾಗಲೆಲ್ಲ ಚೇಳುಗಳು ಸಂತರನ್ನು ಕುಟುಕತೊಡಗಿದವು.ಆದರೂ ಸಂತರು ಅದನ್ನು ಗಮನಿಸದೆ ಒಂದೊಂದೇ ಚೇಳನ್ನು ಹಿಡಿದು ತಂದು ದಂಡೆಯ ಮೇಲೆ ಬಿಟ್ಟರು.ಚೇಳುಗಳು ಬಾರಿಬಾರಿಗೂ ಕಚ್ಚುತ್ತಿದ್ದವು.ಸಂತರ ಕೈಯಿಂದ ರಕ್ತಸೋರುವಂತೆ ಚೇಳುಗಳು ಕಚ್ಚಿದ್ದವು.ಸಂತರು ಅದನ್ನು ಲೆಕ್ಕಿಸದೆ ಬಾವಿಗೆ ಬಿದ್ದಿದ್ದ ಎಲ್ಲ ಚೇಳುಗಳನ್ನು ದಡಕ್ಕೆ ತಂದು ಬಿಟ್ಟು ಮುಂದೆ ನಡೆದರು.

ತರುಣರು ಕುತೂಹಲದಿಂದ ಸಂತರನ್ನು ಹಿಂಬಾಲಿಸಿದರು.ಅವರಲ್ಲೊಬ್ಬ ಪ್ರಶ್ನಿಸಿದ ‘ ಪೂಜ್ಯರೆ,ಅವು ಚೇಳುಗಳು.ವಿಷವನ್ನು ಕಕ್ಕುವ ದುಷ್ಟ ಜಂತುಗಳು.ಅವುಗಳು ಸಾಯಬೇಕಿತ್ತು.ಅವುಗಳನ್ನು ಏಕೆ ರಕ್ಷಿಸಿದಿರಿ?’ ಮತ್ತೊಬ್ಬ ತರುಣ ನುಡಿದ ‘ ಪೂಜ್ಯರೆ ,ನೀವು ಅವುಗಳ ಪ್ರಾಣ ಉಳಿಸುತ್ತಿದ್ದೀರಿ ಎನ್ನುವುದನ್ನು ಕೂಡ ಗಮನಿಸದೆ ನಿಮ್ಮನ್ನೇ ಕಚ್ಚಿದವು.ಉಪಕಾರವರಿಯದ ಅಂತಹ ದುಷ್ಟ ಜಂತುಗಳನ್ನು ಬದುಕಿಸುವ ಅಗತ್ಯವೇನಿತ್ತು?’ಇನ್ನೊಬ್ಬ ತರುಣನ‌ ಪ್ರತಿಕ್ರಿಯೆ ‘ ಉಪಕಾರಕ್ಕೆ ಪ್ರತಿಯಾಗಿ ಅಪಕಾರ ಮಾಡುವ ನೀಚತನವನ್ನೇ ಸ್ವಭಾವವಾಗಿ ಉಳ್ಳ ಚೇಳುಗಳನ್ನು ರಕ್ಷಿಸುವುದು ಧರ್ಮವೆ ?’ ನಾಲ್ಕನೆಯ ತರುಣ ಹೇಳಿದ ‘ ನೀವೇನೋ ಚೇಳುಗಳನ್ನು ರಕ್ಷಿಸಿದಿರಿ.ಜೀವ ಉಳಿಸಿಕೊಂಡ ಅವುಗಳು ಸಂತರು ನಮ್ಮನ್ನು ಕಾಪಾಡಿದ್ದಾರೆ ಎಂದು ಕಟುಕುವ,ವಿಷಕಕ್ಕುವ ಅವುಗಳ ಸ್ವಭಾವವನ್ನು ಪರಿವರ್ತಿಸಿಕೊಳ್ಳುತ್ತವೆಯೆ? ಮಕ್ಕಳು,ಮುದುಕರು,ಹೆಂಗಸರು ಎಂದು ವಿಚಾರಿಸದೆ ಸಿಕ್ಕವರಿಗೆ ಕಚ್ಚುತ್ತವೆ’.

ತರುಣರ ಮಾತುಗಳನ್ನು ಆಲಿಸಿದ ಸಂತರು ನಗುನಗುತ್ತ ಹೇಳಿದರು ; ‘ ಮಕ್ಕಳೆ ನೀವು ಹೇಳಿದುದೆಲ್ಲವೂ ಸತ್ಯ.ಆದರೆ ಅವು ಚೇಳುಗಳು,ಕಚ್ಚುವುದು ಅವುಗಳ ಸ್ವಭಾವ.ನಾನು ಸಂತ,ಜೀವಗಳನ್ನು ಉಳಿಸುವುದು,ಉದ್ಧರಿಸುವುದು ನನ್ನ ಧರ್ಮ.ಚೇಳುಗಳು ಕೆಟ್ಟಜಂತುಗಳೇ ಇರಬಹುದು,ಆದರೆ ಅವು ಪ್ರಾಣಾಪಾಯಕ್ಕೆ ಸಿಲುಕಿದ್ದವು.ಒಂದು ಜೀವಿಯ ಸಂಕಟವನ್ನು ನೋಡಿ ಸುಮ್ಮನಿರುವುದು ಮನುಷ್ಯಧರ್ಮವಲ್ಲ.ಆಪತ್ತಿಗೆ ಸಿಲುಕಿದವರು ಒಳ್ಳೆಯವರೊ ಕೆಟ್ಟವರೋ ಎಂದು ವಿಚಾರಿಸಬಾರದು,ನೆರವಿನ ಹಸ್ತನೀಡುವುದಷ್ಟೇ ಮನುಷ್ಯ ಧರ್ಮ.ನಾನು ಮನುಷ್ಯಧರ್ಮವನ್ನು ಎತ್ತಿಹಿಡಿದಿದ್ದೇನಷ್ಟೆ’. ಸಂತರ ಮಾತುಗಳನ್ನು ಕೇಳಿದ ತರುಣರ ಮುಖಗಳು ಅರಳಿದವು,ಸಂತರ ಮಾತುಗಳಲ್ಲಿ ಹೊಸಬೆಳಕು ಕಂಡರವರು.

ಮನುಷ್ಯ ಪ್ರಪಂಚ ಇರುವುದೇ ಹೀಗೆ.ಮತ್ತೊಬ್ಬರ ಪ್ರಾಣ ಸಂಕಟದಲ್ಲಿ ಸಂಭ್ರಮಿಸುವುದು ಜನರ ಸ್ವಭಾವ.ಅವರ ದುಸ್ಥಿತಿ ನಮಗೂ ಬರಬಹುದು ಎನ್ನುವ ವಿವೇಚನೆಯೂ ಇಲ್ಲದೆ ಪರರ ಸಂಕಷ್ಟವನ್ನು ಕಂಡು ಸಂಭ್ರಮಿಸುತ್ತಾರೆ.ಆದರೆ ಸಂತರು,ಶರಣರು,ಮಹಾಂತರುಗಳು ಲೋಕಸಮಸ್ತರಂತೆ ಇರದೆ ಲೋಕಾನುಕಂಪೆಯಿಂದ ಬದುಕುತ್ತಾರೆ,ಸರ್ವರ ಒಳಿತನ್ನು ಹಾರೈಸುತ್ತಾರೆ.ಸಂಕಷ್ಟದೊಳಿರುವವರಿಗೆ ಆಸರೆಯಾಗುತ್ತಾರೆ.ತರುಣರು ಚೇಳುಗಳ ದುಸ್ಥಿತಿಯನ್ನು ಸಂಭ್ರಮಿಸುತ್ತಿದ್ದರೆ ಸಂತರು ಚೇಳುಗಳು ಕಚ್ಚುತ್ತವೆ ಎಂದು ತಿಳಿದೂ ಅವುಗಳನ್ನು ಬದುಕಿಸಿದರು.ಮಹಾತ್ಮರು ಲೋಕೋದ್ಧಾರ ಕಾರ್ಯ ಮಾಡುತ್ತಿದ್ದರೂ ಟೀಕಿಸುತ್ತಾರೆ ಕೆಲವರು.ಅವರು ಚೇಳಿನಂತಹ ಜನರು,ಕಟುಕುವುದು,ವಿಷವನ್ನಿಕ್ಕುವುದರ ಹೊರತು ಮತ್ತೊಂದನ್ನರಿಯದ ಅಲ್ಪಜೀವರುಗಳು.ಶರಣರು,ಸಂತರುಗಳು ಅಲ್ಪಜೀವಿಗಳ,ದುರ್ಮತಿಗಳ ಸಣ್ಣತನ,ಕುಹಕ- ಕುಟಿಲಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಲೋಕೋದ್ಧಾರ ಬದ್ಧರಾಗಿ ದುಡಿಯುತ್ತಿರುತ್ತಾರೆ.

About The Author