ಮೂರನೇ ಕಣ್ಣು : ಸಾಮೂಹಿಕ ವಿವಾಹ’– ವಿಚಾರಿಸಬೇಕಾದ ಕೆಲವು ಸಂಗತಿಗಳು : ಮುಕ್ಕಣ್ಣ ಕರಿಗಾರ

ಬಡವರಿಗೆ ಮದುವೆ ಹೊರೆ ಆಗದಿರಲಿ ಎನ್ನುವ ಕಾರಣದಿಂದ ಮತಬ್ಯಾಂಕಿನ ಅಸ್ತ್ರವಾಗಿ ಕೆಲವು ಜನ ರಾಜಕಾರಣಿಗಳು ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಈಗ ಮಠ- ಮಂದಿರ,ಧಾರ್ಮಿಕ ಕೇಂದ್ರಗಳಲ್ಲಿ ಸಾಮಾನ್ಯ ಸಂಗತಿ ಎಂಬಂತೆ ನಡೆಯುತ್ತಿವೆ.ಬಡವರು,ಆರ್ಥಿಕವಾಗಿ ದುರ್ಬಲರಾದವರಿಗೆ ಹೆಚ್ಚಿನ ಖರ್ಚು ಭರಿಸಿ ಮದುವೆ ಮಾಡಿಕೊಳ್ಳುವುದು ಕಷ್ಟ ಎನ್ನುವ ಸಮರ್ಥನೆ ಸಾಮೂಹಿಕ ವಿವಾಹಕಾರ್ಯದ ಪ್ರೋತ್ಸಾಹದ ಬಹುಮುಖ್ಯ ಕಾರಣ.ಈ ಮಾತಿನಲ್ಲಿ ಸ್ವಲ್ಪ ಸತ್ಯಾಂಶ ಇದೆಯಾದರೂ ಸಾಮೂಹಿಕ ವಿವಾಹಗಳ ಹೆಸರಿನಲ್ಲಿ ಉಳ್ಳವರು ಮತ್ತು ಮಠ- ಮಂದಿರಗಳ ಪ್ರತಿಷ್ಠೆಗೆ ಸಮಾಜದ ದುರ್ಬಲವರ್ಗಗಳ ಜನತೆಯ ಸ್ವಾಭಿಮಾನವನ್ನು ಬಲಿಕೊಡಬಾರದು.ಜೊತೆಗೆ ಮಠ ಮಂದಿರಗಳಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆ ಧಾರ್ಮಿಕ ಕೇಂದ್ರಗಳ ವಿಶಿಷ್ಟ ದಿನಗಳಂದು ಆಯೋಜಿಸಿರುತ್ತಾರೆ.ಅಂದು ಮದುವೆ ಮುಹೂರ್ತ ಇರುತ್ತದೆಯೆ? ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವ ಎಲ್ಲ ಜೋಡಿಗಳಿಗೆ ಅಂದು ವಿವಾಹದ ಮಂಗಲ ಮುಹೂರ್ತ ಇರುತ್ತದೆಯೆ? ಮದುವೆ ಎನ್ನುವುದು ಗೃಹಸ್ಥಾಶ್ರಮದ ಅತಿ ಮಹತ್ವದ,ಪವಿತ್ರ ಕಾರ್ಯ.ಮದುವೆ ಆಗುವುದು ಜೀವನದಲ್ಲಿ ಒಂದು ಬಾರಿ ಮಾತ್ರ. ಜೀವನದ ಮಹತ್ವದ ಸಂಗತಿಯಾದ ಮದುವೆಯನ್ನು ಯಾರದೋ ಪ್ರತಿಷ್ಠೆಯನ್ನು ಪೊರೆಯುವ ಕಾರ್ಯಕ್ರಮದಲ್ಲಿ ಮಾಡಿಕೊಂಡು ಪರಿತಪಿಸಬಾರದು.

ಜ್ಯೋತಿಷಶಾಸ್ತ್ರವು ಮದುವೆಗೆ ಇಂತಹ ದಿನಗಳು ಸೂಕ್ತ,ಇಂತಹ ಕಾಲ ಪ್ರಶಸ್ತ ಎಂದು ನಿಗದಿಪಡಿಸಿದೆ.ಮದುವೆಯ ಮುಹೂರ್ತ ಎನ್ನಬಹುದಾದ ಆ ಕಾಲದಲ್ಲಿ ಮದುವೆಯಾದರೆ ದಾಂಪತ್ಯಜೀವನ ಸುಖವಾಗಿರುತ್ತದೆ.ಮಠ- ಮಂದಿರಗಳ ಬುದ್ಧಿವಂತರು ತಮ್ಮ ದೇವಸ್ಥಾನ,ಮಠಗಳ ವಿಶೇಷ ಆಚರಣೆಯ ದಿನಗಳ ಕಾಲದಲ್ಲಿ ಮದುವೆ ಮುಹೂರ್ತ ಇದೆ ಎಂದು ನಂಬಿಸಿ,ಜನರನ್ನು ಮರಳು ಮಾಡಿ ಸಾಮೂಹಿಕ ವಿವಾಹ ಏರ್ಪಡಿಸುತ್ತಾರೆ.ಲಗ್ನವಿಲ್ಲದ ಮುಹೂರ್ತದಲ್ಲಿ ಮದುವೆ ಮಾಡಿಕೊಂಡ ಬಹಳಷ್ಟು ಜನರ ಸಾಂಸಾರಿಕ ಜೀವನ ಕಷ್ಟಕ್ಕೀಡಾಗಿದೆ.ಪ್ರತಿಯೊಬ್ಬ ವ್ಯಕ್ತಿಗೂ ಒಂದೊಂದು ರಾಶಿ ಇರುತ್ತದೆ.ಪ್ರತಿ ರಾಶಿಗೂ ಅಧಿಪತಿಯಾದ ಒಬ್ಬ ಗ್ರಹದೇವತೆ ಮತ್ತು ಆ ರಾಶಿಗನುಗುಣವಾದ ಜಾತಕ,ಜೀವನ ಫಲಗಳಿರುತ್ತವೆ.ಒಬ್ಬ ವ್ಯಕ್ತಿಯ ಜಾತಕವನ್ನು ಮತ್ತೊಬ್ಬ ವ್ಯಕ್ತಿಗೆ ಅನ್ವಯಿಸಲಾಗದು.ಒಬ್ಬ ವ್ಯಕ್ತಿಯ ರಾಶಿ ಎಲ್ಲ ವ್ಯಕ್ತಿಗಳ ರಾಶಿ ಆಗದು.ಭೂಮಿಯ ಮೇಲಿನ ಆಗು- ಹೋಗುಗಳಿಗೆ ಕಾರಣರಾದ ನವಗ್ರಹಗಳು ಕೂಡ ವ್ಯಕ್ತಿಗಳ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ.ನವಗ್ರಹಗಳಲ್ಲಿ ಕೆಲವು ಒಳಿತನ್ನುಂಟು ಮಾಡುವ ಗ್ರಹಗಳಾಗಿದ್ದರೆ ಕೆಲವು ಗ್ರಹಗಳು‌ ಕೆಡುಕನ್ನುಂಟು ಮಾಡುತ್ತವೆ.ಗ್ರಹಗಳಲ್ಲಿ ಪರಸ್ಪರ ಮಿತ್ರತ್ವ,ಶತ್ರುತ್ವವೂ ಇದೆ.ನವಗ್ರಹಗಳ ಪ್ರಭಾವ ರಾಶಿಗನುಗುಣವಾಗಿ ಆಯಾ ವ್ಯಕ್ತಿಗಳ ಮೇಲೆ ಆಗುತ್ತದೆ.ಆಯಾ ರಾಶಿಯವರು ತಮ್ಮ ರಾಶಿಗೆ ಪ್ರಶಸ್ತವಾದ ಮುಹೂರ್ತದಲ್ಲೇ ಮದುವೆ ಮಾಡಿಕೊಂಡರೆ ಒಳಿತಾಗುತ್ತದೆ.ಅದರ ಬದಲು ತಮ್ಮ ರಾಶಿಗೆ ಬಲವಿಲ್ಲದ ದಿನದಂದು ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡರೆ ಮುಂದೆ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.ಸಾಮೂಹಿಕ ವಿವಾಹಗಳಲ್ಲಿ ವಿವಾಹವಾದ ಬಹಳಷ್ಟು ಜನರಿಗೆ ಮಕ್ಕಳು ಆಗುವುದಿಲ್ಲ.ಕಾರಣ ಅವರ ಮದುವೆಯ ಮುಹೂರ್ತ ಆ ದಿನ ಇರುವುದಿಲ್ಲ.

‌       ಜೊತೆಗೆ ಸಾಮೂಹಿಕ ವಿವಾಹಗಳ ಸಂಘಟನೆಯಲ್ಲಿ ಇನ್ನೊಂದು ಶಾಸ್ತ್ರವಿರೋಧಿಯಾದ ಕೆಟ್ಟಪದ್ಧತಿಯೂ ಇದೆ.ದಾಂಪತ್ಯಜೀವನಕ್ಕೆ ಕಾಲಿಡುವ ಜೋಡಿಗಳನ್ನು ಸಾಲಾಗಿ ಕೂಡಿಸಿ ಮಠಾಧೀಶರುಗಳು,ರಾಜಕಾರಣಿಗಳು,ಗಣ್ಯರುಗಳ ಪಂಖಾನುಪುಂಖ ಭಾಷಣ ಕಾರ್ಯಕ್ರಮ ಮುಗಿದಾದ ಬಳಿಕ ತಾಳಿ ಕಟ್ಟಿಸುತ್ತಾರೆ.ಆ ಹೊತ್ತಿಗೆ ಸೂರ್ಯ ಇಳಿಮುಖನಾಗಿರುತ್ತಾನೆ.ಮಾಂಗಲ್ಯದ ಮುಹೂರ್ತವೂ ಮುಗಿದು ಹೋಗಿರುತ್ತದೆ.ಲಗ್ನವಿಲ್ಲದ ಕಾಲದಲ್ಲಿ ಲಗ್ನ! ಮುಹೂರ್ತವಿಲ್ಲದ ಕಾಲದಲ್ಲಿ ಮಾಂಗಲ್ಯ ಧಾರಣೆ ! ಯಾರಿಗೆ ಸುಖ?

ಮದುವೆಯ ಖರ್ಚು ಉಳಿಸಲೆಂದು ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಮದುವೆಯ ಖರ್ಚಿನ ಎರಡರಷ್ಟು,ಮೂರರಷ್ಟನ್ನು ಮಕ್ಕಳು ಆಗಲಿ ಎಂದು ದೇವಸ್ಥಾನಗಳಿಗೆ ಹರಕೆ ಹೊತ್ತು ಪ್ರದಕ್ಷಿಣೆ ಸುತ್ತುವುದರಲ್ಲಿ ಇಲ್ಲವೆ ಆಸ್ಪತ್ರೆಗಳಿಗೆ ಎಡತಾಕಿ ವೈದ್ಯರಿಗೆ ಶುಲ್ಕ ಪಾವತಿಸಲು ಖರ್ಚು ಮಾಡುತ್ತಾರೆ.ಮಕ್ಕಳು ಆಗದೆ ಇರುವ ಕಾರಣಕ್ಕೆ ದಾಂಪತ್ಯಜೀವನದಲ್ಲಿ ಬಿರುಕು ಉಂಟಾಗುತ್ತದೆ.ಸಂಬಂಧಗಳು ಹಳಸುತ್ತವೆ.ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರಿಗೆ ಸಹಾಯಧನ ನೀಡುವ ಸರ್ಕಾರ ಮಕ್ಕಳಾಗದೆ ಪರಿತಪಿಸುವವರ ವೈದ್ಯಕೀಯ ವೆಚ್ಚ ಭರಿಸುವುದಿಲ್ಲ.ಪ್ರತಿಷ್ಠೆ ಮೆರೆಯಲೆಂದು ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿದವರು ಮದುವೆಯ ನಂತರ ಆ ದಂಪತಿಗಳ ಪಾಡೇನಾಗಿದೆ ಎಂದು ವಿಚಾರಿಸುವುದಿಲ್ಲ.ಬಡತನ ಇದೆ ಎಂದು ಸಾಮೂಹಿಕ ವಿವಾಹದಲ್ಲಿ ಮದುವೆಯಾದವರು ಜೀವನದಲ್ಲಿ ಹತ್ತುಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸರಕಾರವು ಸಾಮೂಹಿಕ ವಿವಾಹಗಳನ್ನು ಪ್ರೋತ್ಸಾಹಿಸುವ ನೆಪದಲ್ಲಿ ಬಡವರ ಬದುಕು ದುಃಖಕ್ಕೀಡಾಗುವಂತೆ ಮಾಡಬಾರದು.ಸರಕಾರಕ್ಕೇನೂ ಹಣದ ಕೊರತೆ ಇರುವುದಿಲ್ಲ. ಸರಕಾರವು ಪ್ರತಿ ಬಡ ಕುಟುಂಬದ,ಆರ್ಥಿಕವಾಗಿ ದುರ್ಬಲರಾದವರ ಮದುವೆಯ ಖರ್ಚನ್ನು ಭರಿಸುವ ಯೋಜನೆ ರೂಪಿಸಬಹುದು ಬಡವರ ಮದುವೆಗಳಿಗೆ ಆರ್ಥಿಕ ನೆರವು- ಸಹಾಯಧನ ನೀಡಬಹುದು.ರಾಜಕಾರಣಿಗಳು ಐದುನೂರು,ಸಾವಿರ ಜೋಡಿಗಳ ಸಾಮೂಹಿಕ ವಿವಾಹ ಮಾಡಿಸಿದೆ ಎಂದು ಜಾಹೀರಾತು ಹಾಕಿ ಕೊಚ್ಚಿಕೊಳ್ಳುವ ಬದಲು ಕೆಲವೇ ಸಂಖ್ಯೆಯ ಬಡಕುಟುಂಬಗಳ ಮದುವೆಯ ಪೂರ್ಣ ವೆಚ್ಚ ಭರಿಸಿ,ಆ ಕುಟುಂಬದ ವಿವಾಹಯೋಗ್ಯರ ಗ್ರಹಬಲಕೂಡಿದ ದಿನದಂದು ಮದುವೆ ಮಾಡಿ ಪುಣ್ಯಕಟ್ಟಿಕೊಳ್ಳಬಹುದು.ಸಾಮೂಹಿಕ ವಿವಾಹ ಮಾಡಿದರೆ ಪುಣ್ಯ ಬರುತ್ತದೆ ಎಂದು ಕೆಲವರು ಭಾವಿಸಿರಬಹುದು; ಆದರೆ ಸಾಮೂಹಿಕ ವಿವಾಹದಲ್ಲಿ ಮದುವೆಯಾದ ತಪ್ಪಿಗೆ ಮಕ್ಕಳಾಗದೆ ನಿಟ್ಟುಸಿರು ಬಿಡುವವರ ಶಾಪಕ್ಕೂ ಕಾರಣರಾಗಬೇಕಾಗುತ್ತದೆ ಎನ್ನುವ ಅರಿವೂ ಇರಬೇಕು.ಮದುವೆ ಮಾಡುವುದು ಪುಣ್ಯಕಾರ್ಯ ನಿಜ,ಆದರೆ ಮುಹೂರ್ತ ಇಲ್ಲದ ದಿನದಲ್ಲಿ ಸಾಮೂಹಿಕ ಮದುವೆಗಳನ್ನೇರ್ಪಡಿಸುವುದು ಪಾಪಕಾರ್ಯ,ಬಡವರ ಬದುಕುಗಳೊಂದಿಗೆ ಚೆಲ್ಲಾಟವಾಡುವ ವಿಕೃತಿ.

‌.      ಪ್ರತಿಷ್ಠೆಗಾಗಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಬದಲು ಬಡವರ ಬಗ್ಗೆ ಪ್ರಾಮಾಣಿಕ ಕಾಳಜಿ ಹೊಂದುವುದು ಅವಶ್ಯಕ.ಬಡವರ ಮನೆಯ ಮದುವೆಗಳ ಸಂಪೂರ್ಣ ವೆಚ್ಚವನ್ನು ಭರಿಸುವ ಮೂಲಕ ಔದಾರ್ಯ ಮೆರೆಯಬಹುದು.ಬಡವರ ಮನೆಗಳ ಮುಂದೆಯೇ ಮದುವೆಯ ಮಂಟಪದ ಏರ್ಪಾಟು ಮಾಡಿ ಅವರ ಮನೆಗಳಲ್ಲಿಯೇ ಮದುವೆ ಆಗುವಂತೆ ಮಾಡಿದರೆ ಅದಕ್ಕಿಂತ ದೊಡ್ಡಪುಣ್ಯದ ಕಾರ್ಯ ಯಾವುದಿದೆ ? ಶ್ರೀಮಂತರು,ಸಂಘಟನೆಗಳು,ರಾಜಕಾರಣಿಗಳು ಈ ಹೊಸಚಿಂತನೆಯನ್ನು ಅನುಷ್ಠಾನಕ್ಕೆ ತರಬೇಕು.ಸಾಮೂಹಿಕ ವಿವಾಹದಲ್ಲಿ ಹೆಸರು ಬರೆಯಿಸಿ,ಸರಕಾರವು ನಿಗದಿಪಡಿಸಿದ ದಾಖಲೆಗಳನ್ನು ಕೊಟ್ಟು ಸಂತೃಪ್ತರಾಗುವ ವಿವಾಹಾಕಾಂಕ್ಷಿಗಳು ಸಾಮೂಹಿಕ ವಿವಾಹ ನಿಗದಿಯಾದ ದಿನದಂದು ತಮ್ಮ ಮದುವೆಯ ಮುಹೂರ್ತ ಇದೆಯೆ ಎಂದು ಜ್ಯೋತಿಷಿಗಳನ್ನು,ಶಾಸ್ತ್ರಿಗಳನ್ನು ವಿಚಾರಿಸಬೇಕು.ಮುಹೂರ್ತ ಇದ್ದರೆ ಮಾತ್ರ ಸಾಮೂಹಿಕ ವಿವಾಹದಲ್ಲಿ ಹೆಸರು ನೊಂದಾಯಿಸಬೇಕು.ಇಲ್ಲದಿದ್ದರೆ ಅಲ್ಲಿ ಮದುವೆ ಮಾಡಿಕೊಳ್ಳಬಾರದು.ನಿಮ್ಮ ಜೀವನ ನೆಟ್ಟಗಾಗಬೇಕು ಎಂದು ಇಷ್ಟಪಡುವುದಾದರೆ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಉಳ್ಳವರು,ಶ್ರೀಮಂತರು ಸಂಘಟಿಸುವ ಸಾಮೂಹಿಕ ವಿವಾಹಗಳ ಹಂಗೇಕೆ ? ಸಾಲ ಮಾಡಿದರೂ ಚಿಂತೆ ಇಲ್ಲ,ಮದುವೆ ಆಗುವ ಗಂಡಂದಿರು ತಮ್ಮ ಹೆಂಡತಿಯ ತಾಳಿಯನ್ನು ತಾವೇ ಮಾಡಿಸುವುದು ಶ್ರೇಷ್ಠ,ಶ್ರೇಯಸ್ಕರ.ಅವರಿವರು ದಾನ ಮಾಡಿದ ತಾಳಿಕಟ್ಟುವುದು ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಗತಿ. ಅದ್ದೂರಿ ಮದುವೆಯ ಬದಲು ಹೆಣ್ಣು ಗಂಡಿನ ಮನೆಯವರೇ ಸೇರಿ ಸರಳವಾಗಿ ತಮ್ಮ ಮನೆಗಳಲ್ಲಿಯೇ ಮದುವೆ ಮಾಡಿಕೊಳ್ಳಬಹುದು.ಮದುವೆಗೆ ಆಡಂಬರ,ವೈಭವ ಇಲ್ಲದಿದ್ದರೂ ಮುಹೂರ್ತ ಇರಬೇಕು.ಮುಹೂರ್ತ ಇಲ್ಲದಂದು ಮದುವೆ ಆದರೆ ಸಾಂಸಾರಿಕ ಜೀವನ ಸುಖವಾಗಿ ಇರದು.ಇದನ್ನು ಮನಗಂಡೇ ಪರಾಶರರಾದಿ ಋಷಿವರ್ಯರುಗಳು ಜ್ಯೋತಿಷಶಾಸ್ತ್ರ ಗ್ರಂಥಗಳನ್ನು ಬರೆದು ಮದುವೆಗೆ ಮಹೂರ್ತಗಳನ್ನು ನಿಗದಿ ಪಡಿಸಿದ್ದಾರೆ.ಲಗ್ನ ಮುಹೂರ್ತ ಇರುವ ದಿನಗಳಲ್ಲಿ ಮಠ- ಮಂದಿರಗಳಲ್ಲಿ ಏರ್ಪಡಿಸುವ ಸಾಮೂಹಿಕ ವಿವಾಹಗಳನ್ನು ಒಪ್ಪಬಹುದು,ಮದುವೆಯ ಮುಹೂರ್ತ ಇಲ್ಲದ ದಿನದಂದು ಮುಹೂರ್ತ ನಿಗದಿಪಡಿಸುವುದು ಶಾಸ್ತ್ರವಿರೋಧವಷ್ಟೇ ಅಲ್ಲ,ಮೋಸದ ಕೃತ್ಯವೂ ಅಹುದು.ಕೆಲವು ದಿನಗಳಂದು ಮಹಾಮುಹೂರ್ತಗಳಿರುತ್ತವೆ,ಕೆಲವು ತಿಥಿಗಳು ಅಕ್ಷಯ ಪುಣ್ಯ ಫಲಗಳನ್ನು ನೀಡುವ ಮಹಾತಿಥಿಗಳಾಗಿರುತ್ತವೆ.ಅಂಥಹ ಮಹಾಮೂಹೂರ್ತಗಳಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಿದರೆ ಒಪ್ಪಬಹುದು.

ಈ ನನ್ನ ಲೇಖನದಲ್ಲಿ ದುರುದ್ದೇಶ ಕಾಣುವವರು ಇಲ್ಲವೆ ಹುಳುಕು ಹುಡುಕುವ ಕೊಳಕ ಮನಸ್ಕರು ಯಾವುದಾದರೂ ಸಂಸ್ಥೆಯಿಂದ ಸಮೀಕ್ಷೆ ಕೈಗೊಂಡು ಸಾಮೂಹಿಕ ವಿವಾಹಗಳಲ್ಲಿ ಮದುವೆ ಆದವರಲ್ಲಿ ಎಷ್ಟು ಜನರಿಗೆ ಮಕ್ಕಳಾಗಿವೆ,ಎಷ್ಟು ಸಂಸಾರಗಳು ಮುರಿದು ಬಿದ್ದಿವೆ ಎನ್ನುವ ಕಠೋರಸತ್ಯವನ್ನು ಅರ್ಥಮಾಡಿಕೊಳ್ಳಬಹುದು. ನನ್ನ ಈ ಲೇಖನದ ಉದ್ದೇಶ ಯಾರನ್ನಾದರೂ ಟೀಕಿಸುವುದಲ್ಲ ಅಥವಾ ಯಾರೊಬ್ಬರನ್ನೂ ಗುರಿಯಾಗಿಸಿಕೊಂಡು ಬರೆದುದಲ್ಲ ; ಸಾಮೂಹಿಕವಿವಾಹಗಳೆಂಬ ನಿಮ್ಮ ಪ್ರತಿಷ್ಠೆಗೆ ಬಡಜನರ ಸ್ವಾಭಿಮಾನಕ್ಕೆ ಧಕ್ಕೆ ತರದಿರಿ,ಬಡ‌ಕುಟುಂಬಗಳ ಸಂತಾನಭಂಗಕ್ಕೆ ಕಾರಣರಾಗಿ ಅವರು ಪರಿತಪಿಸುವಂತೆ ಮಾಡದಿರಿ ಎನ್ನುವ ಬಡವರ ಪರ ಕಾಳಜಿಯಷ್ಟೇ ಈ ಲೇಖನದ ಉದ್ದೇಶ.

About The Author