ಸಂಸ್ಕೃತಿ : ವಿವಾಹ ಮುಹೂರ್ತ– ಕೆಲವು ವಿಚಾರಗಳು :ಮುಕ್ಕಣ್ಣ ಕರಿಗಾರ

ಜ್ಯೋತಿಷ ಶಾಸ್ತ್ರದಂತೆ ಮಹೂರ್ತವು ಮಹತ್ವವಾದದ್ದು.ಮುಹೂರ್ತ ಎಂದರೆ ಶುಭಕಾಲ ಎಂದರ್ಥ.ಮದುವೆ,ಶುಭ ಶೋಭನಾದಿ ಕಾರ್ಯಗಳಿಗೆ ಮುಹೂರ್ತ ನೋಡುವುದು ವಾಡಿಕೆ.ಜ್ಯೋತಿಷಶಾಸ್ತ್ರದಲ್ಲಿ ಪಾರಂಗತರಾದವರು ಮುಹೂರ್ತವನ್ನು ಸರಿಯಾಗಿ ನಿಷ್ಕರ್ಷಿಸಿ,ನಿರ್ಣಯಿಸುತ್ತಾರೆ.ಜ್ಯೋತಿಷದ ಅರೆಬರೆ ಜ್ಞಾನ ಉಳ್ಳವರು ಹೇಳುವ ಶಾಸ್ತ್ರಸಂಬಂಧಿ ವಿಷಯಗಳು ಅನುಕೂಲಕ್ಕಿಂತ ಅಪಾಯವನ್ನು ತಂದಿಡುತ್ತವೆ.ಆದ್ದರಿಂದ ಮದುವೆಯಂತಹ ಅತಿ ಮಹತ್ವದ ಘಟನೆಯ ಬಗ್ಗೆ ಪರಿಣತ ಜ್ಯೋತಿಷಿಗಳ ಬಳಿ ವಿಚಾರಿಸುವುದು ಒಳಿತು.

ಮದುವೆಗೆ ಸಾಮಾನ್ಯವಾಗಿ ಪರಿಗಣಿಸಬಹುದಾದ ಕೆಲವು ಸಂಗತಿಗಳು:–
1.ಮದುವೆ ಮುಹೂರ್ತ ನಿಶ್ಚಯಿಸಲು
ತಾರಾಬಲ
೨ ಚಂದ್ರಬಲ
ಪಂಚಕಗಳನ್ನು ನೋಡಬೇಕು
2.ಲಗ್ನತ್ಯಾಜದ ಸಮಯವನ್ನು ಪರಿಶೀಲಿಸಬೇಕು
3.ಗುರು ಹಾಗೂ ಶುಕ್ರರು ಅಸ್ತರಾಗಿರಬಾರದು
4.ವಿವಾಹಮಾಡಲು ಸಪ್ತಮ ಶುದ್ಧಿ ಇರಬೇಕು
5. ವಿವಾಹಕ್ಕೆ ಗುರುಬಲವು ಅವಶ್ಯಕ
6. ಪಾಪಗ್ರಹವು ಜಾತಕದ ಕೇಂದ್ರದಲ್ಲಿ ಇರಬಾರದು
7.ಮಂಗಳವಾರ ಹಾಗೂ ಶನಿವಾರಗಳಂದು ವಿವಾಹ ನಿಷಿದ್ಧ.ಅಂದರೆ ಮಂಗಳವಾರ,ಶನಿವಾರಗಳಂದು ಮದುವೆ ಮಾಡಲೇಬಾರದು.
8.ಮದುವೆಗೆ ಕರ್ಕಾಟಕ,ಕನ್ಯಾ ಮತ್ತು ಧನುರ್ಮಾಸಗಳು ನಿಷಿದ್ಧ ಮಾಸಗಳು
9. ಮದುವೆಗೆ ಉತ್ತರಾಯಣವು ಶ್ರೇಷ್ಠವಾದುದು.

ವಿವಾಹಕ್ಕೆ ಜ್ಯೇಷ್ಠ,ವೈಶಾಖ,ಮಾಘ,ಮಾಲ್ಗುಣ ಮಾಸಗಳು ಶುಭಪ್ರದ ಹಾಗೂ ಉತ್ತಮ ಮಾಸಗಳಾದರೆ ಕಾರ್ತಿಕ,ಮಾರ್ಗಶಿರ ಮಾಸಗಳು ಮಧ್ಯಮಮಾಸಗಳು.ಇವುಗಳನ್ನು ಹೊರತುಪಡಿಸಿದ ಮಾಸಗಳು ‘ವಿವಾಹವರ್ಜ್ಯ ಮಾಸಗಳು’ ಎನ್ನಿಸಿಕೊಳ್ಳುವುದರಿಂದ ಆ ಮಾಸಗಳಲ್ಲಿ ಮದುವೆ ಮಾಡಬಾರದು.ಹಾಗೆಯೇ ಸೂರ್ಯನು ಮೇಷ,ವೃಷಭ,ಮಿಥುನ,ಕುಂಭ,ವೃಶ್ಚಿಕ ಮತ್ತು ಮಕರರಾಶಿಗಳಲ್ಲಿರುವಾಗ ವಿವಾಹ ನೆರೆವೇರಿಸುವುದು ಶುಭದಾಯಕವು.ಸೂರ್ಯನು ಈ ರಾಶಿಗಳಲ್ಲದೆ ಬೇರೆ ಇತರ ರಾಶಿಗಳಲ್ಲಿದ್ದಾಗ ವಿವಾಹ ಮಾಡುವುದು ಉಚಿತವಲ್ಲ.

ವಿವಾಹ ಜಾತಕಗಳನ್ನು ಪರಿಶೀಲಿಸುವಾಗ ವಿವಿಧ ಕೂಟಗಳನ್ನು ನೋಡಬೇಕಾಗುತ್ತದೆ.ಗಣಕೂಟಗಳನ್ನು ನೋಡಲು ವಧುವರರಿಬ್ಬರ ಜನ್ಮ ನಕ್ಷತ್ರಗಳು ಅಥವಾ ನಾಮ ಮಕ್ಷತ್ರಗಳು ಬೇಕು.ವರನ ಜನ್ಮ ನಕ್ಷತ್ರಕ್ಕೆ ಕನ್ಯೆಯ ನಾಮ ನಕ್ಷತ್ರವನ್ನು ಪರಿಗಣಿಸಬಹುದು.ಆದರೆ ಕನ್ಯೆಯ ಜನ್ಮ ನಕ್ಷತ್ರಕ್ಕೆ ವರನ ನಾಮ ನಕ್ಷತ್ರವನ್ನು ಪರಿಗಣಿಸಬಾರದು.

ದ್ವಾದಶ ಕೂಟಗಳು

೧. ದಿನಕೂಟ ೨. ಗಣಕೂಟ ೩. ಮಾಹೇಂದ್ರ ಕೂಟ.೪. ಸ್ತ್ರೀ ದೀರ್ಘಕೂಟ.೫. ಯೋನಿಕೂಟ.೬. ರಾಶಿಕೂಟ.೭. ಗ್ರಹಮೈತ್ರಿಕೂಟ.೮.ವಶ್ಯಕೂಟ.೯.ರಜ್ಜುಕೂಟ.೧೦.ವೇಧಾಕೂಟ.೧೧.ವರ್ಣಕೂಟ.೧೨.ನಾಡೀಕೂಟ.

ಈ ಹನ್ನೆರಡು ಕೂಟಗಳಲ್ಲಿ 8 ಕೂಟಗಳಿಗೆ 36 ಗುಣಗಳ ಮೊತ್ತವನ್ನು ನಿಷ್ಕರ್ಷಿಸಲಾಗಿದೆ.ನಿಷ್ಕರ್ಷಿತ ಈ 36 ಗುಣಗಳಲ್ಲಿ 18 ಗುಣಗಳು ಬಂದರೆ ಶುಭವೆಂದು ಪರಿಗಣಿಸಿದ್ದು ವಿವಾಹ ಕಾರ್ಯ ನೆರವೇರಿಸಬಹುದು.

ವಿವಿಧ ಕೂಟಗಳು ಮತ್ತು ಅವುಗಳ ಶುಭಗುಣಗಳು ಹೀಗಿವೆ :–

೧. ದಿನಕೂಟ —3 ಗುಣ
೨. ಗಣಕೂಟ –6 ಗುಣ
೩.ಯೋನಿಕೂಟ –4 ಗುಣ
೪.ರಾಶಿಕೂಟ — 7 ಗುಣ
೫.ಗ್ರಹಮೈತ್ರಿಕೂಟ — 5 ಗುಣ
೬. ವಶ್ಯಕೂಟ — 2 ಗುಣ
೭. ವರ್ಣಕೂಟ — 1 ಗುಣ
೮. ನಾಡಿಕೂಟ –8 ಗುಣ

ಮಾಹೇಂದ್ರಕೂಟ,ಸ್ತ್ರೀದೀರ್ಘಕೂಟ,ರಜ್ಜುಕೂಟ ಮತ್ತು ವೇಧಾಕೂಟಗಳಿಗೆ ಗುಣಗಳಿಲ್ಲ.

( ಮುಂದುವರೆಯುತ್ತದೆ)

About The Author