ದಿ.ಅಚ್ಚಪ್ಪಗೌಡ ಸುಬೇದಾರ ರೂರಲ್ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವ ಸಮಾರಂಭ : ನಾನೂ ಬಿಜೆಪಿ ಟಿಕೇಟ್ ಆಕಾಂಕ್ಷಿ ಚಂದ್ರಶೇಖರ ಸುಬೇದಾರ ಹೇಳಿಕೆ

ಶಹಾಪೂರ : ನನ್ನ ತಂದೆಯವರು ಸ್ವಾತಂತ್ರ್ಯ ಹೋರಾಟಗಾರರು. ನಿಜಾಮರ ಕಾಲದಲ್ಲಿ ಕಲ್ಯಾಣ ಕರ್ನಾಟಕ ವಿಲೀನಕ್ಕಾಗಿ ಹೋರಾಟ ಮಾಡಿದವರಲ್ಲಿ ಒಬ್ಬರು. ಅವರ ಸ್ಮರಣಾರ್ಥವಾಗಿ ಅಚ್ಚಪ್ಪಗೌಡ ಸುಬೇದಾರ್ ಟ್ರಸ್ಟ್ ಸ್ಥಾಪಿಸಿ ಇಂದಿಗೆ ಐದು ವರ್ಷಗಳು ಪೂರ್ತಿಯಾಗಿದ್ದು,ನಾನು 35 ವರ್ಷಗಳ ಕಾಲ ಸುಧೀರ್ಘ ವೈದ್ಯ ಸೇವೆ ಸಲ್ಲಿಸಿದ ನಿಮಿತ್ತ  ಜನವರಿ 8 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ. ಚಂದ್ರಶೇಖರ ಸುಬೇದಾರ ತಿಳಿಸಿದರು.ಇಂದು ನಗರದ ಸುಬೇದಾರ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಸೇವೆಯ ಜೊತೆಗೆ ಸಮಾಜ ಸೇವೆಯ ಗುರಿಯಾಗಿದ್ದು, 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಹೈಕಮಾಂಡ್ ಟಿಕೆಟ್ ನೀಡುವ ಭರವಸೆ ಇದೆ ಎಂದು ಹೇಳಿದರು.
      ಎರಡು ವರ್ಷಗಳ ಕಾಲ ಬಡ ರೋಗಿಗಳಿಗೆ ಅನುಕೂಲವಾಗಲೆಂದು ಆರೋಗ್ಯ ಚಕ್ರ ವಾಹನ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ತೀವ್ರವಾದ ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿದೆ ಎಂದು ಹೇಳಿದರು. ನಾಳಿನ ಕಾರ್ಯಕ್ರಮದಲ್ಲಿ ಗೋಮಾತೆ ಪೂಜೆ, ಬೃಹತ್ ಆರೋಗ್ಯ ಶಿಬಿರ,5001 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವಿದ್ದು, ಸುಮಾರು 25000 ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಮಹಾಸ್ವಾಮಿಗಳು, ಚರಬಸವೇಶ್ವರ ಮಠದ ಪೂಜ್ಯ ಬಸವಯ್ಯ ಶರಣರು ಸಾನಿಧ್ಯ ವಹಿಸಲಿದ್ದು,ಸಚಿವರಾದ ಶ್ರೀರಾಮುಲು ಪ್ರಭು ಚೌಹಾಣ್, ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ ವೈ ವಿಜಯೇಂದ್ರ,ಸಂಸದರಾದ ಅಂಬರೇಶ ನಾಯಕ, ಶಾಸಕರಾದ ರಾಜುಗೌಡ, ಬಿಜಿ ಪಾಟೀಲ್, ವೆಂಕಟರೆಡ್ಡಿ ಮುದ್ನಾಳ್, ಮಾಜಿ ಶಾಸಕರಾದ ಗುರು ಪಾಟೀಲ್ ಡಿಪಿ ಮುಖಂಡರಾದ ಅಮಿನರೆಡ್ಡಿ ಯಾಳಗಿ ಸೇರಿದಂತೆ ನಗರದ ಹಲವಾರು ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಬಸವರಾಜಪ್ಪಗೌಡ ವಿಭೂತಿಹಳ್ಳಿ,ಅಂಬರೇಶ ವಿಭೂತಿಹಳ್ಳಿ,ರಾಜಾ ನಗನೂರು,ಅಡಿವೆಪ್ಪ ಜಾಕಾ, ರಾಜಣ್ಣ ನಗನೂರು, ಬಸವರಾಜ ಕೋರಿ,ಸಣ್ಣ ಮಾನಯ್ಯ ಹಾದಿಮನಿ,ವಿರೇಶ ರಂಗಂಪೇಟೆ ಉಪಸ್ಥಿತರಿದ್ದರು.
ತಂದೆಯವರು ವೈದ್ಯರಾಗಿ 35 ವರ್ಷ ಸೇವೆ ಸಲ್ಲಿಸಿದ್ದಾರೆ. ಹಲವಾರು ಜನರ ಒತ್ತಾಸೆಯ ಮೇರೆಗೆ ಟ್ರಸ್ಟ್ ವತಿಯಿಂದ 5001 ಮುತ್ತೈದಿಯರಿಗೆ ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಕ್ಯಾನ್ಸರ್ ಹೃದಯ ರೋಗ ಸೇರಿದಂತೆ ಇತರ ಕಾಯಿಲೆಗಳಿಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಗಂಭೀರವಾದ ಕಾಯಿಲೆಗಳಿಗೆ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಚಿಕಿತ್ಸೆ ಕೊಡಿಸಿ ರೋಗಿಗಳನ್ನು ಮನೆಗೆ ಕರೆದುಕೊಂಡು ಬಿಡುವ ಎಲ್ಲಾ ಜವಾಬ್ದಾರಿಯು ನಮ್ಮ ಟ್ರಸ್ಟ್ ವತಿಯಿಂದ ಮಾಡಲಾಗುವುದು.
ಕರಣ ಸುಬೇದಾರ
ಕಾರ್ಯದರ್ಶಿಗಳು
ದಿ. ಅಚ್ಚಪ್ಪ ಗೌಡ ಸುಬೇದಾರ ಮತ್ತು ಅರ್ಬನ್ ಟ್ರಸ್ಟ ಶಹಾಪುರ.

About The Author