ವ್ಯಕ್ತಿ ವಿಶೇಷ : ಶತಮಾನದ ಸಂತ ಶ್ರೀಸಿದ್ಧೇಶ್ವರ ಸ್ವಾಮಿಗಳು : ಮುಕ್ಕಣ್ಣ ಕರಿಗಾರ

ವ್ಯಕ್ತಿ ವಿಶೇಷ : ಶತಮಾನದ ಸಂತ ಶ್ರೀಸಿದ್ಧೇಶ್ವರ ಸ್ವಾಮಿಗಳು 

ಮುಕ್ಕಣ್ಣ ಕರಿಗಾರ

 ಕರ್ನಾಟಕದ ಹೆಮ್ಮೆಯ ಸಂತ,ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು ಕಳೆದ ಕೆಲದಿನಗಳಿಂದ ತೀವ್ರ ಅಸ್ವಸ್ಥರಾಗಿರುವುದರಿಂದ ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹರಡಿ ಅಪಾರಸಂಖ್ಯೆಯಲ್ಲಿರುವ ಸಿದ್ಧೇಶ್ವರ ಸ್ವಾಮಿಗಳವರ ಭಕ್ತರಲ್ಲಿ ಭಯ,ಆತಂಕದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಕೆಲವರು.ಜ್ಞಾನಯೋಗಾಶ್ರಮದಿಂದ ಸಿದ್ಧೇಶ್ವರ ಸ್ವಾಮಿಗಳವರು ಆರೋಗ್ಯದಿಂದ ಇರುವುದಾಗಿ ಸ್ಪಷ್ಟನೆ ನೀಡುತ್ತಿದ್ದರೂ ಜನರು ವದಂತಿಯನ್ನು ಹರಡುತ್ತಲೇ ಇದ್ದಾರೆ.ನಾಡಿನ ಹೆಮ್ಮೆಯಾದ ಸಿದ್ಧೇಶ್ವರಸ್ವಾಮಿಗಳವರ ಅನಾರೋಗ್ಯದ ಬಗ್ಗೆ ರಾಜ್ಯವೇ ಕಳವಳಕ್ಕೀಡಾಗಿರುವ ಸಂದರ್ಭದಲ್ಲಿ ಅವಸರಬುದ್ಧಿಯ ಜನರು ಸುಳ್ಳುವದಂತಿಗಳನ್ನು ಹರಡುತ್ತಿರುವುದು ಬೇಸರದ ಸಂಗತಿ.ಸೋಶಿಯಲ್ ಮೀಡಿಯಾಗಳ ಅವಸರಮತಿಗಳ ಅಪಕ್ವಬುದ್ಧಿಯು ಜನತೆಯಲ್ಲಿ ಗೊಂದಲವನ್ನುಂಟು ಮಾಡುತ್ತಿದೆ

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರಸ್ವಾಮಿಗಳು ಶತಮಾನಗಳಿಗೊಮ್ಮೆ ಪರಮಾತ್ಮನ ಪ್ರೇರಣೆಯಂತೆ ಲೋಕೋದ್ಧಾರಕ್ಕಾಗಿ ಅವತರಿಸುವ ಶಿವವಿಭೂತಿಗಳಲ್ಲೊಬ್ಬರು.ತಮ್ಮ ಸರಳ,ಅವಿರಳಜ್ಞಾನಿಯ ವ್ಯಕ್ತಿತ್ವದಿಂದ ಕರುನಾಡಿನ ಕೀರ್ತಿಯನ್ನು ದೇಶ- ವಿದೇಶಗಳಲ್ಲಿ ಪಸರಿಸಿದ ಪುಣ್ಯಪುರುಷರು.ಇತರ ಸ್ವಾಮಿಗಳು,ಸಂತರುಗಳು ಧರ್ಮ,ಆಧ್ಯಾತ್ಮಗಳನ್ನು ಉಪದೇಶಿಸುವುದರಲ್ಲಿಯೇ ಸಾರ್ಥಕತೆಯನ್ನು ಕಂಡರೆ ಸಿದ್ದೇಶ್ವರಸ್ವಾಮಿಗಳವರು ಆಧ್ಯಾತ್ಮವನ್ನು ಬಾಳಿದವರು,ಆಧ್ಯಾತ್ಮಿಕ ತತ್ತ್ವಸಿದ್ಧಾಂತಗಳ ಸಾಕಾರರೂಪರಾಗಿ ಬದುಕಿದವರು.ಎಲ್ಲ ಮಠ- ಪೀಠಾಧೀಶರುಗಳಂತೆ ಕಾಷಾಯವನ್ನು ಉಡಲಿಲ್ಲ;ವೈರಾಗ್ಯದ ತುಟ್ಟತುದಿ ಮುಟ್ಟಿದರು.ಜ್ಞಾನಯೋಗಾಶ್ರಮದ ಪೀಠಾಧಿಪತಿಗಳಾಗಿಯೂ ಆಶ್ರಮಕ್ಕೆ ಕಟ್ಟುಬೀಳಲಿಲ್ಲ,ಆಶ್ರಮದ ಕಟ್ಟುಪಾಡುಗಳಿಗೆ ಒಳಗಾಗಲಿಲ್ಲ.ಯಾವುದಕ್ಕೂ ಸಿಲುಕದೆ ನಿರಾಳ,ನಿರ್ಲಿಪ್ತತೆಯಿಂದ ನಿರಂಜನರಾಗಿ ಮೆರೆದ ಜಂಗಮಮೂರ್ತಿಗಳವರು,ಜಂಗಮತತ್ತ್ವದ ಸಾಕಾರರೂಪಿಗಳು.ಜಂಗಮತ್ವವು ಜಾತಿ ಎಂದು ಭ್ರಮಿಸಿದವರ ನಡುವೆ ಜಂಗಮತ್ವವು ಶಿವತ್ವ,ಶೂನ್ಯತ್ವ ಎಂದು ಸಾರಿತೋರಿದ ಯುಗಜಂಗಮ,ಯುಗಯೋಗಿ.

ಸಿದ್ಧೇಶ್ವರ ಸ್ವಾಮಿಗಳವರನ್ನು ಮೊದಲಬಾರಿಗೆ ಕಂಡಿದ್ದು ನಾನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಪರೀಕ್ಷಾರ್ಥ ಕ್ಷೇತ್ರಾಭಿವೃದ್ಧಿಯಾಗಿದ್ದ ಅವಧಿಯಲ್ಲಿ,1998 ರಲ್ಲಿ.ಆಗ ಇಂಡಿಯಲ್ಲಿ ಸಿದ್ಧೇಶ್ವರಸ್ವಾಮಿಗಳವರ ಪ್ರಭಾವಕ್ಕೆ ಒಳಗಾಗಿದ್ದ ಗ್ರಾಮ ಪಂಚಾಯತಿಯ ( ಆ ಗ್ರಾಮಪಂಚಾಯತಿಯ ಹೆಸರು ನೆನಪಿಲ್ಲ) ಅಧ್ಯಕ್ಷರು ತಮ್ಮ ಆಸ್ತಿಮಾರಿ ಗ್ರಾಮದ ಹಿತಕಾಯುತ್ತಿದ್ದರಂತೆ.ಅವರು ಕಟ್ಟಿಸಿದ ಗ್ರಾಮಪಂಚಾಯತಿಯ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು ಸಿದ್ಧೇಶ್ವರ ಸ್ವಾಮಿಗಳವರು.ಸಮಾರಂಭದಲ್ಲಿದ್ದ ನಾನು ಸರಳವ್ಯಕ್ತಿತ್ವದ ತೇಜೋಮೂರ್ತಿ ಸಿದ್ಧೇಶ್ವರಸ್ವಾಮಿಗಳನ್ನು ಹತ್ತಿರದಿಂದ ಕಂಡೆ,ಅವರ ಅದ್ಭುತವಾದ ಭಾಷಣವನ್ನೂ ಕೇಳಿದೆ.ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ‘ ನೀನೊಮ್ಮೆ ಸಿದ್ಧೇಶನನ್ನು ಕಾಣು’ ( ಪೂಜ್ಯ ಗುರುದೇವರು ಸಿದ್ಧೇಶ್ವರ ಸ್ವಾಮಿಗಳವರನ್ನು ಆತ್ಮೀಯತೆಯಿಂದ ಕಾಣುತ್ತಿದ್ದು,ಸಿದ್ಧೇಶ ಎಂದೇ ಸಂಬೋಧಿಸುತ್ತಿದ್ದರು) ಎಂದಿದ್ದು ನೆನಪಾಗಿ ‘ ಶ್ರೀಗುರುವರುಹಿದ ಸಿದ್ಧೇಶ ಇವರೇ’ ಎಂದು ದೃಢಪಟ್ಟು ‘ ಸಿದ್ಧಿಗಳಿಗೆಲ್ಲ ಈಶ’ ರಾದ ಈ ಸಿದ್ಧೇಶ್ವರ ಸ್ವಾಮಿಗಳವರ ಬಗ್ಗೆ ಅತೀವ ಗೌರವಾದರಗಳುಂಟಾದವು ನನ್ನಲ್ಲಿ.ನನ್ನ ವಿದ್ಯಾಗುರುಗಳಾಗಿದ್ದ ಮನೋಹರ ಬಡಿಗೇರ ಅವರು ಸಿದ್ಧೇಶ್ವರಸ್ವಾಮಿಗಳವರ ಮಹೋನ್ನತ ವ್ಯಕ್ತಿತ್ವದ ಬಗ್ಗೆ ಬಣ್ಣಿಸಿದ್ದರು.

‌   ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಹೋಗಿ ಅವರನ್ನು ಕಂಡೆ.ತುಂಬ ಆತ್ಮೀಯತೆಯಿಂದ ಮಾತನಾಡಿದರು,ಯೋಗ ಕ್ಷೇಮ ವಿಚಾರಿಸಿದರು,ಒಳಿತನ್ನು ಹಾರೈಸಿದರು.ಅವರ ಸರಳ,ನಿರಾಂಡಬರ ನಿರಂಜನ ಸಿದ್ಧವ್ಯಕ್ತಿತ್ವದಿಂದ ಆಕರ್ಷಿತನಾದ ನಾನು ಇಂಡಿಯಲ್ಲಿದ್ದಷ್ಟು ಕಾಲ ರಜಾದಿನಗಳಲ್ಲಿ,ಅವಕಾಶ ಒದಗಿದಾಗ ಜ್ಞಾನಯೋಗಾಶ್ರಮಕ್ಕೆ ಹೋಗಿ ಅವರ ದರ್ಶನ ಪಡೆಯುತ್ತಿದ್ದೆ.ನಾನು ಇಂಡಿಯಲ್ಲಿದ್ದಾಗಲೇ ಅವರು ವಿದೇಶಯಾತ್ರೆಗೆ ಹೋದ ಪ್ರಸಂಗವು ನಡೆಯಿತು.ಆ ಪ್ರಸಂಗವು ಸಿದ್ಧೇಶ್ವರ ಸ್ವಾಮಿಗಳವರ ಮಹೋನ್ನತಿಕೆಗೊಂದು ನಿದರ್ಶನ.ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ಎರಡು ಜೊತೆ ಹೊಸ ಅಂಗಿ ಹೊಲಿಸಿದರು.ಟೇಲರ್ ಎಲ್ಲರಂತೆ ಇವರು ಎಂದು ಭಾವಿಸಿದ್ದನೋ ಏನೋ.ಅವರ ಅಂಗಿಗಳಿಗೆ ಜೇಬುಗಳನ್ನು ಇಟ್ಟಿದ್ದನಂತೆ.ಜೇಬುಗಳನ್ನು ಕಂಡೊಡನೆ ಸಿದ್ಧೇಶ್ವರ ಸ್ವಾಮಿಗಳು ‘ ಇದೇನು? ತೆಗೆಯಿರಿ,ತೆಗೆಯಿರಿ’ ಎಂದರಲ್ಲದೆ ಜೇಬುಗಳನ್ನು ತೆಗೆಯುವವರೆಗೂ ಬಿಡಲೇ ಇಲ್ಲವಂತೆ.ಜೇಬು ತೆಗೆದಾದ ಬಳಿಕ ಅವರು ಹೇಳಿದ ಮಾತು ‘ ಜೇಬು ಇದ್ರ ಏನನ್ನಾದರೂ ಇಟ್ಟುಕೊಳ್ಳಬೇಕು ಅನ್ನಿಸ್ತದ.ಆ ಆಸಿ ನಮಗ್ಯಾಕ?’ ಇದು ಸಿದ್ಧೇಶ್ವರ ಸ್ವಾಮಿಗಳವರಿಗೆ ಮಾತ್ರ ಸಾಧ್ಯವಾಗಬಹುದಾದ ನಿರ್ಮೋಹದ,ನಿರ್ಲಿಪ್ತ,ನಿಜಾತ್ಮ ಸಿದ್ಧಿ.ಇತರ ಸ್ವಾಮಿ- ಮಠಾಧೀಶರುಗಳು ವಿದೇಶಗಳಿಗೆ ಹೇಗೆ ಯಾತ್ರೆ ಹೊರಡುತ್ತಾರೆ,ಅಲ್ಲಿ ಏನೆಲ್ಲ ಮಾಡುತ್ತಾರೆ,ವಿದೇಶಗಳಿಂದ ಬರುವಾಗ ಬ್ಯಾಗುಗಟ್ಟಲೆ,ಚೀಲಗಟ್ಟಲೆ ಏನೆಲ್ಲ ತರುತ್ತಾರೆ ಎನ್ನುವುದನ್ನು ಬಲ್ಲವರಿಗೆ ಸಿದ್ಧೇಶ್ವರಸ್ವಾಮಿಗಳವರ ಪಕ್ವ,ಪರಿಪೂರ್ಣಯೋಗಿಯ ವ್ಯಕ್ತಿಶ್ರೀಯ ಪರಿಚಯ ಉಂಟಾಗಿ ಅವರ ಬಗ್ಗೆ ಗೌರವಾದರಗಳು ಬೆಳೆಯುತ್ತವೆ.ವಿದೇಶಯಾತ್ರೆಗೆ ಹೋಗುವಾಗ ಎರಡುಜೊತೆ ಅಂಗಿ,ಎರಡು ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದ ಸಿದ್ಧೇಶ್ವರಸ್ವಾಮಿಗಳು ವಿದೇಶಯಾತ್ರೆಯಿಂದ ಮರಳಿದ್ದು ಅವೇ ಎರಡು ಅಂಗಿ,ಎರಡು ಪುಸ್ತಕಗಳೊಂದಿಗೆ ! ತಮ್ಮ ಬಟ್ಟೆಯನ್ನು ತಾವೇ ತೊಳೆದುಕೊಳ್ಳುವ,ಬಟ್ಟೆಗಳಿಗೆ ಇಸ್ತ್ರಿ ಮಾಡಿಸದ, ಜ್ಞಾನಯೋಗಾಶ್ರದ ಹೂ ಹಣ್ಣುಗಳ ಮರಳಿಗೆ ನೀರುಣಿಸುವ,ಗುದ್ದಲಿ ಸಲಿಕೆಗಳನ್ನು ಕೈಯಲ್ಲಿಡಿದುಕೊಂಡು ಕೆಲಸ ಮಾಡುವ ಕೃಷಿಯೋಗಿ,ಕಾಯಕಯೋಗಿ,ಮಹಾಶಿವಯೋಗಿ ಸಿದ್ಧೇಶ್ವರಸ್ವಾಮಿಗಳು ಅಪರೂಪದ ಸಂತರಲ್ಲವೆ ? ಲೋಕಕ್ಕೆ ಅದ್ಭುತವೆನ್ನಿಸುವ ಆಧ್ಯಾತ್ಮಿಕಲೋಕದ ನಿಜಸಂಪತ್ತನ್ನು ಸಂಪಾದಿಸಿದ ನಿಜಸಿದ್ಧ ಸಿದ್ಧೇಶ್ವರ ಸ್ವಾಮಿಗಳವರು ಕನ್ನಡಿಗರು ಎನ್ನುವುದು ನಾಡಿನ ಪುಣ್ಯ,ಶಿವಾನುಗ್ರಹವಿಶೇಷ.

ಅವರ ದಿವ್ಯಾತ್ಮದ ಆತ್ಮಶ್ರೀಯನ್ನು ಹೊರಸೂಸುವ ಚೈತನ್ಯಾತ್ಮದ ಅನುಭಾವ ಸೆಳೆತಕ್ಕೆ ಒಳಗಾದ ನಾನು ಅವರ ಪ್ರವಚನಗಳನ್ನು ಕೇಳಲು ಅವರು ಪ್ರವಚನಕ್ಕೆ ಹೋದ ಎಡೆಗಳಿಗೆಲ್ಲ ಹೋಗಿ ಅವರ ಪ್ರವಚನಾಮೃತದ ಸವಿಯನ್ನನುಭವಿಸಿ ಅವರ ದರ್ಶನಾಶೀರ್ವಾದ ಪಡೆಯುತ್ತಿದ್ದೆ ೨೦೧೨ ರವರೆಗೆ.ಅವರು ೨೦೧೫-೧೬ ರಲ್ಲಿ ಕಾರಟಿಗೆ ಬಂದಾಗ ಅವರ ದರ್ಶನ ಪಡೆದಿದ್ದೆ.ಅದಾದ ಬಳಿಕ ಅವರ ಬಳಿ ಹೋಗಿಲ್ಲ.ಆದರೂ ಅವರ ಪ್ರವಾಸ,ಪ್ರವಚನ,ಕಾರ್ಯಕ್ರಮಗಳ ಬಗ್ಗೆ ಮೊದಲಿನ ಆಸಕ್ತಿಯಿಂದಲೇ ವಿಚಾರಿಸುತ್ತಿರುತ್ತೇನೆ.’ ಮಹಾಶೈವ ಧರ್ಮ’ ಎನ್ನುವ ನನ್ನದೇ ‘ಸ್ವತಂತ್ರಧರ್ಮ’ ಒಂದನ್ನು ಕಟ್ಟಿ ‘ ಮಹಾಶೈವಧರ್ಮಪೀಠ’ ಎನ್ನುವ ಪ್ರಾತಿನಿಧಿಕ ಸಂಸ್ಥೆಯ ಮೂಲಕ ಧರ್ಮ- ಆಧ್ಯಾತ್ಮ ಜಾಗೃತಿಯ ಕಾರ್ಯ ಮಾಡುತ್ತಿರುವುದರಿಂದ ನನ್ನ ಮತದ ಮಿತಿಗೊಳಪಟ್ಟು ಸಿದ್ಧೇಶ್ವರಸ್ವಾಮಿಗಳವರ ಪ್ರವಚನಗಳನ್ನಾಲಿಸಲು ತೆರಳುತ್ತಿಲ್ಲವಾದರೂ ಅವರ ಬಗೆಗಿನ ಗೌರವಾದರಗಳು ಕಡಿಮೆಯಾಗಿಲ್ಲ.

ಸಿದ್ಧೇಶ್ವರಸ್ವಾಮಿಗಳು ಎರಡುಬಾರಿ ನಮ್ಮ ಮಹಾಶೈವಧರ್ಮಪೀಠಕ್ಕೆ ಆಗಮಿಸಿ ಭಕ್ತಜನರಿಗೆ ಅನುಗ್ರಹಿಸಿ ನಮ್ಮೆಲ್ಲರಲ್ಲಿ ಶಿವಸ್ಫೂರ್ತಿಯಕಿರಣಪ್ರಕಾಶವನ್ನುಂಟು ಮಾಡಿದ್ದಾರೆ.ಈಗ ಮಹಾಶೈವಧರ್ಮಪೀಠವು ತಲೆಎತ್ತಿದ ಸ್ಥಳವು ಹಿಂದೆ ತಪೋವನವಾಗಿತ್ತು,ನನ್ನ ಗುರುದೇವ ಪೂಜ್ಯ ಕುಮಾರಸ್ವಾಮಿಗಳವರ ಸ್ಮರಣೆಯಲ್ಲಿ ಪ್ರತಿಹುಣ್ಣಿಮೆಗೆ ‘ ಶಿವಾನುಭವ ಕಾರ್ಯಕ್ರಮ’ ನಡೆಸಲಾಗುತ್ತಿತ್ತು.ರಾಯಚೂರಿನ ಪ್ರವಚನ ಕಾರ್ಯಕ್ರಮಕ್ಕೆ ಬಂದಿದ್ದ ಸಿದ್ಧೇಶ್ವರಸ್ವಾಮಿಗಳು ತಪೋವನಕ್ಕೆ ಆಗಮಿಸಿ, ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ತತ್ತ್ವೋಪದೇಶಗಳ ಪ್ರಸಾರಕ್ಕಾಗಿ ಹೊರಡಿಸುತ್ತಿದ್ದ ‘ ತಪೋವನದ ಬೆಳಗು’ ಎನ್ನುವ ಮಾಸಪತ್ರಿಕೆಯನ್ನು ಬಿಡುಗಡೆಮಾಡಿ,’ ಮಹಾತಪಸ್ವಿ ಶ್ರೀಕುಮಾರಸ್ವಾಮಿ ತತ್ತ್ವಪ್ರಚಾರ ಪ್ರತಿಷ್ಠಾನ’ ವನ್ನು ಉದ್ಘಾಟನೆ ಮಾಡಿದ್ದರು. ತಮ್ಮ ಚೈತನ್ಯದಾಯಕ ಮಾತುಗಳಿಂದ ನನ್ನ ಶಿವವ್ಯಕ್ತಿತ್ವ ಪ್ರಕಟಣೆಗೆ ಸ್ಫೂರ್ತಿನೀಡಿದ್ದರು ಈ ಯುಗಯೋಗಿ.ಅದಾದ ಬಳಿಕ ಮತ್ತೊಂದು ಬಾರಿಯೂ ಬಂದು,ಒಂದು ಪ್ರವಚನವನ್ನುನುಗ್ರಹಿಸಿ ನಮ್ಮೂರು ಗಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಯಲ್ಲಿ ಅನುಭಾವ ಜಾಗೃತಿಯನ್ನುಂಟು ಮಾಡಿದ್ದರು.ಲಿಂಗಸೂರಿನಲ್ಲಿ ನಡೆದ ತಾಲೂಕಾಸಾಹಿತ್ಯ ಸಮ್ಮೇಳನದಲ್ಲಿ ‘ ನನ್ನ ‘ ಕನಕನ ಕಿಂಡಿ’ ಎನ್ನುವ ವೈಚಾರಿಕ ಲೇಖನಗಳ ಸಂಕಲನ ಹಾಗೂ ‘ ಕಜ್ಜೂರ’ ಕವನಸಂಕಲವನ್ನು ಬಿಡುಗಡೆ ಮಾಡಿ,ಪ್ರೋತ್ಸಾಹಿಸಿ ಮಹೌದಾರ್ಯ ಮೆರೆದಿದ್ದರು.ಅವರು ಕಣ್ಹೇರಿ ಮಠದಲ್ಲಿದ್ದಾಗ ಅವರ ದರ್ಶನಕ್ಕೆ ಮಿತ್ರರ ಬಳಗದೊಂದಿಗೆ ನಾಲ್ಕಾರು ಕಾರುಗಳಲ್ಲಿ ತೆರಳಿದ್ದ ನಮಗೆ ಸ್ವತಃ ತಾವೇ ಬೆಳಗಿನ ಉಪಹಾರ ಬಡಿಸಿದ್ದಲ್ಲದೆ ನಾನು ಬೇಡಬೇಡವೆಂದರೂ ‘ ತಿನ್ನಬೇಕು ತಿನ್ನಬೇಕು,ನಾಡುಕಟ್ಟುವ ನೀವು ಗಟ್ಟಿಯಾಗಿರಬೇಕು’ ಎಂದು ಮೂರ್ನಾಲ್ಕು ಸಲ ನನಗೆ ಇಡ್ಲಿ ಬಡಿಸಿ ವಾತ್ಸಲ್ಯಮೆರೆದ ಈ ಮಹಾಂತ ಚೈತನ್ಯ ನನ್ನ ಪ್ರಾತಃಸ್ಮರಣೀಯರಲ್ಲೊಬ್ಬರು.

‌ ‌ ಪರಮಾತ್ಮನ ಜಾಗೃತಾತ್ಮವ್ಯಕ್ತಿತ್ವದ ಪ್ರಕಟ ವಿಭೂತಿಗಳಾಗಿರುವ ಸಿದ್ಧೇಶ್ವರಸ್ವಾಮಿಗಳವರು ತಮ್ಮ ನಿರಂಜನ ಲೋಕಾನುಕಂಪೆಯ ವ್ಯಕ್ತಿತ್ವದಿಂದ ಹೆಸರಾಗಿದ್ದಾರೆ.ಪ್ರಚಾರಪ್ರಿಯರಲ್ಲದ ಅವರು ಪದವಿ- ಪ್ತಶಸ್ತಿಗಳನ್ನು ನಿರಾಕರಿಸಿದ ಅತ್ಯಪರೂಪದ ಸಂತರು.ತಮ್ಮ ಬರಹಗಳಿಗೆ,ಮುನ್ನುಡಿಗಳಿಗೆ ‘ ಸಿದ್ಧೇಶ’ ಎಂದು ಮಾತ್ರ ಬರೆಯುವ ಹೆಸರು- ಖ್ಯಾತಿಗಳನ್ನಪೇಕ್ಷಿಸದ ಅಪೂರ್ವಯೋಗಿಗಳು.ಹೊಗಳಿಕೆಯನ್ನು ಇಷ್ಟಪಡದ ಅಜಾತಶತ್ರುಯೋಗಿಪುಂಗವರಿವರು ಯಾರನ್ನೂ ದ್ವೇಷಿಸರು.ದ್ವೇಷಾಸೂಯೆಗಳಂತಹ ಮನುಷ್ಯಸಹಜ ದೌರ್ಬಲ್ಯಗಳ ಸೋಂಕೇ ಇಲ್ಲದ ಪರಿಶುದ್ಧವ್ಯಕ್ತಿತ್ವದ ಸಿದ್ಧರಿವರು.ಎಲ್ಲರನ್ನೂ ಪ್ರೀತಿಸುವ,ಎಲ್ಲರ ಒಳಿತನ್ನು ಹಾರೈಸುವ ಲೋಕಹಿತಚಿಂತನೆಯ ಲೋಕಕಲ್ಯಾಣಾಕಾಂಕ್ಷಿಗಳು.ತಮ್ಮ ಬದುಕು- ಬರಹಗಳಿಂದ ಲೋಕಾನುಗ್ರಹವನ್ನು ಸಾಧಿಸುತ್ತಿರುವ ಕಲ್ಯಾಣಮೂರ್ತಿಗಳಿವರು.ಸಿದ್ಧೇಶ್ವರ ಸ್ವಾಮಿಗಳವರು ತಮ್ಮ ಪ್ರವಚನಗಳಿಂದ ದೇಶದುದ್ದಗಲಕ್ಕೂ ಪ್ರಸಿದ್ಧರಾಗಿದ್ದಾರೆ. ಸಿದ್ಧೇಶ್ವರಸ್ವಾಮಿಗಳ ಪ್ರವಚನದಲ್ಲಿ ಹತ್ತಾರೂ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರೂ ‘ಸೂಜಿಬಿದ್ದರೆ ಸಪ್ಪಳ’ ಆಗುವಂತಹ ನೀರವಮೌನದಿಂದ ಅವರ ಪ್ರವಚನಗಳನ್ನಾಲಿಸುತ್ತಾರೆ ಎನ್ನುವುದು ಅದ್ಭುತ ಸಂಗತಿ,ಸಿದ್ಧೇಶ್ವರಸ್ವಾಮಿಗಳವರ ಸಿದ್ಧವ್ಯಕ್ತಿತ್ವದ ನಿತ್ಯಸತ್ಯಪವಾಡ.ಅಥಣಿಯಲ್ಲಿ ನಡೆದ ಅವರ ಪ್ರವಚನವನ್ನು ಕೇಳಲು ಹೋಗಿದ್ದ ನಾನು ಎತ್ತನೋಡಿದತ್ತ ಜನರೇ ಕಾಣುವ ಜನಸ್ತೋಮವನ್ನು ಕಂಡು ಬೆರಗಾಗಿದ್ದೆ.ಕರ್ನಾಟಕದ ಅಷ್ಟೇ ಏಕೆ ಭಾರತದ ಯಾವ ಸ್ವಾಮಿ- ಸಂತರುಗಳ ಭಾಷಣ,ಪ್ರವಚನಗಳಿಗೆ ಇಷ್ಟು ಸಂಖ್ಯೆಯ ಜನರು ಸೇರುವುದಿಲ್ಲ,ಮೌನವಾಗಿ ಪ್ರವಚನವನ್ನು ಆಲಿಸುವುದಿಲ್ಲ.ಸಿದ್ಧೇಶ್ವರಸ್ವಾಮಿಗಳು ಬರುತ್ತಾರೆ ಎನ್ನುವ ಸುದ್ದಿ ತಿಳಿದೇ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸಾಹಿತ್ಯಸಮ್ಮೇಳನಗಳ ಸಂಘಟಕರುಗಳು ಸಿದ್ಧೇಶ್ವರಸ್ವಾಮಿಗಳವರನ್ನು ಸಾಹಿತ್ಯ ಸಮ್ಮೇಳನಗಳಿಗೆ ಉದ್ಘಾಟಕರನ್ನಾಗಿಯೋ,ಅನುಗ್ರಹಭಾಷಣ ನೀಡಲೆಂದೋ ಆಹ್ವಾನಿಸುತ್ತಿರುವುದುಂಟು.ಸಿದ್ಧೇಶ್ವರ ಸ್ವಾಮಿಗಳವರ ಸಮಯಪ್ರಜ್ಞೆಯಂತೂ ಅನನ್ಯವಾದುದು.ನಿಗದಿತ ಸಮಯಕ್ಕೆ ಹತ್ತುಹದಿನೈದು ನಿಮಿಷಗಳ ಮುಂಚೆಯೇ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ಅವರು ತಮಗೆ ನಿಗದಿಯಾದ ಸಮಯದಷ್ಟೇ ಮಾತನಾಡಿ,ಭಾಷಣ ಮುಗಿಸುತ್ತಾರೆ.ಒಂದು ಘಂಟೆಯ ಅವರ ಪ್ರವಚನಲ್ಲಿ ಶಿಷ್ಯರುಗಳಿಂದ ಹದಿನೈದು ನಿಮಿಷಗಳ ಗುರುಸ್ತುತಿಗಾಯನ ಮತ್ತು ನಲವತ್ತೈದು ನಿಮಿಷಗಳಿಗೆ ನಿಖರವಾಗಿ ಮುಗಿಯುವ ಅವರ ಪ್ರವಚನಕೇಳುವುದೇ ಆನಂದದಾಯಕ ಅನುಭವ.ಸಿದ್ಧೇಶ್ವರ ಸ್ವಾಮಿಗಳು ತಮ್ಮ ಪ್ರವಚನದಲ್ಲಿ ಮಹಾನ್ ಸಾಧಕರುಗಳ ಸ್ಫೂರ್ತಿದಾಯಕ ಪ್ರಸಂಗಗಳನ್ನು ವಿವರಿಸುತ್ತಾರಾಗಲಿ ಇತರ ವ್ಯಕ್ತಿಗಳ ಬಗ್ಗೆ ಪ್ರಸ್ತಾಪಿಸುವುದಿಲ್ಲ ಯಾರೊಬ್ಬರ ಮನಸ್ಸನ್ನೂ ನೋಯಿಸಬಾರದು ಎನ್ನುವ ಎಚ್ಚೆತ್ತ ಆತ್ಮಶ್ರೀಯ ಕಾರಣದಿಂದ.ತಮ್ಮ ಪ್ರವಚನದಲ್ಲಿ ಪಶು ಪಕ್ಷಿ,ಗಿಡ ಮರ,ನದಿ- ಬೆಟ್ಟಗಳ ಉದಾಹರಣೆಗಳನ್ನು ನೀಡುವ ಮೂಲಕ ಮನುಕುಲಕ್ಕೆ ಸಂದೇಶಸಾರುತ್ತಾರೆ.ಸಿದ್ಧವ್ಯಕ್ತಿತ್ವದ ವಿಜಯಪುರದ ಗ್ರಾಮೀಣಭಾಷೆಯ ಸೊಗಡನ್ನುಳ್ಳ ಅವರ ಪ್ರವಚನಗಳನ್ನು ಕೇಳುವುದೇ ಪರಮಾನಂದದ ಸಂಗತಿ.ಬದುಕು- ಬರಹ- ಪ್ರವಚನ- ಉಪದೇಶಗಳಿಂದ ಲೋಕಸಮಸ್ತರನ್ನು ಉದ್ಧರಿಸುತ್ತಿರುವ ಅಪೂರ್ವಸಂತ ಶ್ರೀಸಿದ್ಧೇಶ್ವರು ಸ್ವಾಮಿಗಳು ದೀರ್ಘಾಯುಗಳಾಗಲಿ,ಅವರ ದರ್ಶನಾಶೀರ್ವಾದವನ್ನು ನಾಡು- ದೇಶದ ಜನತೆ ಮತ್ತಷ್ಟು ವರ್ಷಗಳ ಕಾಲ ಅನುಭವಿಸುವಂತಾಗಲಿ.

About The Author