ಮೂರನೇ ಕಣ್ಣು : ಸಾಹಿತಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಮಹೇಶಜೋಶಿಯವರ ವರ್ತನೆ ಖಂಡನಾರ್ಹ : ಮುಕ್ಕಣ್ಣ ಕರಿಗಾರ

ಕನ್ನಡ ಸಾಹಿತ್ಯ ಪರಿಷತ್ತಿನ ದುರಂತ ಎಂಬಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಹೇಶ ಜೋಶಿ ಸದಾ ಒಂದಿಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ- ಗೌರವಗಳನ್ನು ಹಾಳುಮಾಡುತ್ತಿದ್ದಾರೆ.ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಾಹಿತ್ಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಕೆಲವರ ಸ್ವತ್ತಿನ ಸಂಸ್ಥೆಯನ್ನಾಗಿ ಮಾಡಹೊರಟಿದ್ದಾರೆ.ಅದೆಲ್ಲಕ್ಕಿಂತ ಹೆಚ್ಚಿನ ಬೇಸರದ ಸಂಗತಿ ಎಂದರೆ ಮಹೇಶ ಜೋಶಿ ಸರ್ವಾಧಿಕಾರಿ ಪ್ರವೃತ್ತಿಯಿಂದ ವರ್ತಿಸಿ ಕನ್ನಡದ ಸಾಹಿತಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು.ಕನ್ನಡ ಭಾಷೆ,ಸಾಹಿತ್ಯಗಳ ಸಂವರ್ಧನೆಗಾಗಿ ಹುಟ್ಟಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕನ್ನಡದ ಕವಿ- ಸಾಹಿತಿಗಳೊಂದಿಗೆ ಸೌಜನ್ಯದಿಂದ,ವಿನಯವಂತಿಕೆಯಿಂದ ವರ್ತಿಸಬೇಕು.ಈ ಹಿಂದೆ ಬರಗೂರು ರಾಮಚಂದ್ರಪ್ಪನವರ ಬಗ್ಗೆ ಹಗುರವಾಗಿ ಮಾತನಾಡಿದ್ದ ಮಹೇಶ ಜೋಶಿ ಈಗ ಮತ್ತೋರ್ವ ಹಿರಿಯ ಸಾಹಿತಿ ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.

‌ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ 86 ನೆಯ ಕನ್ನಡ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಯಾಗಿ ಮುಗಿಸಬೇಕಿದ್ದ ಈ ವ್ಯಕ್ತಿ ತಮಗೆ ಸ್ಟೇಟ್ ಮಿನಿಸ್ಟರ್ rank ಇದೆ ಎಂದು ವಿಐಪಿ ಗುಂಗಿನಲ್ಲಿದ್ದಾರೆ.ಮಹೇಶ ಜೋಶಿಯವರಿಗೆ state minister rank ಇದ್ದ ಮಾತ್ರಕ್ಕೆ ಅವರು ಕವಿ- ಸಾಹಿತಿಗಳಿಂದ ದೊಡ್ಡವರಾಗುವುದಿಲ್ಲ.State minister Rank ಅವರ ಪ್ರತಿಷ್ಠೆಗೆ ನೆರವಾಗಬಹುದೇ ಹೊರತು ಕನ್ನಡವನ್ನು ಕಟ್ಟಿ,ಬೆಳೆಸಲು ನೆರವಾಗುವುದಿಲ್ಲ.ಕನ್ನಡ ಭಾಷೆ,ಸಾಹಿತ್ಯಗಳ ಹಿತಾಸಕ್ತಿಯಿಂದ ಕೆಲಸ ಮಾಡಬೇಕಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಲ್ಲರೊಂದಿಗೆ ಅಲ್ಲದಿದ್ದರೂ ಕವಿ,ಸಾಹಿತಿ- ಪತ್ರಕರ್ತರುಗಳು,ಕನ್ನಡಪರ ಹೋರಾಟಗಾರರೊಂದಿಗೆ ಮುಕ್ತವಾಗಿ ಬೆರೆಯಬೇಕಾಗುತ್ತದೆ.ಕನ್ನಡಪರ ಮನಸ್ಸುಗಳೊಂದಿಗೆ ಸದಾ ಸಂಪರ್ಕ- ಸಂವಹನ ಸಾಧಿಸಬೇಕಿದ್ದ ವ್ಯಕ್ತಿಗೆ ಕರ್ನಾಟಕ ಸರ್ಕಾರವು ರಾಜ್ಯ ಮಂತ್ರಿಗಳ ಶ್ರೇಣಿ ನೀಡಿ ಕನ್ನಡದ ಹಿತಾಸಕ್ತಿಗೆ ಧಕ್ಕೆ ತಂದಿದೆ.ಕರ್ನಾಟಕ ಸರಕಾರವು ಕನ್ನಡದ ಹಿತಾಸಕ್ತಿಯನ್ನು ಕಾಪಾಡಬೇಕು,ಮಹೇಶ ಜೋಶಿಯವರ‌ ಪ್ರತಿಷ್ಠೆಯನ್ನು ಪೊರೆಯಬಾರದು.ತಮಗೆ ರಾಜ್ಯಮಂತ್ರಿಯ ಶ್ರೇಣಿ ಇದೆ ಎನ್ನುವ ಕಾರಣಕ್ಕೆ ಸಾಹಿತಿಗಳನ್ನು ಕಡೆಗಣಿಸುತ್ತಿರುವ ಮಹೇಶಜೋಶಿಯವರಿಗೆ ನೀಡಿರುವ ಅನಪೇಕ್ಷಣೀಯ ರಾಜ್ಯ ಸಚಿವ ಶ್ರೇಣಿಯನ್ನು ಸರಕಾರವು ವಾಪಾಸ್ಸು ಪಡೆಯಬೇಕು.

ಹಾವೇರಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ ಬರಹಗಾರರನ್ನು ಕಡೆಗಣಿಸಲಾಗಿದೆ,ದಲಿತಬರಹಗಾರರಿಗೆ ಸಿಗಬೇಕಾದ ಪ್ರಾತಿನಿಧ್ಯಸಿಕ್ಕಿಲ್ಲ ಎನ್ನುವ ಕಾರಣದಿಂದ ಕನ್ನಡ ಸಮಷ್ಟಿಪ್ರಜ್ಞೆಯ ಬರಹಗಾರರು ಪುರುಷೋತ್ತಮ ಬಿಳಿಮಲೆಯವರ ನೇತೃತ್ವದಲ್ಲಿ ಜನೆವರಿ ಎಂಟರದಂದು ಜನಸಾಹಿತ್ಯ ಸಮ್ಮೇಳನ ಆಯೋಜಿಸಿದ್ದರ ಬಗ್ಗೆ ಸಂಧಾನ- ಸಮಾಲೋಚನೆ ಮಾರ್ಗಗಳಿಂದ ಸಾಹಿತ್ಯಕ ವಲಯದ ಕಾವನ್ನು ತಣಿಸಬೇಕಿದ್ದ ಮಹೇಶ ಜೋಶಿ ‘ ಪುರುಷೋತ್ತಮ ಬಿಳಿಮಲೆಯವರು ತಮಗೆ ಪರಿಚಿತರಿರುವ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಪೆಂಡಾಲ್ ಗೆ ಜಾಗ ಕೊಡಲು ಕೇಳಿದ್ದರು.ಅದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದರಿಂದ ಬಿಳಿಮಲೆ ಮುನಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರಲ್ಲದೆ ‘ ಮನೋರೋಗ ಪೀಡಿತ ಬರಹಗಾರರು’ ಎಂದು ಪ್ರಗತಿಪರ ನಿಲುವಿನ ಸಾಹಿತಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದು ತೀವ್ರ ಖಂಡನಾರ್ಹ ಹಾಗೂ ಕವಿ ಸಾಹಿತಿಗಳು ಸೇರಿದಂತೆ ಸಾಹಿತ್ಯಕ ವಲಯ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಪುರುಷೋತ್ತಮ ಬಿಳಿಮಲೆಯವರು ಮುಸ್ಲಿಂ ಪುಸ್ತಕ ವ್ಯಾಪಾರಿಗೆ ಪೆಂಡಾಲ್ ಹಾಕಲು ಜಾಗ ಕೇಳಿದ್ದರೆ ಅದರಲ್ಲಿ ಜೋಶಿ ಆರೋಪಿಸುವಂತಹ ಅಪರಾಧವಾಗಲಿ,ತಪ್ಪಾಗಲಿ ಇಲ್ಲ.ಸಾಹಿತಿಗಳಾದವರು ಸಾಹಿತ್ಯ ಪರಿಷತ್ತಿನ ಮಾರಾಟ ಮಳಿಗೆಗಳಲ್ಲಿ ಇಂಥವರಿಗೆ ಜಾಗಕೊಡಿ ಎಂದರೆ ಅದನ್ನು ಆದ್ಯತೆಯ ಮೇಲೆ ಪರಿಗಣಿಸುವುದು ಸಾಹಿತ್ಯಪರಿಷತ್ತಿನ ಕರ್ತವ್ಯ.ಜಿಲ್ಲಾಡಳಿತಕ್ಕೆ ಜವಾಬ್ದಾರಿಯನ್ನು ವರ್ಗಾಯಿಸಿದವರಂತೆ ಮಾತನಾಡುತ್ತಿರುವ ಮಹೇಶಜೋಶಿಯವರು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳ ಸಲಹೆ,ಶಿಫಾರಸ್ಸುಗಳಿಗೆ ಗೌರವಕೊಡಬೇಕಾದ ಸಂಸ್ಥೆಯ ಅಧ್ಯಕ್ಷರು ಎನ್ನುವುದನ್ನು ಮರೆಯಬಾರದು.ಜಿಲ್ಲಾಡಳಿತ ಇಂಥವರಿಗೆ ಪೆಂಡಾಲ್ ಗೆ ಜಾಗಕೊಡಬೇಕು,ಇಂಥವರಿಗೆ ಕೊಡಬಾರದು ಎಂದು ನಿರ್ಧರಿಸುವುದಿಲ್ಲ,ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರತ್ತ ಮಾತ್ರ ಆಸಕ್ತಿವಹಿಸಿ ಕೆಲಸ ಮಾಡುತ್ತದೆ.ಅಷ್ಟಕ್ಕೂ ಕನ್ನಡದ ಪುಸ್ತಕಗಳನ್ನು ಮುದ್ರಿಸಿ,ಮಾರಾಟ ಮಾಡುವ ಮುಸ್ಲಿಂ ವ್ಯಾಪಾರಿಗೆ ಪೆಂಡಾಲ ವ್ಯವಸ್ಥೆ ಮಾಡುವುದು ಮಹೇಶ ಜೋಶಿಯವರ ಜವಾಬ್ದಾರಿಯೂ ಹೌದು.ಅವರಿಗೆ ಕರ್ನಾಟಕ ಸರ್ಕಾರವು ಭಾರತದ ಸಂವಿಧಾನದ ಅನುಚ್ಛೇದ,ವಿಧಿ- ನಿಯಮಗಳಂತೆ ರಾಜ್ಯಮಂತ್ರಿಯ ಸ್ಥಾನಮಾನ ನೀಡಿದೆ.ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜ್ಯಮಂತ್ರಿಯ ಸ್ಥಾನಮಾನವನ್ನು ಅನುಭವಿಸುತ್ತಿರುವ ಮಹೇಶಜೋಶಿಯವರು ಸಂವಿಧಾನದ ಜಾತ್ಯಾತೀತ ತತ್ತ್ವದಂತೆ ಮುಸ್ಲಿಂವ್ಯಾಪಾರಿಗೆ ಪೆಂಡಾಲಗೆ ಜಾಗಕೊಡಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು.

ಸಮಯಸಿಕ್ಕಾಗಲೆಲ್ಲ ಪ್ರಗತಿಪರ ನಿಲುವಿನ ಕನ್ನಡ ಸಾಹಿತಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಹೇಶಜೋಶಿಯವರ ಬಗ್ಗೆ ಕನ್ನಡ ಕವಿ ಸಾಹಿತಿಗಳು ಸಿಡಿದೇಳಬೇಕು.ಸರಕಾರಕ್ಕೆ ಅವರ ವರ್ತನೆಯ ಬಗ್ಗೆ ದೂರು ನೀಡಬೇಕು.ಇಲ್ಲವೆ ಮಹೇಶಜೋಶಿಯವರಿಗೆ ನೀಡಿದ ರಾಜ್ಯಸಚಿವ ಸ್ಥಾನಮಾನ ಮತ್ತು ಅವರ ನಿಲುವು ನಿರ್ಣಯಗಳ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕು.ಇಲ್ಲದೆ ಇದ್ದರೆ ಜೋಶಿಯವರ ಸರ್ವಾಧಿಕಾರಿ ವರ್ತನೆ ಎಲ್ಲೆ ಮೀರುತ್ತದೆ.ಕರ್ನಾಟಕ ಸರ್ಕಾರವು ಹಾವೇರಿ ಸಾಹಿತ್ಯ ಸಮ್ಮೇಳನಕ್ಕೆ ಇಪ್ಪತ್ತು ಕೋಟಿಗೂ ಅಧಿಕ ಹಣ ನೀಡುತ್ತಿದ್ದು ಅದು ಸಾರ್ವಜನಿಕರ ತೆರಿಗೆಯ ಹಣ. ಸಾರ್ವಜನಿಕರ ತೆರಿಗೆಯ ಹಣದಲ್ಲಿ ಮುಸ್ಲಿಮರ ತೆರಿಗೆ ಹಣವೂ ಇರುತ್ತದಲ್ಲವೆ ?ಸಾರ್ವಜನಿಕರ ತೆರಿಗೆಯ ಹಣವನ್ನು ವ್ಯಯಿಸಬೇಕಾದರೆ ಸಂವಿಧಾನ ಮತ್ತು ಅದಕ್ಕೆ ಉತ್ತರದಾಯಿಯಾದ ಸಾರ್ವಜನಿಕ ಸಂಸ್ಥೆಗಳ ಹಣಕಾಸು ನಿಯಮಾವಳಿಗಳನ್ನು ಪಾಲಿಸಲೇಬೇಕು.ಸಾರ್ವಜನಿಕರ ಹಣದಲ್ಲಿ ನಡೆಯುವ ಸಮ್ಮೇಳನದಲ್ಲಿ ಬೇಕಾದದವರಿಗೆ ಅವಕಾಶ ಕೊಡುತ್ತೇನೆ,ಬೇಡವಾದವರಿಗೆ‌ ಕೊಡುವುದಿಲ್ಲ ಎನ್ನುವ ಮನೋಭಾವ ಪ್ರದರ್ಶಿಸಿದರೆ ಅದು ಸಂವಿಧಾನ ವಿರೋಧಿ ನಡೆ.ಮಹೇಶಜೋಶಿಯವರು ‘ ನಾನು ಗುರುಗೋವಿಂದ ಭಟ್ಟರ ಮರಿಮೊಮ್ಮಗ.ಇದಕ್ಕಿಂತ ಹೆಚ್ಚಿನ ಜಾತ್ಯಾತೀತತೆ ಬೇಕೆ?’ ಎಂದು ಪ್ರಶ್ನಿಸಿ, ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡಿದ್ದಾರೆ.ಗುರುಗೋವಿಂದ ಭಟ್ಟರ ಮಹೋನ್ನತ ವ್ಯಕ್ತಿತ್ವ ಎತ್ತ ಸಂವಿಧಾನದ ಜಾತ್ಯಾತೀತ ತತ್ತ್ವವನ್ನು ಪಾಲಿಸದ ನಿಮ್ಮ ನಿಲುವು ಎತ್ತ ಮಹೇಶ ಜೋಶಿಯವರೆ ? ಬ್ರಾಹ್ಮಣರು ಶರೀಫರು ಮುಸ್ಲಿಂ ಎಂದು ಆಕ್ಷೇಪಿಸಿದ್ದಕ್ಕೆ ಗುರು ಗೋವಿಂದಭಟ್ಟರು ತಮ್ಮ ಜನಿವಾರವನ್ನೇ ತೆಗೆದು ಶರೀಫರಿಗೆ ಹಾಕಿದ್ದರು ಎಂದು ತಿಳಿದಿದೆಯೆ ನಿಮಗೆ ? ಗೋವಿಂದಭಟ್ಟರು ಶರೀಫರನ್ನು ಬರಿ ಶಿಷ್ಯ ಎಂದು ಪರಿಗಣಿಸಿದೆ ಸ್ವಂತಮಗ,ಆಧ್ಯಾತ್ಮಿಕ ವಾರಸುದಾರ ಎಂದು ಪರಿಗಣಿಸಿದ್ದ ಮಹೋನ್ನತ ಆತ್ಮಚೈತನ್ಯದ ಆದರ್ಶ ಅರ್ಥವಾಗಿದೆಯೆ ನಿಮಗೆ ಮಹೇಶ ಜೋಶಿಯವರೆ ? ಹಾಗಿದ್ದರೆ ಹಾವೇರಿ ಸಮ್ಮೇಳನದಲ್ಲಿ ಮುಸ್ಲಿಂ ಕವಿ- ಸಾಹಿತಿಗಳಿಗೆ ಸಾಹಿತ್ಯದ ಮುಖ್ಯ ವೇದಿಕೆಗಳಲ್ಲಿ ಏಕೆ ಅವಕಾಶ ನೀಡಿಲ್ಲ ? ಕವಿಗೋಷ್ಠಿ- ವಿಚಾರಗೋಷ್ಠಿಗಳಂತಹ ಮುಖ್ಯ ವೇದಿಕೆಗಳಿಂದ ಮುಸ್ಲಿಂ ಬರಹಗಾರರನ್ನು ದೂರವಿಟ್ಟು ಸಂಘಟನಾತ್ಮಕ ಕೆಲಸ ಕಾರ್ಯಗಳ ಕೆಲವು ಹೊಣೆಗಳನ್ನು ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗೆ ನೀಡಿ ಅವರು ಚಾಕರಿಯನ್ನು ಮಾತ್ರ ಮಾಡಿಕೊಂಡಿರಬೇಕಾದವರು ಎಂದು ನಿರ್ಧರಿಸಿದ್ದೀರಾ ?

ಕನ್ನಡದ ಕವಿ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವರ್ತನೆಗೆ ಬೇಸರಿಸಿ ಒಂದೋ ಎರಡೋ ಪ್ರತಿರೋಧದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದರೆ ಸಾಲದು.ಮಹೇಶ ಜೋಶಿಯವರ ಸಂವಿಧಾನ ವಿರೋಧಿ ನಡೆಗಳನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬೇಕು.ಸಾರ್ವಜನಿಕರ ತೆರಿಗೆಯ ಹಣವನ್ನು ಸಂವಿಧಾನದ ಅನುಚ್ಛೇದ, ಉದ್ದೇಶ- ಆಶಯಗಳಿಗೆ yಅನುಗುಣವಾಗಿ ವ್ಯಯಿಸಬೇಕು ಎನ್ನುವುದು ನ್ಯಾಯಾಲಯದ ನಿರ್ದೇಶನದ ಮೂಲಕ ಕಲಿಸುವ ಅನಿವಾರ್ಯತೆ ಬಂದೊದಗಿದೆ.

About The Author