ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈ’ ಗೆ ಒಂದು ಭೇಟಿ : ದಗಡುಶೇಠ್ ಹಲ್ವಾಯಿ ಗಣಪತಿ ದರ್ಶನ : ಮುಕ್ಕಣ್ಣ ಕರಿಗಾರ

ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈ’ ಗೆ ಒಂದು ಭೇಟಿ : ದಗಡುಶೇಠ್ ಹಲ್ವಾಯಿ ಗಣಪತಿ ದರ್ಶನ

ಮುಕ್ಕಣ್ಣ ಕರಿಗಾರ

ನಮ್ಮ ಮುಂಬೈ ಪ್ರವಾಸದ ಮೂರನೇ ದಿನವಾದ ಡಿಸೆಂಬರ್ ೧೬ ನೇ ದಿನದ ಶುಕ್ರವಾರದಂದು ನಾವು ಮಹಾರಾಷ್ಟ್ರದ ಮತ್ತೊಂದು ಪ್ರಸಿದ್ಧ ಗಣಪತಿ ದೇವಸ್ಥಾನವಾದ ಪೂನಾದ ‘ಶ್ರೀಮಂತ ದಗಡುಶೇಠ್ ಹಲ್ವಾಯಿ ಗಣಪತಿ’ ದೇವಸ್ಥಾನಕ್ಕೆ ಭೇಟಿ ನೀಡಿ,ದಗಡುಶೇಠ್ ಹಲ್ವಾಯಿ ಗಣಪತಿಯ ದರ್ಶನ ಪಡೆದೆವು. ಇಂದು ಬೆಳಿಗ್ಗೆ ಮುಂಬೈಯಿಂದ ಕಲ್ಬುರ್ಗಿಗೆ ಹಿಂದಿರುಗುವುದು ಎಂದು ನಿರ್ಧರಿಸಿದಾಗ ಅಳಿಯ ಸುನಿಲಕುಮಾರ ದಾರಿಯಲ್ಲಿ‌ ಪೂನಾದ ದಗಡುಶೇಠ್ ಗಣಪತಿಯ ದರ್ಶನ ಪಡೆಯೋಣ ಎಂದ.’ ಆಗಲಿ’ ಎಂದೆ.

ಬೆಳಿಗ್ಗೆ 10.10 ಘಂಟೆಗೆ ನಾವು ನವ ಮುಂಬೈಯ ಹೊಟೆಲ್ ‘ ಹಿಲ್ ವಿವ್ಯೂ ರೆಸಿಡೆನ್ಸಿ’ ಯಿಂದ ಹೊರಟೆವು.ಬೆಳಿಗ್ಗೆ ಹೋಟೆಲ್ ನಲ್ಲಿ ಚಹಾ ಮಾತ್ರ ಸೇವಿಸಿದ್ದರಿಂದ ದಾರಿಯಲ್ಲಿ ತಿಂಡಿ ತೆಗೆದುಕೊಂಡರಾಯಿತು ಎಂದುಕೊಂಡೆವು.ಕರ್ನಾಟಕ- ಹೈದ್ರಾಬಾದ್ ಗಳ ಹೆದ್ದಾರಿಗಳಲ್ಲಿ ಇದ್ದಂತೆ ಮುಂಬೈ – ಪೂನಾ ಹೆದ್ದಾರಿಯಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ಹೋಟೆಲ್ ಗಳು,ಡಾಬಾಗಳು ಸಿಗುವುದಿಲ್ಲ ಇದು ಎಕ್ಸಪ್ರೆಸ್ ವೇ ( Express Way ) ಆಗಿದ್ದುದರಿಂದ.ಪೂನಾ ನಲವತ್ತು ಕಿಲೋಮೀಟರ್ ದೂರ ಇರುವಾಗ ಸಿಗುವ ‘ ಹೋಟೆಲ್ ಫುಡ್ ಕಾರ್ನಿವಾಲ’ ಒಂದೇ ಒಂದು ಹೋಟೆಲ್ ಮುಂಬೈ ಪೂನಾ ನಡುವಣ ಹೋಟೆಲ್. ‘ಹೋಟೆಲ್ ಫುಡ್ ಕಾರ್ನಿವಾಲ’ ದೊಡ್ಡ ಹೋಟೆಲ್ ಆಗಿದ್ದು ಪ್ರಯಾಣಿಕರ ಅಭಿರುಚಿಗೆ ತಕ್ಕ ಆಹಾರ,ತಂಪುಪಾನೀಯ,ಐಸ್ ಕ್ರೀಮ್ ಪಾರ್ಲರ್ ಗಳಿಗೆ ಪ್ರತ್ಯೇಕ ಸ್ಟಾಲ್ ಗಳಿದ್ದು ಹೋಟೆಲ್ ನಲ್ಲಿ ತಿಂಡಿ,ಊಟ ಸಿಗುತ್ತದೆ.ಮಹಾರಾಷ್ಟ್ರದ ಜನಪ್ರಿಯ ಉಪಹಾರಗಳಾದ ವಡಾಪಾವು ಮತ್ತು ಪಾವು ಬಾಜಿಯನ್ನು ಸೇವಿಸಿ,ಚಹಾಕುಡಿದು ಅಲ್ಲಿಂದ ಪೂನಾಕ್ಕೆ ಹೊರಟೆವು.

ವರದರಾಜ ಗೂಗಲ್ ಮ್ಯಾಪ್ ನ ಸಹಾಯದಿಂದ ನಮ್ಮನ್ನು ದಗಡುಶೇಠ್ ಹಲ್ವಾಯಿ ಗಣಪತಿ ದೇವಸ್ಥಾನಕ್ಕೆ ಕರೆದೊಯ್ದ.ನಾವು ದೇವಸ್ಥಾನಕ್ಕೆ ಹೋದಾಗ ಸಮಯ ಮಧ್ಯಾಹ್ನದ ಒಂದು ಘಂಟೆ.ಅಂತಹ ದೊಡ್ಡ ಕ್ಯೂ ಇರಲಿಲ್ಲವಾಗಿ ಬೇಗನೆ ಗಣಪತಿಯ ಸನ್ನಿಧಿಯನ್ನು ತಲುಪಿದೆವು.

ವಿಸ್ತಾರವಾದ ವೇದಿಕೆಯ ಮೇಲೆ ಗಣಪತಿಯನ್ನು ಕೂಡಿಸಿದಂತೆ ಭಾಸವಾಗುವ ಗಣಪತಿ ಮಂದಿರವದು.ಗಣಪತಿಯ ಮೂರ್ತಿಯು ಆಕರ್ಷಕವಾಗಿದ್ದು ಭಕ್ತ್ಯೋನ್ಮಾದದ ಕಂಪನಗಳನ್ನುಂಟು ಮಾಡುತ್ತದೆ.ಗಣಪತಿಯ ಮೂರ್ತಿಯು 2.2 ಮೀಟರ್ ಗಳ ಎತ್ತರ ಹಾಗೂ 1 ಮೀಟರ್ ಅಗಲ ಇರುವ ಸುಂದರ ವಿಗ್ರಹವಾಗಿದೆ.ನಲವತ್ತು ಕೆ ಜಿ ಗಳಷ್ಟು ಬಂಗಾರವನ್ನು ಮೂರ್ತಿಗೆ ಲೇಪಿಸಲಾಗಿರುವುದರಿಂದ ಸ್ವರ್ಣಗಣಪತಿಯಾಗಿ ಕಾಣಿಸುತ್ತಾನೆ ದಗಡುಶೇಠ್ ಹಲ್ವಾಯಿ ಗಣಪತಿ.ದೇವಸ್ಥಾನದ ಗರ್ಭಗೃಹ ಮತ್ತು ಒಳಪ್ರಾಂಗಣದ ತುಂಬ ಬೆಳ್ಳಿಯ ಕೆತ್ತನೆಯ ಲೇಪನ ಇದೆ.ಹೆಸರಿಗೆ ತಕ್ಕಂತೆ ಪೂನಾದ ಗಣಪತಿಯು ಶ್ರೀಮಂತ ಗಣಪತಿಯೆ ! ಪೂನಾದ ಸಿಹಿ ತಿನಿಸುಗಳನ್ನು ಮಾರುತ್ತಿದ್ದ ವರ್ತಕ ದಗಡುಶೇಠ್ ಮತ್ತು ಆತನ ಪತ್ನಿ ಲಕ್ಷ್ಮೀಬಾಯಿಯವರ ಏಕೈಕ ಪುತ್ರ1892 ರ ಪ್ಲೇಗ್ ಮಹಾಮಾರಿಗೆ ಬಲಿಯಾಗುತ್ತಾನೆ.ಪುತ್ರವಿಯೋಗದಿಂದ ದುಃಖಿತರಾದ ದಂಪತಿಗಳು ಗಣಪತಿಯ ಅನುಗ್ರಹದಿಂದ ದೊರೆತ ಸಂಪತ್ತನ್ನು ಗಣಪತಿಗೆ ವಿನಿಯೋಗಿಸಿ ಈ ದೇವಾಲಯ ಕಟ್ಟಿಸುತ್ತಾರೆ.ದಗಡುಶೇಠ್ ಕಟ್ಟಿಸಿದ ಗಣಪತಿ ದೇವಸ್ಥಾನವಾದ್ದರಿಂದ ದೇವರನ್ನು ‘ ಶ್ರೀಮಂತ ದಗಡುಶೇಠ್ ಹಲ್ವಾಯಿ ಗಣಪತಿ’ ಎಂದು ಕರೆಯುತ್ತಾರೆ. ‘ ಹಲ್ವಾಯಿ’ ಎಂದರೆ ಸಿಹಿ ತಿಂಡಿ- ತಿನಿಸುಗಳನ್ನು ಮಾಡುವವರು ಎಂದರ್ಥ.ದೇವಸ್ಥಾನ ಇರುವ ಪ್ರದೇಶದಲ್ಲೇ ದಗಡುಶೇಠ ಹಲ್ವಾಯಿಯ ಹಳೆಯ ಸಿಹಿತಿಂಡಿಗಳ ಅಂಗಡಿ ಇದೆ.ದೇವಸ್ಥಾನವು ‘ ದಗಡುಶೇಠ್ ಹಲ್ವಾಯಿ ಸಾರ್ವಜನಿಕ ಗಣಪತಿ ದೇವಸ್ಥಾನ ಟ್ರಸ್ಟ್’ ನ ನಿಯಂತ್ರಣದಲ್ಲಿದೆ.ಈ ದೇವಾಲಯವು ಪೂನಾದ ಅತ್ಯಂತ ಶ್ರೀಮಂತದೇವಾಲಯವಾಗಿದ್ದು ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಮಂತ್ರಿಗಳು,ಸಿನೆಮಾ ಮತ್ತು ಕ್ರಿಕೆಟ್ ತಾರೆಯರು ಸೇರಿದಂತೆ ಸೆಲೆಬ್ರಿಟಿಗಳ ಆರಾಧನೀಯ ಸ್ಥಳವಾಗಿದೆ.ದೇವಸ್ಥಾನಕ್ಕೆ ದೇಶದ ಮೂಲೆಮೂಲೆಗಳಿಂದ ಮಾತ್ರವಲ್ಲದೆ ವಿಶ್ವದ ಹಲವೆಡೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.

ದಗಡುಶೇಠ್ ಹಲ್ವಾಯಿ ಗಣಪತಿಯು 1893 ರಿಂದ ಪೂಜೆಗೊಳ್ಳುತ್ತಿರುವ ವಿಘ್ನೇಶ್ವರನಾಗಿದ್ದರೂ ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವದ ಪ್ರಸಂಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಫೂರ್ತಿದೈವವಾಗಿ ಗಣಪತಿಯು ಪ್ರಸಿದ್ಧಿಗೆ ಬಂದಿರುವನು.ದಗಡುಶೇಠ್ ಹಲ್ವಾಯಿ ಗಣಪತಿ ಮಂದಿರವು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ,ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸುತ್ತಿದ್ದ ಸ್ಥಳಗಳಲ್ಲಿ ಒಂದೆಂಬುದು ಆ ದೇವಸ್ಥಾನದ ವಿಶೇಷ.ವಾರ್ಷಿಕ ಗಣೇಶೋತ್ಸದ ಸಂದರ್ಭದಲ್ಲಿ ಇಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಅತಿ ವೈಭವದಿಂದ ಆಚರಿಸಲಾಗುತ್ತಿದೆ.ಉತ್ಸವದ ಹತ್ತು ದಿನಗಳ ಕಾಲ ಪ್ರತಿದಿನ ಹತ್ತುಸಾವಿರ ಭಕ್ತರುಗಳು ಗಣಪತಿಯ ದರ್ಶನ ಪಡೆಯುತ್ತಾರಂತೆ.ದೇವಸ್ಥಾನದ ಆಡಳಿತ ನಿರ್ವಹಣೆ ಮಾಡುತ್ತಿರುವ ‘ ಶ್ರೀಮಂತ ದಗಡುಶೇಠ್ ಹಲ್ವಾಯಿ ಸಾರ್ವಜನಿಕ ಗಣಪತಿ ಟ್ರಸ್ಟ್’ ದೇವಸ್ಥಾನದ ನಿರ್ವಹಣೆಯ ಜೊತೆಗೆ ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳಿಂದ ಗಮನಸೆಳೆದಿದೆ.ಸಾಮಾಜಿಕ- ಸಾಂಸ್ಕೃತಿಕ ಕಾರ್ಯ- ಕಾರ್ಯಕ್ರಮಗಳಿಗೆ ನೆರವಾಗುತ್ತಿರುವುದಲ್ಲದೆ ಅನಾಥಾಲಯ,ವೃದ್ಧಾಶ್ರಮಗಳಿಗೆ ಆರ್ಥಿಕ ನೆರವು ನೀಡುತ್ತಿದೆ.

ದೇವಸ್ಥಾನದಲ್ಲಿ ಬಿಗಿಯಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿರುವಂತೆಯೇ ಸ್ವಚ್ಛತೆ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲಾಗುತ್ತಿದೆ.ಗಣಪತಿ ದೇವರ ದರ್ಶನ ಪಡೆದಾದ ಬಳಿಕ ಗರ್ಭಗುಡಿಯ ಮುಂದಿನ ಪ್ರಾಂಗಣದಲ್ಲಿ ಕುಳಿತು ಗಣಪತಿಯ ಧ್ಯಾನ ಮಾಡಲು ಅವಕಾಶವಿದೆ.ಪೂನಾ ರೈಲ್ವೆ ಜಂಕ್ಷನ್ ನಿಂದ 4.2 ಕಿ.ಮೀ ಗಳ ಅಂತರದಲ್ಲಿರುವ ದಗಡುಶೇಠ್ ಹಲ್ವಾಯಿ ಗಣಪತಿ ದೇವಸ್ಥಾನವು ನೋಡಲೇಬೇಕಾದ ಗಣಪತಿ ಕ್ಷೇತ್ರಗಳಲ್ಲಿ ಒಂದು.ಗಣಪತಿಯ ದರ್ಶನಾಶೀರ್ವಾದದಿಂದ ಆನಂದಿತರಾಗಿ ಕಲ್ಬುರ್ಗಿಯತ್ತ ಪಯಣವನ್ನಾರಂಭಿಸಿದೆವು.

About The Author