ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈ’ಗೆ : ಒಂದು ಭೇಟಿ : ಕರ್ನಾಟಕ- ಮಹಾರಾಷ್ಟ್ರಗಳ ಸಂಘರ್ಷಕ್ಕೆ ಕೇಂದ್ರದ ಮಧ್ಯಸ್ಥಿಕೆ– ಆಶಾದಾಯಕ ಬೆಳವಣಿಗೆ : ಮುಕ್ಕಣ್ಣ ಕರಿಗಾರ

ನಾನು ಮುಂಬೈ ಪ್ರವಾಸ ಹೊರಟದಿನ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿಗ್ರಾಮಗಳ ಮರುಹಂಚಿಕೆಯ ಅನಗತ್ಯ ಮತ್ತು ಅನಪೇಕ್ಷಣೀಯ ವಿವಾದವನ್ನು ಪ್ರಸ್ತಾಪಿಸಿ,ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರಕಾರ ವಿವಾದದ ಶಮನಕ್ಕೆ ಪ್ರಯತ್ನಿಸದೆ ಇರುವ ಬಗ್ಗೆ ಪ್ರಸ್ತಾಪಿಸಿದ್ದೆ.ನಾನು ಮುಂಬೈಯಲ್ಲಿದ್ದಾಗ ಕೇಂದ್ರಸರ್ಕಾರವು ಉಭಯ ರಾಜ್ಯಗಳ ಸಂಘರ್ಷಮಯ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ ಸಂಗತಿಯನ್ನು ತಿಳಿದು ಸಂತಸವಾಯಿತು.

‌ಡಿಸೆಂಬರ್ ೧೫ ರ ಗುರುವಾರದಂದು ಮಧ್ಯಾಹ್ನ ಮುಂಬೈಯ ಮಹಾಲಕ್ಷ್ಮೀ ದೇವಸ್ಥಾನಕ್ಕೆ ದರ್ಶನಕ್ಕೆಂದು ಹೋದಾಗ ದೇವಸ್ಥಾನದ ಆವರಣದಲ್ಲಿದ್ದ ಪತ್ರಿಕೆಗಳ ಮಾರಾಟದ ಅಂಗಡಿಯಲ್ಲಿ ಇಂಗ್ಲಿಷ್ ದಿನಪತ್ರಿಕೆಗಳನ್ನು ಖರೀದಿಸಿದ್ದೆ.ನಾನು The Hindu ಮತ್ತು Times of India ಇಂಗ್ಲಿಷ್ ಪತ್ರಿಕೆಗಳನ್ನು ಮೊದಲಿನಿಂದಲೂ ಓದುತ್ತಿದ್ದುದರಿಂದ ಯಾವುದೇ ಊರಿಗೆ ಹೋದರೂ ಅವುಗಳನ್ನು ಕೊಂಡು ಓದುವೆ.ಮುಂಬೈಯಲ್ಲಿ ನಾವು ತಂಗಿದ್ದ ನವ ಮುಂಬಯಿಯ Hill view Residency ಹೋಟೆಲ್ಲಿನ ಸುತ್ತಮುತ್ತ ಪತ್ರಿಕೆ ಮಾರುವ ಅಂಗಡಿಗಳು ಇಲ್ಲದ್ದರಿಂದ ಎರಡು ದಿನಗಳಿಂದ ಪತ್ರಿಕೆಗಳನ್ನು ಓದದೆ ಚಡಪಡಿಸುತ್ತಿದ್ದೆ.ಇಲ್ಲಿ ಪತ್ರಿಕೆಗಳನ್ನು ಕಂಡೊಡನೆ ಸಂತೋಷದಿಂದ ಆ ಅಂಗಡಿಯತ್ತ ನಡೆದು ಲಭ್ಯವಿದ್ದ ‘ Times of India’ , ‘ Economic Times’ ದಿನಪತ್ರಿಕೆಗಳನ್ನು ಹಾಗೂ ‘ Out Look’ ವಾರಪತ್ರಿಕೆಗಳನ್ನು ಖರೀದಿಸಿದೆ.ಪತ್ರಿಕೆಗಳ ಸಾಲಿನ ನಡುವೆ ಕುತೂಹಲವನ್ನುಂಟು ಮಾಡಿದ ‘ Mid Day’ ಎನ್ನುವ ನಡುಹಗಲ ಪತ್ರಿಕೆ ಒಂದನ್ನು ಖರೀದಿಸಿದೆ.ನಮ್ಮಲ್ಲಿ ‘ ಸಂಜೆವಾಣಿ’ ಮತ್ತು ‘ ಈ ಸಂಜೆ’ ಮೊದಲಾದ ಸಂಜೆ ಪತ್ರಿಕೆಗಳಿರುವಂತೆ ಮಹಾನಗರವಾದ ಮುಂಬೈಯಲ್ಲಿ ನಡುಹಗಲ ಪತ್ರಿಕೆಗಳು ಪ್ರಕಟವಾಗುವಂತೆ ತೋರುತ್ತದೆ.ನಾನು ಖರೀದಿಸಿದ Mid Day ಪತ್ರಿಕೆಯು ಮಧ್ಯಾಹ್ನದವರೆಗಿನ ಸುದ್ದಿಗಳನ್ನುಳ್ಳ ಪತ್ರಿಕೆಯಾಗಿತ್ತು.

ಪತ್ರಿಕೆಯು ಟ್ಯಾಬ್ಲಾಯ್ಡ್ ವಿನ್ಯಾಸದ ದಿನಪತ್ರಿಕೆಯಾಗಿದ್ದು 28 ಪುಟಗಳನ್ನು ಹೊಂದಿದೆ.ಒಂದು ದಿನಪತ್ರಿಕೆಯು ಹೊಂದಿರಬೇಕಾದ ವೈವಿಧ್ಯಮಯ ಸುದ್ದಿ ಸೊಗಡನ್ನು ಹೊಂದಿದ’ ಮಿಡ್ ಡೇ’ ಪತ್ರಿಕೆಯ ಹತ್ತನೇ ಪುಟದಲ್ಲಿ” Shah negotiates truce between neighbours ” ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಗೃಹಮಂತ್ರಿ ಅರಗ ಜ್ಞಾನೇಂದ್ರ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ,ಉಪಮುಖ್ಯಮಂತ್ರಿ ದೇವೀಂದ್ರ ಫಡ್ನಾವಿಸ್ ಅವರುಗಳೊಂದಿಗೆ ಸಭೆಯ ಪ್ರಾರಂಭದಲ್ಲಿ ರಾಷ್ಟ್ರಗೀತೆಗೆ ಗೌರವಿಸಲು ಎದ್ದುನಿಂತ ಫೋಟೋಸಹಿತ ವರದಿಯಲ್ಲಿ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರುಗಳಿಗೆ ‘ ಪ್ರಕರಣವು ಸುಪ್ರೀಂಕೋರ್ಟಿನಲ್ಲಿದ್ದು ಸುಪ್ರೀಂಕೋರ್ಟ್ ತನ್ನ ತೀರ್ಪು ಪ್ರಕಟಿಸುವವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಯಾವುದೇ ಗಡಿತಂಟೆಗಳನ್ನುಂಟು ಮಾಡಬಾರದು’ ಎಂದು ಸೂಚಿಸಿದ್ದಲ್ಲದೆ ವಸ್ತುಸ್ಥಿತಿಯ ಅಧ್ಯಯನಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ತಲಾ ಮೂವರು ಸಚಿವರುಗಳನ್ನೊಳಗೊಂಡ ತಂಡವನ್ನು ರಚಿಸುವುದಾಗಿಯೂ ಸಚಿವರುಗಳ ತಂಡವು ನೀಡುವ ವರದಿಯನ್ನು ಆಧರಿಸಿ ಮುಂದೆ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದು ಧರ್ಮೇಂದ್ರ ಜೋರ್ ಎನ್ನುವವರು ಆ ಪತ್ರಿಕೆಗಾಗಿ ಬರೆದ ವರದಿಯಲ್ಲಿತ್ತು.ಶಾ ಅವರು ಹಿರಿಯ ಐಪಿಎಸ್ ಅಧಿಕಾರಿ ಒಬ್ಬರ ನೇತೃತ್ವದಲ್ಲಿ ಉಭಯ ರಾಜ್ಯಗಳ ನಡುವೆ ಶಾಂತಿನೆಲೆಸಲು ನೆರವಾಗುವಂತಹ ವಾತಾವರಣವನ್ನು ನಿರ್ಮಿಸಲು ಒಂದು ಸಮಿತಿಯನ್ನು ಕೂಡ ರಚಿಸುವುದಾಗಿ ಹೇಳಿದ್ದರು.

ಇದು ಉತ್ತಮ ಹಾಗೂ ಸ್ವಾಗತಾರ್ಹ ಬೆಳವಣಿಗೆ.ಭಾಷಾವಾರು ಪ್ರಾಂತ್ಯಗಳಂತೆ ವಿಭಜಿಸಲ್ಪಟ್ಟ ದೇಶದ ವಿವಿಧ ರಾಜ್ಯಗಳ ಗಡಿಗ್ರಾಮಗಳಲ್ಲಿ ಸಮಸ್ಯೆಗಳಿವೆ.ನಮ್ಮ ನಮ್ಮಲಿನ ಭಿನ್ನಾಭಿಪ್ರಾಯಗಳು,ಅಭಿಪ್ರಾಯಭೇದಗಳು ಏನೇ ಇದ್ದರೂ ನಾವೀಗ ಸಾಂವಿಧಾನಿಕ ವಿಧಿ- ವಿಧಾನಗಳಿಂದಲೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.ಭಾರತೀಯರಾದವರೆಲ್ಲರಿಗೂ ಒಂದೇ ಸಂವಿಧಾನ ಮತ್ತು ಒಂದೇ ಕಾನೂನು.ಒಕ್ಕೂಟವ್ಯವಸ್ಥೆಯ ಭಾರತದಲ್ಲಿ ರಾಜ್ಯಗಳು ಪರಸ್ಪರ ಪ್ರೀತಿ,ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳಬೇಕಿದೆ.ಭಾಷೆ,ಗಡಿ ಮೊದಲಾದ ಭಾವನಾತ್ಮಕ ವಿಷಯಗಳನ್ನು ಸಂವಿಧಾನಾತ್ಮಕ ವಿಧಾನಗಳಾದ ಸಂಧಾನ,ಸಮಾಲೋಚನೆಗಳಂತಹ ಕ್ರಮಗಳ ಮೂಲಕ ಪರಿಹರಿಸಿಕೊಳ್ಳಬೇಕು.

About The Author