ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈ’ ಗೆ ಒಂದು ಭೇಟಿ –೨ : ಸಿದ್ಧಿ ವಿನಾಯಕನ ಮಂದಿರ ದರ್ಶನ ಮುಕ್ಕಣ್ಣ ಕರಿಗಾರ

ಪ್ರವಾಸ ಕಥನ : ವಾಣಿಜ್ಯ ರಾಜಧಾನಿ ಮುಂಬೈ’ ಗೆ ಒಂದು ಭೇಟಿ –೨ : ಸಿದ್ಧಿ ವಿನಾಯಕನ ಮಂದಿರ ದರ್ಶನ

ಮುಕ್ಕಣ್ಣ ಕರಿಗಾರ

ಮುಂಬೈ ಪ್ರವಾಸದ ಎರಡನೇ ದಿನವಾದ ಇಂದು ಅಂದರೆ ಡಿಸೆಂಬರ್ ೧೫,೨೦೨೨ ರ ಗುರುವಾರದಂದು ಬೆಳಿಗ್ಗೆ ಮುಂಬೈಯ ಪ್ರಸಿದ್ಧ ದೇವಸ್ಥಾನ ಸಿದ್ಧಿ ವಿನಾಯಕ ಮಂದಿರಕ್ಕೆ ಭೇಟಿ ನೀಡಿದೆವು.ನಾವು ತಂಗಿದ್ದ ನವಮುಂಬೈಯ ಹೊಟೆಲ್ ಹಿಲ್ ವಿವ್ಯೂ ರೆಸಿಡೆನ್ಸಿಯಿಂದ ಸುಮಾರು ಅರವತ್ತು ಕಿಲೋಮೀಟರ್ ಗಳಷ್ಟು ದೂರದಲ್ಲಿದೆ ಸಿದ್ಧಿವಿನಾಯಕ ಮಂದಿರ.ದಾದರನ ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ಮಂದಿರವು ದೇಶದ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು. ಸಿದ್ಧಿವಿನಾಯಕನ ಲೀಲಾ ಮಹಿಮೆಗಳಿಂದ ಜಾಗ್ರತಕ್ಷೇತ್ರವೆಂದು ಪ್ರಸಿದ್ಧವಾಗಿದೆ.ಮುಂಬೈಗೆ ಪ್ರವಾಸ ನಿರ್ಧಾರವಾದಾಗಲೇ ನಾನು ಸಿದ್ಧಿವಿನಾಯಕ ಮಂದಿರ ಮತ್ತು ಮಹಾಲಕ್ಷ್ಮೀ ದೇವಸ್ಥಾನಗಳನ್ನು ನೋಡಬೇಕು ಎಂದು ಯೋಚಿಸಿದ್ದೆ.

ಬೆಳಿಗ್ಗೆ ಹತ್ತುವರೆಗೆ ಹಿಲ್ ವಿವ್ಯೂ ರೆಸಿಡೆನ್ಸಿಯಿಂದ ಹೊರಟ ನಾವು ಮಧ್ಯಾಹ್ನ ಹನ್ನೆರಡರ ಸುಮಾರು ಪ್ರಭಾದೇವಿ ಪ್ರದೇಶದ ಸಿದ್ಧಿವಿನಾಯಕ ಮಂದಿರದ ಆವರಣದಲ್ಲಿದ್ದೆವು.ವರದರಾಜನು ಗೂಗಲ್ ಮ್ಯಾಪ್ ಹಾಕಿಕೊಂಡು ಸರಾಗವಾಗಿ ಕಾರು ಚಾಲನೆ ಮಾಡುತ್ತಿದ್ದ.ಅಳಿಯ ಸುನಿಲಕುಮಾರ ಮುಂಬೈಗೆ ಈ ಮುಂಚೆ ಹಲವಾರು ಬಾರಿ ಭೇಟಿ ನೀಡಿದ್ದರಿಂದ ವರದರಾಜನಿಗೆ ರಸ್ತೆಯ ಮಾಹಿತಿ ನೀಡುತ್ತಿದ್ದ.ನಾನು ಮತ್ತು ಮಡದಿ ಸಾಧನಾ ರಸ್ತೆಯ ಎಡಬಲಗಳಲ್ಲಿ ಕಾಣಿಸುತ್ತಿದ್ದ ಮುಂಬೈನಗರದ ಕಟ್ಟಡ,ಅಂಗಡಿ,ಮಾರುಕಟ್ಟೆಗಳನ್ನು ನೋಡುತ್ತಿದ್ದೆವು.ವಿಂಧ್ಯಾ ನಿತ್ಯಾ ಇಬ್ಬರು ಕಾರಿನಲ್ಲಿ ಕುಣಿದು ಕುಪ್ಪಳಿಸುತ್ತ,ಹಿಂದಿನ ಸೀಟಿನಿಂದ ಮುಂದಿನ ಸೀಟಿಗೆ ಮುಂದಿನ ಸೀಟಿನಿಂದ ಹಿಂದಿನ ಸೀಟಿಗೆ ಜಿಗಿಯುತ್ತ ಆನಂದಿಸುತ್ತಿದ್ದರು.

ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಬಂದಾಗ ಅಷ್ಟ ದೊಡ್ಡ ಕ್ಯೂ ಏನೂ ಇರಲಿಲ್ಲ.ಸಿದ್ಧಿವಿನಾಯಕ ದೇವಸ್ಥಾನದಲ್ಲಿ ದರ್ಶನಕ್ಕೆ ಎರಡು ಮೂರು ಘಂಟೆಗಳು ಬೇಕಾಗುತ್ತದೆ ಎಂದು ಕೇಳಿದ್ದೆ.ಆದರೆ ಇಂದು ಅಷ್ಟೊಂದು ದೊಡ್ಡ ಜನದಟ್ಟಣೆ ಇಲ್ಲದ್ದು ಕಂಡು ಆಶ್ಚರ್ಯವಾಯಿತು.ಮಹಿಳೆಯರಿಗೆ ಒಂದು ಕಡೆ ,ಪುರುಷರಿಗೆ ಒಂದುಕಡೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಲಾಗಿತ್ತು.ಮಧ್ಯಾಹ್ನದ ಪೂಜೆ ನಡೆಯುತ್ತಿದೆ ಎಂದು ಸ್ವಲ್ಪ ಹೊತ್ತು ಪ್ರವೇಶ ತಡೆದಿದ್ದರಿಂದ ನೂರಿನ್ನೂರು ಜನರ ಕ್ಯೂನಲ್ಲಿ ನಿಂತುಕೊಂಡೆವು.ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಬಿಗಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಲೋಹಪರಿಶೋಧಕ ( Metal detector ) ಯಂತ್ರದ ಪರೀಕ್ಷೆಗೆ ಒಳಪಟ್ಟೇ ಒಳ ಪ್ರವೇಶಿಸಬೇಕಿತ್ತು.ದರ್ಶನಕ್ಕೆಂದು ಒಳಹೋದ ನಮಗೆ ಸ್ವಲ್ಪ ನಿರಾಶೆಯಾಯಿತು.ನಮಗೆ ದರ್ಶನವಾದದ್ದು ಸಿದ್ಧಿವಿನಾಯಕನ ಮೂಲಮೂರ್ತಿಯಲ್ಲ,ಬದಲಿಗೆ ಉತ್ಸವ ಮೂರ್ತಿಯೋ ಅಥವಾ‌ ಮತ್ತಾವುದೋ ಗಣೇಶನ ಮೂರ್ತಿಯೋ ಆಗಿತ್ತು.ಬಂಗಾರದ ಮೂರ್ತಿ ಅದಾಗಿತ್ತು.ವಿಚಾರಿಸಲಾಗಿ ಸಿದ್ಧಿವಿನಾಯಕನ ಗರ್ಭಗುಡಿಯಲ್ಲಿ ಚಂದ್ರಲೇಪನದ ಕಾರ್ಯ ನಡೆದಿರುವುದಾಗಿ ಗರ್ಭಗುಡಿಯನ್ನು ಮುಚ್ಚಿದ್ದು ಮುಂಭಾಗದಲ್ಲಿ ಈ ಗಣೇಶನ ವಿಗ್ರಹವನ್ನಿಟ್ಟು ಭಕ್ತಾದಿಗಳಿಗೆ ದರ್ಶನ ಮಾಡಿಸುತ್ತಿರುವುದಾಗಿ ತಿಳಿಯಿತು.

ವರದರಾಜ ಮತ್ತು ಸುನಿಲಕುಮಾರ ಇದನ್ನು ಆಕ್ಷೇಪಿಸಿದರು.ಸಾಧನಾಳಿಗೂ ತುಸು ಬೇಸರ ಎನ್ನಿಸಿತು.ನನಗೆ ಅಂತಹ ಯಾವ ವ್ಯತ್ಯಾಸವೂ ಕಾಣಲಿಲ್ಲ.ನಾವು ಬಂದಿದ್ದು ಸಿದ್ಧಿವಿನಾಯಕನ ಸನ್ನಿಧಿಗೆ.ದೇವಸ್ಥಾನ ಮಂಡಳಿಯವರು ಆತನ ಮೂರ್ತಿಗೆ ಚಂದ್ರಲೇಪನ ಮಾಡುವ ಕಾರಣದಿಂದ ಗರ್ಭಗುಡಿಯನ್ನು ಮುಚ್ಚಿರಬಹುದು.ಆದರೆ ಸರ್ವವ್ಯಾಪಕನಾಗಿರುವ ಸಿದ್ಧಿ ವಿನಾಯಕನಿಗೆ ನಾವು ಆತನ ಸನ್ನಿಧಿಗೆ ಬಂದಿರುವುದು ಗೊತ್ತಿರುವುದಿಲ್ಲವೆ ? ದೇವರ ದರ್ಶನವಾಗದಿದ್ದರೂ ದೇವರ ಸನ್ನಿಧಿಯಲ್ಲಿದ್ದರೂ ಫಲದೊರೆಯುತ್ತದೆ.ದೇವರು ಕೇವಲ ಮೂರ್ತಿ ಇಲ್ಲವೆ ವಿಗ್ರಹಗಳಲ್ಲಿ ಇರುವುದಿಲ್ಲ,ಭಾವನೆಗಳಲ್ಲಿರುತ್ತಾನೆ.ನಮ್ಮ ಭಾವನೆ ತೀವ್ರವಾಗಿದ್ದಷ್ಟೂ ದೈವಿಶಕ್ತಿಯ ಶಕ್ತಿಯ ಕಂಪನಗಳ ಅನುಭವವಾಗುತ್ತದೆ.ಸಿದ್ಧಿ ವಿನಾಯಕನ ಮೂಲ ಮೂರ್ತಿಯ ದರ್ಶನವಾಗದಿದ್ದರೂ ಸಿದ್ಧಿ ವಿನಾಯನು ನನ್ನ ‘ಸಂಕಲ್ಪಸಿದ್ಧಿ’ ಯನ್ನು ಹರಸಿದ ಅನುಭವವಾಯಿತು.

ಗಣೇಶನು ವಿಘ್ನಕಾರಕ ಮತ್ತು ವಿಘ್ನನಿವಾರಕನಾಗಿ ಆದಿಪೂಜಿತನಾಗುತ್ತಿದ್ದಾನೆ.ಮುದ್ಗಲ ಋಷಿಗಳು ಗಣೇಶನನ್ನು ಮುವ್ವತ್ತೆರಡು ರೂಪಗಳನ್ನು ದರ್ಶಿಸಿದ್ದಾರೆ.ಅದರಲ್ಲಿ ‘ ಸಿದ್ಧಿ ವಿನಾಯಕ’ ನಿಗೆ ವಿಶೇಷ ಪ್ರಾಶಸ್ತ್ಯವಿದೆ.ಸಿದ್ಧಿವಿನಾಯಕನು ಕಾರ್ಯಸಿದ್ಧಿಯನ್ನು ಅನುಗ್ರಹಿಸುವುದರಿಂದ ದೊಡ್ಡದೊಡ್ಡ ಕೆಲಸ- ಕಾರ್ಯಗಳನ್ನು ಮಾಡುವವರು,ಮಹೋನ್ನತ ಧ್ಯೇಯೋದ್ದೇಶಗಳುಳ್ಳವರು ಸಿದ್ಧಿ ವಿನಾಯನನ್ನು ಪೂಜಿಸುತ್ತಾರೆ.ಮುಂಬೈಯ ಸಿದ್ಧಿವಿನಾಯಕನು ಶ್ರೀಮಂತರು,ಉದ್ಯಮಿಗಳು,ರಾಜಕಾರಣಿಗಳು,ಸಿನೆಮಾ ನಟರುಗಳು,ಕಾರ್ಪೋರೇಟ್ ಜಗತ್ತಿನ ದಿಗ್ಗಜರುಗಳ ನೆಚ್ಚಿನ ದೇವರು ಆಗಿದ್ದರಿಂದ ‘ ಮುಂಬೈಯ ಅತ್ಯಂತ ಶ್ರೀಮಂತ ದೇವರು’ ಎಂದು ಹೊಗಳಿಸಿಕೊಂಡಿದ್ದಾನೆ.ಪ್ರತಿದಿನ ಕನಿಷ್ಟ ಇಪ್ಪತ್ತೈದು ಸಾವಿರ ಭಕ್ತರುಗಳು ಸಿದ್ಧಿವಿನಾಯಕನ ದರ್ಶನ ಪಡೆಯುತ್ತಾರಂತೆ.ಮಂಗಳವಾರದಂದು ಭಕ್ತರ ಸಂಖ್ಯೆ ಹೆಚ್ಚು ಇರುತ್ತದೆಯಂತೆ.

ಮುಂಬೈಯ ಸಿದ್ಧಿವಿನಾಯಕನ ದೇವಸ್ಥಾನವು1801 ರಲ್ಲಿ ನಿರ್ಮಾಣಗೊಂಡಿದೆ.ದೇವುಬಾ ಪಾಟೀಲ ಎನ್ನುವ ಶ್ರೀಮಂತ ಕೃಷಿಕ ಮಹಿಳೆಯು ಈ ದೇವಸ್ಥಾನವನ್ನು ಕಟ್ಟಿಸಿದ್ದಾಳೆ.ತನಗೆ ಮಕ್ಕಳಾಗದಿದ್ದುದರಿಂದ ದೇವುಬಾ ಪಾಟೀಲ ತನ್ನಂತೆ ಇತರ ಮಹಿಳೆಯರು ಕಷ್ಟ ಅನುಭವಿಸಬಾರದು ಎನ್ನುವ ಸತ್ ಸಂಕಲ್ಪದಿಂದ ತನ್ನ ಸಂಪತ್ತನ್ನು ವಿನಿಯೋಗಿಸಿ ಸಂಕಷ್ಟನಿವಾರಕನೂ ಇಷ್ಟಾರ್ಥ ಪ್ರದಾಯಕನೂ ಆಗಿರುವ ಈ ಸಿದ್ಧಿ ವಿನಾಯಕನಿಗೆ ಮಂದಿರ ಕಟ್ಟಿಸಿ,ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ್ದಾಳೆ.ಲಕ್ಷ್ಮಣ ವಿಠು ಎನ್ನುವ ಗುತ್ತೆದಾರನು ಈ ದೇವಸ್ಥಾನ ನಿರ್ಮಾಣದ ಹೊಣೆಹೊತ್ತಿದ್ದನಂತೆ.ಸಿದ್ಧಿವಿನಾಯಕನ ಮೂಲ ಮಂದಿರವು 3.6×3.6 ಚದುರಮೀಟರ್ಗಳ ವಿಸ್ತೀರ್ಣಹೊಂದಿದ,ಇಟ್ಟಿಗೆಗಳಿಂದ ಕಟ್ಟಿದ ಸಣ್ಣ ದೇವಾಲಯವಾಗಿದ್ದು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಪ್ರವರ್ಧಮಾನಕ್ಕೆ ಬಂದು ಇಂದು ದೊಡ್ಡದೇವಾಲಯವಾಗಿ ಬೆಳೆದಿದೆ.ಸಿದ್ಧಿವಿನಾಯಕನ ದೇವಸ್ಥಾನವು 19 ನವೆಂಬರ್ 1801 ರಂದು ಉದ್ಘಾಟನೆಗೊಂಡಿದೆ.ಸಿದ್ಧಿವಿನಾಯಕನ ಮೂರ್ತಿಯು 2.5 ಅಡಿಗಳ ಏಕ ಕಪ್ಪುಶಿಲೆಯ ಮೂರ್ತಿಯಾಗಿದ್ದು ಮೂರ್ತಿಯ ಎಡಬಲಗಳಲ್ಲಿ ವೃದ್ಧಿ- ಸಿದ್ಧಿಯರ ಮೂರ್ತಿಗಳಿವೆ.ಮಂದಿರದ ಕಟ್ಟಿಗೆಯ ಬಾಗಿಲುಗಳಲ್ಲಿ ಅಷ್ಟವಿನಾಯಕರ ವಿಗ್ರಹಗಳನ್ನು ಕೆತ್ತಲಾಗಿದೆ.ಗರ್ಭಗೃಹದ ಸಿದ್ಧಿವಿನಾಯಕನ ಗೋಪುರವು ಸ್ವರ್ಣಗೋಪುರವಾಗಿದೆ.ಸಿದ್ಧಿವಿನಾಯಕ ಮಂದಿರದ ಆಡಳಿತ ನಿರ್ವಹಣೆಯನ್ನು ‘ ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನ ಟ್ರಸ್ಟ್’ ಎನ್ನುವ ಖಾಸಗಿ ಟ್ರಸ್ಟ್ ನಿರ್ವಹಿಸುತ್ತಿದ್ದು ಅಪಾರ ಸಂಪತ್ತನ್ನು ಟ್ರಸ್ಟ್ ಸದಸ್ಯರುಗಳು ದುರ್ಬಳಕೆ ಮಾಡಿಕೊಂಡ ಪ್ರಕರಣವು ಬಾಂಬೆ ಹೈಕೋರ್ಟಿನವರೆಗೂ ಹೋಗಿ ಹೈಕೋರ್ಟಿನ ನಿರ್ದೇಶನದಂತೆ ಸರಕಾರವು ಟ್ರಸ್ಟಿನ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ತಿಳಿಯಿತು.

About The Author