ಕಲ್ಯಾಣ ಕಾವ್ಯ : ಶ್ರೀದೇವಿಯ ಸ್ವರೂಪವನ್ನರಿಯದವರು ದೇವಿ ಭಕ್ತರಲ್ಲ : ಮುಕ್ಕಣ್ಣ ಕರಿಗಾರ

   ನಾವು ದೇವಿ ಉಪಾಸಕರು
   ದೇವಿ ಪುರಾಣ ಓದುವೆವು ಎನ್ನುವಿರಿ
ಎಂತಿಹಳು ದೇವಿ ಎಂದು ಬಲ್ಲಿರಾ ?
 ಮರುಳ ಮಂದಿಯ ಮೆಚ್ಚಿಸಲು
ಪುರಾಣವನು ಓದುವವರಿಗೆ ಒಲಿಯುವಳೆ ದೇವಿ ?
ನೂರಲ್ಲ,ಸಾವಿರ ವರ್ಷಗಳು ಓದಿದರೂ
ಕಾಣಳಯ್ಯ ದೇವಿ ನಿಮಗೆ !
ಆಡಂಬರದ ಭಕ್ತಿ ಹಾಳುಗೆಡಹಿತ್ತಲ್ಲದೆ
ದೇವಿಯನುಗ್ರಹಕ್ಕೆ ಕಾರಣವಾಗಲಿಲ್ಲ.
ಚಪಲಕ್ಕೆ ದೇವಿಪುರಾಣವನು ಓದುವವನು
ವಿಪರೀತ ಕಷ್ಟಕ್ಕೆ ಗುರಿಯಾಗುವನು
ಮಂದಿಯ ಮೆಚ್ಚಿಸಲೆಂದು ದೇವಿಪುರಾಣವನು ಓದುವವನು
ಹಂದಿ ನಾಯಿಗಳಂತೆ ಅಂಡಲೆದು ಸಾಯುವನು
ಮೂರುಮೂರ್ತಿಗಳ ಮೀರಿದ ಮೂಲಮಹಾವಸ್ತು
ನಿರಾಕಾರ ಪರಬ್ರಹ್ಮೆಯು ಶಾಂಭವಿಯು
ಎಂದರಿಯದೆ
ಹುಡಿತುಂಬುವೆವು,ಮಡಿಯ ಮಾಡುವೆವು
ತೊಟ್ಟಿಲಶಾಸ್ತ್ರ ಮಾಡುವೆವು ಎಂಬ ಬುದ್ಧಿಗೇಡಿಗಳ ಕೆಡಹಿ
ಯಮಪುರಕೆ ಅಟ್ಟುವಳು ದೇವಿ ದುರ್ಗೆಯು.
ಹರ ಹರಿ ಬ್ರಹ್ಮರುಗಳ ಮಕ್ಕಳಾಗಿ 
ಪಡೆದ ಜಗದಾದಿ ವಸ್ತುವಿಗೆ
ಕಟ್ಟಬಹುದೆ ತೊಟ್ಟಿಲು ?
‘ವಿರಕ್ತಿ ಬಲಿದಲ್ಲದೆ ಒಲಿಯೆ’ನೆಂಬ
ನುಡಿಯ ದೇವಿಯನು ಒಲಿಸಬಹುದೆ
ಊರ ನಾರಿಯರಿಗೆ ಉಡಿತುಂಬಿ ?
ದಾರಿ ತಪ್ಪಿ ನಡೆವವರಿಗೆ
ಮಾರಿಯಾಗಿ ಕಾಡುವಳು ಜಗದೀಶ್ವರಿಯು.
ಎದ್ದು ಬ್ರಾಹ್ಮಿ ಮುಹೂರ್ತದೊಳು
ಶುದ್ಧ ದೇಹ ಭಾವಗಳಿಂದ
ಎದ್ದಾಡದ ನಿಶ್ಚಲ ಮನಸ್ಸಿನಿಂದ
ಹೊತ್ತು ಮೂಡುವುದರೊಳಗೆ ಓದಿ, ಮುಗಿಸಿದರೆ ಪುರಾಣ
ಸತ್ಯದೇವಿ ಶಾಂಭವಿಯು
ಓಡೋಡಿ ಬಂದು
ಬೇಡಿದ ಫಲ ಪದವಿಗಳನ್ನಿತ್ತು ಉದ್ಧರಿಸುವಳು
ಕೈಲಾಸನಾಥ ವಿಶ್ವೇಶ್ವರನ ಶರಣರ
ದೇವಿಪೂಜೆಯ ಪಥವಿದು
     

About The Author