ಕಲ್ಯಾಣ ಕಾವ್ಯ : ಕಾಂಚನದಾಸೆ ಕೂಡದು ಪರಮಾನುಭವಿಗೆ : ಮುಕ್ಕಣ್ಣ ಕರಿಗಾರ

ಪಾರಮಾರ್ಥದ ಪಥವನರಿಯದೆ
ಊರೂರು ತಿರುಗಿ
ಕಂಡಭಕ್ತರ ಮನೆಗಳಿಗೆ ಎಡತಾಕಿ
ದಕ್ಷಿಣೆ ಕಾಣಿಕೆಗಳೆಂದು
ಪರಧನಕೆ ಕೈ ಚಾಚುವವರಿಗೆಲ್ಲಿ
ಶಿವಪಥವು ?
ಇದ್ದ ನೆಲೆಯಲ್ಲೆ ತಾನು
ಸಿದ್ಧನಾಗಿ ಸಾಧಿಸಬೇಕಲ್ಲದೆ
ಎದ್ದು ತಿರುಗಿ ಫಲವೇನು ಪಿಶಾಚಿಯಂತೆ ?
ಶುದ್ಧಮನವಿರಲು ಇದ್ದೆಡೆಗೆ ಬರುವಳು ಲಕ್ಷ್ಮೀ.
ಧನದಾಸೆಗೆ ಪರರ ಮನೆಗಳಿಗೆ
ತಿರುಗುವನು ಶರಣನಲ್ಲ,ಹಿರಿಯನಲ್ಲ
ಘನಕೆ ಘನವಾದ ಪರಶಿವನ ಬೇಡಬೇಕಲ್ಲದೆ
ಕ್ಷಣಕೊಂದನಾಡುವ ನರರ ಬೇಡಲಾಗದು.
ಮಠ ಮಂದಿರ ಗುಡಿ ಗದ್ದುಗೆಗಳ
ಕಟ್ಟುವೆವು ಎಂದು ಕಂಡವರ ಕಾಡಿ
ಪೀಡಿಸುವಿರೇಕೆ ?
ಸಾಧಿಸಿ ಆತ್ಮವಿದ್ಯೆಯನು
ಲೋಕತ್ರಯಗಳು ನಿಮ್ಮಡಿಗೆ ಶರಣೆನ್ನುವವು.
ಆತ್ಮವಿದ್ಯೆಯನರಿಯದೆ
ಆವ ವಿದ್ಯೆ ಶಾಸ್ತ್ರ ಚಮತ್ಕಾರಗಳ
ಕಲಿತೇನು ಸಾಧಿಸುವಿರಿ ?
ನಿಮ್ಮ ನೆಲೆಯನರಿಯದೆ
ಸುಮ್ಮನೆ ಹಾಳಾಗುವಿರಿ
ಲಕ್ಷ್ಮೀ ಕುಬೇರರಿಗೆ ಐಶ್ವರ್ಯವನ್ನಿತ್ತ
ಪರಶಿವನು ತಾನು ಸ್ಮಶಾನವಾಸಿ
ಎಂಬುದನರಿಯಿರಿ
ಶಿವನಂತಾಗುವುದೇ ಶಿವಯೋಗಿಯ ಲಕ್ಷಣವೆಂದಿತ್ತು
ಕೈಲಾಸನಾಥ ವಿಶ್ವೇಶ್ವರನ ಸತ್ಯವಚನ

About The Author