ಕಲ್ಯಾಣ ಕಾವ್ಯ : ಸತ್ಯಶರಣರ ಪಥ ಬೇರಿಹುದು : ಮುಕ್ಕಣ್ಣ ಕರಿಗಾರ

  ಹೊಟ್ಟೆಯ ಪಾಡಿಗೆ
 ಬಟ್ಟೆಯ ಹಾವಾಡಿಸುವವರಿಹರಲ್ಲದೆ
 ಬುಟ್ಟಿಯೊಳು ಕೈಯಿಟ್ಟು ಹಾವ ತೆಗೆವವರಿಲ್ಲ
ಬಟ್ಟೆಯ ಹಾವನಾಡಿಸುವವರ ನಂಬಿ
ಕೆಟ್ಟುಹೋಗುತ್ತಿಹರು ಜನರು
ಗಡ್ಡ ಮೀಸೆ ಜಟೆಗಳ ಬಿಟ್ಟು
ದೊಡ್ಡತನ ನಟಿಸಿ
ಅಡ್ಡಹಾದಿ ಹಿಡಿವರಲ್ಲದೆ
ಗಡ್ಡ ಮೀಸೆಗಳಿಲ್ಲದ ಶಿವನ
ಪರಿಯೆಂತಿಹುದೆಂದರಿಯರು.
ಈಶ ಸರ್ವೇಶ ಸರ್ವಕ್ಕತೀತನಿಹನೆಂಬ
ನಿಜವ ತಿಳಿಯದೆ
ವೇಷಾಡಂಬರದಿಂದ ಮೆಚ್ಚಿಸುವೆವು ಎಂಬ
ಮತಿಮೂಢರಿಗೆತ್ತಣ ಸದ್ಗತಿ ?
  ಕುಲ ಗೋತ್ರಗಳಿಂದ ಹಿರಿಯರಾದೆವು
ಎಂದು ಭ್ರಮಿಸಿ ಬಳಲುವ
ಮಲಭಾಂಡ ದೇಹಿಗಳು
ನೆಲೆಯು ಇಲ್ಲದೆ ತೊಳಲುವರು
ಜಾತಿಗಂಟಿದ ಮತಿಮೂಢರು
ಜ್ಯೋತಿರ್ಲಿಂಗ ಶಿವ ತತ್ತ್ವವನೆತ್ತ ಬಲ್ಲರು ?
ಅಜಾತಶರಣರ ನಿಲುವ
ಕೋತಿಗಳರಿಯಬಲ್ಲವೆ ?
  ಶಿವ ವಿಶ್ವೇಶ್ವರನೆಂಬ ಪರತತ್ತ್ವವಿರಲು
ಭವದ ಬಹು ಚೋದ್ಯದ ದೈವಗಳ ನಂಬಿ ನಡೆವ ಜನರಿಗೆತ್ತಣ
ಸದ್ಗತಿ?
ಕೈಲಾಸನಾಥ ವಿಶ್ವೇಶ್ವರನಲ್ಲದೆ
ಭವಹರರೆಂಬ ದೈವರುಗಳು ಮತ್ತಿಲ್ಲ ಕಾಣಿರೊ !

About The Author