ಕಲ್ಯಾಣ ಕಾವ್ಯ : ಸಚ್ಚಿದಾನಂದನ ಪಥ ಬೇರಿಹುದು : ಮುಕ್ಕಣ್ಣ ಕರಿಗಾರ

   ತೀರ್ಥ ಕ್ಷೇತ್ರಗಳೆಂದು ಬರಿದೆ
   ಸುತ್ತಿ ಬಳಲುವಿರಿ
  ವ್ಯರ್ಥದೇಹ ದಂಡಿಸುವಿರಿ
  ವ್ರತ ನಿಯಮಗಳೆಂದು.
ಸ್ವಾರ್ಥ ತೊರೆದಲ್ಲದೆ ಪರಮಾರ್ಥ ಸಿದ್ಧಿಸದು
   ಭಜನೆ ಪೂಜೆ ಜಪಗಳೆಂದು ಮತ್ತೆ
   ತಪ ಅನುಷ್ಠಾನಗಳೆಂದು ಸುಳ್ಳೆ ದಣಿವಿರಿ
ಕುಪಿತಬುದ್ಧಿಯ ತೊರೆಯದೆ ಒಲಿಯನು
ಪರಮಾತ್ಮನು ಎಂಬುದ ಅರಿಯಿರಿ
   ಪುರಾಣ ಪುಣ್ಯಕಥೆ ಶಾಸ್ತ್ರ ಪುರಾಣಗಳೆಂದು
  ಓದಿ ಓದಿ ದಣಿವಿರಿ
ಪುಸ್ತಕದೊಳಿಲ್ಲ ಪರಮಾತ್ಮನು
ಮಸ್ತಕದೊಳಿಹನು ಎಂಬುದ ಮರೆವಿರಿ
 ನೂರು ಸಾವಿರ ಶಿಷ್ಯರ ಮಾಡಿಕೊಂಡೆವೆಂದು
ಬರಿದೆ ಬೋಧಿಸಿ ಹಾದಿ ಕಾಣದಾದಿರಿ
ಸಾಧಿಸದೆ ಬರಿ ಬೋಧಿಸಿ ಕೆಡುವಿರಿ
ವಾದಿಸಿ ವಾದಿಸಿ ಹಾಳಾಗುವರು
ನಿಮ್ಮ ನೂರು ಸಾವಿರ ಸಂಖ್ಯೆಯ ಶಿಷ್ಯರು
ಗುರುವೇ ನರಕ ಸೇರಲು
ಶಿಷ್ಯರಿಗೆಲ್ಲಿ ಸ್ವರ್ಗ ಮೋಕ್ಷಗಳು?
ಭ್ರಮೆಯ ಬಳಲಿಕೆಯಲ್ಲದೆ
ಸದ್ಗತಿ ಇಲ್ಲ ಕಾಣಿರೊ !
  ಪರಿಪರಿಯ ವಿನೋದ ನಾಟಕಗಳ
ಪ್ರಪಂಚವಿದು
ಹೊಟ್ಟೆಹೊರೆವ ವೇಷಧಾರಿಗಳ ನಂಬದಿರು
ಸತ್ಯಶರಣರ ಪಥವ ಹಿಡಿದು
ಸಚ್ಚಿದಾನಂದ ಘನ ಕೈಲಾಸನಾಥ ವಿಶ್ವೇಶ್ವರನ ಹೊಂದು,ಮುಕ್ತನಾಗು.

About The Author