ಕಲ್ಯಾಣ ಕಾವ್ಯ : ತೊರೆದು ಹೋಗುವ ಮುನ್ನ ಪರಮಾರ್ಥವನ್ನರಿ : ಮುಕ್ಕಣ್ಣ ಕರಿಗಾರ

          ಮಠ ಪೀಠಗಳ ಗದ್ದುಗೆ ಸಿಂಹಾಸನಗಳಲ್ಲಿ
ಕುಳಿತು ಅಡ್ಡ ಉದ್ದ ಪಲ್ಲಕ್ಕಿಯಲ್ಲಿ ಮೆರೆದು
ಪೂಜಿಸಿಕೊಂಡು ಜನರಿಂದ 
ಹಿರಿಯನೆಂದು ಬೀಗಿದರೂ
ಕರೆಯದೆ ಬಿಡನು ಕಾಲ ನಿನ್ನನ್ನು
ಸತ್ತು ಹೋಗುವುದೆಲ್ಲಿಗೆ ಎಂಬುದರರಿವಿಲ್ಲದ
ನೀನೆತ್ತಣ ಹಿರಿಯ?
ಏನು ಓದಿ,ಯಾವ ಹುದ್ದೆ ಗದ್ದುಗೆಗಳ
ಪಡೆದೇನು ಫಲ 
ನೀನು ಪಡೆದ ಯಾವ ಪದವಿ ಹುದ್ದೆಗಳು
ನಿನ್ನನ್ನು ಸಾವಿನ ದವಡೆಯಿಂದ ಪಾರು ಮಾಡದಿರಲು?
  ವೈದ್ಯನಾಗಿ ನೂರು ಸಾವಿರ ಜನರ
ಬದುಕಿಸಿರಬಹುದು
 ಸಾಯಲೇಬೇಕು ನೀನೊಂದು ದಿನ
ವಕೀಲನಾಗಿ ನೂರಾರು ಜನ ಕಕ್ಷಿದಾರರ
ಗೆಲ್ಲಿಸಿರಬಹುದು ಕೋರ್ಟಿನಲ್ಲಿ
ಮುಂದೆ ಉತ್ತರಿಸಬೇಕು ಯಮನನ್ಯಾಯಾಲಯದಲ್ಲಿ
ಎಂಬುದ ಮರೆಯಬೇಡ.
ಕಟ್ಟಿಸಿರಬಹುದು ನೂರಾರು ಬಹುಮಹಡಿಗಳ
ಬಹುವಿನ್ಯಾಸ ವಿಚಿತ್ರಾದ್ಭುತಗಳ ಮನೆ ಮಹಲುಗಳ ಕಟ್ಟಿ
ಇಂಜನಿಯರನಾಗಿ
ಕಟ್ಟಿಸದೆ ನಿನಗಾಗಿ ಸ್ಮಶಾನದಲ್ಲೊಂದು ಮನೆಯ
ಹರಿಶ್ಚಂದ್ರ ಘಾಟಿನ ಹೆಣಸುಡುವ ಯಂತ್ರದಲ್ಲಿ
ಸುಟ್ಟು ನಿನ್ನ ಚಿತಾಭಸ್ಮ ಪಡೆವರಲ್ಲ!
  ಏನಾದರೇನಯ್ಯ ನೀನು ನಿನ್ನ ನಿಜವನರಿಯದೆ
ಇಲ್ಲಿಗೆ ಬಂದಿರುವುದು ಪರಮಾತ್ಮನ ಎಣಿಕೆ
ಇಲ್ಲಿ ನಡೆಯುವುದೆಲ್ಲ ಪರಮಾತ್ಮನ ಸಂಕಲ್ಪ
ನಿನ್ನದೇನಿದೆ ಜಂಬಕೊಚ್ಚಲು ?
ಪರಮಾತ್ಮನಿತ್ತ ಫಲ ಪದವಿಗಳ
ಪರಮಾತ್ಮನ ಸೇವೆ ಎಂದು
ಸತ್ಪಥದಿ ನಡೆದು ಉದ್ಧಾರವಾಗುವುದೆ
ಕೈಲಾಸನಾಥ ವಿಶ್ವೇಶ್ವರನ ಒಲಿಸುವ ಸೂತ್ರ.

About The Author