ಕಲ್ಯಾಣ ಕಾವ್ಯ : ಪರಮಾತ್ಮನ ಪಥದಿ ನಡೆಯುತಿರು : ಮುಕ್ಕಣ್ಣ ಕರಿಗಾರ

 ‌ಅರಮನೆಯ ಕಟ್ಟಿದರು
 ಇರಲಾಗದು ಚಿರಕಾಲ ಕಟ್ಟಿಸಿದರಮನೆಯಲ್ಲಿ
 ಹೊರಹೋಗಲು ಉಸಿರು
 ಮೆರವಣಿಗೆ ಮಾಡಬಹುದಾದರೂ
ಬರಿಹೆಣವಾದ ನಿನ್ನ ಇಟ್ಟುಕೊಳ್ಳರು ಮನೆಯಲ್ಲಿ
ನೀನು ಕಟ್ಟಿಸಿದ ಅರಮನೆ ಮತ್ತಾರದೊ ನೆಲೆ !
 ಶತಕೋಟಿಗಳ ಸಂಪಾದಿಸಿದರು
ಹಿತವನೆಂದು ನಿನ್ನ ಹೆಣವ ಇಟ್ಟು ಪೂಜಿಸರು ಮನೆಯಲ್ಲಿ
ಹೆಚ್ಚೆಂದರೆ ಪತ್ರಿಕೆಗಳ ಮುಖಪುಟಗಳಲ್ಲಿ
ಲಕ್ಷಗಳ ಜಾಹೀರಾತು ಪ್ರಕಟಿಸುವರಲ್ಲದೆ
  ಆಳರಸನಾಗಿ ರಾಜ್ಯ ದೇಶಗಳ ಆಳಿದರೂ
 ಶ್ರದ್ಧಾಂಜಲಿಯನರ್ಪಿಸಿ ಮರೆವರಲ್ಲದೆ
 ಬರರು ನಿನ್ನ ಇಷ್ಟದ ಪ್ರಜಾಜನತೆ
ನಿನ್ನೊಂದಿಗೆ ನೀ ಸತ್ತಬಳಿಕ
ನನ್ನವರು ಎಂದು ನೀನು ಭಾವಿಸಿದ
ನಿನ್ನ ಮಡದಿ ಮಕ್ಕಳೇ ಸಾಯಲು ನೀನು
ಬರದಿರಲು ನಿನ್ನೊಂದಿಗೆ
ಬರುವರೇನು ಅನ್ಯರು ?
ಈ ಸತ್ಯ ತಿಳಿಯಬೇಕು ನೀನು
ನಿನ್ನ ಬದುಕು ನಿನ್ನೊಬ್ಬನದು
ನೀನೊಬ್ಬನೇ ಹೊರಬೇಕು ಗೈದ ಕರ್ಮಗಳ ಹೊಣೆಯನ್ನು.
ನಿನ್ನ ಧರ್ಮ ಕರ್ಮಗಳ ಫಲವಷ್ಟೆ
ಬರುತ್ತದೆ ನೀನು ಸತ್ತಾಗ
ಸತ್ತಾಗ ಅತ್ತು ಮರೆಯುವ
ಮಡದಿ ಮಕ್ಕಳು,ಬಂಧು ಬಾಂಧವರು
ನೆಂಟರಿಷ್ಟರು ನಿಜಬಂಧುಗಳಲ್ಲ
ಪರಮಾತ್ಮನೊಬ್ಬನ ಹೊರತು
ನಿಜಬಂಧುಗಳಿಲ್ಲ ನಿನ್ನವರೆಂಬುವವರು
ಮರೆತು ಪರಮಾತ್ಮನನು ಹಾಳಾಗದೆ
ನೆರೆನಂಬಿ  ಸೇವಿಸಿ ಕೈಲಾಸನಾಥ ವಿಶ್ವೇಶ್ವರನನ್ನು ಉದ್ಧಾರವಾಗು
ಇದಲ್ಲದೆ ಮತ್ತೊಂದು ಪರಮಾರ್ಥವಿಲ್ಲ.

About The Author