ವಿಶ್ವ ಮಾನವತಾವಾದಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ 66ನೇ ಮಹಾಪರಿ ನಿರ್ವಾಣ ದಿನ ಭಕ್ತಿ ಪೂರ್ವಕ ನಮನ

ಬಸವರಾಜ ಕರೇಗಾರ

ವಡಗೇರಾ : 12ನೇ ಶತಮಾನದಲ್ಲಿ ಬಸವಣ್ಣನವರು ಶೋಷಿತ ವರ್ಗದವರ ಏಳಿಗೆಗಾಗಿ ಜನ್ಮ ತಾಳಿ ಶೋಷಿತರ ಪರ ಭಕ್ತಿ ಮಾರ್ಗದ ಚಳುವಳಿಯನ್ನು ಆರಂಭಿಸಿ ಹೋರಾಟ ಮಾಡಿದರು.೨0ನೇ ಶತಮಾನದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ ರವರು ಶೋಷಿತ ವರ್ಗದ ಪರ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅಂತಹ ದಿನವನ್ನು ಇಂದು ನಾವು ಮಹಾ ಪರಿನಿರ್ವಾಣ ದಿನವನ್ನಾಗಿ ಆಚರಿಸುತ್ತಿದ್ದೇವೆ.

ಬಾಬಾ ಸಾಹೇಬ ಅಂಬೇಡ್ಕರರು
ಹುಟ್ಟದಿದ್ದರೆ ದೀನದಲಿತರ ಅಲ್ಪಸಂಖ್ಯಾತರ ಹಿಂದುಳಿದ ವರ್ಗದವರ ಮಹಿಳೆಯರ ಸ್ಥಿತಿ ಹೇಗಿರಬೇಡ ಎಂದು ಸ್ವಲ್ಪ ಅಂತರಂಗದಲ್ಲಿ ನಾವು ವಿಚಾರಿಸಿದಾಗ ಒಂದು ಕ್ಷಣ ಎದೆ ಬಡಿತವೆ ನಿಂತು ಹೋಗುತ್ತದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಒಂದು ಹಂತದಲ್ಲಿ ಶೋಷಿತ ವರ್ಗವನ್ನು ದೂರವಿಡಿ ಎಂದಿದ್ದರು.ಕೇವಲ ಒಬ್ಬಂಟಿಗನಾಗಿ ಹೋರಾಟ ಮಾಡಿ ಶೋಷಿತರ ಪರ ದನಿಯೆತ್ತಿದ ಮಹಾನ್ ನಾಯಕ ಡಾ.ಬಾಬಾ ಸಾಹೇಬ ಅಂಬೇಡ್ಕರ್.

ಇಂದು ನಾವು ನಮ್ಮ ದೇಶದಲ್ಲಿ ಮತದಾನದ ಹಕ್ಕು, ಆಸ್ತಿ ಖರೀದಿಸುವ ಹಕ್ಕು, ಓಡಾಡುವುದು, ಸ್ವತಂತ್ರವಾಗಿ ಮಾತನಾಡುವುದು, ಚುನಾವಣೆಯಲ್ಲಿ ನಿಲ್ಲುವುದು, ಸ್ತ್ರೀಯರಿಗೆ ಸ್ವಾತಂತ್ರ್ಯದ ಹಕ್ಕು, ಇವೆಲ್ಲವೂ ಬಾಬಾ ಸಾಹೇಬರು ಸಂವಿಧಾನದ ಮೂಲಕ ನಮಗೆ ಹೋರಾಟ ಮಾಡಿ ದೊರಕಿಸಿಕೊಟ್ಟ ಮಹತ್ವದ ಕೊಡುಗೆಗಳು.

ಬಾಬಾ ಸಾಹೇಬ್ ಅಂಬೇಡ್ಕರ್ ಒಬ್ಬಂಟಿಯಾಗಿ ಇಷ್ಟೊಂದು ಹೋರಾಟ ಮಾಡಿ ಇಷ್ಟೆಲ್ಲ ನಮಗೆ ಶೋಷಿತರ ಹಕ್ಕುಗಳನ್ನು ಕೊಟ್ಟು ತಮ್ಮ ಜೀವವನ್ನೇ ಬದಿಗೊತ್ತಿದ್ದಾರೆ. ಬಾಬಾ ಸಾಹೇಬರು ಪ್ರಾಣ ಬಿಡುವ ಕಾಲಕ್ಕೂ ಶೋಷಿತರ ಬಗ್ಗೆ ಚಿಂತಿಸುತ್ತಿದ್ದರು. ತನ್ನ ಕುಟುಂಬಕ್ಕಾಗಿ ತನ್ನ ಸ್ವಾರ್ಥಕ್ಕಾಗಿ ಏನು ಮಾಡಿಕೊಳ್ಳಲಿಲ್ಲ.ಎಲ್ಲ ಶೋಷಿತರ ಪರ ಶೋಷಿತರ ಜನರಿಗಾಗಿ ವಿದ್ಯಾವಂತರಾಗಿ ಅವರ ಪರ ಹೋರಾಟ ಮಾಡಿ ಸಂವಿಧಾನವನ್ನೇ ನಮ್ಮ ದೇಶಕ್ಕೆ ಅರ್ಪಿಸಿದರು. ಶೋಷಿತರಿಗೆ ನ್ಯಾಯ ಕೊಡಿ ಎಂದು ಬೇಡಿಕೊಂಡಿದ್ದರು. ತಮಗಾಗಿ ಏನು ಕೇಳಲಿಲ್ಲ. ಶೋಷಿತ ವರ್ಗಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಿದ್ದರು. ಅಂತಹ ಮಹಾನ ವ್ಯಕ್ತಿಯು ಪ್ರಾಣ ಬಿಟ್ಟಾಗ ದೇಶದ ರಾಜಧಾನಿ ದೆಹಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶ ಕೊಡಲಿಲ್ಲ. ಎಂತಹ ದುರ್ದೈವ ನಮ್ಮದು. ದೆಹಲಿಯಿಂದ ದಾದರ್ ವರೆಗೆ ದೇಹ ಸ್ಥಳಾಂತರ ಮಾಡಬೇಕಾದ ಅನಿವಾರ್ಯತೆ ಬಂದೊದಗಿತು. ಆಡಳಿತ ಮಾಡುವವರು ಎಂತ ಅವಿವೇಕಿಗಳಾಗಿರಬೇಕು. ನಾವೇ ಯೋಚನೆ ಮಾಡಬೇಕಿದೆ. ದೆಹಲಿಯಲ್ಲಿ ದಲಿತರು ಎನ್ನುವ ಕಾರಣಕ್ಕೆ ನಮಗೆ ಸ್ಥಳ ಕೊಡಲಿಲ್ಲ. ಇದೆಂತಹ ದುರ್ದೈವ.ದೇಶಕ್ಕೆ ಸಂವಿಧಾನ ಕೊಟ್ಟ ಒಬ್ಬ ಮಹಾನ ಪುರುಷನ ಅಂತ್ಯಸಂಸ್ಕಾರಕ್ಕೆ ಸ್ಥಳ ಸಿಗಲಿಲ್ಲವೆಂದರೆ ನಾವು ಇನ್ನೆಷ್ಟು ದಿನ ಜಾತಿಯಿಂದ ಬಳಲಬೇಕಿದೆ ಎಂದು ತಿಳಿಯುತ್ತಿಲ್ಲ.

ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಬಾಬಾ ಸಾಹೇಬರನ್ನು ಕೆಲವೇ ಸಮುದಾಯಕ್ಕೆ ಸೀಮಿತ ಮಾಡಿರುವುದು ಅತಿ ದೊಡ್ಡ ದುರ್ಧೈವ.ಅವರ ಹೆಸರೇಳಿಕೊಂಡು ಹಲವಾರು ನಾಯಕರು ಅಧಿಕಾರಕ್ಕೋಸ್ಕರ ಇನ್ನೊಬ್ಬರನ್ನು ತೆಗಳುತ್ತಾರೆ. ಆದರೆ ಅವರ ಸಿದ್ಧಾಂತಗಳನ್ನು ಪಾಲಿಸುತ್ತಿಲ್ಲ. ರಾಜಕೀಯವಾಗಿ ಅಧಿಕಾರ ಬೇಕೆಂದರೆ ಹೊರತು ಬಾಬಾ ಸಾಹೇಬರ ತತ್ವ ಸಿದ್ಧಾಂತಗಳು ಬೇಕಿಲ್ಲ.

ನಾವೆಂದು ಎಚ್ಚರವಾಗಿ ಡಾ. ಬಾಬಾ ಸಾಹೇಬರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿವೆಯೋ ತಿಳಿಯುತ್ತಿಲ್ಲ. ಅವರ ಬೆಳಕು ನಮಗೆ ದೀಪವಾಗಬೇಕಿದೆ. ಕೇವಲ ಬಾಬಾ ಸಾಹೇಬರು ಮಾಡಿದ ಕೆಲಸ ಕಾರ್ಯಗಳನ್ನು ಹೇಳಿಕೊಳ್ಳುತ್ತೇವೆಯೆ ಹೊರತು ಅವರು ಹಾಕಿದ ತತ್ವ ಸಿದ್ಧಾಂತಗಳು, ಮಾರ್ಗಗಳು, ಶೋಷಿತರ ಬಗ್ಗೆ ಅವರಿಗಿರುವ ಕಾಳಜಿಯ ಬಗ್ಗೆ ನಾವು ಇನ್ನೂ ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ. ಈ ಜಾತಿಯತೆ ಯಾವಾಗ ನಮ್ಮ ದೇಶದಿಂದ ಬಿಟ್ಟು ಹೋಗುತ್ತದೆಯೋ ತಿಳಿಯುತ್ತಿಲ್ಲ. ಈ ಭೂಮಿ ಅಥವಾ ಈ ದೇಶ ಪ್ರಳಯವಾದಾಗ ಮಾತ್ರ ಈ ಜಾತೀಯತೆ ಹೋಗುತ್ತದೆ ಎನ್ನುವ ಭಯ ಶೋಷಿತ ವರ್ಗದವರಿಗೆ ಕಾಡುತ್ತಿದೆ.

About The Author