ಮೂರನೇ ಕಣ್ಣು : ಹುಟ್ಟಿ,ಸತ್ತವರು ಪರಮಾತ್ಮರಲ್ಲ:ಮುಕ್ಕಣ್ಣ ಕರಿಗಾರ

ದೇವರು,ಆಧ್ಯಾತ್ಮಗಳ ವಿಷಯದಲ್ಲಿ ಎರಡು ಅತಿರೇಕಗಳಿವೆ.ಒಂದು ಮುಗ್ಧ ಜನಕೋಟಿಯು’ ಬಲ್ಲವರು’ ಎಂದು ಸ್ವಯಂ ಘೋಷಿಸಿಕೊಂಡವರ ಅರ್ಥಹೀನ ನಂಬಿಕೆ,ನಡುವಳಿಕೆಗಳನ್ನೇ ದೇವಮಾರ್ಗವೆಂದು ಅನುಸರಿಸುವುದಾದರೆ ಮತ್ತೊಂದು ದೇವರು- ಧರ್ಮಗಳ ವಿಷಯದಲ್ಲಿ ಹಕ್ಕು , ಅಧಿಪತ್ಯಸ್ಥಾಪಿಸಿದ ಜನರು ತಮ್ಮ ಭಾವನೆ- ಭ್ರಮೆಗಳನ್ನೇ ಜನಕೋಟಿಯ ಮೇಲೆ ಹೇರುವ ವ್ಯವಸ್ಥಿತ ಹುನ್ನಾರ.ಮುಗ್ಧ ಜನರಿಗೆ ದೇವರು,ಧರ್ಮಗಳ ಬಗ್ಗೆ ಸ್ಪಷ್ಟ ತಿಳಿವಳಿಕೆಯ ಕೊರತೆ ಇರುವುದರಿಂದ ಅವರು ಯಾರನ್ನಾದರೂ ದೇವರು ಎಂದು ಭಾವಿಸಬಲ್ಲರು,ಪರಮಾತ್ಮ ಎಂದು ಪೂಜಿಸಬಲ್ಲರು.ಮುಗ್ಧ ಜನರ ಈ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡ ಬುದ್ಧಿವಂತರು ತಮಗೆ ಬೇಕಾದ ವ್ಯಕ್ತಿಗಳನ್ನು ದೇವರು,ಪರಮಾತ್ಮ ಎಂದು ಘೋಷಿಸಿದ್ದಾರೆ.ಜನತೆ ತಮ್ಮ ಅಜ್ಞಾನದಿಂದ ಪಟ್ಟಭದ್ರರ ಸ್ವಾರ್ಥಲಾಲಸೆಯನ್ನು ಪೋಷಿಸುತ್ತಿದ್ದಾರೆ.ಪಟ್ಟಭದ್ರರ ವಿಕೃತ ನಡೆ ಒಂದಕ್ಕೆ ಇತ್ತೀಚೆಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದ ಪ್ರಸಂಗವು ವರದಿಯಾಗಿದೆ.

ಧಾರ್ಮಿಕ ವ್ಯಕ್ತಿಯಾಗಿದ್ದ ಶ್ರೀ ಶ್ರೀ ಠಾಕೂರ್ ಅನುಕೂಲ್ ಚಂದ್ರ ಅವರನ್ನು ‘ ಪರಮಾತ್ಮ’ ಎಂದು ಘೋಷಿಸಲು ಉಪೇಂದ್ರನಾಥ ದಲಾಯಿ ಎನ್ನುವವರು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಠಾಕೂರ್ ಅನುಕೂಲ್ ಚಂದ್ರ ಅವರು ಸೆಪ್ಟೆಂಬರ್ 14,1888 ರಲ್ಲಿ ಬಾಂಗ್ಲಾ ದೇಶದ ಪಬ್ನಾದಲ್ಲಿ ಜನಿಸಿದ್ದರು.ನ್ಯಾಯಮೂರ್ತಿಗಳಾದ ಎಂ .ಆರ್ .ಶಾ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ಪೀಠವು ‘ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ’ ವೆಂದು ಅರ್ಜಿಯನ್ನು ವಜಾಮಾಡಿದ್ದಲ್ಲದೆ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.’ ಇದೊಂದು ಪ್ರಚಾರ ಪಡೆಯಲು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ’ ಎಂದಿರುವ ನ್ಯಾಯಪೀಠವು ‘ ಭಾರತ ಜಾತ್ಯಾತೀತ ರಾಷ್ಟ್ರ.ಇಲ್ಲಿ ಪ್ರತಿಯೊಬ್ಬತರಿಗೂ ಅವರ ಧರ್ಮದ ಮೇಲೆ ಹಕ್ಕಿದೆ…ಜಾತ್ಯಾತೀತರಾಷ್ಟ್ರ ಭಾರತದಲ್ಲಿ ಇವರನ್ನೇ ಪೂಜಿಸಿ ಎಂದು ನಾಗರಿಕರಿಗೆ ಹೇಳಲಾಗದು’ ಎಂದಿರುವ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಿ.ಟಿ.ರವಿಕುಮಾರ ಅವರ ನಿರ್ಣಯಾತ್ಮಕ ಮಾತುಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ —” ನಿಮಗೇ ಬೇಕಾದರೆ ‘ ಪರಮಾತ್ಮ’ ಎಂದು ಭಾವಿಸಿಕೊಳ್ಳಿ.ಇನ್ನೊಬ್ಬರ ಮೇಲೆ ಅದನ್ನು ಹೇರುವುದು ಏಕೆ ?”

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಕೆಲವರ ಪ್ರತಿಷ್ಠೆಯ ಧರ್ಮಾಧಾರಿತ ವಿಷಯಗಳನ್ನು ಜನತೆ ಸುಪ್ರೀಂಕೋರ್ಟಿನ ಅಭಿಪ್ರಾಯದಲ್ಲಿ ಅರ್ಥೈಸಿಕೊಳ್ಳಬೇಕು.ಜಾತ್ಯಾತೀತ ರಾಷ್ಟ್ರವಾದ ಭಾರತಕ್ಕೆ ಒಂದು ನಿಶ್ಚಿತ ರಾಷ್ಟ್ರೀಯ ಧರ್ಮ ಇಲ್ಲ,ಒಂದು ರಾಷ್ಟ್ರೀಯ ಧರ್ಮಗ್ರಂಥ ಇಲ್ಲ.ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವೇ ಭಾರತದ ಏಕಮಾತ್ರ ರಾಷ್ಟ್ರೀಯ ಗ್ರಂಥ.ಅದನ್ನು ಒಪ್ಪದ ಕೆಲವರು ತಮ್ಮ ಮತನಿಷ್ಠೆ ಮೆರೆಯಲು ತಾವು ಪ್ರಮಾಣ ಎಂದು ಭಾವಿಸಿದ ಧಾರ್ಮಿಕ ಕೃತಿ ಒಂದನ್ನು ಭಾರತದ ಧರ್ಮಗ್ರಂಥ ಎಂದು ಬಿಂಬಿಸುತ್ತಿದ್ದಾರೆ.ಲಕ್ಷಾಂತರ ವರ್ಷಗಳಿಂದ ಪ್ರವಹಿಸುತ್ತ ಬಂದಿರುವ ಭಾರತೀಯ ಸಂಸ್ಕೃತಿಯು ವೇದಕಾಲದಿಂದ ಬಹುತ್ವ ಮತ್ತು ಬಹುಸಂಸ್ಕೃತಿಗಳ ಪೋಷಕ ಭೂಮಿ ಎನ್ನುವುದನ್ನು ಮರೆಯಲಾಗದು.ಭಾರತದ ಅತ್ಯಂತ ಪುರಾತನ ಇತಿಹಾಸ ಪ್ರಾರಂಭವಾಗುವುದು ವೇದಗಳ ಕಾಲದಿಂದ.ವೇದಕಾಲದ ಋಷಿಗಳು ಅಗ್ನಿ,ಆದಿತ್ಯ,ರುದ್ರ,ಇಂದ್ರ,ಮರುತ್ ದೇವತೆಗಳು,ಸೋಮ ಇವರೇ ಮೊದಲಾದ ದೇವತೆಗಳನ್ನು ಪೂಜಿಸುತ್ತಿದ್ದರು. ದುರ್ಗಾ,ಉಷಶ್,ವಾಗಾಂಭೃಣಿ ಮೊದಲಾದ ದೇವಿಯರ ಆರಾಧನೆಯನ್ನು ಮಾಡುತ್ತಿದ್ದರು.ವೇದಕಾಲದ ಋಷಿಗಳು ಎಲ್ಲ ದೇವತೆಗಳಲ್ಲಿ ಸಮನ್ವಯತತ್ತ್ವವನ್ನು ಅರಸಿದ್ದರು;ಸಂಘರ್ಷಭಾವವನ್ನಲ್ಲ.’ ವಸುದೈವ ಕುಟುಂಬಕಂ’ ಅಂದರೆ ವಸುಧೆಯೆಲ್ಲವೂ ಒಂದೇ‌ ಕುಟುಂಬ ಎನ್ನುವ ಸಮನ್ವಯ ಸಂದೇಶವು ಋಗ್ವೇದದಲ್ಲಿಯೇ ಇದೆ.’ ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಎನ್ನುವ ವಾಕ್ಯವೂ ಋಷಿಗಳ ದರ್ಶನವೇ ಎಂದ ಬಳಿಕ ‘ವೈದಿಕ ಸಂಸ್ಕೃತಿ’ ಭಾರತದ ಮೂಲಸಂಸ್ಕೃತಿ ಎಂದು ಉದ್ಘೋಷಿಸಿ ‘ ವೇದದಲ್ಲಿ ಭಾರತದ ಮೂಲವನ್ನರಸುವವರು ತಮ್ಮ ಇಷ್ಟದ ಆಧುನಿಕ ದೇವರುಗಳನ್ನು ಪರಮಾತ್ಮ ಎಂದು ಘೋಷಿಸುವುದು ದುರ್ಬುದ್ಧಿಯಲ್ಲವೆ ? ಅಂತಹದೆ ದುರ್ಬುದ್ಧಿಯ ವ್ಯಕ್ತಿ ಉಪೇಂದ್ರನಾಥ ದಲಾಯಿ ಎನ್ನುವವರು.

ಸಂವಿಧಾನದ ವಿಧಿ,ಆಶಯಗಳಂತೆ ನಡೆಯುತ್ತಿರುವ ಭಾರತದಲ್ಲಿ ಕೆಲವರು ತಮ್ಮ ಸ್ವಾರ್ಥ,ದುರ್ಬುದ್ಧಿಗಳನ್ನು ಪ್ರದರ್ಶಿಸುತ್ತಿರುವುದು ವಿಷಾದದ,ವಿನೋದದ ಸಂಗತಿ.ಆಧ್ಯಾತ್ಮಿಕ ಜ್ಞಾನ ಲವಲೇಶವೂ ಇಲ್ಲದ ಮತಾಂಧರ ಧಾರ್ಮಿಕ ನಂಬಿಕೆಗಳನ್ನು ಪುರಸ್ಕರಿಸಲಾಗದು.ಭಾರತವು ಮೂಲತಃ ಜನಪದರ ನಾಡು.ದಸ್ಯುಗಳು,ಶೂದ್ರರು,ದ್ರಾವಿಡರು ಎಂದೆಲ್ಲ ಕರೆಯಲ್ಪಡುತ್ತಿದ್ದ ಜನಪದರು ಈ ದೇಶದ ಮೂಲನಿವಾಸಿಗಳು.ಶಿವನು ಭಾರತೀಯರ ಮೂಲದೇವರು; ಶೈವ ಸಂಸ್ಕೃತಿಯು ಭಾರತದ ಮೂಲ ಸಂಸ್ಕೃತಿ.ಇಲ್ಲಿ ಮಹಾನ್ ವ್ಯಕ್ತಿಗಳಾಗಿರುವ ಬುದ್ಧ,ರಾಮ,ಕೃಷ್ಣರೆಲ್ಲರೂ ಶಿವನನ್ನೇ ಪೂಜಿಸಿದ ಶಿವ ವಿಭೂತಿಗಳು.ಅವರ ಅನುಯಾಯಿಗಳು ತಮ್ಮ ಧಾರ್ಮಿಕ ಮುಖಂಡರುಗಳ ಹೆಸರಿನಲ್ಲಿ ಪ್ರತ್ಯೇಕ ಮತಧರ್ಮಗಳನ್ನು ಸ್ಥಾಪಿಸಿರಬಹುದಾದರೂ ಎಲ್ಲರ ಮೂಲದೇವರು,ಪರಮಾತ್ಮ ಶಿವನೇ ಎಂಬುದು ಮಹತ್ವದ್ದು.ಬುದ್ಧ ಸಮನ್ವಯ ಸಂಸ್ಕೃತಿಯ ಮಹಾಪುರುಷ.ಎಲ್ಲರ ಭಾವನೆಗಳನ್ನು ಗೌರವಿಸುತ್ತಿದ್ದ ವಿಭೂತಿ ಪುರುಷ.ಬುದ್ಧ ದೇವರು,ಆತ್ಮದ ಬಗ್ಗೆ ತನ್ನನ್ನು ಯಾರಾದರೂ ಪ್ರಶ್ನಿಸಿದಾಗ ಮೌನಿಯಾಗುತ್ತಿದ್ದ.ಅದರರ್ಥ ಬುದ್ಧ ದೇವರು,ಆತ್ಮವನ್ನು ನಿರಾಕರಿಸಿದ ಎಂದಲ್ಲ.ಶಿವನ ಲೀಲಾವತಾರವಾದ ದಕ್ಷಿಣಾಮೂರ್ತಿಯು ಸನಕ,ಸಾನಂದರಾದಿ ನಾಲ್ವರು ಋಷಿಗಳಿಗೆ ಮೌನದ ಮೂಲಕವೇ ಪರತತ್ತ್ವವನ್ನು ಉಪದೇಶ ಮಾಡಿದನೆಂಬುದನ್ನು ಸ್ಮರಿಸಿಕೊಂಡರೆ ಬುದ್ಧನ ಮೌನದ ಕಾರಣ ಅರ್ಥವಾಗುತ್ತದೆ.ಬುದ್ಧನ ಮೌನವು ದೇವರು,ಆತ್ಮ ಮತ್ತು ಪರಮಾತ್ಮ ಎನ್ನುವ ಸಂಗತಿಗಳು ಸ್ವಂತ ಬೆಳಕಿನಲ್ಲಿ ಕಂಡುಕೊಳ್ಳಬೇಕಾದ ಆಧ್ಯಾತ್ಮಿಕ ಸಂಗತಿಗಳೇ ಹೊರತು ಅವರಿವರ ಮಾತು,ಉಪದೇಶಗಳಿಂದಲ್ಲ ಎನ್ನುವ ದಿವ್ಯ ಉಪದೇಶವಾಗಿತ್ತು,ಮಹಾತತ್ತ್ವವಾಗಿತ್ತು.ವಿಪರೀತಮತಿಗಳು ಬುದ್ಧನ ಮೌನವನ್ನು ಅರ್ಥಮಾಡಿಕೊಳ್ಳದೆ ಬುದ್ಧನಿಗೆ ನಾಸ್ತಿಕ ಪಟ್ಟ ಕಟ್ಟಿದರು.ಬುದ್ಧ ನಾಸ್ತಿಕನಾಗಿರಲಿಲ್ಲ,ಆಸ್ತಿಕನಾಗಿದ್ದ; ಆದರೆ ತನ್ನ ಧಾರ್ಮಿಕ ನಂಬಿಕೆ,ನಿಷ್ಠೆಗಳನ್ನು ಇತರರ ಮೇಲೆ ಹೇರದೆ ಸರ್ವರ ಕಲ್ಯಾಣವನ್ನೇ ಸಾಧಿಸಬಯಸಿದ್ದ ಸಮಷ್ಟಿ ಹಿತಚಿಂತಕನಾಗಿದ್ದ.ಈ ಕಾರಣದಿಂದ ಬುದ್ಧ ಯಾವುದೇ ದೇವರು,ಆತ್ಮ,ಪರಮಾತ್ಮನ ಬಗ್ಗೆ ಮಾತನಾಡದೆ ಉತ್ತಮ ಜೀವನ ನಡೆಯಿಸಿ ಎಂದು ಉಪದೇಶಿಸುತ್ತಿದ್ದ.ನಂತರದ ದಿನಗಳಲ್ಲಿ ಬುದ್ಧನೂ ದೇವರಾದ,ರಾಮ,ಕೃಷ್ಣರೂ ದೇವರಾದರು,ವಿಷ್ಣುವಿನ ಅವತಾರಿಗಳಾದರು.ಜಾತ್ಯಾತೀತ ಭಾರತದಲ್ಲಿ ಪ್ರಜೆಗಳು ತಮಗಿಷ್ಟಬಂದ ದೇವರನ್ನು ಪೂಜಿಸುವ ಅಧಿಕಾರ ಹೊಂದಿದ್ದಾರೆ; ಆದರೆ ತಮ್ಮ ಇಷ್ಟ- ನಿಷ್ಠೆಗಳೇ ಪರಮಪ್ರಮಾಣ,ಎಲ್ಲರೂ ಅದನ್ನು ಅನುಸರಿಸಬೇಕು ಎಂದು ಹೇಳುವಂತಿಲ್ಲ.ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವ ನಮ್ಮ ಸಂವಿಧಾನವು ಯಾರೊಬ್ಬರ ಧಾರ್ಮಿಕ ಭಾವನೆಗಳನ್ನು ಇತರರ ಮೇಲೆ ಬಲವಂತವಾಗಿ ಹೇರುವುದನ್ನು ನಿರ್ಬಂಧಿಸುತ್ತದೆ.

‌ದೇವರು,ಪರಮಾತ್ಮ ಎನ್ನುವುದು ಜನಕೋಟಿಯ ಸಮಷ್ಟಿಯ ನಂಬಿಕೆ,ಆರಾಧನೆಗಳಿಂದ ಪುಷ್ಟಿಕೊಳ್ಳುವ ಧಾರ್ಮಿಕ ಸಂಗತಿಯೇ ಹೊರತು ಜಾಹೀರಾತಿನಿಂದಾಗಲಿ ಅಥವಾ ರಾಜಕಾರಣಿಗಳು,ಪಟ್ಟಭದ್ರಹಿತಾಸಕ್ತಿಯ ಸಂಘಟನೆಗಳ ಉದ್ಘೋಷಗಳಿಂದಾಗಲಿ ನಿರ್ಣಯಿಸಲು ಸಾಧ್ಯವಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ ಸುಪ್ರೀಂಕೋರ್ಟ್ ಉಪೇಂದ್ರನಾಥ ದಲಾಯಿ ಅವರ ಅರ್ಜಿಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ ಎಂದು ವಜಾಗೊಳಿಸುವ ಮೂಲಕ.

‌ ೦೬.೧೨.೨೦೨೨

About The Author