ಮಹಾಶೈವ ಮಾರ್ಗ : ಮಹಾಕಾಳಿ ತತ್ತ್ವ ದರ್ಶನ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ಶ್ರೀ ಕ್ಷೇತ್ರ ಕೈಲಾಸದಲ್ಲಿ ಇದೇ ಡಿಸೆಂಬರ್ ೨ ರ ಶುಕ್ರವಾರದಂದು ‘ ಮಹಾಕಾಳಿ ಮೂರ್ತಿ’ ಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರನಾದ ವಿಶ್ವೇಶ್ವರ ಶಿವನು ದ್ವಾದಶ ಜ್ಯೋತಿರ್ಲಿಂಗಾತ್ಮಕ ಪರಶಿವನಾಗಿದ್ದರೆ ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯು ಅಷ್ಟಾದಶ ಪೀಠಸ್ಥಶಕ್ತಿಸಮೇತ ಸರ್ವಶಕ್ತಿ ಸಮನ್ವಿತೆಯಾಗಿ ಪ್ರಕಟಗೊಂಡಿದ್ದಾಳೆ.ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತಿಯರೆಂಬ ಮೂರು ಮುಖ್ಯಶಕ್ತಿ ತತ್ತ್ವಗಳ ಮೂರ್ತಿ ರೂಪದಿ ‘ ದುರ್ಗಾಸಪ್ತಶತಿ’ ಪಠಣ- ಪಾರಾಯಣದಿಂದ ನಿತ್ಯಪೂಜೆಗೊಳ್ಳುತ್ತಿರುವ ವಿಶ್ವೇಶ್ವರಿ ದುರ್ಗಾದೇವಿಯು ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರ ರೂಪದಲ್ಲಿದ್ದು ಭಕ್ತರ ಇಷ್ಟಕಾಮಾರ್ಥಗಳನ್ನಿತ್ತು ಪೊರೆಯುತ್ತಿದ್ದಾಳೆ.ತಾನು ತ್ರಿಗುಣಾತ್ಮಿಕೆಯಾಗಿ ಮಹಾಶೈವ ಧರ್ಮಪೀಠದಲ್ಲಿ ಪ್ರಕಟಗೊಂಡ ಕುರುಹಿಗಾಗಿ ಈಗ ಮಹಾಕಾಳಿಯ ಪ್ರತ್ಯೇಕ ರೂಪದಲ್ಲಿ ತನ್ನನ್ನು ಭಜಿಸುವವರನ್ನು ಪೊರೆಯಲು ಪ್ರಕಟಗೊಂಡಿದ್ದಾಳೆ.ಮಹಾಶೈವ ಧರ್ಮಪೀಠದ ಭಕ್ತರುಗಳನ್ನೊಳಗೊಂಡಂತೆ ಕಾಳಿ ಉಪಾಸಕರ ಸಾಧನಾಸಕ್ತಿಯನ್ನು ಸ್ಫೂರ್ತಿಗೊಳಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

‌ಶಿವ ಶಕ್ತಿಯರು ಪರಸ್ಪರ ಅಭಿನ್ನರು.ಶಿವನನ್ನು ಬಿಟ್ಟು ಶಕ್ತಿಯಿಲ್ಲ,ಶಕ್ತಿಯನ್ನು ಬಿಟ್ಟು ಶಿವನಿಲ್ಲ.ಶಿವ ಇದ್ದಲ್ಲಿ ಶಕ್ತಿ ಇರುತ್ತಾಳೆ,ಶಕ್ತಿ ಇದ್ದಲ್ಲಿಗೆ ಶಿವ ಬರುತ್ತಾನೆ.ಇದೇ ಶಿವಶಕ್ತಿಯೋಗ,ಶಿವಶಕ್ತಿ ಸಮನ್ವಯ ತತ್ತ್ವ.ಜಾಗ್ರತ ಶೈವ ಕ್ಷೇತ್ರಗಳಲ್ಲಿ ಶಕ್ತಿಯು ಒಂದೊಂದು ರೂಪದಲ್ಲಿ ಪ್ರಕಟಗೊಂಡಿದ್ದಾಳೆ.ಶಿವನ ದ್ವಾದಶಲಿಂಗಕ್ಷೇತ್ರಗಳಲ್ಲಿ ಒಂದೊಂದು ರೂಪದಲ್ಲಿ ಶಕ್ತಿಯು ಪ್ರಕಟಗೊಂಡಿದ್ದರೆ ಶಕ್ತಿಯ ಅಷ್ಟಾದಶ ಶಕ್ತಿಪೀಠಗಳಲ್ಲಿ ಪರಶಿವನು ಬೇರೆ ಬೇರೆ ನಾಮ- ರೂಪಗಳಿಂದ ಪೂಜೆಗೊಳ್ಳುತ್ತಿದ್ದಾನೆ.ಕಾಶೀಕ್ಷೇತ್ರದಲ್ಲಿ ಪರಶಿವನು ವಿಶ್ವೇಶ್ವರನ ರೂಪದಲ್ಲಿ ಪ್ರಕಟಗೊಂಡಿದ್ದರೆ ಪರಶಿವೆಯು ವಿಶಾಲಾಕ್ಷಿ ರೂಪದಲ್ಲಿ ನೆಲೆಗೊಂಡಿದ್ದಾಳೆ.ಶ್ರೀಶೈಲದಲ್ಲಿ ಪರಶಿವನು ಮಲ್ಲಿಕಾರ್ಜುನನೆಂಬ ಮಹಾಲಿಂಗ ರೂಪದಲ್ಲಿ ಪ್ರಕಟಗೊಂಡಿದ್ದರೆ ಪರಾಶಕ್ತಿಯು ಭ್ರಮರಾಂಬಾ ರೂಪದಲ್ಲಿ ವ್ಯಕ್ತಗೊಂಡಿದ್ದಾಳೆ.ಮತ್ತೊಂದು ಪ್ರಸಿದ್ಧ ಜ್ಯೋತಿರ್ಲಿಂಗಕ್ಷೇತ್ರ ಉಜ್ಜಯಿನಿಯಲ್ಲಿ ಪರಶಿವನು ಮಹಾಕಾಲನ ರೂಪದಲ್ಲಿ ಲೋಕೋದ್ಧಾರದ ಲೀಲೆ ಮರೆದಿದ್ದರೆ ಪರಬ್ರಹ್ಮೆಯು ಮಹಾಕಾಲಿಯ ರೂಪವನ್ನು ಧರಿಸಿ ಜಗದೋದ್ಧಾರದ ಲೀಲೆಯನ್ನಾಡುತ್ತಿದ್ದಾಳೆ.ಶಿವಶಕ್ತಿಯರ ‘ ಮಹಾಕಾಲ’ ಮತ್ತು ‘ ಮಹಾಕಾಲೀ’ ಲೀಲೆಯು ವಿಶ್ವದ ಸೃಷ್ಟಿ ಸ್ಥಿತಿ ಮತ್ತು ಸಂಹಾರಲೀಲಾತತ್ತ್ವವಾಗಿದೆ.

‘ ಕಾಲ’ ಎಂದರೆ ಕಪ್ಪು ಮತ್ತು ಸಮಯ( ಕಾಲ).ಮಹಾಕಾಲ ಎಂದರೆ ಮಹಾಕಪ್ಪು ಮತ್ತು ಅನಂತಕಾಲವೆಂದರ್ಥ.ಮಹಾಕಪ್ಪುಬಣ್ಣದ ಕಾಲಾತೀತಶಕ್ತಿಯೇ ಮಹಾಕಾಲೀ ತತ್ತ್ವ.’ ಕಾಲ’ ಎನ್ನುವ ಕಪ್ಪು,ಅಜ್ಞಾನವನ್ನು ನಿವಾರಿಸುವವಳೆ,ಕಾಳಿ,ಅವಳ ವಿರಾಟ್ ಸ್ವರೂಪವೇ ಮಹಾಕಾಳಿ.ಮಹಾಕಾಳಿಯ ತತ್ತ್ವದರ್ಶನ ಪಡೆದ ಮೊದಲ ವ್ಯಕ್ತಿಯೇ ಮಹಾಕವಿ ಕಾಳಿದಾಸ.ಆಧುನಿಕ ಕಾಲದಲ್ಲಿ ಮಹಾಕಾಳಿಯ ತತ್ತ್ವದರ್ಶನವನ್ನನುಭವಿಸಿದವರು ರಾಮಕೃಷ್ಣ ಪರಮಹಂಸರು.ಕಾಳಿದಾಸ ಮತ್ತು ರಾಮಕೃಷ್ಣ ಪರಮಹಂಸರ ಜೀವನವನ್ನು ಅವಲೋಕಿಸಿದಾಗ ಅವರಿಬ್ಬರು ಮಹಾಕಾಳಿಯ ತತ್ತ್ವಪ್ರಕಟಣೆಗೆ ಅವತರಿಸಿದ ಮಹಾಕಾಳಿಯ ವಿಭೂತಿಗಳು ಎಂದು ಸ್ಪಷ್ಟವಾಗುತ್ತದೆ.ತಾನು ಕುಳಿತ ಮರದ ಟೊಂಗೆಯನ್ನೇ ಕಡಿಯುತ್ತಿದ್ದ ದಡ್ಡನಾಗಿದ್ದ ಕುರುಬರ ತರುಣ ಮಹಾಕವಿಯಾಗಿದ್ದು ಮಹಾಕಾಳಿಯ ಲೀಲೆ.ಅಷ್ಟೇನೂ ಶಿಕ್ಷಣ ಪಡೆಯದ ರಾಮಕೃಷ್ಣನೆಂಬ ಬ್ರಾಹ್ಮಣ ತರುಣ ಮಹಾಯೋಗಿ,ಪರಮಹಂಸ ರಾಮಕೃಷ್ಣರಾಗಿ ವಿಶ್ವಪ್ರಸಿದ್ಧರಾದದ್ದು ಮಹಾಕಾಳಿಯ ಲೀಲೆಯೆ! ಮಹಾಕವಿ ಕಾಳಿದಾಸನ ಕಾಳಿಸ್ತುತಿಗಳನ್ನು ಪಠಿಸುವ ಮೂಲಕ ಮಹಾಕಾಳಿಯ ಅನುಗ್ರಹ ಪಡೆದರೆ ರಾಮಕೃಷ್ಣ ಪರಮಹಂಸರ ಕಾಳಿ ಉಪಾಸನಾ ಮಾರ್ಗದಿಂದ ಮಹಾಕಾಳಿಯ ಅನುಗ್ರಹ ಪಡೆಯಬಹುದು.

ದುರ್ಗಾದೇವಿಯ ಅನಂತ ಪ್ರಕಟರೂಪಗಳಲ್ಲಿ ಮಹಾಕಾಳಿ ರೂಪವು ಮೊದಲ ರೂಪವಾದ್ದರಿಂದ ಮಹಾಕಾಳಿಯನ್ನು ‘ ಆಧ್ಯಾಶಕ್ತಿ’ ಎನ್ನಲಾಗುತ್ತದೆ.ದುರ್ಗಾಸಪ್ತಶತಿಯಲ್ಲಿ ಮಧುಕೈಟಭರ ಸಂಹಾರಕ್ಕಾಗಿ ಅವತರಿಸಿದ ದೇವಿಯಾಗಿ ಕಾಣಿಸಿಕೊಳ್ಳುವ ಮಹಾಕಾಳಿಯು ದೇವಿಭಾಗವತ ಮತ್ತು ವಾಮನಪುರಾಣಗಳಲ್ಲಿ ಗೌರಿಯ ಶರೀರವು ಇಬ್ಬಾಗಗೊಂಡು ಅಂಬಿಕೆ ಮತ್ತು ಕಾಲಿಕೆ ಎನ್ನುವ ಎರಡು ರೂಪಗಳಲ್ಲಿ ಪ್ರಕಟಗೊಂಡು ದುಷ್ಟಶಿಕ್ಷಣ ಶಿಷ್ಟರಕ್ಷಣ ಕಾರ್ಯ ಮಾಡುವುದನ್ನು ವರ್ಣಿಸಲಾಗಿದೆ.

‘ ಕ್ರೀಂ’ ಎನ್ನುವುದು ಮಹಾಕಾಳಿಯ ಬೀಜಾಕ್ಷರವಾಗಿದ್ದು ಇದೇ ಕಾಳಿಯ ಏಕಾಕ್ಷರಿ ಮಂತ್ರವಾಗಿದೆ.’ಓಂ ಕ್ರೀಂ ಮಹಾಕಾಳ್ಯೈ ನಮಃ’ ಎನ್ನುವುದು ಮಹಾಕಾಳಿಯ ಅಷ್ಟಾಕ್ಷರಿ ಮಂತ್ರವಾಗಿದ್ದು ಈ ಮಂತ್ರವನ್ನು ಗುರುಮುಖೇನ ಪಡೆದು ಜಪಾನುಷ್ಠಾನ ,ಸಾಧನೆ ಮಾಡಿದರೆ ಮಹಾಕಾಳಿಯ ಸಾಕ್ಷಾತ್ಕಾರ ಪಡೆಯಬಹುದು.’ ಕ್ರೀಂ’ ಕಾರವನ್ನು ಒಂದುಕೋಟಿ ಜಪಿಸಿದರೆ ಸ್ವಯಂ ಮಹಾಕಾಳಿಸ್ವರೂಪರಾಗುತ್ತಾರೆ.

ಮಹಾಕಾಳಿಯು ಭಾರತದಾದ್ಯಂತ ಹಲವು ರೂಪಗಳಲ್ಲಿ ಪೂಜೆಗೊಳ್ಳುತ್ತಿದ್ದು ದಕ್ಷಿಣಕಾಳಿ,ಸ್ಮಶಾನಕಾಳಿ,ಗುಹ್ಯಕಾಳಿ,ಭದ್ರಕಾಳಿ ರೂಪಗಳು ಪ್ರಮುಖ ಕಾಳಿ ಲೀಲೆಗಳು.ಮಹಾಶೈವ ಧರ್ಮಪೀಠದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ಮಹಾಕಾಳಿಯು ಉಗ್ರಕಾಳಿ,ನಿಗ್ರಹಕಾಳಿ,ಅನುಗ್ರಹಕಾಳಿ,ಭದ್ರಕಾಳಿ ಮತ್ತು ಮಹಾಕಾಳಿ ಎನ್ನುವ ಪಂಚರೂಪಗಳಲ್ಲಿ ಪ್ರಕಟಗೊಂಡಿರುವಳು.ಮಹಾಕಾಳಿಯು ಶವರೂಪಿ ಶಿವನ ಎದೆಯ ಮೇಲೆ ನಿಂತಿರುವ ಮೂರ್ತಿಯು ಆಕೆಯ ಶಿವನ ಚೈತನ್ಯಶಕ್ತಿ ಎನ್ನುವುದನ್ನು ಸೂಚಿಸುತ್ತದೆ.ಶಿವನು ಪುರುಷನಾದರೆ ಕಾಳಿಯು ಪ್ರಕೃತಿಯು.ಶಿವನು ತನ್ನ ಶಕ್ತಿಯಾದ ಪ್ರಕೃತಿಯ ಲೀಲೆಯನ್ನು ತನ್ಮಯನಾಗಿ ನೋಡುತ್ತ ಮೈಮರೆತಿರುವುದೇ ಶವರೂಪಿ ಶಿವತತ್ತ್ವಾರ್ಥವು.

ಮಹಾಕಾಳಿಯ ರೂಪವು ಉಗ್ರವೂ ಭೀಷಣಕರವೂ ಆಗಿದೆ.ಆಕೆಯ ಕೊರಳಲ್ಲಿ ರುಂಡಮಾಲೆ ಇದ್ದರೆ ರಕ್ತಸಿಕ್ತವಾದ ನಾಲಿಗೆಯನ್ನು ಹೊರಚಾಚಿದ್ದಾಳೆ.ಲೆಕ್ಕವಿಲ್ಲದ ಸಂಖ್ಯೆಯ ರಾಕ್ಷಸರನ್ನು ಕೊಂದ ಕಾಳಿಯು ರಕ್ತಬೀಜಾಸುರನ ಸಂಹಾರ ಸಂದರ್ಭದಲ್ಲಿ ತನ್ನ ನಾಲಿಗೆಯನ್ನು ಹೊರಚಾಚಿ ರಕ್ತಬೀಜಾಸುರನ ಸಂತತಿಯನ್ನು ಸರ್ವನಾಶ ಮಾಡುತ್ತಾಳೆ.ಮಹಾಬಲಶಾಲಿಯಾದ ರಕ್ತಬೀಜನು ತನ್ನ ಒಂದು ಹನಿ ರಕ್ತವು ನೆಲಕ್ಕೆ ಬೀಳಲು ಮತ್ತೊಬ್ಬ ರಕ್ತಾಬೀಜಾಸುರ ಹುಟ್ಟುವಂತೆ ವರಪಡೆದಿರುತ್ತಾನೆ.ಶ್ರೀದೇವಿಯು ರಕ್ತಬೀಜಾಸುರನೊಡನೆ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ದೇವಿಯ ಆಯುಧಗಳಿಂದ ತುಂಡರಿಸಲ್ಪಟ್ಟ ಅವನ ದೇಹದಿಂದ ತೊಟ್ಟಿಕ್ಕುವ ಒಂದೊಂದು ಹನಿಯಿಂದ ಒಬ್ಬೊಬ್ಬ ರಕ್ತಾಬೀಜಾಸರನು ಉದಿಸಿ ಯುದ್ಧಭೂಮಿಯೆಲ್ಲವೂ ರಕ್ತಾಬೀಜಾಸುರಮಯವಾಗಲು ಕ್ಷಣಕಾಲ ವಿಚಲಿತಳಾಗಿ ಉಪಾಯಚಿಂತಿಸಿ ತನ್ನ ನಾಲಿಗೆಯನ್ನು ಹೊರಚಾಚಿ ಭೂಮಿಗೆ ಬೀಳುತ್ತಿದ್ದ ರಕ್ತಬೀಜನ ರಕ್ತವನ್ನು ನೆಕ್ಕಿ ಅವನನ್ನು ಸಂಹರಿಸಿದಳು.ಕಾಳಿಯು ರುಂಡಮಾಲೆಯನ್ನು ಧರಿಸಿದ್ದಾಳೆ.ಮಹಾಕಾಳಿಯ ಕೊರಳ ಒಂದೊಂದು ರುಂಡವು ಒಂದೊಂದು ಯುಗದ ಸಂಕೇತವಾಗಿದ್ದು ಅಸಂಖ್ಯಸಂಖ್ಯೆಯ ಶಿರೋಮಾಲೆಯನ್ನು ಧರಿಸುವ ಮೂಲಕ ಮಹಾಕಾಳಿಯು ತಾನು ಕಾಲಾತೀತಳಾದ ಅನಂತ ಶಕ್ತಿ ಎನ್ನುವುದನ್ನು ಸಾರುತ್ತಿದ್ದಾಳೆ.ಕಾಳಿಯು ಕೈಯಲ್ಲಿ ಹಿಡಿದು ‘ ಕಪಾಲಿನಿ’ ಎಂದು ಬಿರುದುಗೊಂಡಿಹಳು.ಕಪಾಲವು ಅನ್ನ, ಜ್ಞಾನ ಮತ್ತು ಸಿದ್ಧಿಯ ಸಂಕೇತವು.ಮಹಾಕಾಳಿಯು ಅನ್ನ ,ಅಭಯ ಮತ್ತು ಸಿದ್ಧಿಗಳನ್ನಿತ್ತು ಭಕ್ತರನ್ನು ಉದ್ಧರಿಸುತ್ತಾಳೆ.ದಕ್ಷಿಣಕಾಳಿಯು ಅನುಗ್ರಹಕಾಳಿಯಾದರೆ ಸ್ಮಶಾನಕಾಳಿಯು ನಿಗ್ರಹಕಾಳಿಯು.ನಿಗ್ರಹಾನುಗ್ರಹ ಸಮರ್ಥಳಾದ ಮಹಾಕಾಳಿಯ ಸೇವೆ ಉಪಾಸನೆಯಿಂದ ಭಕ್ತರು ಲೋಕಮಾತೆಯ ಅನುಗ್ರಹಕ್ಕೆ ಪಾತ್ರರಾಗಿ ಅಭೀಷ್ಟಗಳನ್ನು ಈಡೇರಿಸಿಕೊಳ್ಳಬಹುದು.

About The Author