ಇಂದು ಶ್ರೀ ಸದ್ಗುರು ಕರಿಯಪ್ಪ ತಾತ ಮಹಾರಾಜರ 27ನೇ ಆರಾಧನೆ ಮಹೋತ್ಸವ

ಗಬ್ಬೂರು : ಘನಮಹಿಮ ಶರಣರು ಶ್ರೀ ಕರಿಗೂಳಿ ಮಹಾರಾಜರು ನಮ್ಮ ನಾಡು ದೈವಿಕ ಶಕ್ತಿಯಿಂದ ಸಮೃದ್ಧಿ ಹೊಂದಿದೆ. ಅದಕ್ಕೆ ಇಲ್ಲಿ ನಡೆದು ಬಂದಶ ಶರಣ ಪರಂಪರೆ ಮುಖ್ಯ ಕಾರಣ. ಅನೇಕ ಶರಣರು ದೈವವನ್ನು ಸಾಕ್ಷೀಕರಿಸಿಕೊಂಡು ಸಮಾಜೋದ್ಧಾರ ಕಾರ್ಯಗಳಿಗೆ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಈ ರೀತಿ ಲೋಕ ಕಲ್ಯಾಣಕ್ಕಾಗಿ ಬಾಳಿದ ಶರಣರಲ್ಲಿ ಶ್ರೀ ಸದ್ಗುರು ಕರಿಯಪ್ಪ ತಾತ ಮಹಾರಾಜರು ಕೂಡ ಒಬ್ಬರು.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಲಿಂಗೈಕ್ಯರಾಗಿರುವ ಶ್ರೀ ಕರಿಯಪ್ಪ ತಾತನವರು ಮಹಾಮಹಿಮ ಶರಣರು. ಅನೇಕ ಪವಾಡಗಳಿಂದ ಭಕ್ತರನ್ನು ಉದ್ಧರಿಸಿದ ದೈವಾಂಶ ಸಂಭೂತರು. ಪ್ರಾಂಜಲ ಮನಸಿನಿಂದ ಭಕ್ತರನ್ನು ಹರಸುತ್ತಲೇ ಸಂಚಾರ ಮಾಡಿದ ಅವರನ್ನು ನಾನಾ ಕಡೆ ಇಂದಿಗೂ ಭಕ್ತರು ಆರಾಧಿಸಿಕೊಂಡು ಬರುತ್ತಿದ್ದಾರೆ.

ಕೇವಲ ಕರ್ನಾಟಕ ಮಾತ್ರವಲ್ಲದೇ, ಆಂಧ್ರ, ತೆಲಂಗಣದಲ್ಲೂ ಕರಿಯಪ್ಪ ತಾತನವರಿಗೆ ದೊಡ್ಡ ಭಕ್ತರ
ಪಡೆಯೇ ಇದೆ.ಲೋಕ ಕಲ್ಯಾಣಕ್ಕಾಗಿ ಸಂಚರಿಸಿ ಅವರು ನೆಲೆಸಿದ ಸ್ಥಳಗಳು ಇಂದು ಪುಣ್ಯಭೂಮಿಯಾಗಿದೆ.ಅಲ್ಲಿ ಭಕ್ತರು ಅವರ ಮಠ ಸ್ಥಾಪಿಸಿ ಜಾತ್ರೆಗಳನ್ನು ಮಾಡಿ
ಮೆರೆಸುತ್ತಿದ್ದಾರೆ.

ರಾಯಚೂರು ತಾಲೂಕಿನ ಕಲಮಲ ಗ್ರಾಮದಲ್ಲಿ ರುದ್ರಪ್ಪ ಹಾಗೂ ಬಸಲಿಂಗಮ್ಮ ದಂಪತಿಗೆ 1892ರಲ್ಲಿ ಕರಿಯಪ್ಪನ ತಾತನ ಜನನವಾಯಿತು.ಹುಟ್ಟಿದಾಗಲೇ ಮಹಾ ತೇಜಸ್ಸು ಹೊಂದಿದ್ದ ಮಗುವನ್ನು ಕಂಡು ಎಲ್ಲರಿಗೂ ಬಹಳ ಖುಷಿಯಾಯಿತು. ಕರಿಯಪ್ಪ ತಾತನವರಿಗೆ ಐದು ವರ್ಷವಿದ್ದಾಗ ತಂದೆ ರುದ್ರಪ್ಪ ಅಸುನೀಗಿದರು.ಬಾಲ್ಯವನ್ನು ತಂದೆಯಿಲ್ಲದೇ ಕಷ್ಟದಲ್ಲೇ
ಕಳೆದ ಕರಿಯಪ್ಪ ತಾತನಿಗೆ ತಾಯಿಯೇ ಸರ್ವಸ್ವವಾಗಿದ್ದರು.

ಕರಿಯಪ್ಪ ತಾತ 14 ವರ್ಷ ಬಾಲಕನಾಗಿದ್ದಾಗ ಕುರಿ ಕಾಯುವ ಕಾಯಕ ಮಾಡುತ್ತಿದ್ದರು.ಆದರೆ,ರೋಗ ಬಂದು ಎಲ್ಲ ಕುರಿಗಳು ಸತ್ತು ಹೋದಾಗ ಚಿಂತಾಕ್ರಾಂತರಾದರು. ಇದರಿಂದ ತಾಯಿ ಬಸಲಿಂಗಮ್ಮ ತಮ್ಮ ತವರು ಮನೆ ಸಗಮಂಕುಂಟಾಕ್ಕೆ ಹೋಗಿ ನೆಲೆಸಿದರು.

ಬಾಲಕನಾಗಿದ್ದಾಗಲೇ ಕರಿಯಪ್ಪ ತಾತನನ್ನು ಆಧ್ಯಾತ್ಮಿಕ ಲೋಕದ ಅಗೋಚರ ಶಕ್ತಿ ಬರ ಸೆಳೆಯಿತು.ಅವರ ವೈಚಾರಿಕತೆ ವಿಸ್ತಾರಗೊಳ್ಳುತ್ತ ಸಾಗಿತು.ಅನೇಕ ಸಾಧು ಸಂತರನ್ನು ಶರಣರನ್ನು ಕಂಡು ಭೌತಿಕ,ಲೌಕಿಕ ಚಿಂತನೆಗಳ ಬಗ್ಗೆ ತಿಳಿಯತೊಡಗಿದರು.ಬಾಲಕ ಕರಿಯಪ್ಪನ ಈ ಬದಲಾವಣೆ ಎಲ್ಲರಿಗೂ ಅಚ್ಚರಿ ಮೂಡಿಸಿತು.ಹುಟ್ಟು ಸಾವಿನ ಮರ್ಮವೇನು,ಈ ಸೃಷ್ಟಿಯ ಚೇತನಕ್ಕೆ ಕಾರಣವಾದ ಶಕ್ತಿ ಯಾವುದು ಎನ್ನುವಂಥ ಚಿಂತನೆಗಳು ಮೂಡಲಾರಂಭಿಸಿದವು.

ಏಕಾಂತ ಬಯಸಿದ ಕರಿಯಪ್ಪ ತಾತನವರ ಮನಸ್ಸು, ಧ್ಯಾನದತ್ತ ವಾಲಿತು. ಹೀಗೆ ಚಿಂತಿಸುವಾಗ
ಬೋಳಮಾನದೊಡ್ಡಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವರ ಅನುಗ್ರಹವಾಯಿತು.ನಿನ್ನ
ಮಾರ್ಗ ಯಾವುದೆಂದು ಅರಿಯಲು ಗುರುವಿನ ಶೋಧ ಮಾಡುವಂತೆ ಆ ಶಕ್ತಿ ಪ್ರೇರೇಪಿಸಿತು.ಕರಿಯಪ್ಪ ತಾತನಲ್ಲಿದ್ದ ದೈವಭಕ್ತಿಯನ್ನು ಕಂಡ ಹುಡೇದ ನರಸಣ್ಣನವರು ಶ್ರೀ ಕ್ಷೀರಲಿಂಗ ಮಹಾರಾಜರ ಬಳಿ ಕರೆದುಕೊಂಡು ಹೋದರು.ಗುರುಗಳ ದೃಷ್ಟಿ ಕರಿಯಪ್ಪ ತಾತನ ಮೇಲೆ ಬೀಳುತ್ತಿದ್ದಂತೆ ಈ ಕರಿಗೂಳಿಯನ್ನು ಎಲ್ಲಿಂದ ಕರೆದುಕೊಡು ಬಂದೆಯಪ್ಪ. ಈತ ಸಾಮಾನ್ಯನಲ್ಲ.ಈತನಿಂದ ಲೋಕಕ್ಕೆ ಕಲ್ಯಾಣವಾಗಲಿದೆ. ಏಳು ಊರಿಗೆ ಒಂದು ಮನೆ, ಮಠ ನಿರ್ಮಿಸಿ ಭಕ್ತರು
ಆರಾಧಿಸುತ್ತಾರೆ ಎಂದು ಭವಿಷ್ಯ ನುಡಿದರು. ಅಂದು ಅವರು ನುಡಿದ ಭವಿಷ್ಯ ಇಂದು ನೆರೆವೇರಿದೆ. ಅಂದಿನಿಂದ ಶ್ರೀ ಕರಿಯಪ್ಪ ತಾತನವರು ಶ್ರೀ ಕರಿಗೂಳಿ ಮಹರಾಜರು ಎಂದೇ ಹೆಸರಾದರು.

ಗುರುವಿನ ಆಜ್ಞೆಯಂತೆ, ತಾಯಿಯ ಇಚ್ಛೆಯಂತೆ ಸಂಸಾರಿಕ ಬದುಕಿಗೆ ಕಾಲಿಟ್ಟರು.ಮೂವರು ಗಂಡು,ಮೂವರು ಹೆಣ್ಣು ಮಕ್ಕಳ ತಂದೆಯಾದರು.ಕೊನೆಗೆ ಎಲ್ಲ ಸಂಸಾರದ
ಜಂಜಾಟಗಳನ್ನು ಮುಗಿಸಿದ ಮೇಲೆ ಸಂಪೂರ್ಣ ಆಧ್ಯಾತ್ಮಿಕ ಲೋಕದತ್ತ ವಾಲಿದರು.ನನ್ನ ಗುರಿ
ಬೇರೆಯಾಗಿದೆ.ನೀವು ಸಂಸಾರಿಕ ಜೀವನ ಮುಂದುವರಿಸಿ ಎಂದು ಮಕ್ಕಳಿಗೆ ಹೇಳಿ ಆಧ್ಯಾತ್ಮಿಕ
ಲೋಕದಲ್ಲಿ ಮುನ್ನಡೆದರು.ಕರಿಗೂಳಿ ಮಹಾರಾಜರು ಲೋಕಕಲ್ಯಾಣ ಮಾಡುತ್ತ ಸಂಚರಿಸಿದರು. ಭಕ್ತರು
ತೋಡಿಕೊಂಡ ಎಲ್ಲ ಕಷ್ಟಕಾರ್ಪಣ್ಯಗಳನ್ನು ಈಡೇರಿಸುತ್ತಿದ್ದರು. ಅವರು ನಡೆದಾಡಿದ ನೆಲ
ಪಾವನವಾದರೆ, ಅವರು ವಾಸ ಮಾಡಿದ ತಾಣಗಳಲ್ಲಿ ಇಂದು ಮಠಗಳು ನಿರ್ಮಿಸಲಾಗಿದೆ.

About The Author