ಭಕ್ತ ಕನಕದಾಸ ಒನಕೆ ಓಬವ್ವರಂತಹ ಆದರ್ಶಗಳನ್ನು ಅಳವಡಿಸಿಕೊಳ್ಳಿ : ದರ್ಶನಾಪುರ

ಶಹಾಪೂರ : ಭಕ್ತ ಕನಕದಾಸ ಮತ್ತು ಒನಕೆ ಒಬವ್ವ ರಂತವರ ಜಯಂತಿಯ ಆಚರಣೆಯ ಜೊತೆಗೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಕರೆ ನೀಡಿದರು. ಇಂದು ನಗರದ ಟೌನ್ ಹಾಲ್ನಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆಯ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಲ ಜಾತಿ ಭೇದ ಭಾವವಿಲ್ಲದೆ 15 ನೇ ಶತಮಾನದಲ್ಲಿ ಸಮ ಸಮಾಜಕ್ಕಾಗಿ ತನ್ನ ಕೀರ್ತನೆಗಳ ಮೂಲಕ ಸಾರಿ ಹೇಳಿದ ಮಹಾನ ಸಂತ ಕನಕದಾಸರು. ಆದರೆ ಇಂದಿನ ದಿನಗಳಲ್ಲಿ ಇತಿಹಾಸ ತಿರುಚುವ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಭಾರತ ಸಂಸ್ಕೃತಿಕ ಸಂಪ್ರದಾಯಗಳಿಂದ ಕೂಡಿದ ಶ್ರೀಮಂತ ದೇಶ. ಒಳ್ಳೆಯ ಕಾರ್ಯ ಮಾಡುವುದರಿಂದ ನಾವು ಮಾಡಿದ ನಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು. ಹೈದರಾಲಿ ಅಂತಹ ಸೈನಿಕರನ್ನು ಹೊಡೆದುರುಳಿಸಿ ದೇಶಕ್ಕಾಗಿ ಹೋರಾಟ ಮಾಡಿದ ದಿಟ್ಟ ಮಹಿಳೆ ಒನಕೆ ಓಬವ್ವ ಎಂದರು.

ಉಪನ್ಯಾಸಕರಾದ ವಿಶಾಲಾಕ್ಷಿ ಗಣಾಚಾರಿ ಯವರು ಮಾತನಾಡುತ್ತಾ, 15 ನೇ ಶತಮಾನದಲ್ಲಿ 250 ದಾಸರಿದ್ದರೂ ಕೂಡ ಅದರಲ್ಲಿ ಶ್ರೇಷ್ಠದಾಸರೆಂದರೆ ಕನಕದಾಸರು. 316 ಕೀರ್ತನೆಗಳು, ನಾಲ್ಕು ಕೃತಿಗಳನ್ನು ರಚಿಸಿದ್ದಾರೆ ಎಂದರು.

ಸಾಹಿತ್ಯ ಸೇವೆಯನ್ನು ಗುರುತಿಸಿ ಶಹಾಪೂರ ತಾಲೂಕ ಆಡಳಿತದಿಂದ  ಕನಕದಾಸರು ಮತ್ತು ವೀರರಾಣಿ ಒನಕೆ ಓಬ್ಬವನ ಜಯಂತಿಯ ಕಾರ್ಯಕ್ರಮದಲ್ಲಿ ಶರಣಗೌಡ ಚಂದಾಪೂರ ಮತ್ತು ಶ್ರೀಶೈಲ ಬಿರಾದರ ರವರನ್ನು ಸನ್ಮಾನಿಸಲಾಯಿತು

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಡಾ. ಭೀಮಣ್ಣ ಮೇಟಿ ಯವರು ಭಕ್ತ ಕನಕದಾಸರು ದೇವರ ದಿಕ್ಕನ್ನು ಬದಲಾಯಿಸಿದವರು. ಇಂತಹ ಮಹಾನ್ ಸಂತರ ಚಿಂತನೆಗಳ ಜಯಂತಿಗೆ ಸರಕಾರ ರಜೆ ಕೊಡಬಾರದು. ಶಾಲೆಯಲ್ಲಿ ಮಕ್ಕಳಿಗೆ ಅವರ ಆದರ್ಶಗಳನ್ನು, ರಸಪ್ರಶ್ನೆ ಭಾಷಣ ಚರ್ಚೆಗಳನ್ನು ಏರ್ಪಡಿಸುವುದರಿಂದ ಅವರ ತತ್ವಾದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳುವರು ಎಂದರು.

ತಹಶೀಲ್ದಾರರಾದ ಮಧುರಾಜ ಕೂಡಲಗಿ, ಸೋಮಶೇಖರ ಬಿರಾದರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಶಾಂತಗೌಡ ನಾಗನಟಗಿ,ಸೂರ್ಯವಂಶಿ ಅಕ್ಷರ ದಾಸೋಹ ಸ.ನಿರ್ಧೇಶಕರು ಅಶೋಕ ಕರಿಗೇರ ಅಶೋಕ ದಿನ್ನಿ ರವಿ ರಾಜಾಪುರ ಸೇರಿದಂತೆ ಇತರರು ಇದ್ದರು.

 

About The Author