ಶ್ರೀ ಮುಕ್ಕಣ್ಣ ಕರಿಗಾರರ ೫೩ ನೇ ಹುಟ್ಟುಹಬ್ಬದ ನಿಮಿತ್ತ  ಲೋಕ ಕಲ್ಯಾಣ ದಿನಾಚರಣೆ : ಲೋಕಹಿತಕ್ಕೆ ದುಡಿಯುವವರೇ ಶ್ರೇಷ್ಠರು – ಮುಕ್ಕಣ್ಣ ಕರಿಗಾರ

ಅಧ್ಯಕ್ಷರಾದ ಶ್ರೀಯುತ ಮುಕ್ಕಣ್ಣ ಕರಿಗಾರ ಅವರ 53ನೇ ಹುಟ್ಟುಹಬ್ಬದ ನಿಮಿತ್ತ ಮಹಾಶೈವ ಧರ್ಮಪೀಠ ಗಬ್ಬೂರಿನ ಕೈಲಾಸದಲ್ಲಿ ಲೋಕ ಕಲ್ಯಾಣ ದಿನಾಚರಣೆಯ ಅಂಗವಾಗಿ ಶ್ರೀ ಮುಕ್ಕಣ್ಣ ಕರಿಗಾರ ಅವರು ರಚಿಸಿದ   ಮೂರನೇ ಕಣ್ಣಿನಿಂದ ಕಂಡ ಜಗತ್ತು ಕೃತಿ ಬಿಡುಗಡೆ ಮಾಡಲಾಯಿತು. ಶ್ರೀ ಗಿರಿಮಲ್ಲ ದೇವರು ಪೀಠಾಧಿಪತಿಗಳು ತಪೋನಮಠ ದೇವರಗುಡ್ಡ ಹತ್ತಿಗೂಡೂರು,ಶರಣಪ್ಪ ಶರಣರು ಗಂಗಾಧರ ಶಾಂತಾಶ್ರಮ ಸುಲ್ತಾನಪುರ, ಬಸವರಾಜ ಭೋಗಾವತಿ ಮಾನ್ವಿ, ಬಸವರಾಜ ಸಿನ್ನೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

                                

‘ತಮಗಾಗಿ ತಾವು ಬಾಳಿ ಬದುಕುವವರು ಶ್ರೇಷ್ಠರಲ್ಲ,ಪರಹಿತಕ್ಕಾಗಿ ದುಡಿಯುವವರೇ ಶ್ರೇಷ್ಠರು.ಲೋಕೋಪಕಾರಕ್ಕಾಗಿ ಪರಿಶ್ರಮಿಸುವವರ ಜೀವನವು ಸಾರ್ಥಕವೆನ್ನಿಸುತ್ತದೆ.ಪ್ರಕೃತಿಯನ್ನು ನೋಡಿ ಮನುಷ್ಯ ಲೋಕೋಪಕಾರ ದೃಷ್ಟಿಯನ್ನು ರೂಢಿಸಿಕೊಳ್ಳಬೇಕು.ಮಾವಿನಮರವು ಮೈತುಂಬ ಹಣ್ಣುಗಳನ್ನು ತುಂಬಿಕೊಂಡರೂ ಒಂದು ಹಣ್ಣನ್ನು ತಾನು ತಿನ್ನುವುದಿಲ್ಲ.ಮನುಷ್ಯರು ಮತ್ತು ಪಶು ಪಕ್ಷಿಗಳಿಗೆ ಹಣ್ಣನ್ನು ಕೊಡುತ್ತದೆ.ಹೂವುಗಳು ಅರಳಿ ಸುಗಂಧ ಸೂಸಿದರೂ ತಮ್ಮ ಸೌರಭವನ್ನು ತಾವೇ ಸವಿಯುವುದಿಲ್ಲ,ಜನರು ಪುಷ್ಪಗಳ ಸುಗಂಧವನ್ನು ಆಘ್ರಾಣಿಸುತ್ತಾರೆ.ನದಿಗಳು ತಮಗಾಗಿ ತಾವು ಹರಿಯುವುದಿಲ್ಲ,ಜನರು,ದನಕರುಗಳ ದಾಹ ತಣಿಸಲು ನದಿಗಳು ಹರಿಯುತ್ತವೆ.ಸೂರ್ಯನು ಜಗತ್ತಿಗೆ ಬೆಳಕು ನೀಡುತ್ತಾನೆ,ಗಾಳಿಯು ಬೀಸಿ ಜೀವರುಗಳನ್ನು ಬದುಕಿಸುತ್ತದೆ,ಭೂಮಿಯು ಸರ್ವರಿಗೂ ಆಶ್ರಯ ನೀಡುತ್ತದೆ.ಮನುಷ್ಯರಿಗೆ ಪರಮಾತ್ಮನ ಕೊಡುಗೆಯಾಗಿರುವ ಪ್ರಕೃತಿಯು ನಮಗೆ ಎಲ್ಲವನ್ನು ಪುಕ್ಕಟೆಯಾಗಿ ನೀಡುತ್ತದೆ.ಪರೋಪಕಾರ ಗುಣವನ್ನು ಬೋಧಿಸುವ ಪ್ರಕೃತಿಯಿಂದ ಮನುಷ್ಯರು ಪ್ರೇರಣೆಪಡೆದು ಲೋಕಕಲ್ಯಾಣಕ್ಕಾಗಿ ದುಡಿಯಬೇಕು.ಶರಣರು,ಸಂತರು,ಮಹಾಂತರುಗಳು ಲೋಕಕಲ್ಯಾಣಕ್ಕಾಗಿ ದುಡಿದು ದೊಡ್ಡವರಾದರು.ಬಸವಣ್ಣನವರು ಹೇಳಿದಂತೆ ಜನಹಿತಕ್ಕೆ ದುಡಿಯುವ ಬದುಕು ಒಂದುದಿನದ ಅಲ್ಪಾಯುವಿನ ಬದುಕಾದರೇನು ಅದುವೇ ಶ್ರೇಷ್ಠ ಬದುಕು” ಎಂದು ಕವಿ- ಸಾಹಿತಿ ಮತ್ತು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ನುಡಿದರು.ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿಂದು ಮುಕ್ಕಣ್ಣ ಕರಿಗಾರರ ಶಿಷ್ಯರು ಮತ್ತು ಅಭಿಮಾನಿಗಳು ಆಯೋಜಿಸಿದ್ದ ಕರಿಗಾರರ ೫೩ ನೇ ಹುಟ್ಟುಹಬ್ಬ ಮತ್ತು ‘ ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಕೃತಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ಮತ್ತು ಅಧ್ಯಕ್ಷತೆಯನ್ನು ವಹಿಸಿಕೊಂಡು ಅವರು ಮಾತನಾಡುತ್ತಿದ್ದರು.

ಶ್ರೀ ಮುಕ್ಕಣ್ಣ ಕರಿಗಾರ ದಂಪತಿಗಳಿಗೆ ಸನ್ಮಾನ

 

‘ ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಕೃತಿ ಲೋಕಾರ್ಪಣೆ ಮಾಡಿದ ದೇವರಗುಡ್ಡ,ಹತ್ತಿಗೂಡೂರು,ಮೈಲಾಪುರ ತಪೋವನ ಮಠಗಳ ಪೀಠಾಧಿಪತಿಗಳಾದ ಪೂಜ್ಯ ಗಿರಿಮಲ್ಲದೇವರು ಅವರು ಮಾತನಾಡುತ್ತ ‘ ಮುಕ್ಕಣ್ಣ ಕರಿಗಾರ ಅವರು ಬದುಕು ಮತ್ತು ಸಾಹಿತ್ಯಗಳೆರಡರಿಂದಲೂ ದೊಡ್ಡವರು ಆಗಿದ್ದು ಅವರು ಎಲ್ಲರಿಗೂ ಸ್ಫೂರ್ತಿ ಮತ್ತು ಆದರ್ಶ.ಮಠ ಪೀಠಗಳ ಸ್ವಾಮಿಗಳು ಮಾಡಲು ಆಗದೆ ಇರುವ ಧರ್ಮಜಾಗೃತಿ,ಲೋಕಕಲ್ಯಾಣ ಕಾರ್ಯವನ್ನು ಅವರು ಸಾಧಿಸುತ್ತಿದ್ದಾರೆ.ಧಾರವಾಡದ ತಪೋವನದ ಪೂಜ್ಯ ಶ್ರೀ ಕುಮಾರಸ್ವಾಮಿಗಳವರ ತತ್ತ್ವ- ಆದರ್ಶಗಳನ್ನು ಬಿತ್ತಿ ಬೆಳೆಯುತ್ತಿರುವ ಮುಕ್ಕಣ್ಣ ಕರಿಗಾರ ಅವರು ಪೂಜ್ಯ ಮಹಾತಪಸ್ವಿಗಳಂತೆಯೇ ಲೋಕಹಿತಕ್ಕೆ ದುಡಿಯುವ ಮೂಲಕ ಮಹಾತಪಸ್ವಿಗಳ ಲೋಕಕಲ್ಯಾಣ ಕಾರ್ಯವನ್ನು ಮುಂದುವರೆಸಿದ್ದಾರೆ,ಕುಮಾರಸ್ವಾಮಿಗಳವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ” ಎಂದು ಹೇಳಿದರು.

    ಕೃತಿಯನ್ನು ಕುರಿತು ಪರಿಚಯ ನುಡಿಗಳನ್ನಾಡಿದ ಶಹಾಪುರದ ಸಾಹಿತಿ ಬಸವರಾಜ ಸಿನ್ನೂರ ಅವರು ‘ ಮುಕ್ಕಣ್ಣ ಕರಿಗಾರ ಅವರದ್ದು ನಡೆ ನುಡಿಗಳೆರಡೂ ಒಂದೇ ಆದ ಅಪರೂಪದ  ವ್ಯಕ್ತಿತ್ವ.ಅವರು ಬರೆದಂತೆ ಬದುಕುತ್ತಾರೆ,ತಮ್ಮ ಬದುಕಿನಿಂದಲೇ ಸಮಾಜಕ್ಕೆ ಆದರ್ಶರಾಗಿದ್ದಾರೆ.ಐವತ್ತೊಂದು ಚಿಂತನೆಗಳುಳ್ಳ ‘ ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಕೃತಿಯು ಮುಕ್ಕಣ್ಣ ಕರಿಗಾರ ಅವರ ಸ್ವತಂತ್ರ ಆಲೋಚನೆಯ ಮೂಸೆಯಲ್ಲಿ ಮೂಡಿಬಂದ ಲೋಕಕಲ್ಯಾಣ ಉದ್ದೇಶದ ಶ್ರೇಷ್ಠಕೃತಿ,ಕನ್ನಡ ಸಾಹಿತ್ಯಕ್ಕೆ ಬಹುಮಹತ್ವದ ಕೊಡುಗೆ’ ಎಂದರು.

     ಕೃತಿಯ ಕುರಿತು ಮಾತನಾಡಿದ ಮತ್ತೋರ್ವ ಮುಖ್ಯ ಅತಿಥಿ ಬಸವರಾಜ ಭೋಗಾವತಿ ಅವರು ‘ ತಮಗಾಗಿ ಅರಮನೆಯನ್ನು ಕಟ್ಟಿಕೊಳ್ಳಲು ಆಶಿಸದ ಮುಕ್ಕಣ್ಣ ಕರಿಗಾರ ಅವರು ಲೋಕದ ಸಮಸ್ತರಿಗಾಗಿ ‘ ಅರಿವಿನ ಮನೆ’ ಯನ್ನು ಕಟ್ಟುವ ಪರಮಸಾರ್ಥಕ ಕಾರ್ಯವನ್ನು ಮಾಡುವ ಮೂಲಕ ಆದರ್ಶರಾಗಿದ್ದಾರೆ,ಪಥದರ್ಶಕರಾಗಿದ್ದಾರೆ.ಸರಕಾರದ ಹಿರಿಯ ಅಧಿಕಾರಿಗಳಾಗಿ ಅವರು ಕರ್ತವ್ಯ ನಿರ್ವಹಿಸಿದ ಜಿಲ್ಲೆಗಳಲ್ಲೆಲ್ಲ ಬಡವರು,ದುಡಿಯುವವರು,ಶೋಷಿತರ ಏಳ್ಗೆಗಾಗಿ ದುಡಿದು ಅಪರೂಪದ ಅಧಿಕಾರಿಗಳನ್ನೆಸಿಕೊಂಡಿದ್ದಾರೆ.’ ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಕೃತಿಯು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಮಹತ್ವದ ಕೃತಿಯಾಗಿದ್ದು ಇಲ್ಲಿಯ ಐವತ್ತೊಂದು ಲೇಖನಗಳಲ್ಲಿ ಮುಕ್ಕಣ್ಣ ಕರಿಗಾರ ಅವರ ನಿರ್ಭೀತನಿಲುವಿನ ವ್ಯಕ್ತಿತ್ವವು ಎದ್ದು ಕಾಣುವಂತೆಯೇ ಲೋಕಾನುಕಂಪೆ,ಲೋಕಕಲ್ಯಾಣಾಕಾಂಕ್ಷೆಗಳು ಕೃತಿಯ ಸತ್ತ್ವ ಮತ್ತು ಸೊಬಗನ್ನು ಹೆಚ್ಚಿಸಿವೆ.ನಾನು ಕಥೆಗಾರನಾಗಲು ಪ್ರೇರೇಪಿಸಿದ ಮುಕ್ಕಣ್ಣ ಕರಿಗಾರ ಅವರ ಆದರ್ಶ ಅಧಿಕಾರಿ ವ್ಯಕ್ತಿತ್ವವನ್ನೇ ಮಾದರಿಯನ್ನಾಗಿಟ್ಟುಕೊಂಡು ಹಲವು ಕಥೆಗಳನ್ನು ಬರೆದಿದ್ದೇನೆ.ಜನಹಿತಕ್ಕೆ ದಕ್ಷತೆ,ಪ್ರಾಮಾಣಿಕತೆಯಿಂದ ದುಡಿಯುವ ಮುಕ್ಕಣ್ಣ ಕರಿಗಾರರಿಗೆ ದಕ್ಕಬೇಕಿದ್ದ ಪದವಿ- ಪ್ರಶಸ್ತಿಗಳನ್ನು ಬೇರೊಬ್ಬ ಅಧಿಕಾರಿಗೆ ಕೊಟ್ಟ ಅಧಿಕಾರಿ ಮತ್ತು ಅದನ್ನು ಪಡೆದ ಅಧಿಕಾರಿಗೆ ಯಾವ ನೈತಿಕತೆ ಇದೆಯೋ ಗೊತ್ತಿಲ್ಲ.ಸರಕಾರಿ ವ್ಯವಸ್ಥೆಯ ಕಪಟ- ಕುತ್ಸಿತಗಳಿಗೆ ಬಲಿಯಾಗುತ್ತಲೇ ಇದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಸಾಮಾನ್ಯರಿಗಾಗಿ ದುಡಿಯುವ ಮೂಲಕ ಮುಕ್ಕಣ್ಣ ಕರಿಗಾರ ಅವರು ಜನಪರಕಾಳಜಿಯ,ಜನಬಂಧು ಅಧಿಕಾರಿ ಎಂದು ಅಪಾರ ಜನಮನ್ನಣೆ ಪಡೆದಿದ್ದಾರೆ’ ಎಂದು ಅಭಿಪ್ರಾಯ ಪಟ್ಟರು.

ಮಾನ್ವಿಯ ಎಸ್ ಆರ್ ಎಸ್ ವಿ ಕಾಲೇಜಿನ ಪ್ರಾಂಶುಪಾಲರಾದ ಈರಣ್ಣ ಮರ್ಲಟ್ಟಿಯವರು ಮಾತನಾಡಿ ‘ ಜಾತಿ- ಜನಾಂಗಗಳ ಹಂಗು- ಅಭಿಮಾನಗಳಿಗೆ ಒಳಗಾಗಿ ದುಡಿಯುತ್ತಿರುವ ಇಂದಿನ ಅಧಿಕಾರಿಗಳ ನಡುವೆ ಮುಕ್ಕಣ್ಣ ಕರಿಗಾರ ಅವರು ಜಾತಿ ಮತ ಧರ್ಮಗಳ ಹಂಗಿಲ್ಲದೆ ಸರ್ವರ ಕಲ್ಯಾಣಕ್ಕಾಗಿ ಶ್ರಮಿಸುವ ನಿಜವಾದ ಜಾತ್ಯಾತಿತ ನಿಲುವಿನ ಅಧಿಕಾರಿಗಳಾಗಿದ್ದು ಎಲ್ಲರನ್ನೂ ನನ್ನವರು ಎಂದು ಅಪ್ಪಿಕೊಳ್ಳುವ ಮೂಲಕ ಸರ್ವೋದಯ ಸಮಾಜವನ್ನು ಕಟ್ಟುತ್ತಿದ್ದಾರೆ,ಸರ್ವರುನ್ನತಿಯ ಕನಸು ಕಾಣುತ್ತಿದ್ದಾರೆ’ ಎಂದರು.

       ಸಾಹಿತಿ  ಸಿದ್ಧನಗೌಡ ಮಾಲೀಪಾಟೀಲ ಮನ್ಸಲಾಪುರ ಅವರು ಮಾತನಾಡಿ ‘ ಮುಕ್ಕಣ್ಣ ಕರಿಗಾರ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಕಲ್ಯಾಣದಲ್ಲಿ ನಡೆದ ಸರ್ವರುನ್ನತಿಯ,ಸಮಸಮಾಜದ ನಿರ್ಮಾಣಕ್ಕಾಗಿ ಪರಿಶ್ರಮಿಸುವ ಮೂಲಕ ನಮಗೆಲ್ಲರಿಗೂ ಆದರ್ಶರಾಗಿದ್ದಾರೆ.ಮಹಾಶೈವ ಧರ್ಮಪೀಠದಲ್ಲಿ ನಿರಂತರವಾಗಿ ಸಾಹಿತ್ಯಕ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಾವು ಬರೆಯುವುದು ಮಾತ್ರವಲ್ಲ ಬರೆಯುತ್ತಿರುವ ಕವಿ- ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಅಭಿಪ್ರಾಯ ಪಟ್ಟರು.

ಸುಲ್ತಾನಪುರ ಗಂಗಾಧರ ಶಾಂತಾಶ್ರಮದ ಶರಣರಾದ ಶರಣಪ್ಪನವರು ಹಾಗೂ ಪ್ರಜಾಪ್ರಸಿದ್ಧ ಪತ್ರಿಕೆಯ ಉಪಸಂಪಾದಕರಾದ ರಘುನಾಥರೆಡ್ಡಿ ಮನ್ಸಲಾಪುರ ಅವರು ವೇದಿಕೆಯಲ್ಲಿದ್ದರು. ಗುರುಬಸವ ಹುರಕಡ್ಲಿ  ಶ್ರೀಗುರು ಪ್ರಾರ್ಥನೆ ಸಲ್ಲಿಸಿದರು.ಬಸವಲಿಂಗ ಕರಿಗಾರ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರೆ ಷಣ್ಮುಖ ಹೂಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮುಕ್ಕಣ್ಣ ಕರಿಗಾರ ಅವರ ಶಿಷ್ಯರು ಮತ್ತು ಅಭಿಮಾನಿಗಳು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಗಬ್ಬೂರಿನ ಹಿರಿಯರು ಮಹಾಶೈವ ಧರ್ಮಪೀಠದ ಭಕ್ತರು,ಅನುಯಾಯಿಗಳು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಪೂಜ್ಯ ಗಿರಿಮಲ್ಲದೇವರು ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರು ಮತ್ತು ಮುಕ್ಕಣ್ಣ ಕರಿಗಾರ ಅವರ ಶಿಷ್ಯಬಳಗವು ಮುಕ್ಕಣ್ಣ ಕರಿಗಾರ ಅವರನ್ನು ಅವರ ಪತ್ನಿ ಸಾಧನಾ ಕರಿಗಾರ ಅವರ ಸಮೇತ ಸನ್ಮಾನಿಸಿ,ಗೌರವಿಸಿದರು.

 

         ಬಸವರಾಜ ಕರೆಗಾರ ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author