ಮೂರನೇ ಕಣ್ಣಿನಿಂದ ಕಂಡ ಜಗತ್ತ’ನ್ನು ಪ್ರವೇಶಿಸುವ ಮುನ್ನ : ಮುಕ್ಕಣ್ಣ ಕರಿಗಾರ

ಕವಿ- ಸಾಹಿತಿಗಳು ಸಾಮಾಜಿಕ ಬದ್ಧತೆಯಿಂದ ಬದುಕಬೇಕು,ಬರೆಯಬೇಕು ಎಂದು ನಂಬಿರುವ ನಾನು ಈ ನನ್ನ ನಂಬಿಕೆಗೆ ಬದ್ಧನಾಗಿ ಬದುಕುತ್ತ,ಬರೆಯುತ್ತ ‘ ಕಲ್ಯಾಣ ಕಾವ್ಯ’ ಎನ್ನುವ ನನ್ನದೆ ಆದ ಕಾವ್ಯಮಾರ್ಗದ ಮೂಲಕ ಹೊರಹೊಮ್ಮಿಸುತ್ತಿದ್ದೇನೆ ನನ್ನ ಜನಬದ್ಧತೆಯ ಸಾಹಿತ್ಯ ಸೃಷ್ಟಿಯನ್ನು .ಪ್ರಜಾಪ್ರಭುತ್ವ ಭಾರತವು ಸೇರಿದಂತೆ ಮುಕ್ತತೆಯನ್ನು ಆನಂದಿಸುತ್ತಿರುವ ಆಧುನಿಕ ವಿಶ್ವದ ಕಲ್ಯಾಣಕ್ಕೆ ತುಡಿಯುವ,ದುಡಿಯುವ ಹೊಣೆಗಾರಿಕೆಯೂ ಬರಹಗಾರರ ಮೇಲೆ ಇದೆ.ಕೀಳುವಾಂಛೆಯ ಸ್ವಾರ್ಥ ತೊರೆದಲ್ಲದೆ ಸತ್ತ್ವಸಿದ್ಧಿಸದು ಸಾಹಿತ್ಯಕ್ಕೆ.’ ಬದುಕು ದೊಡ್ಡದಾಗದೆ ಬರಹವೂ ದೊಡ್ಡದಾಗದು’ ಎನ್ನುವ ಎಚ್ಚರದಲ್ಲಿ ಬರೆಯುವವರೇ ಶ್ರೇಷ್ಠ ಸಾಹಿತಿಗಳು.ಪದವಿ -ಪ್ರಶಸ್ತಿ,ಮಾನ- ಮನ್ನಣೆಗಳನ್ನು ಪಡೆಯುವುದರಿಂದ ಕವಿ- ಸಾಹಿತಿಗಳು ದೊಡ್ಡವರಾಗುವುದಿಲ್ಲ,ಅವರ ವ್ಯಕ್ತಿತ್ವ ದೊಡ್ಡದಾಗದೆ.ಕವಿ- ಸಾಹಿತಿಗಳು ಸಮಾಜ,ರಾಷ್ಟ್ರಕ್ಕೆ ಗುರುವಾಗಬೇಕು,ಮಾರ್ಗದರ್ಶಕರಾಗಬೇಕು.ಸಮಾಜದ ಅಸ್ವಸ್ಥತೆ,ಅನೀತಿ,ಅನಾಚಾರಗಳನ್ನು ಖಂಡಿಸುತ್ತಲೇ ಆರೋಗ್ಯವಂತ ಸಮಾಜವನ್ನು ಕಟ್ಟುವ ಪ್ರಯತ್ನದಲ್ಲಿ ಮುಂದಾಳುಗಳಾಗಬೇಕು.ರಾಜಕಾರಣದಲ್ಲಿ ಅನಾಸಕ್ತರಾಗದೆ ಪ್ರಜಾಹಿತ ಸಾಧಿಸುವ ರಾಜಗುರುಗಳಾಗಬೇಕು,ರಾಜಕಾರಣಿಗಳಿಗೆ ಬುದ್ಧಿಹೇಳುವ ಮಾರ್ಗದರ್ಶಕರುಗಳಾಗಬೇಕು.ಪಕ್ಷನಿಷ್ಠೆಯಿಂದ ಇದು ಸಾಧ್ಯವಾಗದು; ಪಕ್ಷಾತೀತವಾದ ನೆಲೆಯಲ್ಲಿ ಸಾರ್ವಜನಿಕರ ಹಿತವನ್ನಷ್ಟೇ ಲಕ್ಷ್ಯದಲ್ಲಿರಿಸಿಕೊಂಡು ಬದುಕುವ,ಬರೆಯುವ ಕವಿ- ಸಾಹಿತಿಗಳು ರಾಜಕಾರಣಿಗಳು ಸೇರಿದಂತೆ ಸರ್ವಜನರ ಗೌರವಾದರಗಳಿಗೆ ಪಾತ್ರರಾಗುತ್ತಾರೆ.ಮಹಾಕವಿ ಕುವೆಂಪು ಅವರು ಹೇಳಿದಂತೆ ‘ ಕವಿಗಳಿಗರಸುಗಳಂಕೆಯಿಲ್ಲ’ ಎನ್ನುವದನ್ನು ಬದುಕಿನ ಧ್ಯೇಯವನ್ನಾಗಿರಿಸಿಕೊಳ್ಳಬೇಕು ಸಾಹಿತಿಗಳು.ಭೀತಿ- ಪ್ರೀತಿಗಳ ಅಂಕೆ- ಶಂಕೆಗಳಿಗೊಳಗಾಗಿ ಬರೆಯುವವರು ನಿಜವಾದ ಕವಿಗಳಲ್ಲ,ಸಾಹಿತಿಗಳಲ್ಲ.ಒಳ್ಳೆಯದನ್ನು ಮೆಚ್ಚುವ,ಕೆಟ್ಟದ್ದನ್ನು ಖಂಡಿಸುವ ಗುಣ ಸಹಜವಾಗಿರಬೇಕು ಕವಿ- ಸಾಹಿತಿಗಳಿಗೆ.ಇದಿಲ್ಲದ ಅಂಜುಬುರಕರು ಹಣೆಪಟ್ಟಿಯಿಂದಲಷ್ಟೇ ಕವಿಗಳು,ಸಾಹಿತಿಗಳು.ಸ್ವಹಿತವೇ ಮುಖ್ಯವಾದವರು ಸಮಾಜಮುಖಿಯಾಗಿ ಎಂತು ದುಡಿಯಬಲ್ಲರು? ಸಮಾಜ- ರಾಷ್ಟ್ರವನ್ನು ಎಂತು ಸ್ಫೂರ್ತಿಗೊಳಿಸಬಲ್ಲರು? ಸೂರ್ಯನು ಬೆಳಕು ಮಾತ್ರವಲ್ಲ,ಬೆಂಕಿಯೂ ಅಹುದು.ಕವಿ ಸಾಹಿತಿಗಳು ಬೆಳಕಾಗಬೇಕು,ಬೆಂಕಿಯೂ ಆಗಬೇಕು ಸಮಯ- ಸನ್ನಿವೇಶಗಳೊದಗಿ ಬಂದಲ್ಲಿ; ಬರಿಯ ಬೆಳದಿಂಗಳನ್ನಾಶಿಸುವ ಸುಖಲೋಲುಪರು ಆಗಬಾರದು.

ಈ ಎಲ್ಲ ಆಸೆ- ಆಶಯಗಳು ಅಕ್ಷರ ರೂಪ ತಾಳಿವೆ ‘ ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಎನ್ನುವ ಈ ವೈಚಾರಿಕ ಲೇಖನಗಳ ಸಂಕಲನದಲ್ಲಿ.ನಾನು ಆಗಾಗ ವಾಟ್ಸಾಪ್ ನಲ್ಲಿ ಬರೆಯುತ್ತಿದ್ದ,ಇತರ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಆಗುತ್ತಿದ್ದ ಲೇಖನಗಳನ್ನೇ ಇಲ್ಲಿ ಸಂಕಲಿಸಲಾಗಿದೆ.ಇಲ್ಲಿಯ ಬಹುಪಾಲು ಬರಹಗಳು ಸ್ನೇಹಿತರು,ಶಿಷ್ಯರುಗಳು ಮತ್ತು ಅನುಯಾಯಿಗಳ ಕೋರಿಕೆಯ ಮೇರೆಗೆ ಮೂಡಿಬಂದ ಲೇಖನಗಳು.ಕಾರವಾರದಿಂದ ‘ ಸಾಗರ ಸಾಮ್ರಾಟ ‘ ದಿನಪತ್ರಿಕೆಯನ್ನು ಪ್ರಕಟಿಸುತ್ತಿರುವ ಸ್ನೇಹಿತ ನಾಗೇಂದ್ರ ಖಾರ್ವಿ ಅವರ ಒತ್ತಾಸೆಯೇ ಇಲ್ಲಿನ ಬಹುಪಾಲು ಲೇಖನಗಳು ಹೊರಬರಲು ಕಾರಣ.ನಾಗೇಂದ್ರ ಖಾರ್ವಿಯವರು ಆಗಾಗ ‘ ಸರ್, ಚಿಂತನೆಗಳನ್ನು ಬರೆಯಿರಿ,ಸಾಂದರ್ಭಿಕ ಲೇಖನಗಳನ್ನು ಬರೆಯಿರಿ’ ಎಂದು ಒತ್ತಾಯಿಸುತ್ತಿದ್ದರು.ಅವರ ಪ್ರೀತಿ ಮತ್ತು ಸಾಗರ ಸಾಮ್ರಾಟ ಪತ್ರಿಕೆಯ ಪ್ರಬುದ್ಧ ಓದುಗರ ಜ್ಞಾನಾಸಕ್ತಿಯನ್ನು ತಣಿಸಲೆಂದೇ ಬರೆಯಲ್ಪಟ್ಟ ಲೇಖನಗಳೇ ಬಹಳಷ್ಟಿವೆ ಸಂಕಲನದಲ್ಲಿ.

ನಾಗೇಂದ್ರ ಖಾರ್ವಿ ಅವರಂತೆ ನಾಲ್ಕಾರು ಜನ ಆತ್ಮೀಯ ಮಿತ್ರರುಗಳು ಆಗಾಗ ನನ್ನಿಂದ ಲೇಖನ,ವಿವರಗಳನ್ನು ಬಯಸಿದ್ದರಿಂದ ಬರೆದಿದ್ದೇನೆ ಸಂಕಲನದ ಲೇಖನಗಳನ್ನು.ಪ್ರಜಾವಾಣಿ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರರಾಗಿರುವ ಪ್ರವೀಣಕುಮಾರ ಅವರು ಅಂತಹ ಮಿತ್ರರಲ್ಲಿ ಪ್ರಮುಖರು.ಇಲ್ಲಿನ ಬಹಳಷ್ಟು ಲೇಖನಗಳು ಪ್ರವೀಣಕುಮಾರ ಅವರ ಕೋರಿಕೆ,ಅಪೇಕ್ಷೆಯಂತೆ ಮೂಡಿ ಬಂದಿವೆ.ಸದಾ ಹೊಸತನಕ್ಕೆ ತುಡಿಯುವ,ಭಾರತೀಯ ಸಮಾಜ- ಸಂಸ್ಕೃತಿಗಳಲ್ಲಿ ಆಸಕ್ತಿ ಇದ್ದೂ ಚಿಕಿತ್ಸಕ ಬುದ್ಧಿಯಿಂದ ಅವುಗಳನ್ನು ಅವಲೋಕಿಸುವ ಪ್ರವೀಣಕುಮಾರ ಅವರು ನನ್ನಿಂದ ಇಲ್ಲಿಯ ಲೇಖನಗಳನ್ನು ಬರೆಸಿದ್ದಾರೆ ಆಗಾಗ.ನನ್ನ ಆತ್ಮೀಯರೂ ಹಿರಿಯರೂ ಆಗಿರುವ ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಹಿರಿಯ ಕವಿಗಳೂ ಆಗಿರುವ ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರು ಸಹ ಆಗಾಗ ನನ್ನಿಂದ ಮಾಹಿತಿ,ವಿವರಗಳನ್ನು ನಿರೀಕ್ಷಿಸಿದ ಪ್ರಶ್ನೆಗಳಿಗೆ‌ ಉತ್ತರವಾಗಿ ಹೊರಹೊಮ್ಮಿದ ಲೇಖನಗಳು ಇಲ್ಲಿವೆ. ರಾಯಚೂರು ಜಿಲ್ಲೆಯ ಪ್ರಗತಿಪರ ಸ್ವಾಮಿಗಳೆಂದೇ ಹೆಸರಾಗಿರುವ ದೇವರಗುಡ್ಡ- ಹತ್ತಿಗೂಡೂರು ತಪೋವನಮಠಗಳ ಪೀಠಾಧಿಪತಿಗಳಾದ ಗಿರಿಮಲ್ಲ ದೇವರು ಸ್ವಾಮೀಜಿಯವರ ಆಧ್ಯಾತ್ಮಿಕ ಅಪೇಕ್ಷೆಯ ಪ್ರಶ್ನೆಗಳಿಗೆ ಉತ್ತರರೂಪವಾಗಿ ಮೂಡಿದ ಲೇಖನಗಳೂ ಇಲ್ಲಿವೆ. ನಮ್ಮ ಮಹಾಶೈವ ಧರ್ಮಪೀಠದ ನಿಷ್ಠಾಗರಿಷ್ಠತೆಗೆ ಹೆಸರಾಗಿರುವ,ಧರ್ಮಪೀಠದ ವಿವಿಧ ಕಾರ್ಯಚಟುವಟಿಕೆಗಳ ಸಂಚಾಲಕ ಶಕ್ತಿಗಳಾಗಿರುವ ಬಸವರಾಜ ಭೋಗಾವತಿ,ಬಸವರಾಜ ಕರೆಗಾರ, ರಘುನಂದನ್ ಪೂಜಾರಿ,ಗುರುಬಸವ ಹುರಕಡ್ಲಿ ಶಿವಪುತ್ರ ಕರಿಗಾರ ಮತ್ತು ಅಳಿಯ ಮಲ್ಲಿಕಾರ್ಜುನ ಬಂಟಗುಂಟಿ ಅವರ ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಲೇಖನಗಳಾಗಿ ಮೈದಳೆದಿವೆ.ಹಬ್ಬ- ಆಚರಣೆಗಳ ಸಂದರ್ಭಗಳಲ್ಲಿ ಮೂಡಿದ ಲೇಖನಗಳು ಕೆಲವಾದರೆ ರಾಜ್ಯ- ರಾಷ್ಟ್ರದ ಅಂದಂದಿನ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಮೂಡಿದ ಲೇಖನಗಳು ಹಲವು.ಯಾವುದೇ ‘ಇಸಂ’ಗಳ ಹಂಗಿಗೆ ಒಳಗಾಗದ ನಾನು ಯಾರ ಅಭಿಮಾನಿಯೂ ಅಲ್ಲ; ಯಾರ ವಿರೋಧಿಯೂ ಅಲ್ಲ.ಸುಳ್ಳು ಸೆಟೆಗಳ ವಿರುದ್ಧ ದಿಟವನ್ನು ಪ್ರತಿಪಾದಿಸುತ್ತ ಬಂದ ಸತ್ಯಪ್ರತಿಪಾದಕ,ನಿಷ್ಠುರವಾದಿ.ವೈಯಕ್ತಿಕವಾಗಿ ಯಾರ ಬಗ್ಗೆಯೂ ದ್ವೇಷವಿಲ್ಲ ನನಗೆ; ಆದರೆ ಸಮಷ್ಟಿ ಹಿತಕ್ಕೆ ಧಕ್ಕೆಯೊದಗುತ್ತಿದೆ ಎನ್ನಿಸಿದಾಗ ಅವರು ಯಾರೇ ಆಗಿರಲಿ,ಎಷ್ಟೇ ದೊಡ್ಡವರಿರಲ್ಲಿ ಅವರನ್ನು ಖಂಡಿಸದೆ ಬಿಡುವುದಿಲ್ಲ.ಸಮಾಜಪರ ಕಾಳಜಿ ಮತ್ತು ಸಮಷ್ಟಿಕಲ್ಯಾಣ ದೃಷ್ಟಿಯೇ ಈ ಸಂಕಲನದ ಲೇಖನಗಳ ಮೂಲದ್ರವ್ಯ,ಆಶಯ.ಈ ದೃಷ್ಟಿಯಿಂದ ಓದಬೇಕು ಇಲ್ಲಿಯ ನನ್ನ ಲೇಖನಗಳನ್ನು.

ನನ್ನಿಂದ ಲೇಖನಗಳನ್ನು ಬರೆಸಿದ್ದಲ್ಲದೆ ಈ ಸಂಕಲನದ ಹತ್ತಾರು ಲೇಖನಗಳನ್ನು ಹುಟುಕಿಕೊಟ್ಟು ಲೇಖನದ ಸತ್ತ್ವ,ಸಮೃದ್ಧಿಗೆ ಕಾರಣರಾಗಿದ್ದಾರೆ ‘ಪ್ರಜಾವಾಣಿ’ ದಿನಪತ್ರಿಕೆಯ ಯಾದಗಿರಿ ಜಿಲ್ಲಾ ವರದಿಗಾರರಾಗಿರುವ ಪ್ರವೀಣಕುಮಾರ ಅವರು.ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ನಲ್ಲೇ ಸಾಹಿತ್ಯ ರಚಿಸುತ್ತಿರುವ ನಾನು ವಾಟ್ಸಾಪ್ ಕೈಕೊಟ್ಟು ನನ್ನ ಹತ್ತು ಹಲವು ಲೇಖನಗಳು
ಕಣ್ಮರೆಯಾದ ಸಂದರ್ಭಗಳಲ್ಲಿ‌ಪರಿತಪಿಸಿದ್ದುಂಟು.’ಮೂರನೇ ಕಣ್ಣಿನಿಂದ ಕಂಡ ಜಗತ್ತು’ ಎನ್ನುವ ವೈಚಾರಿಕ ಲೇಖನಗಳನ್ನು ನನ್ನ ೫೩ ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಪ್ರಕಟಿಸಲು ಉದ್ದೇಶಿಸಿ ತಡಕಾಡಿದಾಗ ವಾಟ್ಸಾಪ್ ರಾಕ್ಷಸ ಬಹುಪಾಲು ಲೇಖನಗಳು ನುಂಗಿ ನೊಣೆದದ್ದು ಕಂಡು ಗಾಬರಿಯಾಗಿತ್ತು.ಪ್ರವೀಣಕುಮಾರ ಅವರು ನನ್ನೆಲ್ಲ ಲೇಖನಗಳನ್ನು ಅವರ ಫೇಸ್ ಬುಕ್ ಅಕೌಂಟಿನಲ್ಲಿ ಶೇರ್ ಮಾಡಿದ್ದಲ್ಲದೆ ಭದ್ರವಾಗಿ ಸಂರಕ್ಷಿಸಿಕೊಂಡಿದ್ದರು,ಹತ್ತಕ್ಕೂ ಹೆಚ್ಚು ಲೇಖನಗಳನ್ನು ಹುಡುಕಿಕೊಟ್ಟು ನನ್ನನ್ನು ನಿರಾಂತಕಿತನನ್ನಾಗಿ ಮಾಡಿದರು.ನನ್ನ ಮೇಲಿನ ಅವರ ಪ್ರೀತಿ,ಅಭಿಮಾನಗಳ ಕಾರಣದಿಂದಾಗಿ ಈ ಕೃತಿಯು ಸಮಗ್ರವಾಗಿ,ಸಮೃದ್ಧವಾಗಿ ಮೂಡಿ ಬರಲು ಕಾರಣವಾಯಿತು.ಪ್ರವೀಣಕುಮಾರ ಅವರಿಗೆ ನನ್ನ ವಿಶೇಷ ನೆನಕೆಗಳು ಸಲ್ಲುತ್ತವೆ.

ಇಲ್ಲಿಯ ಕೆಲವು ಲೇಖನಗಳು ಓದಿ ಸಂತಸಾಭಿಮಾನದ ಸಹಮತವನ್ನು ವ್ಯಕ್ತಪಡಿಸಿದ ಕನ್ನಡದ ಹಿರಿಯಚೇತನ,ಕವಿ ಎಚ್ ಎಸ್ ಶಿವಪ್ರಕಾಶ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ನನ್ನ ಬರಹಗಳನ್ನು ಪ್ರೀತಿಯಿಂದ ಓದುವ,ಉಚಿತವೆನ್ನಿಸುವ ಬರಹಗಳನ್ನು ತಮ್ಮ ಸಂಪಾದಕತ್ವದ ‘ ಸಮಾಜಮುಖಿ’ ಮಾಸಪತ್ರಿಕೆಯಲ್ಲಿ ಪ್ರಕಟಿಸುತ್ತ ಪ್ರೋತ್ಸಾಹಿಸುತ್ತಿರುವ ಹಿರಿಯ‌ ಪತ್ರಕರ್ತರೂ ಸಾಹಿತಿಗಳೂ ನನ್ನ ಹಿತೈಷಿಗಳೂ ಆದ ಚಂದ್ರಕಾಂತ ವಡ್ಡು ಅವರಿಗೆ ಕೃತಜ್ಞತೆಗಳನ್ನರ್ಪಿಸುವೆ.

ನನ್ನಲ್ಲಿ ಅನನ್ಯ ನಿಷ್ಠೆಯನ್ನಿಟ್ಟು ನನ್ನ ಸಾಹಿತ್ಯ ಕೃತಿಗಳ ಪ್ರಸಾರ- ಪ್ರಚಾರವನ್ನು ಮಾಡುತ್ತಿರುವ ಶಹಾಪುರದ ಸಾಹಿತ್ಯಶಕ್ತಿ,ಮಿತ್ರ ಬಸವರಾಜ ಸಿನ್ನೂರ ಅವರಿಗೆ ಕೃತಜ್ಞತೆಗಳು.

ಇಲ್ಲಿಯ ಲೇಖನಗಳನ್ನು ತಮ್ಮ‌ಪತ್ರಿಕೆಗಳಲ್ಲಿ ಪ್ರಕಟಿಸಿದ ‘ಸಾಗರ ಸಾಮ್ರಾಟ’ ಪತ್ರಿಕೆಯ ಸಂಪಾದಕರಾದ ನಾಗೇಂದ್ರ ಖಾರ್ವಿ, ‘ ಶರಣಾರ್ಥಿ ಕನ್ನಡಿಗರೆ’ ದೈನಿಕದ ಸಂಪಾದಕರಾದ ಶರಣು ಬಿ ಗದ್ದುಗೆ,’ ‘ಯಾದಗಿರಿ ಟೈಮ್ಸ್’ ದಿನಪತ್ರಿಕೆಯ ಸಂಪಾದಕರಾದ ವೈಜನಾಥ ಹಿರೇಮಠ ಮತ್ತು ಇಲ್ಲಿಯ ಕೆಲವು ಲೇಖನಗಳು ರಾಯಚೂರಿನಿಂದ ಪ್ರಕಟಗೊಳ್ಳುತ್ತಿರುವ ‘ ಪ್ರಜಾಪ್ರಸಿದ್ಧ’ ದಿನಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಕಾರಣರಾದ ಕವಿಮಿತ್ರ ರಘುನಾಥರೆಡ್ಡಿ ಮನ್ಸಲಾಪುರ ಮತ್ತು ಪತ್ರಿಕೆಯ ಸಂಪಾದಕರಾದ ಬಿ.ಶಿವರಾಜ ಅವರಿಗೆ ಹಾಗೂ ಪ್ರಜಾಸಾಕ್ಷಿ ದಿನಪತ್ರಿಕೆಯ ಸಂಪಾದಕರಾದ ರಮೇಶ ಗೊರೇಬಾಳ ಅವರಿಗೆ ಹಾಗೂ ವೆಬ್ ಪೋರ್ಟಲ್ ಗಳಲ್ಲಿ ಲೇಖನಗಳನ್ನು ಪ್ರಕಟಿಸಿ,ಪ್ರೀತಿ- ಅಭಿಮಾನಗಳನ್ನು ವ್ಯಕ್ತಪಡಿಸಿರುವ ಆತ್ಮೀಯರುಗಳಾದ ಬಸವರಾಜ ಭೋಗಾವತಿ ಮತ್ತು ಬಸವರಾಜ ಕರೆಗಾರ ಹಾಗೂ ಈರಣ್ಣ ಮರ್ಲಟ್ಟಿ ಅವರುಗಳಿಗೆಲ್ಲ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ನನ್ನನ್ನು ಪ್ರೀತ್ಯಾಭಿಮಾನಗಳಿಂದ ಕಂಡು ಬರವಣಿಗೆಯನ್ನು ಪ್ರೋತ್ಸಾಹಿಸುತ್ತಿರುವ ಸಾಹಿತಿ ಮಿತ್ರರುಗಳಾದ ಶಾಶ್ವತ ಸ್ವಾಮಿ ಮುಕ್ಕುಂದಿ ಮಠ, ಅಯ್ಯಪ್ಪಯ್ಯ ಹುಡಾ ,ರಘುನಾಥರೆಡ್ಡಿ ಮನ್ಸಲಾಪುರ,ಆಂಜನೇಯ ಜಾಲಿಬೆಂಚಿ, ಮಲ್ಲಿಕಾರ್ಜುನ ದೇಸಾಯಿ,ಸಿದ್ಧನಗೌಡ ಮಾಲೀಪಾಟೀಲ್, ಸಿದ್ಧರಾಮ ಹೊನ್ಕಲ್,ಚಿದಾನಂದಯ್ಯ ಚೂಟಿ,ಮರುಳಸಿದ್ಧಪ್ಪ ಹುಲಕೋಟಿ ಅವರುಗಳಿಗೆ ಕೃತಜ್ಞತೆಗಳು

ವಾಟ್ಸಾಪ್ ನಲ್ಲಿ ಮೂಡಿ ಬರುತ್ತಿದ್ದ ಇಲ್ಲಿಯ ಲೇಖನಗಳಲ್ಲಿ ಭಾರತದ ಸಂವಿಧಾನ ಮತ್ತು ಕಾನೂನು ವಿಷಯಗಳ ಕುರಿತ ಲೇಖನಗಳನ್ನು ಓದಿ,ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ ಕಲ್ಬುರ್ಗಿ ಹೈಕೋರ್ಟಿನ ಖ್ಯಾತ ವಕೀಲರುಗಳಾದ ಅರುಣಕುಮಾರ ಅಮರಗುಂಡಪ್ಪ,ಶಿವಾನಂದ ಪಟ್ಟಣಶೆಟ್ಟಿ,ರಾಯಚೂರಿನ ಖ್ಯಾತವಕೀಲರಾದ ನಾಗರಾಜ ಮಸ್ಕಿ ಮತ್ತು ವೃತ್ತಿಯಲ್ಲಿ ವಕೀಲರಾಗಿ ನನ್ನ ಆತ್ಮೀಯರುಗಳಾಗಿರುವ ಮುಕ್ಕಣ್ಣ ಶಾವಂತಗಲ್,ಬಸ್ಸನಗೌಡ ದೇಸಾಯಿ, ಬಿ.ಮಲ್ಲೇಶ ಅತ್ತನೂರು ಅವರುಗಳಿಗೆ ನನ್ನ ಕೃತಜ್ಞತೆಗಳು.
ಮಹಾಶೈವ ಧರ್ಮಪೀಠ ಸಾಂಸ್ಕೃತಿಕ ಸಮಿತಿಯ ಸದಸ್ಯಕಾರ್ಯದರ್ಶಿಗಳಾದ ಡಾ.ಎನ್ ಹೆಚ್ ಪೂಜಾರ ಅವರಿಗೆ ಮತ್ತು ಸದಸ್ಯರುಗಳಾದ ಷಣ್ಮುಖ ಹೂಗಾರ,ಗಂಗಾಧರಮೂರ್ತಿ,ಬಸವಲಿಂಗ ಕರಿಗಾರ ಅವರುಗಳಿಗೆ ನನ್ನ ನೆನಕೆಗಳು.ಇವರ ಜೊತೆಗೆ ನನ್ನ ಸಾಹಿತ್ಯವನ್ನು ಓದಿ,ಆನಂದಿಸಿ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಪ್ರೀತಿ,ಅಭಿಮಾನಗಳನ್ನು ಮೆರೆಯುತ್ತಿರುವ ಮಲ್ಲಿಕಾರ್ಜುನ ಬಾಗಲವಾಡ,ವೆಂಕನಗೌಡ ವಟಗಲ್,ಯಲ್ಲಪ್ಪ ಹಿರೇದಿನ್ನಿ,ಹನುಮೇಶ ಹಿರೇದಿನ್ನಿ ಅವರುಗಳಿಗೆ ನನ್ನ ನೆನಕೆಗಳು ಸಲ್ಲಲೇಬೇಕು.

ಅಕ್ಷರ ಬಾರದೆ ಇದ್ದರೂ ಮಗನನ್ನು ಅಕ್ಷರಲೋಕದ ವಿಸ್ಮಯವನ್ನಾಗಿ ರೂಪಿಸಿದ ನನ್ನಮ್ಮ ಮಲ್ಲಮ್ಮ ನಾಗಪ್ಪ ಕರಿಗಾರ ಅವರಿಗೆ ಕೃತಜ್ಞತೆಯ ನಮನಗಳು ಸಲ್ಲಿಸುತ್ತೇನೆ.
ನನ್ನ ಸಾಹಿತ್ಯರಚನೆಯ ಸ್ಫೂರ್ತಿಶಕ್ತಿಯಾಗಿ ,ಒಮ್ಮೆಮ್ಮೆ ತಡರಾತ್ರಿಯಾದರೂ ಬರೆಯುತ್ತಿರುವ ನನ್ನಲ್ಲಿ ಬೇಸರಿಸದೆ ಚಹಾ ಕಾಫಿ ಮಾಡುತ್ತ ಬರವಣಿಗೆ ಸರಾಗವಾಗಿ ನಡೆಯಲು ಕಾರಣಳಾದ ಮಡದಿ ಸಾಧನಾಳಿಗೆ,ಬರೆಯಲು ಅಡ್ಡಿ- ಆತಂಕಗಳನ್ನೊಡದೆ ದೂರ ಹೋಗುತ್ತಿದ್ದ ಎಳೆಯ ಮಕ್ಕಳುಗಳಾದ ವಿಂಧ್ಯಾ ಮತ್ತು ನಿತ್ಯಾರಿಗೆ ನನ್ನ ವಿಶೇಷ ನೆನಕೆಗಳನ್ನು ಸಲ್ಲಿಸಲೇಬೇಕು.

ಈ ಕೃತಿಯನ್ನು ಮಹಾಶೈವ ಪ್ರಕಾಶನದಿಂದ ಪ್ರಕಟಿಸುತ್ತಿರುವ ಅಳಿಯಂದಿರುಗಳಾದ ತ್ರಯಂಬಕೇಶ,ಅಯ್ಯಾಳಪ್ಪ,ಸುನಿಲ್ ಹಾಸಗೊಂಡ,ಅನಿಲ್ ಹಾಸಗೊಂಡ ಮತ್ತು ಶಿಷ್ಯಂದಿರೂ ಆತ್ಮೀಯರೂ ಆಗಿರುವ ಶಿವರಾಜ ಪವಾರ, ವರದರಾಜ ಅಬ್ಕಾರಿ,ಗಂಗಣ್ಣ ಬುದ್ದಿನ್ನಿ,ಪ್ರಭು ಕರಿಗಾರ, ಮಲ್ಲಿಕಾರ್ಜುನ ಗದಾರ,ಬಸವರಾಜ ಜಿ ಕರಿಗಾರ, ಬಸವರಾಜ ಗ್ರಂಥಪಾಲಕ,ಯಲ್ಲಪ್ಪ ಕರಿಗಾರ,ಶ್ರೀಶೈಲ ಕರಿಗಾರ,ಪಂಚಯ್ಯ ಕರಿಗಾರ,ಮಂಜುನಾಥ ಕರಿಗಾರ, ಸಣ್ಣ ಮುಕ್ಕಣ್ಣ ಕರಿಗಾರ,ಹರವಿ ಬಸವರಾಜ ಕರಿಗಾರ ,ಬಿಬ್ಬಣ್ಣ ಮರಾಠಮೊದಲಾದವರೆಲ್ಲರಿಗೂ ನನ್ನ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ

ಕೃತಿಯು ಕೆಲವೇ ದಿನಗಳ ಅವಧಿಯಲ್ಲಿ ಸರ್ವಾಂಗಸುಂದರವಾಗಿ ಹೊರಬರಲು ಕಾರಣರಾದ ಬೆಂಗಳೂರಿನ ಯಂತ್ರೋದ್ಧಾರಕ ಪ್ರೆಸ್ ನ ಮಾಲೀಕರೂ ಆತ್ಮೀಯರೂ ಆದ ಅನಿಲಕುಮಾರ ಅವರಿಗೆ ಮತ್ತು ಅವರ ಮುದ್ರಣಾಲಯದ ಬಳಗದವರಿಗೆ ಹಾಗೂ ಡಿ ಟಿ ಪಿ ಮಾಡಿದ ಹರೀಶ ಅವರಿಗೆ ನನ್ನ ಕೃತಜ್ಞತೆಗಳು.

ಪುಸ್ತಕವನ್ನು ಓದಿ,ಆನಂದಿಸುತ್ತೀರಿ ಎಂದು ನಂಬಿದ್ದೇನೆ

ಮುಕ್ಕಣ್ಣ ಕರಿಗಾರ
ಮಹಾಶೈವ ಧರ್ಮಪೀಠ
ಗಬ್ಬೂರು

About The Author