ಬಡವರು ಶೋಷಿತ ವರ್ಗಗಳ ಮಕ್ಕಳ ಶಿಕ್ಷಣದ ಹಕ್ಕಿಗೆ ತಮಿಳುನಾಡು ಸರ್ಕಾರದ ಸಾಮಾಜಿಕ ಬದ್ಧತೆಯ ಕ್ರಾಂತಿಕಾರಕ ಯೋಜನೆ ಬೆಳಗಿನ ಉಪಹಾರ ಯೋಜನೆ : ಮುಕ್ಕಣ್ಣ ಕರಿಗಾರ

ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಷ್ಟೇ ಅಲ್ಲ ಮಕ್ಕಳನ್ನು ಸುಶಿಕ್ಷಿತರನ್ನಾಗಿ ರೂಪಿಸುವುದು ಸಮಾಜ ಮತ್ತು ಪ್ರಜಾಸತ್ತಾತ್ಮಕ ಸರ್ಕಾರಗಳ ಆದ್ಯ ಕರ್ತವ್ಯವೂ ಹೌದು.ಬಡವರು,ಶೋಷಿತ ಸಮುದಾಯ ಮಕ್ಕಳು ಬಡತನ ಮತ್ತು ಆಹಾರದ ಸಮಸ್ಯೆಯಿಂದಾಗಿ ಶಾಲೆಗೆ ಹೋಗುತ್ತಿಲ್ಲವೆಂದು ಮನಗಂಡು ಕರ್ನಾಟಕ ಸರ್ಕಾರವು ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೆ ತಂದಿವೆ.ಮಧ್ಯಾಹ್ನದ ಬಿಸಿಯೂಟದ ಯೋಜನೆಯಿಂದ ಶಾಲೆಯಿಂದ ಹೊರಗುಳಿಯುತ್ತಿದ್ದ ಮಕ್ಕಳು ಗಣನೀಯ ಸಂಖ್ಯೆಯಲ್ಲಿ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ.

ತಮಿಳುನಾಡು ಸರ್ಕಾರ ಪ್ರಾಥಮಿಕ ಶಿಕ್ಷಣವನ್ನು ಪ್ರೋತ್ಸಾಹಿಸಲು ಒಂದು ವಿನೂತನ ಕಾರ್ಯಕ್ರಮವನ್ನು ಇತ್ತೀಚೆಗೆ ಅನುಷ್ಠಾನಗೊಳಿಸಿದೆ.ಬಹುಶಃ ರಾಷ್ಟ್ರದಲ್ಲಿಯೇ ಮೊದಲು ಎನ್ನಬಹುದಾದ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ ಮುಖ್ಯಮಂತ್ರಿಗಳ ಬೆಳಗಿನ ಉಪಹಾರ ಯೋಜನೆ’ ಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ನಿನ್ನೆ ಉದ್ಘಾಟಿಸುವ ಮೂಲಕ ಕಾರ್ಯಾನುಷ್ಠಾನಗೊಳಿಸಿದ್ದಾರೆ.ಮಕ್ಕಳಿಗೆ ಬೆಳಗಿನ ಉಪಹಾರ ಯೋಜನೆಯ ತಮ್ಮ‌ಕನಸು- ಆದ್ಯತೆಗಳನ್ನು ಎಂ ಕೆ ಸ್ಟಾಲಿನ್ ಅವರು ಸೆಪ್ಟೆಂಬರ್ 16,2022 ರ “The Hindu” ಇಂಗ್ಲಿಷ್ ದಿನಪತ್ರಿಕೆಯ ” Breakfast scheme should not be counted as freebie,charity or gift” ಎನ್ನುವ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.ಉಚಿತ ಕೊಡುಗೆಗಳು ರಾಷ್ಟ್ರಕ್ಕೆ ಮಾರಕ ಎನ್ನುವಂತೆ ಉಳ್ಳವರಪರ ಇರುವ ಒಂದು ವರ್ಗವು ವಾದಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಅವರು ” ಬೆಳಗಿನ ಉಪಹಾರ ಯೋಜನೆಯನ್ನು ಉಚಿತಕೊಡುಗೆ,ದಯಾಕಾರ್ಯ ಅಥವಾ ಕೊಡುಗೆ ಎಂದು ಪರಿಗಣಿಸಬಾರದು” ಎಂದು ತಮ್ಮ ಲೇಖನದಲ್ಲಿ ಸಮರ್ಥಿಸಿಕೊಂಡಿದ್ದಾರೆ.ಅವರ ಸಮರ್ಥನೆಯು ಒಪ್ಪತಕ್ಕುದಾಗಿದೆ.ಇದೊಂದು ಕ್ರಾಂತಿಕಾರಕ ಯೋಜನೆ ಎಂದೇ ಹೇಳಬೇಕು.ಬಡವರು ಮತ್ತು ಶೋಷಿತರ ಮಕ್ಕಳುಗಳುಗಳನ್ನು ಶಾಲೆಗಳತ್ತ ಆಕರ್ಷಿಸಲು ಈ ಯೋಜನೆಯು ನೆರವಾಗುತ್ತದೆ.ಯಾವುದೇ ಜವಾಬ್ದಾರಿಯುತ ಸರ್ಕಾರಕ್ಕೆ ಬಡವರು ಮತ್ತು ಶೋಷಿತರ ಮಕ್ಕಳಿಗೆ ಶಿಕ್ಷಣ ಕೊಡುವುದು,ಅವರ ಬದುಕನ್ನು ರೂಪಿಸುವುದು ಆದ್ಯತೆಯ ವಿಷಯವಾಗಬೇಕು.ಉಳ್ಳವರ ಮಕ್ಕಳು ಅತ್ಯಾಧುನಿಕ ಸೌಲಭ್ಯಗಳಿರುವ ಖಾಸಗಿ ಶಾಲೆಗಳಲ್ಲಿ ಓದುತ್ತಾರೆ.ಆದರೆ ಬಡವರ ಮಕ್ಕಳು? ಇಂದಿಗೂ ಬಡವರ ಮಕ್ಕಳುಗಳಿಗೆ ಸರ್ಕಾರಿ ಶಾಲೆಗಳೇ ಆಸರೆ.ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ,ಶಿಕ್ಷಕರ ನೇಮಕಾತಿಯಲ್ಲಿ ಹೆಚ್ಚಳ,ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗುತ್ತಿರುವುದರಿಂದ ಸರ್ಕಾರಿ ಶಾಲೆಗಳೇನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ.ಪ್ರಪಂಚದ ಮುಂದುವರೆದ ರಾಷ್ಟ್ರಗಳಲ್ಲಿಯೂ ಮಕ್ಕಳಿಗೆ ಬೆಳಗಿನ ಉಪಹಾರ ಯೋಜನೆಯು ಅನುಷ್ಠಾನದಲ್ಲಿದೆ ಎಂಬುದನ್ನು ಗಮನಿಸಿದರೆ ಅದು ಉಚಿತ ಕೊಡುಗೆ ಅಥವಾ ಪುಕ್ಕಟೆ ಸವಲತ್ತು ಎನ್ನಿಸಿಕೊಳ್ಳದು.ಅಮೇರಿಕಾದ ಬಹುತೇಕ ರಾಜ್ಯಗಳಲ್ಲಿ ಕೃಷಿ ಇಲಾಖೆಯ ಮೂಲಕ ಮಕ್ಕಳಿಗೆ ಬೆಳಗಿನ ಉಪಹಾರ ನೀಡಲಾಗುತ್ತಿದೆ.ಯುರೋಪಿಯನ್ ರಾಷ್ಟ್ರಗಳಲ್ಲಿಯೂ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಬೆಳಗಿನ ಉಪಹಾರ ನೀಡಲಾಗುತ್ತಿದೆ.ಫ್ರಾನ್ಸ್ ನಲ್ಲಿ ಕಳೆದ ಮೂರು ವರ್ಷಗಳಿಂದ ಮಕ್ಕಳಿಗೆ ಬೆಳಗಿನ ಉಪಹಾರ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.ಪ್ರಪಂಚದ ಅಗಣಿತ ಸಂಪತ್ತಿನ ರಾಷ್ಟ್ರಗಳು ಮತ್ತು ಮುಂದುವರೆದ ರಾಷ್ಟ್ರಗಳಲ್ಲಿಯೇ ಶಾಲೆಗಳಲ್ಲಿ ಮಕ್ಕಳಿಗೆ ಬೆಳಗಿನ ಉಪಹಾರ ಯೋಜನೆಯು ಅನುಷ್ಠಾನದಲ್ಲಿರುವಾಗ ಬಡವರಿಂದ ತುಂಬಿದ ನಮ್ಮ ದೇಶದಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಬೆಳಗಿನ ಉಪಹಾರ ಯೋಜನೆಯನ್ನು ಅನುಷ್ಠಾನಗೊಳಿಸುವುದನ್ನು ಉಚಿತ ಕೊಡುಗೆ ಅಥವಾ ಪುಕ್ಕಟೆ ಸೌಲಭ್ಯ ಎಂದು ಬಿಂಬಿಸಿದರೆ ಅದು ಬಡವರು ಮತ್ತು ಶೋಷಿತ ಸಮುದಾಯ ಮಕ್ಕಳ ಹಕ್ಕುಗಳ ಮೇಲಿನ ದಾಳಿ ಎಂದೇ ಭಾವಿಸಬೇಕು.

ತಮಿಳುನಾಡು ಸರ್ಕಾರವು ಪ್ರಾಥಮಿಕ ಶಿಕ್ಷಣದ ಒಂದರಿಂದ ಐದನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗಾಗಿ ” ಮುಖ್ಯಮಂತ್ರಿಯವರ ಬೆಳಗಿನ ಉಪಹಾರ ಯೋಜನೆ” ಯನ್ನು ನಿನ್ನೆ ಅಂದರೆ ಸೆಪ್ಟೆಂಬರ್ 15,2022 ರಿಂದ ಪ್ರಾರಂಭಿಸಿದೆ.ಈ ಯೋಜನೆಯಡಿ 1545 ಪ್ರಾಥಮಿಕ ಶಾಲೆಗಳ 1.14 ಲಕ್ಷ ಮಕ್ಕಳು ಬೆಳಗಿನ ಉಪಹಾರ ಸೇವಿಸಲಿದ್ದಾರೆ. ತಮಿಳುನಾಡು ಸರಕಾರದ ಅಂದಾಜಿನಂತೆ ಪ್ರತಿದಿನ ಪ್ರತಿ ಮಗುವಿನ ಬೆಳಗಿನ ಉಪಹಾರಕ್ಕೆ 12.75 ರೂಪಾಯಿಗಳು ಖರ್ಚಾಗುತ್ತಿದೆ.ಇದೇನು ಅಂತಹ ಹೊರೆಯಲ್ಲ.ಇದರ ಹಿಂದಣ ಸಾಮಾಜಿಕ ಕಳಕಳಿಯು ಮಹತ್ವದ್ದು.

ಬಡವರು ಮತ್ತು ಶೋಷಿತ ಸಮುದಾಯಗಳ ಮಕ್ಕಳುಗಳು ಬೆಳಗಿನ ಉಪಹಾರವಿಲ್ಲದೆ ಖಾಲಿಹೊಟ್ಟೆಯಲ್ಲಿ ಶಾಲೆಗಳಿಗೆ ಬರುವುದು ಸಾಮಾನ್ಯ ಸಂಗತಿ.ದಿನದ ದುಡಿಮೆಯಿಂದಲೇ ಜೀವನ ನಿರ್ವಹಿಸಬೇಕಾದ ಬಡಕುಟುಂಬಗಳಿಗೆ ಒಂದು ಹೊತ್ತಿನ ಊಟವೇ ಸಿಗುವುದು ಕಷ್ಟಕರವಾಗಿರುವಾಗ ಬೆಳಗಿನ ಉಪಹಾರಕ್ಕೆಲ್ಲಿ ಅವಕಾಶ? ‘ ಕರ್ನಾಟಕ ಸರ್ಕಾರದ ಮಹತ್ವದ ಜನಪರಯೋಜನೆ ಬಡವರಿಗೆ ಉಚಿತ ಪಡಿತರ ಯೋಜನೆಯಡಿ ಸಿಗುತ್ತಿರುವ ಅಕ್ಕಿ,ಗೋಧಿ,ಜೋಳಗಳಂತಹ ಆಹಾರ ಧಾನ್ಯಗಳು ಅವರ ಹೊಟ್ಟೆಯ ಹಸಿವನ್ನು ನೀಗಿಸಲು ನೆರವಾಗಿವೆ.ಉಚಿತಪಡಿತರ ಯೋಜನೆಯಡಿ ದೋಷಗಳಿರಬಹುದು; ಆದರೆ ಗ್ರಾಮೀಣಬಡವರ ಹಸಿವನ್ನು ನೀಗಿಸಿದ ಯೋಜನೆ ಅದು ಎನ್ನುವುದರಲ್ಲಿ ಎರಡು ಮಾತಿಲ್ಲ.ಸರಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಜನಸೇವಾನಿಷ್ಠರಾದ ಪ್ರಾಮಾಣಿಕ ಸರಕಾರಿ ಅಧಿಕಾರಿಗಳು ಇರಬೇಕು ಮತ್ತು ದಲ್ಲಾಳಿಗಳು ಮಧ್ಯೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು.

ತಮಿಳುನಾಡು ಸರ್ಕಾರದ ಮಾದರಿಯನ್ನು ಕರ್ನಾಟಕ ಸರ್ಕಾರವು ಸೇರಿದಂತೆ ಇತರ ರಾಜ್ಯ ಸರ್ಕಾರಗಳು ಅನುಕರಿಸಿ,ಅನುಷ್ಠಾನಕ್ಕೆ ತರಬೇಕು.ರಾಜ್ಯಸರ್ಕಾರಗಳಿಗೆ‌ ಈ ಯೋಜನೆಯ ಅನುಷ್ಠಾನದಿಂದ ಹಲವು ನೂರು ಕೋಟಿಗಳ ಆರ್ಥಿಕ ಹೊರೆ ತಗುಲಬಹುದು.ಆದರೆ “ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು” ತತ್ತ್ವದ ಸರ್ವೋದಯ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯಗಳು ಪ್ರಜಾಪ್ರಭುತ್ವ ಭಾರತದ ಮೂಲ ಆಶಯಗಳಾಗಿರುವಾಗ ಇಂತಹ ಮಹತ್ವದ ಯೋಜನೆಗಳನ್ನು ಆರ್ಥಿಕ ಹೊರೆ ಎಂದು ಪರಿಗಣಿಸಬಾರದು.ಇದು ಸರ್ಕಾರಗಳ ಸಾಮಾಜಿಕ ಜವಾಬ್ದಾರಿಯಾಗಬೇಕು,ಆದ್ಯತೆಯಾಗಬೇಕು.ಖಾಲಿ ಹೊಟ್ಟೆಯಲ್ಲಿ ಕಲಿಯುವ ಬಡಮಕ್ಕಳಿಗೆ ಬೆಳಗಿನ ಉಪಹಾರ ನೀಡುವುದರಿಂದ ಅವರ ಆರೋಗ್ಯವು ಸುಧಾರಿಸಿ,ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ.ಬಡವರು ಮತ್ತು ಶೋಷಿತರ ಮಕ್ಕಳುಗಳ ಅಪೌಷ್ಟಿಕತೆಯ ಸಮಸ್ಯೆಯೂ ಪರಿಹಾರವಾಗುತ್ತದೆ.ಬೆಳಿಗ್ಗೆ ದುಡಿಯಲು ಹೋಗುವ ಮಕ್ಕಳು ಉಪಹಾರದ ಕಾರಣದಿಂದಲಾದರೂ ಶಾಲೆಗೆ ಹಾಜರಾಗುತ್ತಾರೆ.ಉತ್ತಮ ಗುಣಮಟ್ಟದ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಬಿಸಿಯೂಟ ಶಾಲೆಗಳಲ್ಲಿ ದೊರಕುವುದರಿಂದ ಬಡವರ ಮಕ್ಕಳುಗಳ ಆರೋಗ್ಯ ಸುಧಾರಿಸಿ ಕಲಿಕೆಯಲ್ಲಿ ಅವರು ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ.ಬಡಕುಟುಂಬಗಳ ಮೇಲಿನ ಅವರ ಉಪಹಾರ ಮತ್ತು ಒಂದು ಊಟದ ಹೊರೆಯು ತಗ್ಗುವುದರಿಂದ ಬಡವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದೆ ಬರುತ್ತಾರೆ.

ಈಗ ಮಧ್ಯಾಹ್ನದ ಉಪಹಾರವೇ ಶೈಕ್ಷಣಿಕ ಸಮಸ್ಯೆಯಾಗಿರುವಾಗ ಮತ್ತೆ ಬೆಳಗಿನ ಉಪಹಾರ ಯೋಜನೆ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಕೆಲವರು ವಾದಿಸಬಹುದು.ಶಿಕ್ಷಕರು ಮಧ್ಯಾಹ್ನದ ಬಿಸಿಯೂಟ ಮತ್ತು ಬೆಳಗಿನ ಉಪಹಾರಗಳತ್ತಲೇ ಗಮನಹರಿಸುತ್ತಿದ್ದರೆ ಶಾಲೆಗಳಲ್ಲಿ ಪಾಠ ಹೇಳುವುದು ಹೇಗೆ ಎಂಬಿತ್ಯಾದಿ ಕಾರಣಗಳನ್ನು ನೀಡಬಹುದು.ಅದಕ್ಕಾಗಿ ಸರಕಾರವು ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಗಳಿಂದ ಶಿಕ್ಷಕರು,ಮುಖ್ಯೋಪಾಧ್ಯಾಯರುಗಳನ್ನು ಹೊರಗಿಡಬೇಕು.ಸ್ಥಳೀಯ ಗ್ರಾಮ ಪಂಚಾಯತಿ,ಸ್ಥಳೀಯ ಸರ್ಕಾರೇತರ ಸಂಸ್ಥೆಗಳು,ಟ್ರಸ್ಟ್ ಗಳ ಮೂಲಕ ಈ ಕಾರ್ಯ ನಿರ್ವಹಿಸಬಹುದು.ಸಮಾಜಕ್ಕೆ ಬಹುಮುಖ್ಯ ಕೊಡುಗೆ ನೀಡುವ ಇಂತಹದ್ದೊಂದು ಮಹತ್ವದ ಯೋಜನೆಯನ್ನು ಜಾರಿಗೆ ತರುವ ಮನಸ್ಸಿದ್ದರೆ ಅದರಲ್ಲಿ ಬಂದೊದಗುವ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ.ಬಡವರು ಮತ್ತು ಶೋಷಿತ ಸಮುದಾಯಗಳ ಮಕ್ಕಳ ಕಲಿಕೆಗೆ ನೆರವಾಗುವ ಬೆಳಗಿನ ಉಪಹಾರ ಯೋಜನೆಯು ನಾಳಿನ ಉತ್ತಮ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಲ್ಲುವ ಬಹುದೊಡ್ಡ ಕೊಡುಗೆಯಾಗುತ್ತದೆ.

About The Author