ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪನೆಗೆ ಪೂಜ್ಯ ಪ್ರಣವಾನಂದ ಶ್ರೀ ಒತ್ತಾಯ

ಶಹಾಪುರ:ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಡಿಯಲ್ಲಿ ನಿಗಮ ಸ್ಥಾಪನೆಯಾಗಬೇಕು. ನಿಗಮಕ್ಕೆ 500 ಕೋಟಿ ಅನುದಾನ ಮೀಸಲಿಡಬೇಕು. ನಮ್ಮ ಕುಲ ಕಸುಬಾದ ಶೆಂಧಿ ಮಾರಾಟಕ್ಕೆ ಸರಕಾರ ಅನುಮತಿ ನೀಡಬೇಕೆಂದು ಪೂಜ್ಯ ಶ್ರೀ ಡಾ.ಪ್ರಣವಾನಂದ ಸ್ವಾಮೀಜಿಯವರು ಸರಕಾರಕ್ಕೆ ಒತ್ತಾಯಿಸಿದರು. ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಪೂಜ್ಯ ನಾರಾಯಣ ಗುರುಗಳ 168 ನೇ ಜಯಂತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸರಕಾರ ಹಲವಾರು ನಿಗಮಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಈಡಿಗ ಸಮಾಜದವರಿದ್ದೇವೆ. ಪ್ರಸ್ತುತ ಏಳು ಜನ ಶಾಸಕರು ಎರಡು ಜನ ಸಚಿವರು ಇದ್ದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈಡಿಗ ಸಮಾಜವು ಸಂಕಷ್ಟದಲ್ಲಿದೆ. ಕೇರಳ ತಮಿಳುನಾಡು ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿ ಶೇಂಧಿ ಮಾರಾಟ ಮಾಡಲು ಸರಕಾರಗಳು ಅನುಮತಿ ನೀಡಿವೆ. ನಮ್ಮಲ್ಲಿ ಯಾಕಿಲ್ಲ. ಹಾಗಾದರೆ ರಾಜ್ಯದಲ್ಲಿ 13000 ಬಾರ್ ಮತ್ತು ರೆಸ್ಟೋರೆಂಟ್ ಹೊಂದಿದ ಕರ್ನಾಟಕ ರಾಜ್ಯ ಎಲ್ಲಾ ಬಾರ್ ಗಳನ್ನು ಮುಚ್ಚಿಸಿ ಎಂದು ಸರಕಾರಕ್ಕೆ ಚಾಟಿ ಬೀಸಿದರು.

ಸಮುದಾಯ ಒಗ್ಗಟ್ಟಾಗಿದ್ದರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ನಾವು ಯಾವ ರಾಜಕೀಯ ಗುಲಾಮರಲ್ಲ. ನಮ್ಮನ್ನು ಕಡೆಗಣಿಸಿದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು. ನಗರದಲ್ಲಿ ಗುರುಗಳ ಹೆಸರಿನ ಮೇಲೆ ಗುರುಮಂದಿರ ಮತ್ತು ಸಭಾ ಭವನವನ್ನು ನಿರ್ಮಿಸಿಕೊಡಲು ಶಾಸಕರಾದ ಶರಣಬಸಪ್ಪ ದರ್ಶನಾಪುರ ಅವರಿಗೆ ಮನವಿ ಮಾಡಿದರು.

ಉಪನ್ಯಾಸಕರಾದ ಶ್ರೀಮತಿ ಹಣಮಂತಿ ಗುತ್ತೇದಾರ್ ನಾರಾಯಣ ಗುರೂಜಿಯವರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡುತ್ತಾ, ಕೇರಳ ರಾಜ್ಯದಲ್ಲಿ ಜನಿಸಿದ ಗುರುಗಳು ಜಾತಿ ವ್ಯವಸ್ಥೆ ಮತಾಂಧತೆ ವಿರುದ್ಧ ಹೋರಾಡುತ್ತ,ಮೌನ ಕ್ರಾಂತಿಯ ಮೂಲಕ ಶಿಕ್ಷಣ ಕ್ರಾಂತಿಯ ಮೂಲಕ ಹಿಂದುಳಿದ ವರ್ಗದವರ ಏಳಿಗೆಗಾಗಿ ಹೋರಾಡಿದರು ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಅಮ್ಮಿನರೆಡ್ಡಿ ಯಾಳಗಿ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪೂರ, ಅಹಿಂದ ನಾಯಕರದ ಹಣಮೆಗೌಡ ಬೀರನಕಲ್ ಮಾತನಾಡಿದರು.ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮತ್ತು ಪುನೀತ್ ರಾಜಕುಮಾರ್ ಅವರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು. ಬಿಜೆಪಿ ಮುಖಂಡರಾದ ಡಾ. ಚಂದ್ರಶೇಖರ್ ಸುಬೇದಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಸಾಹು ಆರಭೋಳ,ಸಮಾಜದ ಮುಖಂಡರಾದ ರಾಜೇಶ್ ಗುತ್ತೇದಾರ್ ಕಲಬುರ್ಗಿ ಅಧ್ಯಕ್ಷರು, ಮಲ್ಲಯ್ಯ ಗುತ್ತೇದಾರ್ ತಾಲೂಕು ಸಮಾಜದ ಅಧ್ಯಕ್ಷರು,ಕುಮಾರಸ್ವಾಮಿ ಯಾದಗಿರಿ ಎಕ್ಸ್ ಪ್ರೆಸ್ ಪ್ರಾದೇಶಿಕ ಪತ್ರಿಕೆಯ ಸಂಪಾದಕರು, ಮಲ್ಲಿಕಾರ್ಜುನ ಮುದ್ನೂರ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ರಾಜೇಶ್ ಗುತ್ತೇದಾರ್ ಯಾದಗಿರಿ ಎಕ್ಸ್ ಪ್ರೆಸ್ ದಿನಪತ್ರಿಕೆ ತಾಲೂಕು ವರದಿಗಾರರು,ಅಬ್ದುಲ್ಲಾ ಗುತ್ತೇದಾರ್ ದೋರನಹಳ್ಳಿ ಸೇರಿದಂತೆ ಸಮಾಜದ ಮುಖಂಡರು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author